ಪಾತರಗಿತ್ತಿ ಪಕ್ಕಾ, ನೋಡಿಯೇನ ಅಕ್ಕಾ...

7

ಪಾತರಗಿತ್ತಿ ಪಕ್ಕಾ, ನೋಡಿಯೇನ ಅಕ್ಕಾ...

Published:
Updated:
ಪಾತರಗಿತ್ತಿ ಪಕ್ಕಾ, ನೋಡಿಯೇನ ಅಕ್ಕಾ...

ಭಾರತ, ಶ್ರೀಲಂಕ, ಫಿಲಿಪ್ಪಿನ್ಸ್‌, ಅರಬ್ ಎಮಿರೇಟ್ಸ್, ಮಲೇಷ್ಯಾ, ಸುಮಾತ್ರ, ಮುಂತಾದ ಅನೇಕ ಹುಲ್ಲುಗಾವಲು, ತೇವದ ಪ್ರದೇಶಗಳಲ್ಲಿ ಪುಟಪುಟನೆ ನೆಲದಂಚಿನಲ್ಲೇ ಹಾರಾಡುತ್ತಾ, ತನ್ನೆರಡು ಆಂಟೆನಾಗಳ ಸಂವಹನದಿಂದ ಮಕರಂದ ಗುರುತಿಸುತ್ತಾ, ದಪ್ಪನೆಯ ಹುಲ್ಲು, ಹಸಿರೆಲೆಗಳ ಅಂಚಿನಲ್ಲಿ ಶೇಖರಣೆಯಾಗುವ ಪರಿಮಳದ ಮಂಜಿನ ಹನಿಯನ್ನೂ ಸವಿಯುತ್ತಾ, ಸಾಗುವ ಡಾರ್ಕ್ ಗ್ರಾಸ್ ಬ್ಲ್ಯು ಎಂದು ಪರಿಚಿತವಿರುವ ಎರಡು ಸೆಂಟಿಮೀಟರ್ ಅಳತೆಯ ಚಿಟ್ಟೆಯ ಹಾರಾಟದ ಮಾಟವೇ ನೋಡಲು ಚನ್ನ.

ತುಸು ಸಮೀಪಕ್ಕೆ ಕ್ಯಾಮೆರಾ ಲೆನ್ಸ್ ತಂದರೂ, ಹೆದರದೇ ಹಾರಿ ಹೋಗುವ ಈ ಪಾತರಗಿತ್ತಿಯನ್ನು, ಸ್ವಲ್ಪ ಹುಷಾರಿನಿಂದ ಮಕ್ಕಳೂ ಉತ್ತಮವಾದ ಕ್ಯಾಮೆರಾದಿಂದ ಸೆರೆಹಿಡಿಯಬಹುದೆಂದು, ಈ ಪ್ರಯತ್ನ ಸಾದರ ಪಡಿಸುತ್ತದೆ. ಮ್ಯಾಕ್ರೋ ಮತ್ತು ವನ್ಯ ಪಕ್ಷಿ ಛಾಯಾಗ್ರಹಣ ಕ್ಷೇತ್ರದಲ್ಲಿ ಉತ್ತಮ ಪರಿಣತಿ ಪಡೆದಿರುವ ಕಸ್ಟಮ್ಸ್‌ ಅಧಿಕಾರಿ, ಗಿರೀಶ್ ಅನಂತಮೂರ್ತಿ, ಅರಣ್ಯ ಸುತ್ತುವಾಗ ನಾಲ್ಕು ವರ್ಷಗಳೀಚೆಗೆ ತಮ್ಮೊಡನೆ ಹತ್ತು ವರ್ಷದ ಮಗ ರಾಘವ್ ಜಿ. ಸಾತ್ ನೀಡಲು ಕರೆದೊಯ್ಯುತ್ತಿದ್ದು, ಅವನಿಗೂ ಛಾಯಾಗ್ರಹಣದ ಗೀಳು ಅಂಟಿಬಿಟ್ಟಿದೆ! ತುಸು ಭಾರದ ಜೂಂ ಲೆನ್ಸ್ ಜೋಡಿಸಿದ ಡಿ.ಎಸ್.ಎಲ್.ಆರ್ ಕ್ಯಾಮೆರಾವನ್ನು ಟ್ರೈಪಾಡ್ ಸಹಾಯದಿಂದ ಮ್ಯಾಕ್ರೋ ಛಾಯಾಗ್ರಹಣದಲ್ಲಿ ರಾಘವ್, ಸ್ವಂತವಾಗಿಯೇ ಛಾಯಾಚಿತ್ರಗಳನ್ನು ಸೆರೆಹಿಡಿಯುತ್ತಿದ್ದಾನೆ. ಅದಕ್ಕೆ ಸಾಕ್ಷಿ ಇತ್ತೀಚೆಗೊಂದು ಮುಂಜಾನೆ ಲಾಲ್‌ಬಾಗ್‌ನಲ್ಲಿ ಅವನೇ ಕ್ಲಿಕ್ಕಿಸಿದ ಈ ಪಾತರಗಿತ್ತಿಯ ಚಿತ್ರ!

ಅದಕ್ಕೆ ಆತ ಬಳಸಿದ ಕ್ಯಾಮೆರಾ, ನಿಕಾನ್ ಡಿ. 90, ಜೊತೆಗೆ 18–105 ಜೂಂ ಲೆನ್ಸ್‌ನಲ್ಲಿ 50 ಎಂ.ಎಂ. ಫೋಕಲ್ ಲೆಂಗ್ತ್, ಅಪರ್ಚರ್ ಎಫ್. 5.6, ಶಟರ್ ವೇಗ 1/ 180 ಸೆಕೆಂಡ್, ಐ.ಎಸ್.ಒ. 200. ಟ್ರೈಪಾಡ್ ಬಳಕೆಯಾಗಿದೆ. ಫ್ಲಾಶ್ ಬಳಸಿಲ್ಲ.

ಈ ಚಿತ್ರದ ಬಗ್ಗೆ ಕೆಲವು ತಾಂತ್ರಿಕ ಮತ್ತು ಕಲಾತ್ಮಕ ಅಂಶಗಳು ಇಂತಿವೆ: ಸೂಕ್ಷ್ಮ ವಸ್ತುಗಳಲ್ಲಿ ಹಲವು, ಸ್ಫುಟವಾಗಿ ಬರಿ ಕಣ್ಣಿಗೆ ಕಾಣುವುದು ಹೆಚ್ಚಾಗಿ ಅಸಾಧ್ಯ. ಉತ್ತಮವಾದ ಮಸೂರ–ಸೂಕ್ಷ್ಮದರ್ಶಕದಲ್ಲಿ ನೋಡಬಹುದಷ್ಟೇ. ಈ ಪಾತರಗಿತ್ತಿ, ಅಷ್ಟೊಂದು ಸೂಕ್ಷ್ಮ ಜೀವಿಯಾಗಿಲ್ಲವಾದರೂ ಅದರ ಪಕ್ಕಗಳ ಮೇಲಿನ, ಮೀಸೆಗಳ ಮೇಲಿನ ಹಾಗೂ ಮುಖದ ಚಹರೆಯ ವಿಶೇಷತೆಗಳನ್ನು ದಾಖಲಿಸಲು ಉತ್ತಮವಾದ ಕ್ಯಾಮೆರಾ ಲೆನ್ಸ್‌ ಬಳಕೆ, ತಾಂತ್ರಿಕ ಅಳವಡಿಕೆ ಮತ್ತು ಚಾಕಚಕ್ಯತೆ ಬಹುಮುಖ್ಯ. ಚಾಣಾಕ್ಷ ತಂದೆಯ ಮಾರ್ಗದರ್ಶನದಲ್ಲಿ, ರಾಘವ್ ಎಲ್ಲ ಅಂಶಗಳನ್ನೂ ಅರಿತು, ಸರಿಯಾಗಿ ಅಳವಡಿಸಿಕೊಂಡಿರುವುದು ಪ್ರಶಂಸನೀಯ.

ಕಲಾತ್ಮಕವಾಗಿ, ಚೌಕಟ್ಟಿನಲ್ಲಿ ಪುಟ್ಟ ಚಿಟ್ಟೆಯನ್ನು ಒಂದುಮೂರಾಂಶದಲ್ಲಿ ಇಟ್ಟಿರುವುದು ಚಿತ್ರ ಕಲಾ ನಿರೂಪಣೆಗೂ ಸಲ್ಲುತ್ತದೆ. ಎಡ-ಕೆಳಭಾಗದಿಂದ ಹಸಿರೆಲೆಯ, ಬಲ ಮೇಲಂಚಿನೆಡೆಗೆ ಚಿಟ್ಟೆ ಆಹಾರ ಹುಡುಕುತ್ತಾ ಸಾಗುತ್ತಿರುವುದು ಹೌದೇನೋ ಎಂಬಂತೆ, ಚಿತ್ರಿಸಿದಂತಿದೆ. ಚಿಟ್ಟೆಯ ಮತ್ತು ಅದು ಚಲಿಸುತ್ತಿರುವ ಚೊಕ್ಕಟವಾದ ಎಲೆಯ ಹಂದರದ ಸೌಮ್ಯಬಣ್ಣಕ್ಕೆ, ಪರಿಸರದ ಮಧುರವಾದ ಮತ್ತು ಮಂದವಾದ, ವರ್ಣ ಸಾಮರಸ್ಯ, ಕಣ್ಣಿಗೆ ಮುದನೀಡುತ್ತದೆ.

ಚಿಕ್ಕ ವಯಸ್ಸಿನಲ್ಲೇ ಕ್ಯಾಮೆರಾ ಮೂಲಕ ಬರಿದೇ ಫೋಟೊ ‘ಹೊಡೆಯದೇ’, ಕಲಾವಂತಿಕೆಯ ಮೆರಗು ಹೊಂದಿದ ಚಿತ್ರಣವನ್ನೂ ಮಾಡಬಲ್ಲ ಮನಸ್ಸು, ಶ್ರದ್ಧೆ ಮತ್ತು ಅಭ್ಯಾಸ ಈಗಿನ ಮಕ್ಕಳಿಗೂ ಪ್ರಿಯವಾದದ್ದೇ ಆದರೂ, ಪರಿಣಿತರ ಸಹಾಯ, ಮಾರ್ಗದರ್ಶನ, ತರಬೇತಿ ಕೂಡಾ ಬಹು ಉಪಯುಕ್ತವೆಂಬುದಕ್ಕೆ ಈ ಚಿತ್ರ ಒಂದು ಸಾಕ್ಷಿ. ಕಿರಿಯ ವಯಸಿನಲ್ಲೇ ಛಾಯಾಗ್ರಹಣದಲ್ಲಿ ಉತ್ತಮ ಸಾಧನೆಗೈದಿರುವ ರಾಘವ್, ಪ್ರಶಂಸನಾರ್ಹ ಕೂಡಾ.

ಬೆಂಗಳೂರಿನ ಬದುಕನ್ನು ಬಿಂಬಿಸುವ ಛಾಯಾಚಿತ್ರಗಳನ್ನು ‘ಚೌಕಟ್ಟು’ ಅಂಕಣಕ್ಕೆ ನೀವೂ ಕಳುಹಿಸ ಬಹುದು. ಗುಣಮಟ್ಟದ ಚಿತ್ರಗಳನ್ನು ಆಯ್ಕೆಮಾಡಿ, ಅನುಭವಿಗಳ ವಿಶ್ಲೇಷಣೆಯೊಂದಿಗೆ ಪ್ರಕಟಿಸಲಾಗುವುದು. ಇಮೇಲ್: metropv@prajavani.co.in, ದೂರವಾಣಿ- 25880636

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry