ಭರ್ತಿಯಾದ ಚೆಕ್‌ಡ್ಯಾಂ;ಅಂತರ್ಜಲ ಹೆಚ್ಚಳ

3
ಮುಂಡರಗಿಯಲ್ಲಿ ವ್ಯವಸಾಯಕ್ಕೆ ಕೊಳವೆ ಬಾವಿ ಆಶ್ರಯಿಸಿದ್ದ ರೈತರ ನಿಟ್ಟುಸಿರು

ಭರ್ತಿಯಾದ ಚೆಕ್‌ಡ್ಯಾಂ;ಅಂತರ್ಜಲ ಹೆಚ್ಚಳ

Published:
Updated:

ಮುಂಡರಗಿ: ಕಳೆದ ಮೂರು ವಾರಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಹಲವು ಹಳ್ಳಗಳಿಗೆ ಅಡ್ಡವಾಗಿ ನಿರ್ಮಿಸಿರುವ ಚೆಕ್‌ಡ್ಯಾಂಗಳು ಭರ್ತಿಯಾಗಿವೆ. ಚೆಕ್‌ಡ್ಯಾಂ ತುಂಬಿರುವುದರಿಂದ ಅಂತರ್ಜಲ ಮಟ್ಟ ಹೆಚ್ಚಿದೆ. ಸುತ್ತಮುತ್ತಲ ಪ್ರದೇಶದಲ್ಲಿನ ಕೊಳವೆಬಾವಿಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದು, ಇದರಿಂದ ರೈತರು ನಿಟ್ಟುಸಿರು ಬಿಡುವಂತಾಗಿದೆ.

ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಅವರು ತಮ್ಮ ಅವಧಿಯಲ್ಲಿ ಮುಂಡರಗಿ ಪಟ್ಟಣ ಸೇರಿದಂತೆ ತಾಲ್ಲೂಕಿನ ಕಕ್ಕೂರು, ನಾಗರಳ್ಳಿ, ಬೆಣ್ಣಿಹಳ್ಳಿ, ಮುಂಡವಾಡ, ಸಿಂಗಟಾಲೂರು, ಹಮ್ಮಿಗಿ, ಬಿದರಳ್ಳಿ ಗ್ರಾಮಗಳಲ್ಲಿ ಹಲವು ಹಳ್ಳಗಳಿಗೆ ಚೆಕ್‌ಡ್ಯಾಂ ನಿರ್ಮಿಸಿದ್ದರು. ಪಟ್ಟಣ ಹೊರವಲಯದಲ್ಲಿ ಹರಿದಿರುವ ಹಿರೇಹಳ್ಳಕ್ಕೆ ಅಡ್ಡವಾಗಿ 10ಕ್ಕೂ ಹೆಚ್ಚು ಚೆಕ್‌ಡ್ಯಾಂಗಳನ್ನು ನಿರ್ಮಿಸಿದ್ದರು. ಅವೆಲ್ಲವೂ ಈಗ ಭರ್ತಿಯಾಗಿವೆ.

ಕಪ್ಪತಗುಡ್ಡದ ವ್ಯಾಪ್ತಿಯಲ್ಲಿ ಸಾಕಷ್ಟು ಮಳೆಯಾದರೆ ಗುಡ್ಡದ ಅಂಚಿನಲ್ಲಿ ಬರುವ ಸಣ್ಣ ಪುಟ್ಟ ಹಳ್ಳಗಳ ನೀರು ಹರಿದು ಬಂದು ಹಿರೇಹಳ್ಳ ಸೇರುತ್ತದೆ. ಹೀಗೆ ಹಿರೇಹಳ್ಳ ಸೇರುತ್ತಿದ್ದ ಅಪಾರ ಪ್ರಮಾಣದ ನೀರು ಮೊದಲು ವ್ಯರ್ಥವಾಗಿ ಹರಿದು ತುಂಗಭದ್ರಾ ನದಿ ಸೇರುತ್ತಿತ್ತು. ಈಗ ನೀರು ಚೆಕ್‌ಡ್ಯಾಂನಲ್ಲಿ ಸಂಗ್ರಹವಾಗುತ್ತಿದ್ದು, ಹೆಚ್ಚುವರಿ ನೀರು ಮಾತ್ರ ನದಿ ಸೇರುತ್ತಿದೆ.

ಪಟ್ಟಣದ ಕನಕಪ್ಪನ ಗುಡ್ಡದ ಸಮೀಪ ನಿರ್ಮಿಸಿರುವ ಚೆಕ್‌ಡ್ಯಾಂನಲ್ಲಿ ಸಾಕಷ್ಟು ನೀರು ಸಂಗ್ರಹವಾಗಿದ್ದು, ಅದರ ಸುತ್ತಮುತ್ತಲಿನ ಪ್ರದೇಶದ ಕೊಳವೆ ಬಾವಿಗಳು ಪುನಶ್ಚೇತನಗೊಂಡಿವೆ.

‘ಪಟ್ಟಣದ ಸಮೀಪ ಹಲವು ಚೆಕ್‌ಡ್ಯಾಂ ನಿರ್ಮಿಸಿರುವುದರಿಂದ ಪಾತಾಳ ಸೇರಿದ್ದ ಕೊಳವೆ ಬಾವಿ ನೀರು ಮೇಲೆ ಬಂದಿದ್ದು, ಬತ್ತಿ ಹೋಗಿದ್ದ ಕೊಳವೆ ಬಾವಿಗಳಿಗೆ ಮರು ಜೀವ ಬಂದಿದೆ’ ಎಂದು ಪ್ರಗತಿಪರ ಯುವ ಕೃಷಿಕ ರಾಘವೇಂದ್ರ ಕುರಿಯವರ ಅಭಿಪ್ರಾಯಪಟ್ಟರು

ಕಾಶೀನಾಥ ಬಿಳಿಮಗ್ಗದ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry