ಸಂಜನಾಗೆ ಶ್ರೇಷ್ಠ ಆಟಗಾರ್ತಿ ಪ್ರಶಸ್ತಿ

7
ಬಿಡಬ್ಲ್ಯುಬಿ ಏಷ್ಯಾ ಶಿಬಿರ: ಬೆಂಗಳೂರಿನ ಹುಡುಗಿಯ ಅಮೋಘ ಸಾಧನೆ

ಸಂಜನಾಗೆ ಶ್ರೇಷ್ಠ ಆಟಗಾರ್ತಿ ಪ್ರಶಸ್ತಿ

Published:
Updated:
ಸಂಜನಾಗೆ ಶ್ರೇಷ್ಠ ಆಟಗಾರ್ತಿ ಪ್ರಶಸ್ತಿ

ನವದೆಹಲಿ: ಬೆಂಗಳೂರಿನ ಸಂಜನಾ ರಮೇಶ್‌ ಅವರು 10ನೇ ಆವೃತ್ತಿಯ ‘ಬ್ಯಾಸ್ಕೆಟ್‌ಬಾಲ್‌ ವಿಥೌಟ್‌ ಬಾರ್ಡರ್ಸ್‌ (ಬಿಡಬ್ಲ್ಯುಬಿ) ಏಷ್ಯಾ ಶಿಬಿರ’ದಲ್ಲಿ ಶ್ರೇಷ್ಠ ಆಟಗಾರ್ತಿ ಪ್ರಶಸ್ತಿ ಜಯಿಸಿದ್ದಾರೆ. ಉತ್ತರ ಪ್ರದೇಶದ ವೈಷ್ಣವಿ ಯಾದವ್‌ ಅವರು ‘ಗ್ರಿಟ್‌’ ಪ್ರಶಸ್ತಿ ಗೆದ್ದಿದ್ದಾರೆ.

ಪಿಲಿಪ್ಪೀನ್ಸ್‌ನ ರೆನ್ಸ್‌ ಫೋರ್ಥ್‌ಸ್ಕಿ ಪಡ್ರಿಯಾಗೊ ಅವರು ಶಿಬಿರದ ಶ್ರೇಷ್ಠ ಆಟಗಾರ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಪ್ರಶಸ್ತಿ ಕುರಿತು ಸಂತಸ ವ್ಯಕ್ತಪಡಿಸಿರುವ ಸಂಜನಾ, ‘ಬ್ಯಾಸ್ಕೆಟ್‌ಬಾಲ್‌ ನನ್ನ ಉಸಿರು. ಶ್ರೇಷ್ಠ ಬ್ಯಾಸ್ಕೆಟ್‌ಬಾಲ್‌ ಆಟಗಾರ್ತಿಯಾಗಬೇಕು ಎಂಬುದು ನನ್ನ ಆಕಾಂಕ್ಷೆ. ಎನ್‌ಬಿಎದಂತಹ ಪ್ರತಿಷ್ಠಿತ ಸಂಸ್ಥೆಗಳ ಆಯೋಜಕತ್ವದಲ್ಲಿ ನಡೆದ ಈ ಶಿಬಿರದಲ್ಲಿ ಸಾಕಷ್ಟು ಕಲಿತಿದ್ದೇನೆ. ವಿದೇಶಿ ಕೋಚ್‌ಗಳು ಹಾಗೂ ಆಟಗಾರರ ಸಲಹೆಗಳನ್ನು ಪಡೆದಿದ್ದೇನೆ. ಕ್ರೀಡೆಗೆ ಸಂಬಂಧಿಸಿದಂತೆ ಇನ್ನಷ್ಟು ಹೊಸ ತಂತ್ರಗಳನ್ನು ಅರ್ಥಮಾಡಿಕೊಳ್ಳಲು ಈ ಶಿಬಿರ ನೆರವಾಗಿದೆ’ ಎಂದು

ಹೇಳಿದ್ದಾರೆ.

ಸಂಜನಾ ಅವರು ಕಳೆದ ವರ್ಷ ನಡೆದ 16 ವರ್ಷದೊಳಗಿನವರ ಏಷ್ಯಾ ಕಪ್‌ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ ನಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದರು. ಆ ಟೂರ್ನಿಯಲ್ಲಿ ಸಂಜನಾ, ಭಾರತ ತಂಡದ ನಾಯಕಿಯಾಗಿ ಅಮೋಘ ಸಾಮರ್ಥ್ಯ ತೋರಿದ್ದರು.

ಅದೇ ವರ್ಷ ಹೈದರಾಬಾದ್‌ನಲ್ಲಿ ನಡೆದ ಯೂತ್‌ ರಾಷ್ಟ್ರೀಯ ಟೂರ್ನಿ ಯಲ್ಲಿ ರಾಜ್ಯ ತಂಡ ರನ್ನರ್ ಅಪ್ ಆಗುವಲ್ಲಿ ಸಂಜನಾ ಮಹತ್ವದ ಪಾತ್ರವಹಿಸಿದ್ದರು. ಇದರಿಂದ ಅವರಿಗೆ ರಾಷ್ಟ್ರೀಯ ಶಿಬಿರದಲ್ಲಿ ಪಾಲ್ಗೊಳ್ಳಲು ಅವಕಾಶ ಲಭಿಸಿತ್ತು.

ಇಲ್ಲಿನ ಎನ್‌ಬಿಎ ಅಕಾಡೆಮಿಯಲ್ಲಿ ಒಟ್ಟು ನಾಲ್ಕು ದಿನ ನಡೆದ ಶಿಬಿರವು ಶನಿವಾರ ಮುಕ್ತಾಯಗೊಂಡಿದೆ. ಎನ್‌ಬಿಎ ಹಾಗೂ ಫಿಬಾ ಜಂಟಿಯಾಗಿ ಆಯೋಜಿಸಿದ್ದ ಈ ಶಿಬಿರದಲ್ಲಿ ಏಷ್ಯಾ ಪೆಸಿಫಿಕ್‌ ಪ್ರದೇಶದಲ್ಲಿರುವ 16 ರಾಷ್ಟ್ರಗಳ ಒಟ್ಟು 66 ಬಾಲಕ ಹಾಗೂ ಬಾಲಕಿಯರು ಪಾಲ್ಗೊಂಡಿದ್ದರು.

ಈ ಶಿಬಿರದ ಅಂಗವಾಗಿ ಶನಿವಾರ ನಡೆದ ಬಾಲಕಿಯರ ವಿಭಾಗದ ಚಾಂಪಿಯನ್‌ಷಿಪ್‌ ಪಂದ್ಯದಲ್ಲಿ ನ್ಯೂಯಾರ್ಕ್‌ ಲಿಬರ್ಟಿ ತಂಡವನ್ನು ಮಿನ್ನೆಸೋಟಾ ಲಿಂಕ್ಸ್‌ ತಂಡವು 20–13ರಿಂದ ಮಣಿಸಿತು. ಬಾಲಕರ ವಿಭಾಗದಲ್ಲಿ ಮಿಲ್ವೌಕಿ ಬಕ್ಸ್‌ ತಂಡವು ಬ್ರೂಕ್ಲಿನ್‌ ನೆಟ್ಸ್‌ ತಂಡವನ್ನು 22–18ರಿಂದ ಸೋಲಿಸಿತು.

‘ಮಗಳ ಸಾಧನೆ ಸಂತಸ ತಂದಿದೆ’

‘ಬ್ಯಾಸ್ಕೆಟ್‌ಬಾಲ್‌ನಲ್ಲಿ ಗಂಭೀರವಾಗಿ ಅಭ್ಯಾಸ ನಡೆಸುತ್ತಿರುವ ನನ್ನ ಮಗಳಿಗೆ ಈ ಪ್ರಶಸ್ತಿ ಸಿಕ್ಕಿರುವುದು ಸಂತಸ ತಂದಿದೆ’ ಎಂದು ಸಂಜನಾ ಅವರ ತಾಯಿ ನಿರ್ಮಲಾ ರಮೇಶ್‌ ಹೇಳಿದ್ದಾರೆ.

‘ಪ್ರಜಾವಾಣಿ’ ಯೊಂದಿಗೆ ಮಾತನಾಡಿದ ಅವರು, ‘ಕಳೆದ ಎರಡು ವರ್ಷಗಳಿಂದ ಬ್ಯಾಸ್ಕೆಟ್‌ಬಾಲ್‌ನಲ್ಲಿ ಸಂಜನಾ ಹಲವು ರೀತಿಯಲ್ಲಿ ಏಳ್ಗೆ ಹೊಂದುತ್ತಿದ್ದಾಳೆ. ಶ್ರೇಷ್ಠ ಬ್ಯಾಸ್ಕೆಟ್‌ಬಾಲ್‌ ಆಟಗಾರ್ತಿಯಾಗಬೇಕೆಂಬ ಆಕೆಯ ಕನಸುಗಳು ನನಸಾಗಲಿವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry