ನಭ ಸೇರಿ ಚುಕ್ಕಿಯಾದವರು...

7

ನಭ ಸೇರಿ ಚುಕ್ಕಿಯಾದವರು...

Published:
Updated:
ನಭ ಸೇರಿ ಚುಕ್ಕಿಯಾದವರು...

ಒಂದು ದಿನ, ರಾತ್ರಿ ಆಕಾಶ ನೋಡಲೆಂದು ಮನೆಯ ಛಾವಣಿಯ ಮೇಲೆ ನಿಂತಿದ್ದೆ. ಮೋಡಗಳ ತುಣುಕುಗಳೇ ಇಲ್ಲದ ಸ್ವಚ್ಛ ಆಕಾಶದಲ್ಲಿ ಪ್ರಕಾಶಮಾನವಾಗಿ ಹೊಳೆಯುವ ಗ್ರಹಗಳು, ಮಿನುಗುವ ನಕ್ಷತ್ರಗಳನ್ನು ನೋಡುತ್ತಿರುವಾಗ, ಇದ್ದಕ್ಕಿದ್ದಂತೆ ಆಕಾಶದ ಕಡೆಯಿಂದ ಕಲ್ಲಿನ ತುಣುಕೊಂದು ಭೂಮಿಯ ವಾತಾವರಣಕ್ಕೆ ಬರುತ್ತಿದ್ದಂತೆಯೇ ಹತ್ತಿ ಉರಿದು ಮಾಯವಾಗಿತು. ಆ ಹತ್ತಿ ಉರಿದ ಕ್ಷುದ್ರಗ್ರಹದ ತುಣುಕನ್ನು ನೋಡಿದೊಡನೆಯೇ ನನಗೆ ಕಲ್ಪನಾ ಚಾವ್ಲಾ ಇದ್ದ ಕೊಲಂಬಿಯಾ ಗಗನನೌಕೆಯನ್ನು ಜ್ಞಾಪಿಸಿಕೊಂಡೆ, ಕಣ್ಣಾಲಿಗಳಲ್ಲಿ ನೀರು ತುಂಬಿತ್ತು. ಕಲ್ಪನಾ ಅವರನ್ನು ಒಳಗೊಂಡು ಕೊಲಂಬಿಯಾ ಅಪಘಾತದಲ್ಲಿ ಮಡಿದ 7 ಜನ ಗಗನಯಾತ್ರಿಗಳು ಸಹ ನೆನಪಾದರು. ಏಕೆಂದರೆ ಭೂಮಿಯ ಕಡೆ ಬೀಳುವ ಅನೇಕ ಉಲ್ಕೆಗಳಿಗೆ ಈ ಗಗನಯಾತ್ರಿಗಳ ನಾಮಕರಣ ಮಾಡಿದ್ದಾರೆ.

ಕ್ಷುದ್ರಗ್ರಹಗಳಿಗೆ ಮಾನವರ ಹೆಸರನ್ನು ಇಡುವುದರ ಮೂಲಕ ಅವರ ಹೆಸರುಗಳು ಯಾವಾಗಲೂ ನೆನಪಾಗಿ ಉಳಿಯುತ್ತವೆ. ಕ್ಷುದ್ರಗ್ರಹಗಳಿಗೆ ಮಾನವರ ಹೆಸರನ್ನು ಇಡುವ ಪರಿಪಾಠ ಹೊಸತೇನಲ್ಲ. ಬಾಹ್ಯಾಕಾಶ ವಿಷಯಗಳ ಬಗ್ಗೆ ಪಾಠ ಮಾಡುವ ಶಿಕ್ಷಕರು, ಸಂಗೀತಗಾರರು ಹಾಗೂ ಅನೇಕ ವಿಜ್ಞಾನಿಗಳ ಹೆಸರುಗಳು ಇಂದು ಬಾಹ್ಯಾಕಾಶದಲ್ಲಿ ರಾರಾಜಿಸುತ್ತಿವೆ. ಅಂತೆಯೇ ಅಂತರ್ಜಾಲದಲ್ಲಿ ಕ್ಷುದ್ರಗ್ರಹಗಳ ಸಂಖ್ಯೆ ಮತ್ತು ಅವುಗಳ ಹೆಸರಿನ ದೊಡ್ಡದೊಂದು ಪಟ್ಟಿಯೇ ಇದೆ.

51823-ರಿಕ್ ಹಸ್ಪಂಡ್, 51824-ಮೈಕ್ ಅಂಡರ್ಸನ್, 51825-ಡೇವಿಡ್ ಬ್ರೌನ್, 51826-ಕಲ್ಪನಾ ಚಾವ್ಲಾ, 51827-ಲಾರೆಲ್ ಕ್ಲರ್ಕ್, 51828-ಇಲಾನ್ ರಮೊನ್, 51829-ವಿಲಿಯಂ ಸಿ. ಕೂಲ್ ಎಂಬ ಈ ಸಾಹಸಿ ಸಾಧಕರು ಬಾಹ್ಯಾಕಾಶದಲ್ಲಿ ಕ್ಷುದ್ರಗ್ರಹಗಳಾಗಿ ರಾರಾಜಿಸುತ್ತಿದ್ದಾರೆ. ಕೊಲಂಬಿಯಾ ನೌಕೆಯಲ್ಲಿದ್ದ ಈ ಎಲ್ಲಾ ಗಗನಯಾತ್ರಿಗಳ ಹೆಸರನ್ನು ಕ್ಷುದ್ರಗ್ರಹಗಳಿಗೆ ಇಡುವುದರ ಮೂಲಕ ಜಗತ್ತು ಅವರಿಗೆ ಸಲ್ಲಿಸಿದ ಗೌರವವಾಗಿದೆ.

ಕೊಲಂಬಿಯಾ(ಎಸ್.ಟಿ.ಎಸ್ 107) ದ 28 ನೇ ಯಾತ್ರೆಯಲ್ಲಿ ಪಾಲ್ಗೊಂಡಿದ್ದ ಈ ಯಾತ್ರಿಗಳು 16 ದಿನಗಳ ಕಾಲ ಬಾಹ್ಯಾಕಾಶದಲ್ಲಿದ್ದರು. ದಿನದ 24 ಗಂಟೆಯೂ ಪರ್ಯಾಯ ಶಿಫ್ಟ್‌ಗಳಲ್ಲಿ ಕೆಲಸ ಮಾಡಿ ಸುಮಾರು 80 ಕ್ಕೂ ಹೆಚ್ಚಿನ ಪ್ರತ್ಯೇಕ ಪ್ರಯೋಗಗಳನ್ನು ಯಶಸ್ವಿಯಾಗಿ ಕೈಗೊಂಡಿದ್ದರು. 2003 ರ ಫೆಬ್ರವರಿ 1 ರಂದು ಕೊಲಂಬಿಯಾ ಭೂಮಿಗೆ ವಾಪಾಸಾಗುವಾಗ, ಭೂ ಸ್ಪರ್ಶಕ್ಕೆ ಕೇವಲ 16 ನಿಮಿಷಗಳಿರುವಂತೆಯೇ ಸಿಡಿದು ಚೂರಾಗಿತ್ತು. ಈ ವಿದ್ಯಮಾನ ಕಂಡು ಇಡೀ ಪ್ರಪಂಚವೇ ದಿಗ್ಮೂಢವಾಗಿತ್ತು.

ಚಂದ್ರನ ಮೇಲೆ ಕಾಲಿಡುವ ಮಹತ್ತರ ಕನಸು ಹೊಂದಿದ್ದ ಭಾರತದ ಹೆಮ್ಮೆಯ ಪುತ್ರಿ ಕಲ್ಪನಾ ಅವರ ಅಂತ್ಯ ಹೀಗೆ ಕೊನೆಗೊಂಡಿದ್ದಕ್ಕೆ ಇಡೀ ಭಾರತವೇ ಖಿನ್ನವಾಗಿತ್ತು. ಅಂದು ಭಾರತೀಯರ ಮನದಲ್ಲಿ ಶಾಶ್ವತ ಸ್ಥಾನ ಪಡೆದಿದ್ದ ಕಲ್ಪನಾ ಮತ್ತು ಅವರೊಡನೆ ಇದ್ದ 6 ಜನ ಗಗನಯಾತ್ರಿಗಳು ಇಂದು ಬಾಹ್ಯಾಕಾಶದಲ್ಲಿ ಚಿರಸ್ಥಾಯಿಯಾಗಿದ್ದಾರೆ.– ಎಚ್ ಎಸ್ ಟಿ ಸ್ವಾಮಿ,ಚಿತ್ರದುರ್ಗ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry