ಪರಿಸರ, ಪ್ರಾಣಿ–ಪಕ್ಷಿಗಳ ಉಳಿವಿಗೆ ಅಳಿಲು ಸೇವೆ

7

ಪರಿಸರ, ಪ್ರಾಣಿ–ಪಕ್ಷಿಗಳ ಉಳಿವಿಗೆ ಅಳಿಲು ಸೇವೆ

Published:
Updated:
ಪರಿಸರ, ಪ್ರಾಣಿ–ಪಕ್ಷಿಗಳ ಉಳಿವಿಗೆ ಅಳಿಲು ಸೇವೆ

ಧಾರವಾಡದ ಸಪ್ತಾಪುರದ ನಾಡಗೀರ್ ಕಾಂಪೌಂಡ್‌ನಲ್ಲಿ ಹಸಿರು ಹೊದ್ದ ಮನೆಯೊಂದು ಗಮನ ಸೆಳೆಯಲಿದೆ. ಮನೆಯ ಸುತ್ತಮುತ್ತ ಹಸಿರೇ ಹಸಿರು. ಎಷ್ಟೆಂದರೆ ಮನೆ ಕಾಣದಷ್ಟು! ಹಸಿರಷ್ಟೇ ಅಲ್ಲ; ಈ ಮನೆಯ ಮತ್ತೊಂದು ವಿಶೇಷವೆಂದರೆ ಪ್ರಾಣಿ, ಪಕ್ಷಿಗಳಿಗೂ ಈ ಮನೆಯೆಂದರೆ ಅಚ್ಚು ಮೆಚ್ಚು. ಅದುವೇ ಮಂಜುಳಾ ರಾಮಡಗಿ ಅವರ ಮನೆ ‘ಅಲ್ಲಮ’.

ಇವರಿಗೆ ಹಸಿರು ಪ್ರೀತಿಯ ಜೊತೆಗೆ ಪ್ರಾಣಿ, ಪಕ್ಷಿಗಳೆಂದರೂ ತುಸು ಹೆಚ್ಚು ಪ್ರೀತಿ. ಮನೆಯ ಸುತ್ತಮುತ್ತ ವಿವಿಧ ಗಿಡ ಮರಗಳನ್ನು ಬೆಳೆಸುವುದರೆಂದರೆ ಇವರಿಗೆ ಇನ್ನಿಲ್ಲವೆಂಬಷ್ಟು ಖುಷಿ. ಮನೆಯ ಸದಸ್ಯರಂತೆ ಪ್ರಾಣಿ–ಪಕ್ಷಿಗಳನ್ನೂ ಪರಿಗಣಿಸುತ್ತಾರೆ. ಅವುಗಳನ್ನು ಎಷ್ಟು ಹಚ್ಚಿಕೊಂಡಿದ್ದಾರೆ ಎಂದರೆ ಮಂಗಗಳು, ಅಳಿಲು, ಓತಿಕ್ಯಾತ ಇವರ ಮನೆಯ ಕಾಂಪೌಂಡ್‌ಗಳ ಮೇಲೆ ನಿರ್ಭಯವಾಗಿ ಓಡಾಡಿಕೊಂಡಿರುತ್ತವೆ. ವಿಶ್ರಾಂತಿ ಪಡೆಯುತ್ತವೆ. ಮನೆ ಹೊರಗಿನ ಕತೆ ಹಾಗಾದರೆ ಮನೆಯ ಒಳಗೆಲ್ಲ ಹಕ್ಕಿಗಳಿಗಾಗಿ ಪ್ರೀತಿಯ ಬೀಡಾರಗಳನ್ನು ಕಟ್ಟಿಕೊಟ್ಟಿದ್ದಾರೆ. ಜೀವಜಲದ ಪಾತ್ರೆಗಳನ್ನು ಇಟ್ಟಿದ್ದಾರೆ. ನಿತ್ಯವೂ ಮನೆಯ ಕಾಂಪೌಂಡ್‌, ನೀರಿನ ಡ್ರಮ್‌ ಮೇಲೆ ಪ್ರೀತಿಯ ತುತ್ತು ಇಡುತ್ತಾರೆ. ನಿತ್ಯವೂ ಇವರ ಮನೆಯ ಕಿಟಕಿಗಳ ಮೇಲೆ ಗುಬ್ಬಚ್ಚಿಗಳು, ಮೈನಾ ಹಕ್ಕಿಗಳು, ಬುಲ್ ಬುಲ್ ಪಕ್ಷಿಗಳು, ಪಾರಿವಾಳಗಳು ಬಂದು ಚಿಲಿಪಿಲಿಗುಟ್ಟುತ್ತವೆ. ಅವುಗಳ ಕಲರವ ಇವರಿಗೆ ಪುಳಕ. ಮಂಜುಳಾ ಅವರಿಟ್ಟ ನೀರು ಕುಡಿದು, ತುತ್ತು ತಿಂದು ಹೋಗುತ್ತವೆ. ಮತ್ತೆ ಬರುತ್ತವೆ. ಇವೆಲ್ಲ ಇಲ್ಲಿ ನಿತ್ಯವೂ ಕಾಣಸಿಗಲಿದೆ. ಗುಬ್ಬಚ್ಚಿಗಳಿಗೆಂದೇ ಗೂಡು ಕಟ್ಟಿಕೊಟ್ಟಿದ್ದಾರೆ. ಆಹಾರ ನೀರು ದಿನವೂ ಇಡುವುದು ಇವರ ನಿತ್ಯದ ಕಾಯಕ. ಒಂದು ದಿನ ನೀರಡದಿದ್ದರೆ, ತುತ್ತಿಡದಿದ್ದರೆ ಅವರ ಮನಸ್ಸಿಗೆ ಸಮಾಧಾನವೇ ಇಲ್ಲ.

ಮನೆಯ ಉದ್ಯಾನದಲ್ಲಿ ಸಾಕಷ್ಟು ಗಿಡಗಳ ನಡುವೆ ಹಕ್ಕಿಗಳು ಗೂಡು ಕಟ್ಟಿ ಮೊಟ್ಟೆ ಇಟ್ಟು, ಕಾವು ಕೊಟ್ಟು ಮರಿ ಮಾಡುತ್ತವೆ. ಇಲ್ಲಿ ವರ್ಷವಿಡೀ ಸಂತಾನೋತ್ಪತ್ತಿ ನಡೆಯುತ್ತಿರುತ್ತದೆ. ಇವನ್ನೆಲ್ಲ ನೋಡುತ್ತ, ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿಯುತ್ತಾರೆ. ಹಕ್ಕಿಗಳ ಬಾಣಂತನವನ್ನು ಸಂಭ್ರಮಿಸುತ್ತಾರೆ. ಗೂಡಿನಿಂದ ಹಾರಲು ಹೋಗಿ ಕೆಳಗೆ ಬಿದ್ದ ಮರಿಗಳನ್ನು ಮತ್ತೆ ಗೂಡಿಗೆ ಸೇರಿಸುವುದು, ಬೆಕ್ಕಿಗೆ ಆಹಾರವಾಗದಂತೆ ನೋಡಿಕೊಳ್ಳುವುದು ಕಷ್ಟದ ಕೆಲಸ ಆದರೂ ಅವುಗಳ ಮೇಲಿನ ಅಕ್ಕರೆಗಾಗಿ ನಿಭಾಯಿಸುತ್ತಾರೆ. ಇದರಿಂದ ಅವರಿಗೆ ಭರಪೂರ ಖುಷಿ ಸಿಗಲಿದೆ ಎಂಬುದು ಅವರ ಮಾತಿನಲ್ಲೇ ವ್ಯಕ್ತವಾಗುತ್ತದೆ. ಇವರ ಈ ಅಪರಿಮಿತ ಪರಿಸರ ಆಸಕ್ತಿಗೆ ಪತಿ ಎಚ್‌.ಡಿ.ರಾಮಡಗಿ (ಕಾರವಾರ ಆಕಾಶವಾಣಿಯಲ್ಲಿ ನಿರ್ದೇಶಕರು) ಹಾಗೂ ಮಕ್ಕಳು ಪ್ರೋತ್ಸಾಹ ನೀಡುತ್ತಾರೆ.

‘ಮನೆ ಮುಂದೆ ಬೆಳೆಸಿದ ದೊಡ್ಡ ಕಾಡು ಬಾದಾಮಿ ಮರವಿದೆ. ಅಲ್ಲಿ ಹಣ್ಣು ತಿನ್ನಲು ಅನೇಕ ಬಗೆಯ ಪಕ್ಷಿಗಳು, ಮಂಗಗಳು ಬರುತ್ತವೆ. ಇನ್ನು ಹಿತ್ತಲಲ್ಲಿ ಗುಂಪು ಗುಂಪಾಗಿ ಗುಬ್ಬಚ್ಚಿಗಳು, ಮೈನಾ ಹಕ್ಕಿಗಳು, ಬುಲ್ ಬುಲ್ ಪಕ್ಷಿಗಳು, ಪಾರಿವಾಳಗಳು, ಕಾಡು ಕೋಳಿಗಳು, ಕೋಗಿಲೆಗಳು, ರತ್ನಪಕ್ಷಿಗಳು, ಹೆಸರು ಗೊತ್ತಿರದ ಅನೇಕ ಜಾತಿಯ ಪಕ್ಷಿಗಳು ಬರುತ್ತವೆ. ಮಂಗ, ಮುಂಗುಸಿ ಸದಾ ಓಡಾಡಿಕೊಂಡಿರುತ್ತವೆ. ಅವರಿಗೆಲ್ಲಾ ಊಟ, ನೀರು ದಿನವೂ ತಪ್ಪದೇ ಇಡುವೆ. ಇದು ನಂಗೆ ಸಂತಸ ಕೊಡುವ ಕೆಲಸ. ನಮ್ಮ ಮನೆಯ ಮತ್ತು ಮನದ ಪ್ರೀತಿಯ ಸದಸ್ಯರಿವರು. ಈ ಮೂಲಕ ಪರಿಸರ ಸಂರಕ್ಷಣೆಗೆ ಜೀವದ ಉಳಿವಿಗೆ ನನ್ನ ಅಳಿಲು ಸೇವೆ’ ಎನ್ನುತ್ತಾರೆ ಮಂಜುಳಾ ರಾಮಡಗಿ.

‘ಮನುಷ್ಯ ಮುಟ್ಟಿದ ಮರಿಗಳನ್ನು ತಮ್ಮ ಜೊತೆಗೆ ಸೇರಿಸಲ್ಲ ಎಂದು ಕೆಲವರು ಹೇಳುವುದನ್ನು ಕೇಳಿದ್ದೇನೆ. ಆದರೆ ನಮ್ಮಲ್ಲಿ ಅದು ಸುಳ್ಳಾಗಿದೆ. ಅದೆಷ್ಟೋ ಹಕ್ಕಿಗಳ ಮರಿಗಳು ಗೂಡಿನಿಂದ ನೆಲಕ್ಕೆ ಬಿದ್ದಾಗ ಅವುಗಳನ್ನು ಕೈಯಿಂದ ಎತ್ತಿ ಜೋಪಾನವಾಗಿ ಗೂಡಿನಲ್ಲಿಟ್ಟಿದ್ದೇನೆ. ನಂತರ ಅವು ರೆಕ್ಕೆ ಬಲಿತು ಹಾರಿ ಹೋಗಿವೆಯೇ ಹೊರತು ತಾಯಿ ಹಕ್ಕಿ ಗೂಡಿನಿಂದ ಹೊರಹಾಕಿಲ್ಲ’ ಎಂಬ ಸಂಗತಿಯನ್ನೂ ಅವರು ಹಂಚಿಕೊಂಡರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry