ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಕೃತಿಯೊಂದಿಗೆ ಸೇತುವೆ ನಿರ್ಮಿಸಬೇಕು

Last Updated 4 ಜೂನ್ 2018, 19:30 IST
ಅಕ್ಷರ ಗಾತ್ರ

ಪ್ಲಾಸ್ಟಿಕ್‌ ಅನ್ನು ಜಗತ್ತಿನಾದ್ಯಂತ ಬೇಜವಾಬ್ದಾರಿಯುತವಾಗಿ ಬಳಕೆ ಮಾಡಿದ್ದರ ಪರಿಣಾಮ ನಮ್ಮ ಪರಿಸರವು ಸರಿಪಡಿಸಲಾಗದಷ್ಟು ಮಲಿನಗೊಂಡಿದೆ. ಜಗತ್ತಿನ ಅರ್ಧದಷ್ಟು ನದಿಗಳು ಹಾಗೂ ಕಾಲು ಭಾಗದಷ್ಟು ಸಮುದ್ರ ಈಗಾಗಲೇ ಪ್ಲಾಸ್ಟಿಕ್‌ನಿಂದ ತುಂಬಿಹೋಗಿದೆ. ಇದೇ ಸ್ಥಿತಿ ಮುಂದುವರಿದರೆ ಶೀಘ್ರದಲ್ಲೇ ನದಿ ಮತ್ತು ಸಮುದ್ರಗಳಲ್ಲಿ ಜಲಚರಗಳಿಗಿಂತ ಹೆಚ್ಚು ಪ್ಲಾಸ್ಟಿಕ್‌ ತುಂಬಿರುತ್ತದೆ. ಮನುಷ್ಯನೂ ತನಗೆ ಅರಿವಿಲ್ಲದಂತೆ ನಿಧಾನವಾಗಿ ಪ್ಲಾಸ್ಟಿಕ್‌ ಬೆರೆತ ಆಹಾರ ಮತ್ತು ನೀರನ್ನು ಸೇವಿಸುತ್ತಿದ್ದಾನೆ. ಆರೋಗ್ಯದ ಮೇಲೆ ಇದರಿಂದ ಆಗುತ್ತಿರುವ ವ್ಯತಿರಿಕ್ತ ಪರಿಣಾಮವನ್ನು ಮನುಷ್ಯ ಈಗಾಗಲೇ ಅನುಭವಿಸಲು ಆರಂಭಿಸಿದ್ದಾನೆ.

ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ವಿಶ್ವ ಸಂಸ್ಥೆಯು 1974ರಿಂದ ಪ್ರತಿ ವರ್ಷವೂ ಒಂದು ಘೋಷವಾಕ್ಯವನ್ನಿಟ್ಟುಕೊಂಡು ಜೂನ್‌ 5ರಂದು ‘ವಿಶ್ವ ಪರಿಸರ ದಿನ’ವನ್ನು ಆಚರಿಸುತ್ತಿದೆ. ‘Beat plastic Pollution’ ಎಂಬುದು 2018ನೇ ಸಾಲಿನ ಘೋಷವಾಕ್ಯ. ಈ ವರ್ಷ ಜಾಗತಿಕ ಮಟ್ಟದಲ್ಲಿ ವಿಶ್ವ ಪರಿಸರ ದಿನಾಚರಣೆಯ ಆತಿಥ್ಯ ವಹಿಸುವ ಅವಕಾಶ ಭಾರತಕ್ಕೆ ದೊರಕಿದೆ. ಪರಿಸರ ಸಮತೋಲನವನ್ನು ಪುನಃ ಸ್ಥಾಪಿಸುವ ಕೆಲಸವನ್ನು ಭಾರತ ಮಾಡಿ ತೋರಿಸಬೇಕಿದೆ.

ಭಾರತ ಸರ್ಕಾರವು ಈಗಾಗಲೇ ಆ ನಿಟ್ಟಿನಲ್ಲಿ ಕೆಲಸ ಆರಂಭಿಸಿದೆ. ಪರಿಸರಕ್ಕೆ ಹಾನಿ ಉಂಟುಮಾಡುವ ಪಾಲಿಥಿನ್‌ ಬ್ಯಾಗ್‌ಗಳನ್ನು ಬಳಸದಂತೆ; ಪರಿಸರ, ವನ್ಯಜೀವಿ ಮತ್ತು ಮನುಷ್ಯರ ಆರೋಗ್ಯದ ಮೇಲೆ ಪ್ಲಾಸ್ಟಿಕ್‌ನಿಂದ ಆಗುವ ಪರಿಣಾಮಗಳನ್ನು ತಡೆಯಲು ಮುಂದಾಗುವಂತೆ ಸರ್ಕಾರವು ನಾಗರಿಕರಲ್ಲಿ ಮನವಿ ಮಾಡಿಕೊಂಡಿದೆ. ವಿವಿಧ ರಾಜ್ಯಗಳು, ವಿಶ್ವವಿದ್ಯಾಲಯಗಳು ಹಾಗೂ ಸರ್ಕಾರೇತರ ಸಂಸ್ಥೆಗಳ ಜೊತೆ ಸೇರಿ ರಾಷ್ಟ್ರವ್ಯಾಪಿ ಸ್ವಚ್ಛತಾ ಅಭಿಯಾನ ಹಮ್ಮಿಕೊಂಡು, ಪ್ಲಾಸ್ಟಿಕ್‌ ಬಳಕೆ ಕಡಿಮೆಗೊಳಿಸುವಂತೆ ಜಾಗೃತಿ ಮೂಡಿಸುವ ಕೆಲಸವನ್ನು ಪ್ರಾರಂಭಿಸಿದೆ.

ಪ್ಲಾಸ್ಟಿಕ್‌ ಒಂದೇ ಅಲ್ಲ, ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟುಮಾಡುವ ಎಲ್ಲ ಚಟುವಟಿಕೆಗಳನ್ನೂ ನಿಯಂತ್ರಿಸಬೇಕಾದ್ದು ಇಂದಿನ ಅಗತ್ಯವಾಗಿದೆ. ಅರಣ್ಯ ನಾಶ ತಡೆಗಟ್ಟುವುದು, ಗಿಡಗಳನ್ನು ನೆಟ್ಟು ಬೆಳೆಸುವುದೇ ಮುಂತಾದ ಚಟುವಟಿಕೆಗಳ ಮೂಲಕ ಮಾನವ ಮತ್ತು ಪ್ರಕೃತಿಯ ನಡುವೆ ಸೇತುವೆ ಬೆಸೆದು, ನಮಗೆ ಎಲ್ಲವನ್ನೂ ನೀಡುವ ಭೂಮಿಯನ್ನು ರಕ್ಷಿಸಿಕೊಳ್ಳುವುದು ಈಗ ಅನಿವಾರ್ಯವಾಗಿದೆ. ಇಂಗಾಲ ಡೈಆಕ್ಸೈಡ್ ಮತ್ತು ‘ಹಸಿರುಮನೆ ಪರಿಣಾಮ’ ಅನಿಲಗಳನ್ನು ಪಸರಿಸುವ ಎಲ್ಲಾ ಚಟುವಟಿಕೆಗಳನ್ನು ನಿಯಂತ್ರಿಸುವುದು ನಮ್ಮ ಮುಂದಿರುವ ದೊಡ್ಡ ಸವಾಲಾಗಿದೆ.

ಪರಿಸರವು ಮನುಷ್ಯನ ಬೌದ್ಧಿಕ, ನೈತಿಕ, ಸಾಮಾಜಿಕ ಮತ್ತು ಆಧ್ಯಾತ್ಮಿಕ ಬೆಳವಣಿಗೆಯನ್ನು ಪೋಷಿಸುತ್ತಾ ಬಂದಿದೆ. ಆದರೆ, ಮನುಷ್ಯನ ವಿಕಾಸವು ವೇಗ ಪಡೆಯುತ್ತಿದ್ದಂತೆ ಆತ ಅಷ್ಟೇ ವೇಗದಲ್ಲಿ ಪರಿಸರವನ್ನು ನಾಶ ಮಾಡುತ್ತ ಹೋಗಿದ್ದಾನೆ. ಮುಂದಿನ ಪೀಳಿಗೆಗೂ ಒಳ್ಳೆಯ ಬದುಕನ್ನು ಕಲ್ಪಿಸಬೇಕು ಎಂಬುದು ಮನುಷ್ಯನ ಬಯಕೆಯಾಗಿದ್ದರೆ, ಪರಿಸರವನ್ನು ಉಳಿಸುವ ದಿಕ್ಕಿನಲ್ಲಿ ವೇಗದ ಹೆಜ್ಜೆಗಳನ್ನಿಡುವುದು ಅನಿವಾರ್ಯವಾಗಿದೆ.

ಉದ್ದಿಮೆಗಳು, ಸಮುದಾಯಗಳು ಮತ್ತು ಸರ್ಕಾರಗಳು ಒಟ್ಟಾಗಿ ನಮ್ಮ ನದಿ, ಸಾಗರಗಳನ್ನು ಪ್ಲಾಸ್ಟಿಕ್‌ ಮುಕ್ತಗೊಳಿಸಬೇಕು. ಪ್ಲಾಸ್ಟಿಕ್‌ನ ಬೇಜವಾಬ್ದಾರಿಯುತ ಬಳಕೆಯಿಂದಾಗಿ ಫಲವತ್ತಾದ ಭೂಮಿಯೂ ಬರಡಾಗುತ್ತಿದೆ. ಇನ್ನೊಂದೆಡೆ ಇಂಧನ ಸುಡುವ ಮೂಲಕ ಗಾಳಿಯನ್ನೂ ಮಲಿನಗೊಳಿಸುತ್ತ, ಓಝೋನ್ ಪದರಕ್ಕೆ ಹಾನಿ ಉಂಟುಮಾಡಿದ್ದೇವೆ. ಪರಿಣಾಮ ಭೂಮಿಯ ಮೇಲಿನ ಇಡೀ ಜೀವಜಾಲ ಹಲವು ರೀತಿಯ ರೋಗಗಳಿಗೆ ತುತ್ತಾಗುತ್ತಿದೆ.

ಪ್ರಪಂಚದಲ್ಲಿ ಪ್ರತಿವರ್ಷ 50 ಸಾವಿರ ಕೋಟಿ ಪ್ಲಾಸ್ಟಿಕ್‌ ಚೀಲಗಳನ್ನು ಬಳಸಲಾಗುತ್ತದೆ. ಪ್ರತಿವರ್ಷವೂ ಸಮುದ್ರಕ್ಕೆ 80 ಲಕ್ಷ ಟನ್‌ನಷ್ಟು ಪ್ಲಾಸ್ಟಿಕ್‌ ಸೇರುತ್ತದೆ. ಅಷ್ಟೇ ಪ್ರಮಾಣದ ಇತರ ತ್ಯಾಜ್ಯಗಳೂ ಸಮುದ್ರಪಾಲಾಗುತ್ತವೆ. ಹಿಂದಿನ ಒಂದು ಶತಮಾನದಲ್ಲಿ ಉತ್ಪಾದಿಸಿದಷ್ಟು ಪ್ಲಾಸ್ಟಿಕ್‌ ಅನ್ನು ಜಗತ್ತು ಕಳೆದ ಒಂದು ದಶಕದಲ್ಲಿ ಉತ್ಪಾದಿಸಿದೆ ಎಂದು ಅಂದಾಜಿಸಲಾಗಿದೆ. ಇದರಲ್ಲಿ ಶೇ 50ರಷ್ಟು ಒಂದೇ ಸಲ ಉಪಯೋಗಿಸಿ ಬಿಸಾಡುವ ಪ್ಲಾಸ್ಟಿಕ್. ಜಗತ್ತಿನಲ್ಲಿ ಪ್ರತಿ ನಿಮಿಷಕ್ಕೆ 10 ಲಕ್ಷ ಪ್ಲಾಸ್ಟಿಕ್‌ ಬಾಟಲ್‌ಗಳು ಮಾರಾಟವಾಗುತ್ತವೆ. ಮನುಷ್ಯರು ಸೃಷ್ಟಿಸುವ ಒಟ್ಟು ತ್ಯಾಜ್ಯದಲ್ಲಿ ಶೇ 10ರಷ್ಟು ಪ್ಲಾಸ್ಟಿಕ್‌ ಇದೆ. ಪ್ರತಿ ಎರಡು ನಿಮಿಷಗಳಿಗೆ ನಾಲ್ಕು ಟ್ರಕ್ಕುಗಳಷ್ಟು ಪ್ಲಾಸ್ಟಿಕ್‌ ಅನ್ನು ಸಮುದ್ರಕ್ಕೆ ತಳ್ಳಲಾಗುತ್ತದೆ. ಪರಿಸರ ರಕ್ಷಣೆಯ ಬಗ್ಗೆ ಹೆಚ್ಚು ಹೆಚ್ಚು ಮಾತನಾಡುವ ರಾಷ್ಟ್ರಗಳೂ ಇದಕ್ಕೆ ಹೊರತಲ್ಲ.

ನೆಲ, ನೀರು, ಗಾಳಿ ಎಲ್ಲವೂ ಮಲಿನವಾಗುತ್ತಿರುವುದು ಒಂದೆಡೆಯಾದರೆ, ಮಿತಿ ಮೀರುತ್ತಿರುವ ಜನಸಂಖ್ಯೆ ಮತ್ತು ಅಗತ್ಯಕ್ಕೂ ಹೆಚ್ಚಿನ ಪ್ರಮಾಣದಲ್ಲಿ ಸಂಪನ್ಮೂಲದ ಬಳಕೆಯಿಂದಾಗಿ ಭೂಮಿಯಲ್ಲಿ ಮರುಸೃಷ್ಟಿಸಲಾಗದಂಥ ಸಂಪನ್ಮೂಲಗಳು ಖಾಲಿಯಾಗುತ್ತಿರುವುದು ಇನ್ನೊಂದು ಅಪಾಯವಾಗಿದೆ. ಭಾರತೀಯ ತತ್ವಶಾಸ್ತ್ರ ಮತ್ತು ಜೀವನ ಶೈಲಿಗಳು ನೂರಾರು ವರ್ಷಗಳಿಂದ ಮನುಷ್ಯನನ್ನು ಪ್ರಕೃತಿಯೊಂದಿಗೆ ಬೆಸೆಯುವಂತೆ ಮಾಡಿವೆ. ನಾವು ಮತ್ತೆ ಆ ಸಂಬಂಧವನ್ನು ಮುಂದುವರಿಸಬೇಕಿದೆ.

ನಮ್ಮ ಗ್ರಹವನ್ನು (ಭೂಮಿ) ಉಳಿಸಿಕೊಳ್ಳುವುದುಮತ್ತು ಸಂಪನ್ಮೂಲಗಳನ್ನು ಉಳಿಸಿ ಮುಂದಿನ ತಲೆಮಾರಿಗೂ ಹಸ್ತಾಂತರಿಸುವುದು ಪರಿಸರ ಅಭಿವೃದ್ಧಿಯ 2030ರ ಅಜೆಂಡಾ. ನಿರ್ದಿಷ್ಟವಾಗಿ ಹೇಳಬೇಕೆಂದರೆ, ಸಮುದ್ರ ಮತ್ತು ಭೂಮಿಯ ಸಂಪನ್ಮೂಲಗಳನ್ನು ಜವಾಬ್ದಾರಿಯುತವಾಗಿ ಬಳಸುವುದು ನಮ್ಮ ಹೊಣೆಯಾಗಬೇಕು. ಅದಕ್ಕಾಗಿ ವಿಶ್ವ ಪರಿಸರ ದಿನದಂದು ದೇಶದಾದ್ಯಂತ ಲಕ್ಷಾಂತರ ಗಿಡಗಳನ್ನು ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಅದೇ ದಿನ ನಮ್ಮ ಮನೆಯ ಪರಿಸರದಲ್ಲಿ ಕನಿಷ್ಠ ಒಂದು ಗಿಡ ನೆಡುವ ಮೂಲಕ ಭೂಮಿಯ ತಾಪಮಾನವನ್ನು ತಗ್ಗಿಸಲು ನಮ್ಮ ಕೈಲಾದ ಪ್ರಯತ್ನ ಮಾಡುವುದು ನಮ್ಮೆಲ್ಲರ ಜವಾಬ್ದಾರಿ ತಾನೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT