ದೆಹಲಿಯಲ್ಲಿ ವೇದ ಅಧ್ಯಯನ ಸಂಶೋಧನಾ ಕೇಂದ್ರ

7
₹ 6 ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಾಣ: ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ

ದೆಹಲಿಯಲ್ಲಿ ವೇದ ಅಧ್ಯಯನ ಸಂಶೋಧನಾ ಕೇಂದ್ರ

Published:
Updated:
ದೆಹಲಿಯಲ್ಲಿ ವೇದ ಅಧ್ಯಯನ ಸಂಶೋಧನಾ ಕೇಂದ್ರ

ಉಡುಪಿ: ದೆಹಲಿಯಲ್ಲಿ ₹ 6 ಕೋಟಿ ವೆಚ್ಚದಲ್ಲಿ ವೇದ ಅಧ್ಯಯನ, ಸಂಶೋಧನೆ ಹಾಗೂ ಪ್ರಕಾಶನ ಕೇಂದ್ರ ಆರಂಭವಾಗುತ್ತಿದೆ ಎಂದು ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ತಿಳಿಸಿದರು.

ಪೇಜಾವರ ಮಠದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀಗಳು, ‘ಪಿ.ವಿ.ನರಸಿಂಹ ರಾವ್ ಪ್ರಧಾನಿಯಾಗಿದ್ದಾಗ ಅರ್ಧ ಎಕರೆ ಹಾಗೂ ದೇವೇಗೌಡರು ಪ್ರಧಾನಿಯಾಗಿದ್ದಾಗ ಒಂದು ಎಕರೆ ಜಾಗವನ್ನು ಮಠಕ್ಕೆ ನೀಡಿದ್ದರು. ಈ ಜಾಗದಲ್ಲಿ ವೈದಿಕ, ವೇದ, ಪುರಾಣ, ಭಗವದ್ಗೀತೆ ಹಾಗೂ ಮಧ್ವಾಚಾರ್ಯರ ಸಿದ್ಧಾಂತಗಳನ್ನು ಹಿಂದಿ ಭಾಷೆಗೆ ತರ್ಜುಮೆ ಮಾಡಿ ಉತ್ತರ ಭಾರತದಾದ್ಯಂತ ಪ್ರಚಾರ ಮಾಡಲು ಕೇಂದ್ರವನ್ನು ನಿರ್ಮಾಣ ಮಾಡಲಾಗುತ್ತಿದೆ’ಎಂದರು.

ನಾಲ್ಕು ಅಂತಸ್ತಿನಲ್ಲಿ ಕಟ್ಟಡ ತಲೆ ಎತ್ತುತ್ತಿದ್ದು, ಜೂನ್ ಅಥವಾ ಜುಲೈನಲ್ಲಿ ಉದ್ಘಾಟನೆಯಾಗಲಿದೆ. ಸಂಶೋಧನಾ ವಿದ್ಯಾರ್ಥಿಗಳು ವೇದಗಳ ಕುರಿತು ಇಲ್ಲಿ ಅಧ್ಯಯನ ನಡೆಸಲಿದ್ದಾರೆ ಎಂದು ಸ್ವಾಮೀಜಿ ತಿಳಿಸಿದರು.

‘ಹಿಂದೂಪರ ಹೋರಾಟ ನಿಲ್ಲುವುದಿಲ್ಲ’

ಹಿಂದೂಗಳ ಪರವಾದ ಹೋರಾಟದಿಂದ ಎಂದಿಗೂ ಹಿಂದೆ ಸರಿಯುವುದಿಲ್ಲ. ಹಾಗೆಯೇ, ಇತರ ಮತೀಯರನ್ನು ವಿರೋಧಿಸುವುದಿಲ್ಲ. ಹಿಂದೂಗಳ ನ್ಯಾಯಯುತ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕು ಎಂದು ಪೇಜಾವರ ಶ್ರೀಗಳು ಹೇಳಿದರು.

ಸರ್ಕಾರಗಳು ಅಲ್ಪಸಂಖ್ಯಾತರನ್ನು, ಬಹುಸಂಖ್ಯಾತರನ್ನು ಸಮಾನವಾಗಿ ಕಾಣಬೇಕು ಎಂಬುದು ನನ್ನ ನಿಲುವು. ಕೆಲವರು ಈ ನಿಲುವನ್ನು ಜಾತ್ಯತೀತ, ಪ್ರಜಾಪ್ರಭುತ್ವ ವಿರೋಧಿ ಎನ್ನುತ್ತಾರೆ. ಇದು ಸರಿಯೇ ಎಂದು ಶ್ರೀಗಳು ಪ್ರಶ್ನಿಸಿದರು.

ಮುಸ್ಲಿಂ ಹಾಗೂ ಕ್ರೈಸ್ತ ಸಮುದಾಯಗಳಿಗೆ ಸೇರಿದ ಶಿಕ್ಷಣ ಸಂಸ್ಥೆಗಳಲ್ಲಿ ಅಧ್ಯಾಪಕರ ನೇಮಕಾತಿ, ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳಲು ಯಾವುದೇ ನಿರ್ಬಂಧ ಇಲ್ಲ. ಆದರೆ, ಹಿಂದೂಗಳಿಗೆ ಸೇರಿದ ಶಿಕ್ಷಣ ಸಂಸ್ಥೆಗಳಲ್ಲಿ ಮಾತ್ರ ನಿರ್ಬಂಧವಿದೆ. ಎಲ್ಲ ಸಮುದಾಯಗಳನ್ನು ಸಮಾನವಾಗಿ ಕಾಣಬೇಕು. ಇಂತಹ ವಿಚಾರಗಳನ್ನು ಪ್ರಶ್ನಿಸಿದರೆ, ಕೆಲವರು ಪೇಜಾವರ ಶ್ರೀಗಳು ಸಂವಿಧಾನವನ್ನೇ ಬದಲಾಯಿಸಲು ಯತ್ನಿಸುತ್ತಿದ್ದಾರೆ ಎಂದು ದೂರುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರಾಮಮಂದಿರ ವಿಚಾರದಲ್ಲಿ ನಿಲುವು ಬದಲಾಗುವುದಿಲ್ಲ. ಮುಸ್ಲಿಂ ಮುಖಂಡರೇ ರಾಮಮಂದಿರ ನಿರ್ಮಾಣಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಶೀಘ್ರವಾಗಿ ರಾಮಮಂದಿರ ನಿರ್ಮಾಣವಾಗಲಿದೆ ಎಂದರು.

ಮುಸ್ಲಿಮರು ಒಪ್ಪಿದರೆ 13ಕ್ಕೆ ಇಫ್ತಾರ್ ಕೂಟ

ಜೂನ್‌ 13ರಂದು ನಗರದ ಗೋವಿಂದ ಕಲ್ಯಾಣ ಮಂಟಪದಲ್ಲಿ ಮುಸ್ಲಿಮರಿಗೆ ಇಫ್ತಾರ್ ಕೂಟ ಆಯೋಜಿಸುವ ಕುರಿತು ಚರ್ಚೆ ನಡೆಯುತ್ತಿದೆ. ಆದರೆ, ಕೆಲವರು ಉತ್ಸಾಹ ತೋರುತ್ತಿಲ್ಲ. ಎಲ್ಲರ ಒಪ್ಪಿಗೆ ಇದ್ದರಷ್ಟೆ ಇಫ್ತಾರ್ ಕೂಟ ಹಮ್ಮಿಕೊಳ್ಳುವುದಾಗಿ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು.

ಕಳೆದ ವರ್ಷ ಮಠದಲ್ಲಿ ಸೌಹಾರ್ದ ಭೋಜನ ಕೂಟ ಆಯೋಜಿಸಿದ್ದ ಸಂದರ್ಭ, ದೇವರ ಮೂರ್ತಿ ಇರುವ ಜಾಗದಲ್ಲಿ ಇಫ್ತಾರ್ ಮಾಡಿದ್ದು ಸರಿಯಲ್ಲ ಎಂದು ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದರು. ಹಾಗಾಗಿ, ಈ ಬಾರಿ ಗೊಂದಲಗಳು ಬೇಡ ಎಂಬ ಕಾರಣಕ್ಕೆ ಗೋವಿಂದ ಕಲ್ಯಾಣ ಮಂಟಪದಲ್ಲಿ ಇಫ್ತಾರ್ ನೀಡುವ ಬಗ್ಗೆ ಚರ್ಚೆ ನಡೆಯುತ್ತಿದೆ. ಮುಸಲ್ಮಾನರು ಒಪ್ಪಿದರಷ್ಟೆ ಕೂಟ ಆಯೋಜಿಸುವುದಾಗಿ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry