‘ಸತ್ಯ ಹೇಳುವವರ ಕತ್ತು ಹಿಸುಕುವ ಸನ್ನಿವೇಶ’

7
ಬೀದರ್‌: ಮಕ್ಕಳ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕ ಉದ್ಘಾಟನಾ ಕಾರ್ಯಕ್ರಮ

‘ಸತ್ಯ ಹೇಳುವವರ ಕತ್ತು ಹಿಸುಕುವ ಸನ್ನಿವೇಶ’

Published:
Updated:

ಬೀದರ್: ‘ಇಂದಿನ ಸಮಾಜದಲ್ಲಿ ಸತ್ಯ ಹೇಳುವವರ ಕತ್ತು ಹಿಸುಕುವ ಸನ್ನಿವೇಶ ನಿರ್ಮಾಣವಾಗಿದೆ. ಇದು ಪ್ರಜಾಪ್ರಭುತ್ವಕ್ಕೆ ಮಾರಕ’ ಎಂದು ಸಾಹಿತಿ ಕುಂ.ವೀರಭದ್ರಪ್ಪ ಕಳವಳ ವ್ಯಕ್ತಪಡಿಸಿದರು.

ನಗರದ ಜಿಲ್ಲಾ ರಂಗಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ಸಮಾರಂಭದಲ್ಲಿ ಮಕ್ಕಳ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಗೌರಿ ಲಂಕೇಶ್‌ ಅವರ ಹತ್ಯೆ ಆರೋಪದಡಿ ಬಂಧಿತರಾದ ವ್ಯಕ್ತಿಗಳ ಬಳಿ ಯಾರನ್ನು ಕೊಲೆ ಮಾಡಬೇಕು ಎಂಬ ಪಟ್ಟಿ ದೊರಕಿದೆ.  ಹೀಗಾಗಿ ಪ್ರಸ್ತುತ ಅತ್ಯಂತ ಆತಂಕಕಾರಿ ವಾತಾವರಣ ಸೃಷ್ಟಿಯಾಗಿದೆ’ ಎಂದು ಹೇಳಿದರು.

‘ಪ್ರಸಕ್ತ ಕನ್ನಡ ಸಾಹಿತ್ಯದಲ್ಲಿ ಎರಡು ಬಗೆಯ ಲೇಖಕರು ಇದ್ದಾರೆ. ಕೆಲ ಲೇಖಕರು ಸಂದರ್ಭಕ್ಕೆ ಅನುಗುಣವಾಗಿ ತಮ್ಮ ಬಣ್ಣ ಬದಲಾಯಿಸಿಕೊಳ್ಳುತ್ತಾರೆ. ಇವರು ಯಾವ ಕಾಲಕ್ಕೆ ಯಾವ ವೇಷ ಹಾಕುತ್ತಾರೆ ಎಂದು ಊಹಿಸಲು ಸಾಧ್ಯವಿಲ್ಲ. ಅಂಥವರು ನಗರ ಪ್ರದೇಶದಲ್ಲಿಯೇ ಹೆಚ್ಚಾಗಿ ಇದ್ದಾರೆ. ಇನ್ನೂ ಕೆಲ ಲೇಖಕರು ಇನ್ನೊಬ್ಬರಿಗೆ ಯಾವುದೇ ರೀತಿ ನೋವು ಉಂಟು ಮಾಡದ ರೀತಿಯಲ್ಲಿ ತಮ್ಮ ಬರವಣಿಗೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ’ ಎಂದು ತಿಳಿಸಿದರು.

‘ಲೇಖಕರಾದವರು ಇಂದಿನ ರಾಜಕೀಯದಲ್ಲಿ ಆಗುವ ಬೆಳವಣಿಗೆಯನ್ನು ಗಂಭೀರವಾಗಿ ಗಮನಿಸಬೇಕು. ಪ್ರತಿಯೊಂದು ಘಟನೆಯನ್ನು ಅನುಮಾನದಿಂದ ನೋಡಬೇಕು. ಅಂದಾಗ ಮಾತ್ರ ಪ್ರಸಿದ್ಧ ಲೇಖಕರಾಗಿ ಹೊರಹೊಮ್ಮಲು ಸಾಧ್ಯವಿದೆ’ ಎಂದರು.

‘ರಾಜ್ಯದಲ್ಲಿ ಕನ್ನಡ ಭಾಷೆಯ ಅಸ್ಮಿತೆ ಉಳಿಯಬೇಕಾದರೆ ಪಾಲಕರು ತಮ್ಮ ಮಕ್ಕಳನ್ನು ಕನ್ನಡ ಮಾಧ್ಯಮದಲ್ಲಿ ಓದಿಸಬೇಕು. ಆಂಟಿ, ಅಂಕಲ್‌ ಎಂಬ  ಪದಗಳಿಂದ ಕನ್ನಡ ಭಾಷೆ ಹಾಳಾಗುತ್ತಿದೆ. ಈ ಎರಡು ಪದಗಳನ್ನು ಮೊದಲು ಹೋಗಲಾಡಿಸಬೇಕಾಗಿದೆ. ಇದಕ್ಕಾಗಿ ಕನ್ನಡ ಸಾಹಿತ್ಯ ಪರಿಷತ್ತಿನವರು ಚಳವಳಿ ನಡೆಸಬೇಕು. ಮಹಿಳೆಯರು ಸಾಹಿತ್ಯಿಕವಾಗಿ ಕ್ರಿಯಾಶೀಲರಾಗಿದ್ದರೆ ಕನ್ನಡ ಭಾಷೆಯನ್ನು ಇನ್ನಷ್ಟು ಶ್ರೀಮಂತಗೊಳಿಸಲು ಸಾಧ್ಯವಿದೆ’ ಎಂದು ಹೇಳಿದರು.

‘ಆಂಗ್ಲ ಮಾಧ್ಯಮದಲ್ಲಿ ಓದಿದ ಮಕ್ಕಳು ಭವಿಷ್ಯದಲ್ಲಿ ದೊಡ್ಡ ಹುದ್ದೆ ಪಡೆದ ನಂತರ ತಮ್ಮ ತಂದೆ–ತಾಯಿಗೆ ಅನ್ನ ಹಾಕದೆ ವೃದ್ಧಾಶ್ರಮಕ್ಕೆ ಕಳುಹಿಸುತ್ತಾರೆ. ಇದರಿಂದ ಈಗ ವೃದ್ಧಾಶ್ರಮ ಒಂದು ವಾಣಿಜ್ಯ ಉದ್ಯಮವಾಗಿದೆ. ಕರ್ನಾಟಕದ ನಿವೃತ್ತ ಲೋಕಾಯುಕ್ತ ಎನ್‌.ವೆಂಕಟಾಚಲ ಅವರು ಸದ್ಯ ವೃದ್ಧಾಶ್ರಮದಲ್ಲಿ ಇದ್ದಾರೆ’ ಎಂದು ಹೇಳಿದರು.

ಡಾ. ಎಸ್.ಎಸ್‌. ಸಿದ್ಧಾರೆಡ್ಡಿ ಫೌಂಡೇಷನ್‌ನ ಗೌರವಾಧ್ಯಕ್ಷೆ ಗುರಮ್ಮ ಸಿದ್ಧಾರೆಡ್ಡಿ ಅಧ್ಯಕ್ಷತೆ ವಹಸಿದ್ದರು. ಕಲಬುರ್ಗಿಯ ಕನ್ನಡ ನಾಡು ಲೇಖಕರ ಮತ್ತು ಓದುಗರ ಸಂಘದ ಅಪ್ಪರಾವ್‌ ಅಕ್ಕೋಣಿ, ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಂ.ಎ. ಜಬ್ಬಾರ, ಕನ್ನಡ ಪುಸ್ತಕ ಪ್ರಾಧಿಕಾರ ಸದಸ್ಯೆ ಡಾ. ಜಯದೇವಿ ಗಾಯಕವಾಡ, ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಪ್ರಕಾಶ ಅಂಗಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜಶೇಖರ ವಟಗೆ, ತಾಲ್ಲೂಕು ವೈದ್ಯಾಧಿಕಾರಿ ಡಾ. ಪ್ರವೀಣ ಹೂಗಾರ, ಘೋಡಂಪಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಸಂಗಾರೆಡ್ಡಿ ಇದ್ದರು.

ಪಾರ್ವತಿ ಸೋನಾರೆ ಪ್ರಾಸ್ತಾವಿಕವಾಗಿ ಮಾತನಾಡಿದರು. ನಾಟಕ ನಿರ್ದೇಶಕ ಡಿಂಗ್ರಿ ನರೇಶ ಕಥಾ ವಾಚನ ಮಾಡಿದರು.

**

ಜಗತ್ತಿನ 20 ಶ್ರೇಷ್ಠ ಐತಿಹಾಸಿಕ ಕೋಟೆಗಳಲ್ಲಿ ಬೀದರ್‌ ಕೋಟೆ ಒಂದಾಗಿದೆ. ಬೀದರ್‌ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಪರಂಪರೆಯುಳ್ಳ ನಗರವಾಗಿದೆ

ಕುಂ. ವೀರಭದ್ರಪ್ಪ, ಸಾಹಿತಿ 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry