ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ವಿಜ್ಞಾನ ಕೇಂದ್ರದಲ್ಲಿ ಮಾವಿನ ಘಮ

ಬೆಳಗಿನಿಂದ ಸಂಜೆವರೆಗೂ ಹಣ್ಣಿನ ರುಚಿ ಆಸ್ವಾದಿಸಿದ ಮಾವುಪ್ರಿಯರು
Last Updated 3 ಜೂನ್ 2018, 8:40 IST
ಅಕ್ಷರ ಗಾತ್ರ

ದಾವಣಗೆರೆ: ಕೃಷಿ ಚಟುವಟಿಕೆಗೇ ಮೀಸಲಾದ ಇಲ್ಲಿನ ತರಳಬಾಳು ಕೃಷಿ ವಿಜ್ಞಾನ ಕೇಂದ್ರದಲ್ಲಿ ಶನಿವಾರ ಮಾವಿನದ ಹಣ್ಣುಗಳದೇ ಸುವಾಸನೆ.

ಪ್ರಥಮ ಬಾರಿಗೆ ಹಮ್ಮಿಕೊಂಡ ಮೇಳದಲ್ಲಿ ಪಾಲ್ಗೊಂಡಿದ್ದ ರೈತರು, ಮಾವುಪ್ರಿಯರ ಬಾಯಿರುಚಿ ತಣಿಸಿದರು. ಬೆಳಗಿನಿಂದ ಸಂಜೆಯವರೆಗೂ ಮುಗಿಬಿದ್ದ ಗ್ರಾಹಕರು ಮನಸಾರೆ ಮಾವು ಚಪ್ಪರಿಸಿದರು.

ಮೇಳದಲ್ಲಿ ಬಾದಾಮಿ, ರಸಪುರಿ, ಸಿಂಧೂರ, ನೀಲಂ... ಇನ್ನೂ ಹತ್ತಾರು ತಳಿಗಳ ಮಾವಿನ ಹಣ್ಣುಗಳಿದ್ದವು. ಗ್ರಾಹಕರು ಕೆ.ಜಿ.ಗೆ ₹ 40ರಿಂದ ₹ 70ಕ್ಕೆ ಹಣ್ಣುಗಳನ್ನು ಕೊಂಡುಕೊಂಡು ಮನೆಗೆ ಒಯ್ದರು. ಒಂದಷ್ಟು ಮಂದಿ ಅಲ್ಲಿಯೇ ರುಚಿ ನೋಡಿದರು. ಮಧ್ಯವರ್ತಿಗಳ ಹಾವಳಿ ಇಲ್ಲದೆ ರೈತರೇ ನೇರವಾಗಿ ಮಾರಾಟ ಮಾಡಲು ಮೇಳ ವೇದಿಕೆಯಾಯಿತು. 

ಚನ್ನಗಿರಿ ತಾಲ್ಲೂಕಿನ ದೊಡ್ಡಬ್ಬಿಗೆರೆಯ ಬೆಳೆಗಾರರ ಮಾವಿನಹಣ್ಣುಗಳನ್ನು ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಮಾರ್ಗದರ್ಶನದಲ್ಲಿ ಶಿಫಾರಸು ಮಾಡಿದ ಪ್ರಮಾಣದಲ್ಲಿ ಕಾಸ್ಟಿಕ್ ಸೋಡಾ, ಇತ್ರೇಲ್ ಬಳಸಿ ಮಾಗಿಸಲಾಗಿತ್ತು. ದೊಡ್ಡಬ್ಬಿಗೆರೆಯಲ್ಲಿ ನೈಸರ್ಗಿಕವಾಗಿ ಮಾವು ಮಾಗಿಸುವ ಘಟಕಗಳನ್ನು ಸ್ಥಾಪಿಸಲಾಗಿದೆ. ಅಲ್ಲಿ ಮಾಗಿಸಿದ ಹಣ್ಣುಗಳನ್ನೇ ಮೇಳದಲ್ಲಿ ಮಾರಾಟ ಮಾಡುವ ವ್ಯವಸ್ಥೆ ಮಾಡಲಾಗಿದೆ’ ಎಂದು ಕೆವಿಕೆ ವಿಷಯ ತಜ್ಞ ಜೆ. ರಘುರಾಜ ತಿಳಿಸಿದರು.

ಮಾರುಕಟ್ಟೆಗಳಲ್ಲಿ ಕಾರ್ಬೈಡ್ ಬಳಸಿ ಮಾವನ್ನು ಮಾಗಿಸಲಾಗುತ್ತದೆ. ಇಂತಹ ಹಣ್ಣು ಸೇವನೆ ಆರೋಗ್ಯಕ್ಕೆ ಅಪಾಯಕಾರಿ. ಇದರಿಂದ ಕ್ಯಾನ್ಸರ್, ಹೊಟ್ಟೆನೋವು ಕಾಣಿಸಿಕೊಳ್ಳಲಿದೆ. ಇದನ್ನು ತಪ್ಪಿಸಲು ಮೇಳ ಆಯೋಜಿಸಲಾಗಿದೆ. 8 ಮಂದಿ ರೈತರ ಬದಲಾಗಿ ನಾಲ್ವರು ಬೆಳೆಗಾರರು ಮೇಳದಲ್ಲಿ ಭಾಗವಹಿಸಿದ್ದಾರೆ ಎಂದರು.

‘ಮಾವು ಬೆಳೆಯಲು ಮೊದಲೆಲ್ಲಾ ರಾಸಾಯನಿಕಗಳನ್ನು ಬಳಸುತ್ತಿದ್ದೆವು. ಆದರೆ, ಮೂರು ವರ್ಷದಿಂದೀಚೆಗೆ ಕೃಷಿ ವಿಜ್ಞಾನ ಕೇಂದ್ರದ ಸಲಹೆಯಂತೆ ಕೊಟ್ಟಿಗೆ ಗೊಬ್ಬರ ಮಾತ್ರ ಬಳಸುತ್ತಿದ್ದೇನೆ. ಕಾಂಡಕೊರಕ ಹುಳು ಬಾಧೆ ಕೂಡ ಬಂದಿಲ್ಲ. 6 ಎಕರೆ ನೀರಾವರಿ ಜಮೀನಿನಲ್ಲಿ ₹ 5 ಲಕ್ಷ ಮೌಲ್ಯದ ಇಳುವರಿ ಬಂದಿದೆ. ಶೇ 25ರಷ್ಟು ಇಳುವರಿ ಹೆಚ್ಚಿದೆ’ ಎಂದು ಚನ್ನಗಿರಿ ತಾಲ್ಲೂಕಿನ ದೊಡ್ಡಬ್ಬಿಗೆರೆಯ ರೈತ
ಎಂ.ಸಿ. ತಿಪ್ಪೇಸ್ವಾಮಿ ಖುಷಿ ಹಂಚಿಕೊಂಡರು.

ಹರಿಹರ ತಾಲ್ಲೂಕಿನ ಮಲ್ಲನಾಯ್ಕನಹಳ್ಳಿಯ ರೈತ ರಾಘವ ತಮ್ಮ ಐಕಾಂತಿಕ ಫಾರಂನಲ್ಲಿ ಬೆಳೆದ ಜವಾರಿ ಹಣ್ಣುಗಳು ಮೇಳದಲ್ಲಿ ಕಣ್ಮನ ಸೆಳೆದವು. ‘ಸಣ್ಣ ಗೋವಾ’, ‘ದೊಡ್ಡ ಗೋವಾ’, ‘ಕೇಸರಿ ತೋತಾಪುರಿ’, ‘ಸಿಹಿರಸ–ಹಳದಿರಸ’ ಎಂದು ಅವರೇ ಇಟ್ಟಿರುವ ಮಾವಿನ ಹೆಸರುಗಳು ಕೇಳಲೂ ಇಂಪಾಗಿದ್ದವು. ಸಾವಯವ ಪದ್ಧತಿಯಲ್ಲಿ ಬೆಳೆದ ದೇಸಿ ಮಾವಿನ ರುಚಿಗೆ ಜನ ಮನಸೋತರು.

**
ಬೆಳೆಯುವುದಷ್ಟೇ ನಮ್ಮ ಕೆಲಸವೆಂದು ರೈತರು ಭಾವಿಸಿದ್ದಾರೆ. ಫಸಲು ಮಾರುವುದೂ ಅವರ ಜವಾಬ್ದಾರಿ. ಇದರಿಂದ ಅವರಿಗೇ ಲಾಭ
ಜೆ.ರಘುರಾಜ, ವಿಷಯ ತಜ್ಞ, ತರಳಬಾಳು ಕೃಷಿ ವಿಜ್ಞಾನ ಕೇಂದ್ರ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT