ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೌರಕಾರ್ಮಿಕರಿಗೆ ವೇತನ ಸ್ಥಗಿತ; ಅಧಿಕಾರಿಗಳಿಗೆ ತರಾಟೆ

ಕೋರ್ಟ್‌ ನಿರ್ದೇಶನದಂತೆ ಕ್ರಮ: ಆಯುಕ್ತ ಹೇಳಿಕೆ
Last Updated 3 ಜೂನ್ 2018, 8:50 IST
ಅಕ್ಷರ ಗಾತ್ರ

ಹುಬ್ಬಳ್ಳಿ:  ಪೌರಕಾರ್ಮಿಕರಿಗೆ ಎರಡು ತಿಂಗಳಿಂದ ವೇತನ ಪಾವತಿಸದಿರುವ ಹಾಗೂ ಸ್ವಚ್ಛತಾ ಕಾರ್ಯವನ್ನು ಕಡೆಗಣಿಸಿರುವ ಅಧಿಕಾರಿಗಳನ್ನು ಶನಿವಾರ ನಡೆದ ಮಹಾನಗರ ಪಾಲಿಕೆ ಸಾಮಾನ್ಯಸಭೆಯಲ್ಲಿ ಸದಸ್ಯರು ತೀವ್ರ ತರಾಟೆಗೆ ತೆಗೆದುಕೊಂಡರು.

ಏಪ್ರಿಲ್‌ನಿಂದಲೇ ಗುತ್ತಿಗೆ ಪದ್ಧತಿ ರದ್ದುಪಡಿಸಿ, ಪೌರಕಾರ್ಮಿಕರಿಗೆ ನೇರ ವೇತನ ಪಾವತಿಸುವ ಸಂಬಂಧ ಪಾಲಿಕೆಯ ಈ ಹಿಂದಿನ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಂಡು, ಅನುಮೋದನೆಗಾಗಿ ಸರ್ಕಾರಕ್ಕೆ ಕಳುಹಿಸಲಾಗಿತ್ತು. ಆದರೆ, ಎರಡು ತಿಂಗಳಾದರೂ ವೇತನ ಪಾವತಿಸದೇ ಇರುವ ಅಧಿಕಾರಿಗಳ ಕ್ರಮ ಖಂಡನೀಯ ಎಂದು ಸದಸ್ಯರಾದ ಗಣೇಶ ಟಗರಗುಂಟಿ, ವೀರಣ್ಣ ಸವಡಿ, ಆಲ್ತಾಫ್‌ ಕಿತ್ತೂರ, ಮೋಹನ ಹಿರೇಮನಿ, ಡಾ.ಪಾಂಡುರಂಗ ಪಾಟೀಲ, ಶಿವಾನಂದ ಮುತ್ತಣ್ಣವರ ಹೇಳಿದರು.

ಗುತ್ತಿಗೆ ಪದ್ಧತಿ ರದ್ದುಗೊಳಿಸಿದರೂ ಗುತ್ತಿಗೆದಾರರ ಟ್ರ್ಯಾಕ್ಟರ್‌ ಮತ್ತು ಸ್ವಚ್ಛತಾ ಉಪಕರಣಗಳನ್ನು ಏಕೆ ಬಳಸಿಕೊಳ್ಳುತ್ತಿದ್ದೀರಿ ಎಂದು ಸದಸ್ಯರು ಪ್ರಶ್ನಿಸಿದರು.

ಪಾಲಿಕೆ ಆಡಳಿತ ಸಂಪೂರ್ಣ ವ್ಯವಸ್ಥೆ ಕುಸಿದುಹೋಗಿದ್ದರೂ ತಮಗೆ ಸಂಬಂಧವಿಲ್ಲದಂತೆ ನಡೆದುಕೊಳ್ಳುತ್ತಿರುವುದು ಸರಿಯಲ್ಲ ಎಂದು ಆಯುಕ್ತರನ್ನು ಸದಸ್ಯರು ತರಾಟೆಗೆ ತೆಗೆದುಕೊಂಡರು.

ಕೋರ್ಟ್‌ ನಿರ್ದೇಶನದ ಬಳಿಕ ಕ್ರಮ:ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿದ ಆಯುಕ್ತ ಇಬ್ರಾಹಿಂ ಮೈಗೂರ, ಗುತ್ತಿಗೆ ಪದ್ಧತಿ ರದ್ದುಗೊಳಿಸಿ, ಪೌರಕಾರ್ಮಿಕರಿಗೆ ನೇರ ವೇತನ ಪಾವತಿಸಲು ಮುಂದಾಗಿರುವ ಪಾಲಿಕೆ ಕ್ರಮವನ್ನು ಪ್ರಶ್ನಿಸಿ ಕೆಲವು ಗುತ್ತಿಗೆದಾರರು ಕೋರ್ಟ್‌ ಮೆಟ್ಟಿಲೇರಿದ್ದಾರೆ. ಪ್ರಕರಣ ಕೋರ್ಟ್‌ನಲ್ಲಿರುವುದರಿಂದ ತಕ್ಷಣಕ್ಕೆ ಯಾವುದೇ ಕ್ರಮಕೈಗೊಳ್ಳಲು ಸಾಧ್ಯವಿಲ್ಲ. ನ್ಯಾಯಾಂಗ ನಿಂದನೆಯಾಗುತ್ತದೆ. ಪ್ರಕರಣದ ವಿಚಾರಣೆ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಆದೇಶ ಬರುವ ನಿರೀಕ್ಷೆ ಇದೆ. ನ್ಯಾಯಾಲಯದ ನಿರ್ದೇಶನದಂತೆ ಪೌರಕಾರ್ಮಿಕರಿಗೆ ವೇತನ ನೀಡಲು ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.

ಗುತ್ತಿಗೆ ಪದ್ಧತಿ ರದ್ದುಪಡಿಸುವ ಹೊಸ ವ್ಯವಸ್ಥೆಗೆ ಹೋಗುವ ಮುನ್ನ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕಾಗಿತ್ತು. ಆದರೆ, ಈ ನಿಟ್ಟಿನಲ್ಲಿ ತಪ್ಪಾಗಿದೆ. ಆದಷ್ಟು ಶೀಘ್ರದಲ್ಲಿ ಪೂರಕ ವ್ಯವಸ್ಥೆ ಮಾಡಿಕೊಳ್ಳುತ್ತೇವೆ ಎಂದು ಆಯುಕ್ತ ಭರವಸೆ ನೀಡಿದರು.

ಪರಿಹಾರ ಮೊತ್ತ ನೀಡಿ: ಅಮ್ಮಿನಬಾವಿ ಜಲಶುದ್ಧೀಕರಣ ಘಟಕ ಆರಂಭಕ್ಕಾಗಿ 2006ರಲ್ಲಿ ₹ 18 ಲಕ್ಷ ಪರಿಹಾರ ನೀಡಿ, 18 ಎಕರೆ ಭೂಮಿಯನ್ನು ರೈತರೊಬ್ಬರಿಂದ ಸ್ವಾಧೀನ ಪಡಿಸಿಕೊಳ್ಳಲಾಗಿತ್ತು. ರೈತ ಕೋರ್ಟ್‌ ಮೆಟ್ಟಿಲೇರಿರುವುದರಿಂದ ಇದೀಗ ಅಸಲು, ಬಡ್ಡಿ ಸೇರಿ ₹ 4.61 ಕೋಟಿ ಪರಿಹಾರ ನೀಡಬೇಕಾಗಿದೆ. ಆದಷ್ಟು ಶೀಘ್ರ ಪರಿಹಾರ ನೀಡಬೇಕು. ಇಲ್ಲವಾದರೆ, ಈ ಮೊತ್ತ ಹೆಚ್ಚಳವಾಗಲಿದೆ ಎಂದು ಸದಸ್ಯ ರಾಜಣ್ಣ ಕೊರವಿ ಸಭೆಯ ಗಮನ ಸೆಳೆದರು. ಪರಿಶೀಲಿಸಿ ಕ್ರಮಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.

ಸಿ.ಎಂ.ಬಳಿಗೆ ನಿಯೋಗ:

ಮಹಾನಗರ ಪಾಲಿಕೆಗೆ ಪಿಂಚಣಿ ಬಾಕಿ ಅನುದಾನ ಹಾಗೂ ₹ 24 ಕೋಟಿ ಮೊತ್ತದ ಕುಡಿಯುವ ನೀರಿನ ಯೋಜನೆಗೆ ಮಂಜೂರು ನೀಡುವಂತೆ ಕೋರಲು ಮುಖ್ಯಮಂತ್ರಿ ಬಳಿಗೆ ನಿಯೋಗ ಹೋಗಲು ತೀರ್ಮಾನಿಸಲಾಯಿತು.

ಸ್ವಯಂ ಘೋಷಿತ ಅಧ್ಯಕ್ಷ!

ಪಾಲಿಕೆ ಆರೋಗ್ಯ ಸ್ಥಾಯಿ ಸಮಿತಿಗೆ ಶಿವಾನಂದ ಮುತ್ತಣ್ಣ ಅವರನ್ನು ಅಧ್ಯಕ್ಷರನ್ನಾಗಿ ಯಾರು ಆಯ್ಕೆ ಮಾಡಿದರು ಎಂಬ ಸುವರ್ಣ ಕಲ್ಲಕುಂಟ್ಲಾ ಅವರ ಪ್ರಶ್ನೆಗೆ ಉತ್ತರಿಸಿದ ಪರಿಷತ್‌ ಕಾರ್ಯದರ್ಶಿ ಪ್ರಕಾಶ ಗಾಳೆಮ್ಮೆನವರ, ಪಾಲಿಕೆ ನಿಯಮಾವಳಿ ಪ್ರಕಾರ ಅವರನ್ನು ಸ್ಥಾಯಿ ಸಮಿತಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿಲ್ಲ. ಆದರೆ, ನಾನೇ ಅಧ್ಯಕ್ಷ ಎಂದು ಅವರೇ ಸ್ವಯಂ ಘೋಷಣೆ ಮಾಡಿಕೊಂಡಿದ್ದಾರೆ ಎನ್ನುತ್ತಿದ್ದಂತೆ ಸಭೆ ನಗೆಗಡೆಲಲ್ಲಿ ತೇಲಿತು.

ಮೇಜರ್‌ ವಿರುದ್ಧ ಡಾಕ್ಟರ್‌ ಹೋರಾಟ

‘ಈ ಹಿಂದಿನ ಸಾಮಾನ್ಯ ಸಭೆಯಲ್ಲಿ ಅಂದಿನ ಆಯುಕ್ತ ಸಿದ್ಧಲಿಂಗಯ್ಯ ತಮ್ಮೊಂದಿಗೆ ಕಾನೂನುಬಾಹಿರವಾಗಿ ನಡೆದುಕೊಂಡಿದ್ದಾರೆ. ಅಂದು ಅವರು ಬಳಸಿದ ಪದಗಳು ಜನಪ್ರತಿನಿಧಿಗಳಿಗೆ ಅವಮಾನ ಮಾಡುವಂತಿವೆ. ಅವರ ವಿರುದ್ಧ ಕಾನೂನು ಹೋರಾಟ ನಡೆಸುತ್ತೇನೆ. ಕಾರಣ ಅಂದಿನ ಸಭೆಯ ನಡಾವಳಿಯ ಠರಾವು ವಿವರ ನೀಡಬೇಕು' ಎಂದು ಹಿರಿಯ ಸದಸ್ಯ ಡಾ. ಪಾಂಡುರಂಗ ಪಾಟೀಲ ಸಭೆಗೆ ವಿನಂತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT