ಭೂಸ್ವಾಧೀನ ಪ್ರಕ್ರಿಯೆ ಚುರುಕು

7
ಮೆಟ್ರೋ ಎರಡನೇ ಹಂತದ ಮಾರ್ಗ ವಿಸ್ತರಣೆ

ಭೂಸ್ವಾಧೀನ ಪ್ರಕ್ರಿಯೆ ಚುರುಕು

Published:
Updated:
ಭೂಸ್ವಾಧೀನ ಪ್ರಕ್ರಿಯೆ ಚುರುಕು

ಬೆಂಗಳೂರು: ಮೆಟ್ರೊ ರೈಲಿನ ಎರಡನೇ ಹಂತದ ಮಾರ್ಗ ವಿಸ್ತರಣೆ ಯೋಜನೆ ಚುರುಕುಗೊಂಡಿದ್ದು, ಮೂರು ಪ್ರಮುಖ ಡಿಪೊ ನಿರ್ಮಾಣಕ್ಕೆ ಭೂಸ್ವಾಧೀನ ಪ್ರಕ್ರಿಯೆಯನ್ನು ಮೆಟ್ರೊ ನಿಗಮ ಆರಂಭಿಸಿದೆ. ಮೂರು ತಿಂಗಳಲ್ಲಿ ಟೆಂಡರ್‌ ಕರೆದು ಕಾಮಗಾರಿಗೆ ಚಾಲನೆ ನೀಡುವ ಸಾಧ್ಯತೆ ಇದೆ.

ಹೆಬ್ಬಗೋಡಿಯಲ್ಲಿ 27 ಎಕರೆ ಭೂಸ್ವಾಧೀನಕ್ಕಿದ್ದ ತಡೆಯಾಜ್ಞೆಯನ್ನು ಹೈಕೋರ್ಟ್‌ ತೆರವುಗೊಳಿಸಿದೆ. ಇದೇ ಪ್ರದೇಶದಲ್ಲಿ ಮೆಟ್ರೊ ರೀಚ್‌ –5ರಲ್ಲಿ ಓಡಾಡಲಿರುವ ಆರ್‌.ವಿ. ರಸ್ತೆ– ಬೊಮ್ಮಸಂದ್ರ ಮಾರ್ಗದ ರೈಲುಗಳ ನಿರ್ವಹಣೆ, ದುರಸ್ತಿ ಡಿ‍ಪೊ ನಿರ್ಮಾಣಕ್ಕೆ 39.26 ಎಕರೆ ಭೂಮಿ ಬೇಕಾಗುತ್ತದೆ.

‘ಹೆಬ್ಬಗೋಡಿ, ಕೊತ್ತನೂರು, ಚಲ್ಲಘಟ್ಟ ಮೆಟ್ರೊ ಡಿಪೊಗಳ ನಿರ್ಮಾಣಕ್ಕೆ ಭೂಸ್ವಾಧೀನ ಪ್ರಕ್ರಿಯೆ ನಡೆದಿದೆ. ವೈಟ್‌ಫೀಲ್ಡ್‌ ಮತ್ತು ಅಂಜನಾಪುರ ಡಿಪೊ ನಿರ್ಮಾಣಕ್ಕೆ ಭೂಸ್ವಾಧೀನ ಬಾಕಿ ಇದೆ. ಇದಕ್ಕೆ ಇನ್ನು 5 ತಿಂಗಳು ಹಿಡಿಯಬಹುದು ಎಂದು ಮೆಟ್ರೊ ನಿಗಮದ ಸಾರ್ವಜನಿಕ ಸಂಪರ್ಕಾಧಿಕಾರಿ ಯು.ಎ.ವಸಂತರಾವ್‌ ತಿಳಿಸಿದರು.

‘ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿರುವ ಮೂರು ಡಿಪೊಗಳ ಕಾಮಗಾರಿ ಆರಂಭಕ್ಕೆ ಟೆಂಡರ್‌ ದಾಖಲೆಗಳನ್ನು ಅಂತಿಮಗೊಳಿಸುತ್ತಿದ್ದೇವೆ. ಆರ್ಥಿಕ ಲೆಕ್ಕಾಚಾರಗಳ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಅಂಜನಾಪುರ ಡಿಪೊ ಕಾಮಗಾರಿಗೆ ಅಂದಾಜು ₹ 150 ಕೋಟಿ ಬೇಕಾಗಬಹುದು. ದೊಡ್ಡ ಡಿಪೊಗಳಿಗೆ ₹ 250 ಕೋಟಿವರೆಗೂ ವೆಚ್ಚವಾಗಲಿದೆ. ಎಲೆಕ್ಟ್ರಿಕಲ್‌ ಮತ್ತು ಮೆಕ್ಯಾನಿಕಲ್‌ ಮೂಲಸೌಲಭ್ಯ ಕಲ್ಪಿಸಲು ₹ 50ರಿಂದ 55 ಕೋಟಿ ವೆಚ್ಚವಾಗಲಿದೆ’ ಎಂದು ಅವರು ತಿಳಿಸಿದರು.

‘ಕೊತ್ತನೂರು ಮತ್ತು ಚಲ್ಲಘಟ್ಟ ಡಿಪೊಗಳಿಗೆ ಕ್ರಮವಾಗಿ 31.5 ಎಕರೆ ಮತ್ತು 38.92 ಎಕರೆ ಭೂಸ್ವಾಧೀನಕ್ಕೆ ಎರಡು ತಿಂಗಳ ಹಿಂದೆಯೇ ಅಧಿಸೂಚನೆ ಹೊರಡಿಸಲಾಗಿದೆ. ಹೆಬ್ಬಗೋಡಿಯ ಭೂಸ್ವಾಧೀನಕ್ಕೆ ಸಂಬಂಧಿಸಿ ಅಗತ್ಯ ಪ್ರಮಾಣದ ಪರಿಹಾರ ಮೊತ್ತವನ್ನೂ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಗೆ ಪಾವತಿಸಲಾಗಿದೆ. ಚಲ್ಲಘಟ್ಟ ಮತ್ತು ಕೊತ್ತನೂರು ಪ್ರದೇಶಗಳಿಗೂ ಭೂಸ್ವಾಧೀನಕ್ಕೆ ನೀಡಬೇಕಾದ ಆರ್ಥಿಕ ಪ್ಯಾಕೇಜ್‌ಗಳ ಬಗ್ಗೆ ಸಹ ನಿರ್ಧಾರ ಅಂತಿಮಗೊಳಿಸಲಾಗಿದೆ’ ಎಂದು ಅವರು ಹೇಳಿದರು.

ನಿಗಮವು ಕಾಡುಗೋಡಿ ಪ್ರದೇಶದಲ್ಲಿ 45 ಎಕರೆ ಅರಣ್ಯ ಭೂಮಿ ಸ್ವಾಧೀನಕ್ಕೆ ಪ್ರಯತ್ನಿಸಿದೆ. ಇಲ್ಲಿ ಅರಣ್ಯ ನಾಶವಾಗುತ್ತಿರುವ ಹಿನ್ನೆಲೆಯಲ್ಲಿ, ಪರಿಹಾರ ರೂಪವಾಗಿ 51 ಎಕರೆಯಷ್ಟು ಭೂಮಿಯನ್ನು ಮೆಟ್ರೊ ನಿಗಮವು ಅರಣ್ಯ ಇಲಾಖೆಗೆ ಕೊಡಲು ಸಿದ್ಧವಿದೆ. ಈ ವಿಚಾರವಾಗಿ ಇನ್ನು ಐದು ತಿಂಗಳಲ್ಲಿ ಪರಿಸರ ಮತ್ತು ಅರಣ್ಯ ಸಚಿವಾಲಯದ ಪರವಾನಗಿ ದೊರೆಯುವ ಸಂಭವವಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry