ಆತ್ಮವಿಶ್ವಾಸದ ಪ್ರವೃತ್ತಿ ಹೆಚ್ಚಾಗಲಿ

7
ಪ್ರೊ. ವೀರೇಂದ್ರ ಸಿಂಪಿ ಪುಣ್ಯಸ್ಮರಣೆ: ಪ್ರೊ.ವಿಕ್ರಮ್ ವಿಸಾಜಿ ಹೇಳಿಕೆ

ಆತ್ಮವಿಶ್ವಾಸದ ಪ್ರವೃತ್ತಿ ಹೆಚ್ಚಾಗಲಿ

Published:
Updated:

ಬೀದರ್‌: ‘ಮನುಷ್ಯನಲ್ಲಿ ಆತ್ಮವಿಶ್ವಾಸದ ಪ್ರವೃತ್ತಿ ಹೆಚ್ಚಾಗಬೇಕು. ಆತ್ಮವಿಶ್ವಾಸವಿರುವ ವ್ಯಕ್ತಿಗಳು ಸಮಾಜದ ಓರೆ–ಕೋರೆಗಳನ್ನು ತಿದ್ದಬಲ್ಲರು’ ಎಂದು ಕಲಬುರ್ಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ವಿಕ್ರಮ್ ವಿಸಾಜಿ ಅಭಿಪ್ರಾಯಪಟ್ಟರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ವತಿಯಿಂದ ಆಯೋಜಿಸಿದ್ದ ಪ್ರೊ.ವೀರೇಂದ್ರ ಸಿಂಪಿಯವರ ಮೊದಲನೇ ಸ್ಮರಣೋತ್ಸವ, ಪುಸ್ತಕ ಬಿಡುಗಡೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಡಾ. ಬಸವರಾಜ ಬಲ್ಲೂರ ಸಂಪಾದಿತ ಪ್ರೊ. ವೀರೇಂದ್ರ ಸಿಂಪಿಯವರ ಸಮಗ್ರ ಲಲಿತ ಪ್ರಬಂಧಗಳ ಸಂಕಲನ ಬಿಡುಗಡೆ ಮಾಡಿ ಅವರು ಮಾತನಾಡಿದರು.

‘ಸಿಂಪಿ ಅವರಿಗೆ ಅಂಗವೈಕಲ್ಯದ ಬಗ್ಗೆ ಎಳ್ಳಷ್ಟು ಬೇಸರ ಇರಲಿಲ್ಲ. ಕ್ರೀಯಾಶೀಲರಾಗಿ ಸಾಹಿತ್ಯ ಕೃಷಿ ಮಾಡಿದರು. ಅದಮ್ಯ ಜೀವನೋತ್ಸಾಹ ಅವರಲ್ಲಿತ್ತು. ಅದನ್ನೇ ಅವರು ತಮ್ಮ ಪ್ರಬಂಧಗಳಲ್ಲೂ ತಂದರು. ಅವರ ಸಾಹಿತ್ಯದಲ್ಲಿ ವಿಡಂಬನೆ, ವ್ಯಂಗ್ಯ, ಸಮಾಜ ತಿದ್ದುವ ಹೊಸ ಆಲೋಚನೆ ಹಾಸು ಹೊಕ್ಕಿರುವುದನ್ನು ಕಾಣಬಹುದಾಗಿದೆ’ ಎಂದು ತಿಳಿಸಿದರು.

‘ಪುಸ್ತಕ ಭಾರ ಎನ್ನುವವರು ಭೂಮಿಗೂ ಭಾರ ಎಂಬ ಅವರ ಮಾತು ಇಂದಿಗೂ ನೆನಪಾಗುತ್ತದೆ. ಅನೇಕ ಯುವ ಸಾಹಿತಿಗಳಿಗೆ ಉತ್ಸಾಹದ ಚಿಲುಮೆಯಾಗಿದ್ದರು. ಇನ್ನೂ ಆಳವಾಗಿ ತಿಳಿದುಕೊಳ್ಳಬೇಕೆಂಬ ಹಂಬಲ ಅವರಲ್ಲಿ ಮನೆ ಮಾಡಿತ್ತು’ ಎಂದರು.

‘ಸಿಂಪಿ ಅವರು ಅನೇಕ ವಿಷಯಗಳ ಮೇಲೆ ಬೆಳಕು ಚೆಲ್ಲಿದ್ದಾರೆ. ಮನೆಯಲ್ಲಿ ಕೆಲಸ ಮಾಡುವವಳ ಪರಿಸ್ಥಿತಿ, ಪತ್ನಿ ಮನೋಭಾವ, ಹಳ್ಳಿ ಚಹಾ ಹೋಟೆಲಿನ ಚಿತ್ರಣ ತಮ್ಮ ಸಾಹಿತ್ಯದಲ್ಲಿ ಸೆರೆ ಹಿಡಿದಿದ್ದಾರೆ. ಹಳ್ಳಿ ಚಹಾ ಹೋಟೆಲ್‌ ಆಧುನಿಕ ವಾರ್ತಾ ಇಲಾಖೆ ಎಂಬಂತೆ ಚಿತ್ರಿಸಿದ್ದಾರೆ’ ಎಂದರು.

ಕರ್ನಾಟಕ ಪಶು ವೈದ್ಯಕೀಯ, ಪಶು ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಚ್. ಡಿ. ನಾರಾಯಣಸ್ವಾಮಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ‘ಇಂದಿನ ಯುವ ಜನಾಂಗ ಹೆಚ್ಚು ಹೆಚ್ಚು ಸಾಹಿತ್ಯ ಓದಿದಾಗ ಇತಿಹಾಸದ ಅರಿವಾಗುತ್ತದೆ. ದ.ರಾ. ಬೇಂದ್ರೆ, ಸಿಂಪಿ ಲಿಂಗಣ್ಣ, ಮಾಸ್ತಿ ಅವರ ಜೀವನ ಶೈಲಿ ನಮಗೆಲ್ಲರಿಗೆ ಆದರ್ಶವಾಗಿದೆ. ಸಿಂಪಿ ಅವರು ಇಂಗ್ಲಿಷ್ ಪ್ರಾಧ್ಯಾಪಕರಾಗಿ ಕನ್ನಡ ತೇರನ್ನು ಎಳೆದಿರುವುದು ಶ್ಲಾಘನೀಯ’ ಎಂದರು.

ಹಿರಿಯ ಸಾಹಿತಿ ಪಂಚಾಕ್ಷರಿ ಪುಣ್ಯಶೆಟ್ಟಿ, ಜ್ಞಾನಸುಧಾ ಶಿಕ್ಷಣ ಸಂಸ್ಥೆ ಅಧ್ಯಕ್ಷೆ ಪೂರ್ಣಿಮಾ ಜಿ. ಮಾತನಾಡಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಕಲಬುರ್ಗಿಯ ಸಿದ್ಧಲಿಂಗೇಶ್ವರ ಪ್ರಕಾಶನ ಸಂಸ್ಥೆಯ ಸಂಸ್ಥಾಪಕ ಬಸವರಾಜ ಕೋನೇಕ ಅವರಿಗೆ ವೀರೇಂದ್ರ ಸಿಂಪಿ ಅವರ ಹೆಸರನ ಗೌರವ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಶಸ್ತಿಯು ₹ 5 ಸಾವಿರ ನಗದು ಹಾಗೂ ಪ್ರಶಸ್ತಿ ಫಲಕವನ್ನು ಹೊಂದಿದೆ.

ಕಸಾಪ ಅಧ್ಯಕ್ಷ ಸುರೇಶ ಚನಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಗೌರವ ಕಾರ್ಯದರ್ಶಿ ಡಾ.ಬಸವರಾಜ ಬಲ್ಲೂರ ಮಾತನಾಡಿದರು. ಶಿವಶಂಕರ ಟೋಕರೆ ನಿರೂಪಿಸಿದರು. ಯೋಗೇಶ ಮಠದ ವಂದಿಸಿದರು.

**

ವೀರೇಂದ್ರ ಸಿಂಪಿ ಅವರು ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದರೂ ಕನ್ನಡ ಸಾಹಿತ್ಯಕ್ಕೆ ತಮ್ಮದೆ ಆದ ಕೊಡುಗೆ ನೀಡಿದ್ದಾರೆ. ಅವರ ಪುಸ್ತಕಗಳು ವಿಶ್ವವಿದ್ಯಾಲಯಕ್ಕೆ ಪಠ್ಯಗಳಾಗಿವೆ

ವಿಕ್ರಮ್ ವಿಸಾಜಿ,  ಪ್ರಾಧ್ಯಾಪಕ 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry