ಶೆಟ್ಟಿಹೂಡಾ ಎಂಬ ಪೈಲ್ವಾನರ ಊರು

7
ಜಿಲ್ಲೆಯಲ್ಲಯೇ ಅತಿಹೆಚ್ಚು ಕುಸ್ತಿಪಟುಗಳನ್ನು ಹೊಂದಿದ ಗ್ರಾಮ; ದಿನಬೆಳಗಾದರೆ ಕುಸ್ತಿಯದ್ದೇ ಮಾತು

ಶೆಟ್ಟಿಹೂಡಾ ಎಂಬ ಪೈಲ್ವಾನರ ಊರು

Published:
Updated:
ಶೆಟ್ಟಿಹೂಡಾ ಎಂಬ ಪೈಲ್ವಾನರ ಊರು

ಸೇಡಂ: ಈ ಊರಲ್ಲಿ ಬೆಳಕಾದರೂ ಕುಸ್ತಿ, ಕತ್ತಲಾದರೂ ಕುಸ್ತಿ. ಕುಳಿತರೂ– ನಿಂತರೂ ಕುಸ್ತಿಯದ್ದೇ ಮಾತು. ಅಲ್ಲಿ ಅವನು ಗೆದ್ದ, ಇಲ್ಲಿ ಇವನು ಸೋತ, ನಾಳೆ ಕುಸ್ತಿ ಎಲ್ಲಿದೆ? ಎಷ್ಟಂತೆ ಬಹುಮಾನ..? ಹೀಗೆ ಇಡೀ ಊರಿನಲ್ಲಿ ಕುಸ್ತಿಯಗಿಂತ ಬೇರೆ ಸುದ್ದಿಯೇ ಇಲ್ಲ!

ನಿಜ. ಊರಿನ ತುಂಬ ಪೈಲ್ವಾನರನ್ನು ಹೊಂದಿರುವ ಈ ಗ್ರಾಮದ ಹೆಸರು ಶೆಟ್ಟಿಹೂಡಾ (ವಾಲ್ಮೀಕಿನಗರ, ಸೇಡಂ ತಾಲ್ಲೂಕು). ಇಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ ಎಲ್ಲರ ಬಾಯಲ್ಲೂ ದಿನವೂ ಕುಸ್ತಿಯದೇ ಮಾತು. ಯಾರನ್ನು ಯಾರು ಸೋಲಿಸಿದರು, ಹಾಕಿದ ಪೇಚು ಹೇಗಿತ್ತು, ಕುಸ್ತಿಯ ಜೋಡಿ ಎಂಥದ್ದು ಎಂಬ ಮಾತುಗಳೊಂದಿಗೇ ಇವರ ದಿನಚರಿ ಆರಂಭವಾಗುತ್ತದೆ.

ಶೆಟ್ಟಿಹೂಡಾ ಗ್ರಾಮ ತಾಲ್ಲೂಕಿನಲ್ಲಿಯೇ ಅತಿ ಹೆಚ್ಚು ಕುಸ್ತಿಪಟುಗಳನ್ನು ಹೊಂದಿದೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಊರಿನ ಮೂಲೆಮೂಲೆಗೂ ಗರಡಿಗಳಿವೆ. ಮನೆಮನೆಗೂ ಪೈಲ್ವಾನರು ಇದ್ದಾರೆ.‌ ಹೈದರಾಬಾದ್‌ ಕರ್ನಾಟಕ ಭಾಗದ ಯಾವುದೇ ಊರಲ್ಲಿ ಕುಸ್ತಿ ನಡೆದರೂ ಅಲ್ಲಿ ಶೆಟ್ಟಿಹೂಡಾ ಪಟುಗಳು ಇದ್ದೇ ಇರುತ್ತಾರೆ.

ಬೇಸಿಗೆ ಬಂದರಂತೂ ಈ ಗ್ರಾಮದ ಯುವಕರಿಗೆ ಎಲ್ಲಿಲ್ಲದ ಸಂಭ್ರಮ. ಬೇಸಿಗೆಯಲ್ಲಿ ನಡೆಯುವ ಪ್ರತಿಯೊಂದು ಜಾತ್ರೆಯ ಕುಸ್ತಿಗೆ ತೆರಳುವುದು ಖಚಿತ. ಕುಸ್ತಿಯೇ ಇವರ ಕಲೆ, ಅದೇ ಇವರ ಸಂಪಾದನೆ, ಜೀವನೋಪಾಯ. ಬೇಸಿಗೆಯ ದಿನಗಳಲ್ಲಿ ಏನಿಲ್ಲವೆಂದರೂ ₹ 20- 50 ಸಾವಿರವರೆಗೆ ನಗದು ಬಹುಮಾನ ಗೆದ್ದ ಉದಾಹರಣೆಗಳೂ ಇಲ್ಲಿವೆ.

‌ಶೆಟ್ಟಿಹೂಡಾ ಗ್ರಾಮದ ಹೊರವಲಯದಲ್ಲಿಯೇ ಕುಸ್ತಿಗೆ ಜಾಗ ಗುರುತಿಸಿ (ಗರಡಿಮನೆ) ಮೂರ್ನಾಲ್ಕು ತಿಂಗಳು ನಿತ್ಯ ಕುಸ್ತಿ ಅಭ್ಯಾಸ ನಡೆಸುತ್ತಾರೆ. ಆಹಾರ ಸೇವನೆಯಲ್ಲಿಯೂ ಪೌಷ್ಟಿಕ ಆಹಾರದ ಜೊತೆಗೆ ಬೇಳೆಕಾಳುಗಳನ್ನು ಸೇವಿಸುವುದು ಇವರ ರೂಢಿ. ಈ ಮೂಲಕ ದೇಹದಾರ್ಢ್ಯತೆ ಕಾಯ್ದುಕೊಳ್ಳುವುದೂ ಒಂದು ಕೌಶಲ.

ಸುಮಾರು 40ಕ್ಕೂ ಅಧಿಕ ಘಟಾನುಘಟಿ ಕುಸ್ತಿಪಟುಗಳು ಇಲ್ಲಿದ್ದಾರೆ. ಹಿರಿಯ ಕುಸ್ತಿಪಟುಗಳು ಕಿರಿಯರಿಗೆ ಮಾರ್ಗದರ್ಶನ ಮಾಡುವುದು ಗ್ರಾಮದ ಸಂ‍ಪ್ರದಾಯ ಎನ್ನುತ್ತಾರೆ ಪೈಲ್ವಾನ್‌ ಮಹೇಶ ಜಮಾದರ.

‘ಉರು ಚಿಕ್ಕದಾದರೂ ಇಲ್ಲಿ ಕುಸ್ತಿಪಟುಗಳ ಸಂಖ್ಯೆ ಹೆಚ್ಚಿದೆ. ಚಿಕ್ಕಂದಿನಿಂದಲೇ ಮಕ್ಕಳು ಕುಸ್ತಿ ಕಲಿತುಕೊಳ್ಳುವುದು ರೂಢಿ. ಕುಸ್ತಿ ಆಡುವ ಯುವಕರು ಹೆಚ್ಚಿರುವುದರಿಂದ ಮಕ್ಕಳು ಅದನ್ನೇ ಅಭ್ಯಾಸ ಮಾಡಿ ಅನುಸರಿಸುತ್ತಾರೆ’ ಎನ್ನುವುದು ಗ್ರಾಮಸ್ಥ ದೇವಿಂದ್ರಪ್ಪ ನಾಯಿಕೋಡಿ ಮತ್ತು ಮಲ್ಲಪ್ಪ ಜಮಾದರ ಅವರ ಅನಿಸಿಕೆ.

ಬೇಸಿಗೆ ದಿನಗಳಲ್ಲಿ ಗ್ರಾಮದ ಹೊರವಲಯದಲ್ಲಿ ಕುಸ್ತಿ ಆಡುವ ಜಾಗವನ್ನು ಗುರುತಿಸಿ, ಅಲ್ಲಿ ತೆಳುವಾದ ಮಣ್ಣನ್ನು ಹಾಕಿ ಸುತ್ತಲೂ ಮಣ್ಣಿನ ಚೀಲಗಳನ್ನು ಇಟ್ಟು ಗರಡಿ ಮನೆಯನ್ನು ರಚಿಸಿಕೊಳ್ಳುತ್ತಾರೆ. ಕುಸ್ತಿ ಆಡಲು ಬೇಕಾದ ಸಾಮಗ್ರಿಗಳನ್ನು ಪ್ರತಿಯೊಬ್ಬ ಕುಸ್ತಿಪಟು ಹೊಂದಿದ್ದಾರೆ. ಯುವಕರ ತಂಡ ಸಹಕಾರ ಮನೋಭಾವನೆಯಿಂದ ಕೆಲಸ ಮಾಡುತ್ತಿದ್ದು, ಹಿರಿಯರು ಬೆನ್ನೆಲುಬಾಗಿ ನಿಂತಿದ್ದಾರೆ. ಮಕ್ಕಳ ಗ್ರಾಮೀಣ ಕಲೆಗೆ ಇಲ್ಲಿನ ಪಾಲಕರು ಸಹಕರಿಸಿ ಕಲೆಯನ್ನು ಪ್ರೋತ್ಸಾಹಿಸುತ್ತಿರುವುದು ಗಮನಾರ್ಹ. ಅನೇಕರು ₹ 500ರಿಂದ ಒಳಗೊಂಡು 10 ತೊಲೆ ಬೆಳ್ಳಿಯನ್ನು ಗೆದ್ದಿದ್ದಾರೆ. ಇನ್ನು ಕೆಲವೆಡೆ ಬೆಳ್ಳಿಯ ಖಡ್ಗ ಗೆದ್ದು ಊರಿಗೆ ಹೆಮ್ಮೆ ತಂದಿದ್ದಾರೆ.‌

ಗರಡಿಮನೆ ನಿರ್ಮಿಸಲು ಮನವಿ

ಸೇಡಂ: ‘ನಮ್ಮ ಗ್ರಾಮದಲ್ಲಿ ಅಧಿಕ ಕುಸ್ತಿಪಟುಗಳು ಇದ್ದಾರೆ. ಆದರೆ ಕಲಿಕೆಗೆ ಗರಡಿ ಮನೆಯ ಕೊರತೆ ಕಾಡುತ್ತಿದೆ. ಅನೇಕ ಬಾರಿ ಮುಖಂಡರ ಗಮನಕ್ಕೆ ತಂದರೂ ಗರಡಿಮನೆ ನಿರ್ಮಾಣವಾಗಿಲ್ಲ. ಇದರಿಂದ ತಾಲ್ಲೂಕಿನ ಇತರ ಗ್ರಾಮಗಳಲ್ಲಿ ಇರುವ ಪ್ರತಿಭೆಗಳು ಹೊರಬದರಲು ಆಗುತ್ತಿಲ್ಲ. ಶಾಸಕರು ಕುಸ್ತಿಪಟುಗಳಿಗೆ ಗರಡಿಮನೆ ನಿರ್ಮಿಸಿಕೊಡಬೇಕು’ ಎಂಬುದು ಕುಸ್ತಿಪಟು ಮಹೇಶ ಜಮಾದರ ಅವರ ಮನವಿ.

**

 ನಮ್ಮ ಗ್ರಾಮದಲ್ಲಿ ಸಣ್ಣ ಮಕ್ಕಳಿಂದ ಒಳಗೊಂಡು ಹಿರಿಯರವರೆಗೂ ಕುಸ್ತಿ ಆಡುತ್ತಾರೆ. ಹಿರಿಯರ ಮಾರ್ಗದರ್ಶನದಿಂದ ಕುಸ್ತಿ ಆಡುವ ಸಾಂಪ್ರದಾಯ ಹೆಚ್ಚುತ್ತಿದೆ

- ಮಹೇಶ ಶೆಟ್ಟಿಹೂಡಾ ಕುಸ್ತಿಪಟು

-ಅವಿನಾಶ ಎಸ್. ಬೋರಂಚಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry