ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪ್ಲಾಸ್ಟಿಕ್ ಮಾಲಿನ್ಯ ತಡೆಗಟ್ಟಿ’

Last Updated 3 ಜೂನ್ 2018, 19:30 IST
ಅಕ್ಷರ ಗಾತ್ರ

ಪರಿಸರದ ಬಗ್ಗೆ ಕಾಳಜಿ ವಹಿಸಿ ಮತ್ತೆ ಮರೆತು ಬಿಡುವ ದಿನ ಎಂದು ಕ್ಲೀಷೆಗೊಳಗಾದ ‘ವಿಶ್ವ ಪರಿಸರ ದಿನ‘ (ಜೂನ್‌ 5) ಮತ್ತೆ ಬಂದಿದೆ. ಪರಿಸರದ ಉಳಿವಿಗೆ ನಾವೆಲ್ಲ ಎಷ್ಟು ಪ್ರಯತ್ನ ಮಾಡುತ್ತಿದ್ದೇವೆ? ಆ ನಿಟ್ಟಿನಲ್ಲಿ ನಮ್ಮ ಪ್ರಯತ್ನ ಎಷ್ಟು ಪ್ರಾಮಾಣಿಕವಾದದ್ದು ಎಂದು ಆತ್ಮವಿಮರ್ಶೆ ಮಾಡಿಕೊಳ್ಳಬೇಕಾದ ಸಂದರ್ಭವಿದು.

ಪರಿಸರ ಕಾಳಜಿ ನಮ್ಮ ಮನೆಯಿಂದಲೇ ಆರಂಭವಾಗಬೇಕು. ಆದರೆ ಹಾಗೆ ಆಗುತ್ತದೆಯೇ? ಮನೆಯ ನಲ್ಲಿಯನ್ನು ಅನಗತ್ಯವಾಗಿ ಬಿಟ್ಟು ನೀರನ್ನು ಪೋಲುಮಾಡುವುದು, ಕಾರು, ವಾಹನ ತೊಳೆಯಲು ಯಥೇಚ್ಛವಾಗಿ ನೀರು ಬಳಸಿ ರಸ್ತೆಯವರೆಗೆ ನೀರು ಹರಿದು ಹೋಗುವಂತೆ ಮಾಡುವುದು, ವಿದ್ಯುತ್‌ ಪೋಲು, ನೈಸರ್ಗಿಕವಾಗಿ ಸಿಗುವ ಸಂಪನ್ಮೂಲಗಳನ್ನು ಪೋಲು ಮಾಡುವುದು, ಪ್ರವಾಸಿ ತಾಣಗಳಲ್ಲಿ ತಿಂದುಂಡ ಪ್ಲಾಸ್ಟಿಕ್‌ ತಟ್ಟೆ, ಲೋಟಗಳನ್ನು ಬೀಸಾಡುವುದು, ಕಂಡ ಕಂಡಲ್ಲಿ ಕಸಕಡ್ಡಿಗಳನ್ನು ಚೆಲ್ಲುವುದು, ಅವುಗಳಿಗೆ ಬೆಂಕಿ ಹಚ್ಚಿ ಸುಡುವುದು, ನೈರ್ಮಲ್ಯ ಕಾಪಾಡದಿರುವುದು, ನದಿ, ಸಮುದ್ರದ ನೀರನ್ನು ಕಲುಷಿತಗೊಳಿಸುವುದು... ಹೀಗೆ ಪರಿಸರ ಸಮತೋಲನ ಹಾಳು ಮಾಡುವ ಕೆಲಸ ಯಥೇಚ್ಛವಾಗಿ ನಡೆಯುತ್ತಲೇ ಇರುತ್ತವೆ.

‘ಪ್ಲಾಸ್ಟಿಕ್‌ ಮಾಲಿನ್ಯವನ್ನು ತಡೆಗಟ್ಟಿ’ (Beat Plastic Pollution) ಇದು ಈ ವರ್ಷದ ಘೋಷವಾಕ್ಯ. ನಮ್ಮೆಲ್ಲರ ಬದುಕಿನಲ್ಲಿ ಹಾಸುಹೊಕ್ಕಾಗಿರುವ ‘ಪ್ಲಾಸ್ಟಿಕ್‌ ’ ಮಾಡುತ್ತಿರುವ ಅನಾಹುತ ಅಂತಿಂಥದ್ದಲ್ಲ. ಬದುಕಿನ ಎಲ್ಲ ಹಂತಗಳಲ್ಲಿಯೂ ಒಂದಿಲ್ಲೊಂದು ಕಾರಣಕ್ಕೆ ಎಲ್ಲದರಲ್ಲಿಯೂ ಪ್ಲಾಸ್ಟಿಕ್‌ ಹಾಸು ಹೊಕ್ಕಾಗಿರುವ ಈ ಸಮಯದಲ್ಲಿ ಪ್ಲಾಸ್ಟಿಕ್‌ ತಡೆಗಟ್ಟಿ ಅವುಗಳ ’ಬಳಕೆಯ ಮಾಲಿನ್ಯ’ವನ್ನು ಹೊಡೆದೋಡಿಸುವುದು ಕೂಡ ಅಷ್ಟು ಸುಲಭವೇನೂ ಅಲ್ಲ. ಹೀಗಾಗಿಯೇ ಇವುಗಳ ಅಪಾಯವನ್ನು ಅರಿತು ಈ ವರ್ಷ ಪ್ಲಾಸ್ಟಿಕ್‌ ಮಾಲಿನ್ಯ ಹೊಡೆದೋಡಿಸಲು ಎಲ್ಲ ರಾಷ್ಟ್ರಗಳೂ ಕೈ ಜೋಡಿಸಬೇಕು ಎಂಬ ಉದ್ದೇಶದಿಂದ ವಿಶ್ವಸಂಸ್ಥೆ ಈ ಘೋಷಣೆ ಹೊರಡಿಸಿದೆ.

ನಮ್ಮ ಮಹಾನಗರಗಳಲ್ಲಿ ಪ್ರತಿದಿನ ಉತ್ಪತ್ತಿಯಾಗುವ ಘನತ್ಯಾಜ್ಯಗಳು ಲಕ್ಷ ಲಕ್ಷ ಟನ್‌ಗಳಷ್ಟು. ಅವುಗಳಲ್ಲಿ ಪ್ಲಾಸ್ಟಿಕ್‌ ಬೇರ್ಪಡಿಸಿ ಘನತ್ಯಾಜ್ಯವನ್ನು ಪ್ರತ್ಯೇಕವಾಗಿ ಮಾಡುವ ಕೆಲಸಗಳು ಕೂಡ ನಡೆಯುತ್ತಿವೆ. ಆದರೆ ವೈಜ್ಞಾನಿಕವಾಗಿ ನಡೆಯುತ್ತಿದೆಯೇ ಎನ್ನುವುದು ಪ್ರಶ್ನಾರ್ಹ. ತಜ್ಞರ ಪ್ರಕಾರ ವಾರ್ಷಿಕವಾಗಿ ನಮ್ಮ ದೇಶದಲ್ಲಿ ಘನತ್ಯಾಜ್ಯ ಪ್ರತಿ ವರ್ಷ ಹೆಚ್ಚುತ್ತಿದ್ದು ಇದು 2030ರ ಹೊತ್ತಿಗೆ 165 ಲಕ್ಷ ಟನ್ ಗೆ ಹೆಚ್ಚಳವಾಗಲಿದೆಯಂತೆ. ಹೀಗಾಗಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಉತ್ಪತ್ತಿಯಾಗುತ್ತಿರುವ ಘನತ್ಯಾಜ್ಯ/ ಪ್ಲಾಸ್ಟಿಕ್‌ಗಳ ಬಗ್ಗೆ ನಾವೆಲ್ಲರೂ ಈಗಿನಿಂದಲೇ ಸಾಕಷ್ಟು ಮುನ್ನೆಚ್ಚರಿಕೆ ವಹಿಸಬೇಕಾಗಿದೆ.

ಪ್ಲಾಸ್ಟಿಕ್ ಅತಿಯಾದ ಬಳಕೆ ನಮ್ಮ ಹಾಗೂ ಪ್ರಾಣಿಗಳ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂಬುದನ್ನು ಅನೇಕ ಸಂಶೋಧನೆಗಳು ಹೇಳುತ್ತಿವೆ. ಪ್ಲಾಸ್ಟಿಕ್ ಕೇವಲ ಪರಿಸರಕ್ಕಷ್ಟೇ ಅಲ್ಲ, ಮನುಷ್ಯರಿಗೆ, ಪ್ರಾಣಿಗಳಿಗೆ ಆರೋಗ್ಯ ಸಮಸ್ಯೆ ಸೃಷ್ಟಿಸುತ್ತಿದೆ. ಇತ್ತೀಚೆಗಂತೂ ನಾವು ತಿನ್ನುವ ಅಕ್ಕಿ ಕೂಡ ಕಲಬೆರಕೆಯಾಗಿ ಪ್ಲಾಸ್ಟಿಕ್ ನಿಂದ ತಯಾರು ಮಾಡಲಾಗುತ್ತಿದೆ ಎಂಬ ಆಘಾತಕಾರಿ ಮಾಹಿತಿ ಬಹಿರಂಗವಾಗಿತ್ತು

ಕ್ಯಾನ್ಸರ್‌ನಂಥ ಮಾರಕ ಕಾಯಿಲೆಗೆ ಮೂಲ ಕಾರಣವೇ ಪ್ಲಾಸ್ಟಿಕ್ ಎಂಬ ಅಂಶ ಕೂಡ ಹಲವು ಕಡೆಗಳಿಂದ ಕೇಳಿ ಬರುತ್ತಿದೆ. ಪ್ಲಾಸ್ಟಿಕ್‌ನಲ್ಲಿರುವ ಹಾನಿಕಾರಕ ಅಂಶಗಳು ಮನುಷ್ಯನ ದೇಹಕ್ಕೆ ವಿವಿಧ ಹಂತಗಳಲ್ಲಿ ಸೇರಿಕೊಂಡು ಮಾರಕ ರೋಗಗಳಿಗೆ ಕಾರಣವಾಗುತ್ತವೆ. ಥೈರಾಯ್ಡ್ , ಆಸ್ತಮಾ, ಹೃದಯದ ಕಾಯಿಲೆಗಳು, ಲೈಂಗಿಕ ದೌರ್ಬಲ್ಯ, ಕೂದಲು ಮತ್ತು ಚರ್ಮದ ಸಮಸ್ಯೆ, ನರ ಸಂಬಂಧಿ ಕಾಯಿಲೆಗಳಿಗೆಲ್ಲ ಪ್ಲಾಸ್ಟಿಕ್‌ ಕಾರಣವಾಗುತ್ತವೆ ಎನ್ನುವ ಆತಂಕಕಾರಿ ಅಂಶ ಈಗಾಗಲೇ ಸಾರ್ವತ್ರಿಕವಾಗಿ ಹಬ್ಬಿದೆ. ಆದರೆ ಜನರು ಈ ಬಗ್ಗೆ ಜಾಗೃತರಾಗಬೇಕಾಗಿದೆ. ಕೇಂದ್ರ ಸರ್ಕಾರವೇ ದೇಶವ್ಯಾಪಿ ಪ್ಲಾಸ್ಟಿಕ್‌ ನಿಷೇಧಿಸಿ ಈಗಾಗಲೇ ಆದೇಶ ಹೊರಡಿಸಿದೆ. ಆದರೆ ಕೆಲವು ರಾಜ್ಯಗಳಲ್ಲಿ ಇದು ಜಾರಿಯಾಗಿದೆ. ಇನ್ನು ಕೆಲವು ಕಡೆಗಳಲ್ಲಿ ಆಗಿಲ್ಲ. ಇವುಗಳ ಬಳಕೆ ಎಲ್ಲ ಕಡೆಗಳಲ್ಲಿ ಇನ್ನೂ ನಿಂತಿಲ್ಲ. ಸಾರ್ವಜನಿಕರು ಅಂಗಡಿಗಳಿಗೆ ಹೋಗುವಾಗ ಇಲ್ಲವೇ ಅಂಗಡಿಗಳಲ್ಲಿ ಪ್ಲಾಸ್ಟಿಕ್‌ ಕವರ್‌ ಗಳಲ್ಲಿಯೇ ಆಹಾರ ಪದಾರ್ಥಗಳನ್ನು , ವಸ್ತುಗಳನ್ನು ತರಲು ಬಯಸುತ್ತಾರೆ. ಇನ್ನು ಕೆಲವರು ಊಟ–ತಿಂಡಿಗಳನ್ನು ಕೂಡ ಪ್ಲಾಸ್ಟಿಕ್‌ ಕವರ್ ಗಳಲ್ಲಿ ಸುತ್ತಿಕೊಂಡು/ಪ್ಯಾಕ್‌ ಮಾಡಿಸಿಕೊಂಡು ಮನೆಗೆ ತಂದು ತಿನ್ನುತ್ತಾರೆ. ಬಿಸಿ ಪದಾರ್ಥಗಳನ್ನು ಪ್ಲಾಸ್ಟಿಕ್‌ ಕವರ್ ಗಳಲ್ಲಿ ಹಾಕಿದಾಗ ಸಹಜವಾಗಿಯೇ ಪ್ಲಾಸ್ಟಿಕ್‌ ಅಂಶ ಆಹಾರಕ್ಕೆ ಬೆರೆತು ವಿಷವಾಗುತ್ತದೆ. ಇದರಿಂದ ಆರೋಗ್ಯದ ಮೇಲೆ ದುಷ್ಟರಿಣಾಮ ಬೀರುತ್ತದೆ.

ಜತೆಗೆ ಎಲ್ಲೆಂದರಲ್ಲಿ ಬಿಸಾಡುವ ಪ್ಲಾಸ್ಟಿಕ್‌ ಗಳನ್ನು ತಿನ್ನುವ ಪಶು, ಪಕ್ಷಿಗಳು ಕೂಡ ಅಪಾಯಕ್ಕೆ ಸಿಲುಕುತ್ತಿವೆ. ಇವುಗಳ ಬಗ್ಗೆ ಸಚಿತ್ರ ವರದಿಗಳನ್ನೇ ಪತ್ರಿಕೆಗಳಲ್ಲಿ ಓದಿದ್ದೇವೆ, ಕಣ್ಣೆದುರಿಗೇ ನೋಡುತ್ತಿದ್ದೇವೆ. ಹಾಗಿದ್ದೂ ಕೂಡ ನಾವು ಪ್ಲಾಸ್ಟಿಕ್‌ ಬಳಕೆಯನ್ನು ತಡೆಯುವಲ್ಲಿ ವಿಫಲರಾಗಿದ್ದೇವೆ.

ಇನ್ನು ಕಡಲ ತೀರದಲ್ಲಿ ಬೀಸಾಡುವ/ತಂದು ಸುರಿಯುವ ಟನ್‌ ಗಟ್ಟಲೆ ಪ್ಲಾಸ್ಟಿಕ್‌ ತ್ಯಾಜ್ಯಗಳಿಂದ ಬಹಳ ದೊಡ್ಡ ಮಟ್ಟದಲ್ಲಿ ಅಪಾಯ ಉಂಟಾಗುತ್ತವೆ. ನೀರಿನೊಂದಿಗೆ ಬೆರೆತುಕೊಂಡು ಸಮುದ್ರಜೀವಿಗಳಿಗೆ ಆಹಾರವಾಗಿ, ಅವುಗಳು ತೊಂದರೆಗೆ ಸಿಲುಕುವುದು ಒಂದೆಡೆಯಾದರೆ, ಬಳಿಕ ಮತ್ತೆ ಮನುಷ್ಯರ ಹೊಟ್ಟೆ ಸೇರುವ ಮೀನು ಮತ್ತಿತರ ಕಡಲಿನ ಆಹಾರಗಳು ಅಪಾಯ ಒಡ್ಡುತ್ತವೆ. ಕಲುಷಿತಗೊಳ್ಳುವ ಕಡಲು, ಅದರಲ್ಲಿಯೇ ಬದುಕುವ ಮೀನು, ಕಡಲಜೀವಿಗಳು; ಕಡಲಜೀವಿಗಳನ್ನೇ ತಿಂದು ಬದುಕುವ ಮಾನವ– ಒಟ್ಟಾರೆ ಇಡೀ ಆಹಾರ ಸರಪಣಿ ವಿಷಯುಕ್ತವಾಗುತ್ತದೆ.

ಪ್ರತಿ ವರ್ಷ ಸುಮಾರು 10 ಲಕ್ಷ ಸಮುದ್ರ ಹಕ್ಕಿಗಳು, ಒಂದು ಲಕ್ಷಕ್ಕೂ ಅಧಿಕ ಸಸ್ತನಿಗಳು ಹಾಗೂ ಇನ್ನಿತರ ಸಮುದ್ರ ಜೀವಿಗಳು ಪ್ಲಾಸ್ಟಿಕ್‌ಗಳ ವಿಷಕಾರಕ ಅಂಶಗಳಿಂದ ಸಾಯುತ್ತವೆ ಎಂದು ಅಧ್ಯಯನಗಳು ಹೇಳುತ್ತಿವೆ.

ಇಷ್ಟೇ ಅಲ್ಲದೇ ಪ್ಲಾಸ್ಟಿಕ್‌ ಅನ್ನು ಹಾಗೆಯೇ ಬಿಸಾಡಿದರೆ ಮಣ್ಣಿನಲ್ಲಿ ಕರಗುವುದಿಲ್ಲ. ಪ್ರತಿದಿನವೂ ನಮ್ಮ ಸುತ್ತ ಪ್ಲಾಸ್ಟಿಕ್‌ ಬ್ಯಾಗುಗಳು, ಬಾಟಲ್‌, ಆಹಾರದ ಕಂಟೈನರ್‌, ಕಾಫಿ, ಟೀ ಕಪ್ಪುಗಳು, ಪ್ಲಾಸ್ಟಿಕ್ ಸುತ್ತಿಕೊಡುವ ಆಹಾರ ಪದಾರ್ಥಗಳು, ಇತ್ಯಾದಿ... ಒಟ್ಟಾರೆ ಪ್ಲಾಸ್ಟಿಕ್‌ ಉತ್ಪನ್ನಗಳು ನಮ್ಮ ಕೈ ತಾಕುವಂತಿರುತ್ತವೆ. ಅವುಗಳನ್ನು ನಾವು ಯಾವುದೇ ಮುನ್ನೆಚ್ಚರಿಕೆ ವಹಿಸದೇ ಕಂಡ ಕಂಡಲ್ಲಿ ಬಿಸಾಕುತ್ತೇವೆ.

ಒಟ್ಟಾರೆ ನಮ್ಮ ಸುತ್ತಲೂ ಪ್ರತಿದಿನ ಉತ್ಪತ್ತಿಯಾಗುವ ಲಕ್ಷ, ಲಕ್ಷ ಟನ್‌ಗಟ್ಟಲೆ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ವೈಜ್ಞಾನಿಕವಾಗಿ ಹೂಳಲು ನಮಗೆ ಸಾಧ್ಯವಾಗುತ್ತಿಲ್ಲ. ಅಷ್ಟೊಂದು ಸ್ಥಳಾವಕಾಶವಾದರೂ ಎಲ್ಲಿದೆ? ಘನತ್ಯಾಜ್ಯಗಳನ್ನು ವ್ಯವಸ್ಥಿತವಾಗಿ ಹೂಳಲಾಗುತ್ತಿಲ್ಲ. ವೈಜ್ಞಾನಿಕ ಸಂಸ್ಕರಣೆ ಕೂಡ ಆಗುತ್ತಿಲ್ಲ. ಬಹಳಷ್ಟು ಕಡೆಗಳಲ್ಲಿ ಇವೆಲ್ಲವೂ ಪರಿಸರದೊಂದಿಗೆ , ನೀರಿನೊಂದಿಗೆ ಸೇರಿಕೊಂಡು ಮರಳಿ ಆಹಾರ ಪದಾರ್ಥಗಳ ಮೂಲಕ ಮತ್ತೆ ಮನುಷ್ಯನ ಹೊಟ್ಟೆ ಸೇರಿಕೊಂಡು ಅಪಾಯ ತಂದೊಡ್ಡುತ್ತವೆ. ಹೀಗಾಗಿ ಪ್ಲಾಸ್ಟಿಕ್ ಬಳಕೆಯತ್ತ ನಾವು ಹೆಚ್ಚಿನ ಎಚ್ಚರಿಕೆ ವಹಿಸಲೇಬೇಕಾಗಿದೆ. ಪ್ಲಾಸ್ಟಿಕ್‌ ಬದಲು ಮರುಬಳಕೆಯ ಅನ್ಯವಸ್ತುಗಳತ್ತ ಗಮನ ಹರಿಸಬೇಕಾದ ತುರ್ತು ಎಂದಿಗಿಂತಲೂ ಹೆಚ್ಚಿದೆ.
**
ಅವಳಿ ನಗರದಲ್ಲಿ ಕಾಂಪೋಸ್ಟ್‌ ಪ್ಲಾಂಟ್ 
ಹುಬ್ಬಳ್ಳಿ–ಧಾರವಾಡ ಅವಳಿ ನಗರದ ಘನತ್ಯಾಜ್ಯ ಪ್ರಮಾಣ ಪ್ರತಿ ದಿನ 400-450 ಟನ್‌. ಆದರೆ ವೈಜ್ಞಾನಿಕವಾಗಿ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ವಿಲೇವಾರಿ ಮಾಡುವ ವ್ಯವಸ್ಥೆ ಈವರೆಗೂ ಇಲ್ಲ. ಹೀಗಾಗಿ ಶೀಘ್ರವೇ ಸುಮಾರು 300 ಟನ್‌ (ಟಿಪಿಡಿ) ಸಾಮರ್ಥ್ಯದ ಕಾಂಪೋಸ್ಟ್‌ ಪ್ಲಾಂಟ್ ಹುಬ್ಬಳ್ಳಿಯಲ್ಲಿ ಹಾಗೂ 150 ಟನ್‌ (ಟಿಪಿಡಿ) ಸಾಮರ್ಥ್ಯದ ಪ್ಲಾಂಟ್‌ ಧಾರವಾಡದಲ್ಲಿ ಸ್ಥಾಪನೆಯಾಗಲಿದೆ ಎನ್ನುತ್ತಾರೆ ಪಾಲಿಕೆಯ ಪರಿಸರ ಎಂಜಿನಿಯರ್‌ ಸಂತೋಷಕುಮಾರ ಎರಂಗಳಿ.

ಈ ಘಟಕಗಳ ಮೂಲಕ ಘನತ್ಯಾಜ್ಯದಿಂದ ಪ್ಲಾಸ್ಟಿಕ್‌ ಬೇರ್ಪಡಿಸಿ ಅವುಗಳನ್ನು ಗಟ್ಟಿಯಾದ ಪ್ಲಾಸ್ಟಿಕ್‌ ಉಂಡೆಮಾಡಿ ಸಿಮೆಂಟ್‌ ಫ್ಯಾಕ್ಟರಿಗಳಿಗೆ ಅವುಗಳನ್ನು ಉರುವಲಾಗಿ ಬಳಸಲು ಕೊಡಲಾಗುತ್ತದೆ. ಈ ಯೋಜನೆ ಅನುಷ್ಠಾನಕ್ಕೆ ಬಂದಾಗ ಅವಳಿ ನಗರದಲ್ಲಿ ಪ್ಲಾಸ್ಟಿಕ್‌ ತ್ಯಾಜ್ಯದ ಬಳಕೆಗೆ ಸ್ಪಷ್ಟರೂಪ ಸಿಗುತ್ತದೆ ಎನ್ನುತ್ತಾರೆ ಅವರು.

ಪ್ಲಾಸ್ಟಿಕ್‌ ನಿಷೇಧ ಅವಳಿ ನಗರದಲ್ಲಿ ದೊಡ್ಡಮಟ್ಟದಲ್ಲಿ ಈವರೆಗೂ ಅನುಷ್ಠಾನವಾಗಿಲ್ಲ. ಈ ಬಗ್ಗೆ ಪ್ಲಾಸ್ಟಿಕ್‌ ನಿರ್ವಹಣಾ ಬೈಲಾ ಮಾಡಿಕೊಂಡು ಅಂಗಡಿಗಳಿಗೆ , ಹೋಟೆಲ್‌ಗಳಿಗೆ ಸೂಚನೆ ಹೊರಡಿಸಿ, ಪ್ಲಾಸ್ಟಿಕ್‌ ಬಳಸಿದಲ್ಲಿ ಅವುಗಳಿಗೆ ದಂಡವಿಧಿಸಲಾಗುತ್ತಿದೆ.
**
‘ಪ್ಲಾಸ್ಟಿಕ್ ಮುಕ್ತ ಹುಬ್ಬಳ್ಳಿ –ಧಾರವಾಡ’ ಕೈಪಿಡಿ ಬಿಡುಗಡೆ ನಾಳೆ
ಅವಳಿ ನಗರದಲ್ಲಿ ಪ್ಲಾಸ್ಟಿಕ್‌ ಹಾವಳಿ ತಡೆಗಟ್ಟಿ ಜನರಿಗೆ ಸರಿಯಾದ ತಿಳಿವಳಿಕೆ ನೀಡಲು ವಿಶ್ವ ಪರಿಸರ ದಿನ (ಜೂನ್‌ 5)ದಂದು ಮಹಾನಗರ ಪಾಲಿಕೆ ವತಿಯಿಂದ ‘ಪ್ಲಾಸ್ಟಿಕ್‌ ಮುಕ್ತ ಹು–ಧಾ’ ಕೈಪಿಡಿ ಬಿಡುಗಡೆ ಮಾಡಲಾಗುತ್ತಿದೆ. ಪ್ಲಾಸ್ಟಿಕ್‌ನ ಎಲ್ಲ ದುಷ್ಪರಿಣಾಮಗಳ ಜತೆಗೆ ಪ್ಲಾಸ್ಟಿಕ್‌ ನಿಷೇಧಿಸಿದರೆ ಪರ್ಯಾಯವಾಗಿ ಏನೆಲ್ಲ ಬಳಸಬಹುದು ಎನ್ನುವುದು ಕೂಡ ಈ ಕೈಪಿಡಿ ಒಳಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT