7

ಮಳೆಗೆ ತತ್ತರಿಸಿದ ಗಂಗಿಮಡಿ; ಜನ ಜೀವನ ಅಸ್ತವ್ಯಸ್ತ

Published:
Updated:

ಗದಗ: ಶನಿವಾರ ರಾತ್ರಿ ಮತ್ತು ಭಾನುವಾರ ನಸುಕಿನಲ್ಲಿ ಸುರಿದ ಧಾರಾಕಾರ ಮಳೆಗೆ ಗದುಗಿನ ಗಂಗಿಮಡಿ ಪ್ರದೇಶದ ಜನಜೀವನ ಸಂಪೂರ್ಣ ಅಸ್ತವ್ಯವಸ್ಥಗೊಂಡಿದೆ. ಇಡೀ ಬಡಾವಣೆ ಜಲಾವೃತಗೊಂಡಿದ್ದು, ಹಲವು ಮನೆಗಳಿಗೆ ನೀರು ನುಗ್ಗಿದೆ.

ಬಡಾವಣೆ ನಿವಾಸಿಗಳು ಇಡೀ ರಾತ್ರಿ, ಮನೆಗೆ ನುಗ್ಗಿದ ಚರಂಡಿ ನೀರು ಹೊರಹಾಕುವುದಲ್ಲಿ ನಿರತರಾಗಿದ್ದರು. ವಿದ್ಯುತ್‌ ಪೂರೈಕೆಯೂ ಸ್ಥಗಿತಗೊಂಡು ತೀವ್ರ ತೊಂದರೆ ಅನುಭಿಸಿದರು. ಗಾಳಿಗೆ ಆರ್ಭಟಕ್ಕೆ ನಗರದ ಹಲವೆಡೆ ಮರಗಳು ಧರೆಗುರುಳಿವೆ. ಹುಡ್ಕೋ ಕಾಲೊನಿಯ ಮಾರುತಿ ದೇವಸ್ಥಾನದ ಬಳಿ ಮರವೊಂದು ಕಾರಿನ ಮೇಲೆ ಉರುಳಿ, ವಾಹನ ಸಂಪೂರ್ಣ ಜಖಂಗೊಂಡಿದೆ. ನಗರದ ರಿಂಗ್ ರಸ್ತೆಯ ಸಮೀಪ ಇರುವ ಶ್ರೀನಿವಾಸ ಕಲ್ಯಾಣ ಮಂಟಪ ಮಳೆ ನೀರಿನಿಂದ ಸಂಪೂರ್ಣ ಜಲಾವೃತಗೊಂಡಿತು.

ಗಂಗಿಮಡಿಯಲ್ಲಿ ಹಲವು ಮನೆಗಳ ಮೇಲ್ಚಾವಣಿ ಸೋರುತ್ತಿದ್ದು, ಮನೆ ಕುಸಿದು ಬೀಳಬಹುದು ಎಂಬ ಆತಂಕದಲ್ಲೇ ಜನರು ಶನಿವಾರ ರಾತ್ರಿ ಕಳೆದರು. ‘ಮಳೆಯಾದಾಗೊಮ್ಮೆ ಗಂಗಿಮಡಿ ಪ್ರದೇಶದಲ್ಲಿ ಮನೆಗಳಿಗೆ ನೀರು ನುಗ್ಗುವುದು ಸಾಮಾನ್ಯ. ಕಳೆದ ೧೫ ವರ್ಷದಿಂದ ಇಲ್ಲಿನ ಜನರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಯಾವುದೇ ಜನಪ್ರತಿನಿಧಿ ಇದರ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಕೇವಲ ಚುನಾವಣೆ ಬಂದಾಗ ಮಾತ್ರ ಇತ್ತ ಕಡೆ ಸುಳಿಯುತ್ತಾರೆ, ನಂತರ ಯಾವುದೇ ಸಮಸ್ಯೆಗಳಿಗೂ ಸ್ಪಂದಿಸುವುದಿಲ್ಲ’ ಎಂದು ಸ್ಥಳಕ್ಕೆ ಭೇಟಿ ನೀಡಿದ ಬಿಜೆಪಿ ಮುಖಂಡ ಅನಿಲ್ ಮೆಣಸಿನಕಾಯಿ ಎದುರು ಅಹವಾಲು ತೋಡಿಕೊಂಡರು.

ನಗರಸಭೆ ಪೌರಾಯಕ್ತ ಮನ್ಸೂರು ಅಲಿ ಅವರು ಗಂಗಿಮಡಿ ಪ್ರದೇಶಕ್ಕೆ ಭೇಟಿ ನೀಡಿ, ಮಳೆ ಹಾನಿ ಪರಿಶೀಲಿಸಿದರು.

ಕಳೆದ ಎರಡು ದಿನಗಳ ಬಿಡುವಿನ ನಂತರ ಸುರಿದ ಮಳೆಗೆ ಜಿಲ್ಲೆಯಾದ್ಯಂತ ಹಲವು ಹಳ್ಳಗಳು ತುಂಬಿ ಹರಿಯುತ್ತಿವೆ

ತುಂಬಿ ಹರಿದ ಮಾರನಬಸರಿ ಹಳ್ಳ

ನರೇಗಲ್: ಹೋಬಳಿಯಾದ್ಯಂತ ಶನಿವಾರ ಸಂಜೆ ಸುರಿದ ಭಾರಿ ಮಳೆಗೆ ಕೆರೆಗಳು, ಕೃಷಿ ಹೊಂಡಗಳು ಭಾಗಶಃ ತುಂಬಿವೆ. ಇಲ್ಲಿಗೆ ಸಮೀಪದ ಮಾರನಬಸರಿ ಗ್ರಾಮದ ಹಳ್ಳವು ತುಂಬಿ ಹರಿದಿದ್ದು, ಗ್ರಾಮಸ್ಥರಲ್ಲಿ ಸಂತಸ ತಂದಿದೆ. ಗಜೇಂದ್ರಗಡ ಮಾರ್ಗದ ಗಡ್ಡಿ ಹಳ್ಳ, ಕಲ್ಲಹಳ್ಳ, ಜಕ್ಕಲಿಹಳ್ಳ, ಅಬ್ಬಗೇರಿ ಹಳ್ಳಗಳಲ್ಲಿ ನೀರು ತುಂಬಿ ಹರಿಯುತ್ತಿದೆ. ಭಾನುವಾರ ಸಂಜೆ ಯೂ ಮಳೆ ಆಗಿದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 1

  Sad
 • 0

  Frustrated
 • 0

  Angry