ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌಲಭ್ಯ ವಂಚಿತ ವಡಗಾವಿ ಸ್ಲಂ

ನಿವಾಸಿಗಳ ಅಸಮಾಧಾನ l ಸೌಲಭ್ಯದ ಭರವಸೆ ನೀಡುವ ಜನಪ್ರತಿನಿಧಿಗಳು
Last Updated 4 ಜೂನ್ 2018, 6:53 IST
ಅಕ್ಷರ ಗಾತ್ರ

ಬೆಳಗಾವಿ: ಮಹಾನಗರ ಪಾಲಿಕೆಯ 10ನೇ ವಾರ್ಡ್‌ನ ಬಹುತೇಕ ಭಾಗಕ್ಕೆ ಮೂಲ ಸೌಕರ್ಯಗಳಿಲ್ಲ. ಸ್ಲಂಗೆ ಮತ್ತೊಂದು ಹೆಸರು ವಡಗಾವಿ ದಕ್ಷಿಣ ಭಾಗದ ಪ್ರದೇಶ ಎಂಬಂತಾಗಿದೆ.

ಕುಡಿಯುವ ನೀರು, ಸಮರ್ಪಕ ರಸ್ತೆಗಳು, ಗಟಾರಗಳಿಲ್ಲ. ರಸ್ತೆಗಳಲ್ಲಿಯೇ ಹರಿಯುವ ಚರಂಡಿಯ ಮಾಲಿನ್ಯ ನೀರು, ಹಂದಿ ಮತ್ತು ಬಿಡಾಡಿ ನಾಯಿಗಳ ಓಡಾಟದಿಂದ ಇಡೀ ಪ್ರದೇಶ ಮಲಿನಗೊಂಡಿದೆ.

‘ಮಳೆಗಾಲ ಬಂದರೆ ಈ ವಾರ್ಡ್‌ನಲ್ಲಿ ಕೆಸರು ಹಾಗೂ ರೋಗಗಳ ತೊಂದರೆ, ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆಗಳಾಗಿವೆ’ ಎನ್ನುತ್ತಾರೆ ಸಂಭಾಜಿನಗರದ ನಿವಾಸಿ ಭರಮಾ ಸಾವಂತ.

‘ಆನಂದನಗರ ಹಾಗೂ ಸಂಭಾಜಿನಗರಗಳೆರಡೂ ಶಾಪಗ್ರಸ್ಥವಾಗಿದೆ. ಮೂರು ದಶಕಗಳಿಂದ ನೂರಾರು ಮನೆ
ಗಳನ್ನು ನಿರ್ಮಿಸಿಕೊಂಡು, ಸಾವಿರಾರು ಜನ ವಾಸವಾಗಿದ್ದರೂ ಇಂದಿಗೂ ಇವರಿಗೆ ಅನಧಿಕೃತ ನಿವಾಸಿಗಳು ಎಂದು ಎರಡನೇ ದರ್ಜೆಯಲ್ಲಿ ಪರಿಗಣಿಸುತ್ತಾರೆ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

‘ಪ್ರತಿ ಮಳೆಗಾಲದಲ್ಲಿ ನಗರದಲ್ಲಿಯೇ ಅತಿ ಹೆಚ್ಚು ಸಾಂಕ್ರಾಮಿಕ ರೋಗಕ್ಕೆ ಒಳಗಾಗುವ ಪ್ರದೇಶಗಳೆಂದು ಗುರುತಿಸಲಾಗಿರುವ ಆನಂದನಗರ, ಸಂಭಾಜಿನಗರ, ಬಳ್ಳಾರಿ ನಾಲಾ ಸುತ್ತಲಿನ ಸ್ಲಮ್‌ ಪ್ರದೇಶಗಳ ನಿವಾಸಿಗಳಿಗೆ ಈಗಿನ ಮಳೆಗಾಲ ಕಳೆಯುವುದು ಹೇಗೆ ಎಂಬ ಪ್ರಶ್ನೆಯಾಗಿದೆ’ ಎಂದು ಹೇಳಿದರು.

‘ಅನಗೋಳ ವಡಗಾವಿ ರಸ್ತೆ, ಯಳ್ಳೂರು ರಸ್ತೆ, ಯರಮಾಳ ರಸ್ತೆಗಳು ಮುಂದಿನ ಜನವಸತಿ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುತ್ತವೆ. ಆದರೆ ಈ ದೊಡ್ಡ ರಸ್ತೆಗಳಿಗೂ ಚರಂಡಿ ವ್ಯವಸ್ಥೆ ಇಲ್ಲ. ಮೇಲಿನಿಂದ ಹರಿದು ಬರುವ ಚರಂಡಿ ನೀರು ಇಲ್ಲಿನ ಮನೆಗಳ ಮುಂದೆ ಕೆರೆಯಾಗಿ ನಿಲ್ಲುತ್ತದೆ. ಅನೇಕ ಬಾರಿ ಮನೆಗಳಲ್ಲಿಯೂ ನುಗ್ಗಿ ಹಾನಿ ಮಾಡುತ್ತದೆ. ಅನಧಿಕೃತ ಕಟ್ಟಡಗಳೆಂಬ ಒಂದೇ ಕಾರಣದಿಂದ ಇಲ್ಲಿ ಮೂಲ ಸೌಲಭ್ಯಗಳನ್ನು ಕಲ್ಪಿಸಿಲ್ಲ’ ಎಂದು ಆನಂದನಗರದ ನಿವಾಸಿ ಬಸವ್ವ ಪಾಟೀಲ ದೂರಿದರು.

‘ನಮ್ಮ ಏರಿಯಾದಲ್ಲಿ ಸ್ವಚ್ಛತೆ ಮಾಡಿಸಿಲ್ಲ, ನಿತ್ಯ ಕುಡಿಯುವ ನೀರು ಕೊಡಲ್ಲ, ಅನೇಕ ಸಲ ಮನವಿ ಮಾಡೇವಿ, ಪ್ರಯೋಜನವಾಗಿಲ್ಲ’ ಎಂದು ವಡ್ಡರ ಗಲ್ಲಿ ನಿವಾಸಿ ಲಕ್ಷ್ಮೀ ನಾರಾಯಣ ವಡಗಾಂವಕರ ಹೇಳಿದರು.

‘ಸಾಯಿ ಕಾಲೊನಿ, ವಡ್ಡರ ಗಲ್ಲಿ, ಬಳ್ಳಾರಿ ನಾಲಾ ಕಾಲೊನಿಗಳು ಸ್ಲಮ್‌ ಪ್ರದೇಶಗಳಾಗಿವೆ. ಆದರೆ ಸ್ಲಮ್‌ ಬೋರ್ಡ್‌ನಿಂದಲೂ ಸೌಲಭ್ಯಗಳು ಸಿಕ್ಕಿಲ್ಲ’ ಎನ್ನುವುದು ನಾಗರಿಕರ ಆರೋಪವಾಗಿದೆ.

‘ಅಮೃತ ಸಿಟಿ ಯೋಜನೆಯಡಿ ಈ ವಾರ್ಡ್‌ ವ್ಯಾಪ್ತಿಯಲ್ಲಿ ನಾಗರಿಕ ಸೌಲಭ್ಯ ಕಲ್ಪಿಸಲು ಯೋಜನೆ ರೂಪಿಸಲಾಗಿದೆ. ಪಾಟೀಲ ಗಲ್ಲಿ, ಕಾರಬಾರ ಗಲ್ಲಿಗಳಲ್ಲಿ ರಸ್ತೆ, ಗಟಾರಗಳನ್ನು ನಿರ್ಮಿಸಲಾಗಿದೆ. ಸಂಭಾಜಿನಗರ ವ್ಯಾಪ್ತಿಯಲ್ಲಿ ರಸ್ತೆಗಳ ನಿರ್ಮಾಣಕ್ಕೆ ₹ 10 ಲಕ್ಷ ಮಂಜೂರಾಗಿದ್ದು ಡಿಸೆಂಬರ್ ಒಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ. ವಡ್ಡರ ಕಾಲೊನಿ, ಸ್ಲಮ್‌ ಪ್ರದೇಶ, ಸಂಭಾಜಿ ನಗರಕ್ಕೆ ಕುಡಿಯುವ ನೀರು ಒದಗಿಸಲು ಕೊಳವೆ ಬಾವಿ ಕೊರೆಸಿದರೂ ನೀರು ಬಂದಿಲ್ಲ. ಆದ್ದರಿಂದ ನಿರಂತರ ನೀರು ಪೂರೈಕೆ ಯೋಜನೆಯಡಿ ನೀರು ಪೂರೈಸಲು ಮಹಾನಗರ ಪಾಲಿಕೆಗೆ ಒತ್ತಾಯಿಸಲಾಗಿದೆ’ ಎಂದು ಮಹಾನಗರಸಭೆ ಸದಸ್ಯ ಮನೋಹರ ಹಲಗೇಕರ ಹೇಳಿದರು.

ವಾರ್ಡ್‌ ವ್ಯಾಪ್ತಿ

ವಡಗಾವಿ ಪಾಟೀಲ ಗಲ್ಲಿ, ಕಾರಬಾರ ಗಲ್ಲಿ, ಆನಂದನಗರ, ಸಂಭಾಜಿನಗರ, ಅನಗೋಳ ವಡಗಾವಿ ರಸ್ತೆ, ಯಳ್ಳೂರು ರಸ್ತೆ, ಯರಮಾಳ ರಸ್ತೆ, ಸೆವೆನ್‌ ಡೇ ಸ್ಕೂಲ್‌ ಪ್ರದೇಶ, ಬಳ್ಳಾರಿ ನಾಲಾ ಪಕ್ಕದ ಪ್ರದೇಶಗಳು

–ಆರ್‌.ಎಲ್‌. ಚಿಕ್ಕಮಠ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT