ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಚ್ಛ ಶಿರಸಿ ಅಭಿಯಾನಕ್ಕೆ ಮ್ಯಾರಥಾನ್ ಸಾಥ್

ವಿವಿಧ ಸಂಘಟನೆಗಳಿಂದ ಅಕ್ಟೋಬರ್ ತಿಂಗಳಿಡೀ ಸ್ವಚ್ಛತಾ ಕಾರ್ಯಕ್ರಮ
Last Updated 30 ಸೆಪ್ಟೆಂಬರ್ 2018, 13:08 IST
ಅಕ್ಷರ ಗಾತ್ರ

ಶಿರಸಿ: ಸಾರ್ವಜನಿಕರಲ್ಲಿ ಸ್ವಚ್ಛತೆಯ ಪ್ರಜ್ಞೆ ಮೂಡಿಸುವ ಉದ್ದೇಶದಿಂದ ವಿವಿಧ ಸಂಘಟನೆಗಳ ಪಾಲ್ಗೊಳ್ಳುವಿಕೆಯಲ್ಲಿ ನಗರದ ವಿವಿಧೆಡೆಗಳಲ್ಲಿ ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ‘ಸ್ವಚ್ಛ ಶಿರಸಿ ಅಭಿಯಾನ’ದ ಅಂಗವಾಗಿ ಅ.3ರಂದು ಮ್ಯಾರಥಾನ್ ಆಯೋಜಿಸಲಾಗಿದೆ ಎಂದು ಉಪವಿಭಾಗಾಧಿಕಾರಿ ಕೆ. ರಾಜು ಮೊಗವೀರ ಹೇಳಿದರು.‌

ಮ್ಯಾರಥಾನ್ ಕರಪತ್ರವನ್ನು ಭಾನುವಾರ ಇಲ್ಲಿ ಬಿಡುಗಡೆಗೊಳಿಸಿದ ನಂತರ, ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ‘ಸಾರ್ವಜನಿಕರೆಲ್ಲರೂ ಕೈಜೋಡಿಸಿದಾಗ ನಗರದ ಸ್ವಚ್ಛತೆ ಕಾಪಾಡಿಕೊಳ್ಳಲು ಸಾಧ್ಯ. ನಗರಸಭೆ ಸೆ.24ರಿಂದ ಸ್ವಚ್ಛತಾ ಕಾರ್ಯಕ್ರಮ ಆರಂಭಿಸಿದ್ದು, ಸಿಬ್ಬಂದಿ, ಪೌರಕಾರ್ಮಿಕರೊಡಗೂಡಿ ವಿಕಾಸಾಶ್ರಮ, ಮುಸುಕಿನ ಬಾವಿ, ಜಲಶುದ್ಧೀಕರಣ ಘಟಕ, ಜಯನಗರ ಉದ್ಯಾನ ಮೊದಲಾದ ಕಡೆಗಳಲ್ಲಿ ಸ್ವಚ್ಛತೆ ನಡೆಸಿದೆ. ಅ.8ರವರೆಗೆ ಇದು ಮುಂದುವರಿಯಲಿದೆ. ತಾಲ್ಲೂಕು ಪಂಚಾಯ್ತಿಯು ಎಲ್ಲ ಗ್ರಾಮ ಪಂಚಾಯ್ತಿಗಳಲ್ಲಿ ಈ ಕಾರ್ಯಕ್ರಮ ಅನುಷ್ಠಾನಗೊಳಿಸಿದೆ’ ಎಂದರು.

‘ಸ್ವಚ್ಛತೆಯ ಅರಿವು ಮೂಡಿಸುವ ನಿಟ್ಟಿನಲ್ಲಿ ಅ.2ರ ಬೆಳಿಗ್ಗೆ 7 ಗಂಟೆಗೆ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಿಂದ ಬಿಡಕಿಬೈಲಿನವರೆಗೆ 5 ಕಿ.ಮೀ ಮ್ಯಾರಥಾನ್ ಆಯೋಜಿಸಲಾಗಿದೆ. ಅರಣ್ಯ ಕಾಲೇಜು, ತೋಟಗಾರಿಕಾ ಕಾಲೇಜು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸ್ಕೌಟ್ಸ್ ಮತ್ತು ಗೈಡ್ಸ್, ರನ್ನರ್ 360, ಸಂಘಟನೆಗಳ ಸದಸ್ಯರು, ವಿವಿಧ ಇಲಾಖೆಗಳ ನೌಕರರು ಭಾಗವಹಿಸಲಿದ್ದಾರೆ’ ಎಂದು ಅವರು ತಿಳಿಸಿದರು.

ಶಿರಸಿ ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ ಮಾಹಿತಿ ನೀಡಿ, ‘ಕಾರ್ಯಪಡೆಯು ಯಲ್ಲಾಪುರ ನಾಕಾದಿಂದ ಚಿಪಗಿ ವೃತ್ತದವರೆಗೆ ಸ್ವಚ್ಛತಾ ಕಾರ್ಯ ನಡೆಸುತ್ತದೆ’ ಎಂದರು. ‘ಲಯನ್ಸ್ ಕ್ಲಬ್ ಅ.1ರಂದು ಅಶ್ವಿನಿ ವೃತ್ತದಿಂದ ಯಲ್ಲಾಪುರ ನಾಕಾದವರೆಗೆ ಸ್ವಚ್ಛತಾ ಕಾರ್ಯಕ್ರಮವನ್ನು ವಿವಿಧ ಸಂಸ್ಥೆಗಳ ಜೊತೆಗೂಡಿ ನಡೆಸುತ್ತದೆ. ಈ ಸಂಬಂಧ ಈಗಾಗಲೇ ಅಂಗಡಿ, ಮನೆಗಳಿಗೆ ಕರಪತ್ರ ತಲುಪಿಸಲಾಗಿದೆ’ ಎಂದು ಲಯನ್ಸ್ ಕ್ಲಬ್ ಪ್ರತಿನಿಧಿಗಳಾದ ಎನ್.ವಿ.ಜಿ.ಭಟ್, ವಿನಯ ಹೆಗಡೆ ತಿಳಿಸಿದರು.

‘ರೋಟರಿ ಕ್ಲಬ್ 2016ರಿಂದ ಅಭಿಯಾನ ನಡೆಸುತ್ತಿದ್ದು, ಈ ಬಾರಿ ವಿಶೇಷ ಕಾರ್ಯಕ್ರಮ ಕೈಗೆತ್ತಿಕೊಂಡಿದೆ. ಎಲ್ಲ ಸದಸ್ಯರನ್ನು ಒಳಗೊಂಡು 14 ತಂಡ ರಚಿಸಲಾಗಿದೆ. ಪ್ರತಿ ಎಂಟು ಸದಸ್ಯರು ಒಂದು ವಾರ್ಡಿನಲ್ಲಿ ಸ್ವಚ್ಛತಾ ಕಾರ್ಯದ ಉಸ್ತುವಾರಿ ನೋಡಿಕೊಳ್ಳುತ್ತಾರೆ’ ಎಂದು ರೋಟರಿ ಯ ಪ್ರಮುಖರಾದ ಹಸ್ತಿಮಲ್ ಚೌಧರಿ, ಶ್ರೀನಿವಾಸ ನಾಯ್ಕ ಹೇಳಿದರು.

ರೆಡ್ ಆ್ಯಂಟ್‌ ಸಂಘಟನೆಯ ಮಹೇಶ ನಾಯ್ಕ ಮಾತನಾಡಿ, ‘ನಮ್ಮ ಸಂಘಟನೆಯ ಸದಸ್ಯರು ಬಸ್‌ ನಿಲ್ದಾಣ, ಸರ್ಕಾರಿ ಆಸ್ಪತ್ರೆಯಂತಹ ಜನನಿಬಿಡ ಪ್ರದೇಶಗಳಲ್ಲಿ ಚೊಕ್ಕ ಮಾಡುವ ಕೆಲಸ ಮಾಡಿದ್ದಾರೆ. ಬರುವ ದಿನಗಳಲ್ಲಿ 10ಕ್ಕೂ ಹೆಚ್ಚು ಇಂತಹ ಕಾರ್ಯಕ್ರಮ ನಡೆಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT