ಪ್ಲಾಸ್ಟಿಕ್ ಮುಕ್ತ ಆದೀತೆ ರಾಮದೇವರ ಬೆಟ್ಟ?

7
ಅರಣ್ಯ ಇಲಾಖೆಯಿಂದ ಜಾಗೃತಿ ಯತ್ನ; ಸೂಚನಾ ಫಲಕ ಅಳವಡಿಕೆ-, ಪ್ರವಾಸಿಗರಲ್ಲಿ ಬೇಕಿದೆ ಪರಿಸರ ಪ್ರಜ್ಞೆ

ಪ್ಲಾಸ್ಟಿಕ್ ಮುಕ್ತ ಆದೀತೆ ರಾಮದೇವರ ಬೆಟ್ಟ?

Published:
Updated:
ಪ್ಲಾಸ್ಟಿಕ್ ಮುಕ್ತ ಆದೀತೆ ರಾಮದೇವರ ಬೆಟ್ಟ?

ರಾಮನಗರ: ಜಿಲ್ಲೆಯ ಮುಕುಟದಂತೆ ಇರುವ ರಾಮದೇವರ ಬೆಟ್ಟದಲ್ಲಿ ಪ್ಲಾಸ್ಟಿಕ್ ಹಾವಳಿ ಕ್ರಮೇಣ ನಿಯಂತ್ರಣಕ್ಕೆ ಬರುತ್ತಿದ್ದು, ಇಡೀ ಪರಿಸರ ಪ್ಲಾಸ್ಟಿಕ್ ಮುಕ್ತ ವಲಯವಾಗುವತ್ತ ಹೆಜ್ಜೆ ಇಟ್ಟಿದೆ.

ಸುಮಾರು 3.4 ಚದರ ಕಿಲೋಮೀಟರ್ ಸುತ್ತಳತೆಯಲ್ಲಿ ಹರಡಿಕೊಂಡಿರುವ ಈ ಬೆಟ್ಟವು ಹತ್ತು ಹಲವು ವಿಶೇಷತೆಗಳನ್ನು ಒಳಗೊಂಡಿದೆ. ಸಪ್ತರ್ಷಿಗಳು ತಪಸ್ಸಿಗೆ ಕೂತಿದ್ದು, ರಾಮನು ಸೀತೆ ಲಕ್ಷ್ಮಣರ ಆದಿಯಾಗಿ ಇಲ್ಲಿಗೆ ಬಂದು ಹೋದದ್ದು... ಹೀಗೆ ಹಲವು ಐತಿಹ್ಯಗಳು ಇದರ ಒಡಲಲ್ಲಿವೆ. ಬೆಟ್ಟವು ರಣಹದ್ದುಗಳ ಆವಾಸ ಸ್ಥಾನವಾಗಿ ಗುರುತಿಸಿಕೊಂಡಿದ್ದು, ಅದೇ ಕಾರಣಕ್ಕೆ ಸರ್ಕಾರ ಸಂರಕ್ಷಿತ ಅರಣ್ಯ ಪ್ರದೇಶವಾಗಿ ಘೋಷಿಸಿದೆ.

‘ಸಂರಕ್ಷಿತ ಅರಣ್ಯ ಪ್ರದೇಶ’ ಘೋಷಣೆಯಾದ ಬಳಿಕ ಅಲ್ಲಿ ಪ್ಲಾಸ್ಟಿಕ್ ಬಳಕೆ ನಿಷಿದ್ಧವಾಗಿದೆ. ಆದರೆ ಅದು ಪೂರ್ಣ ಪ್ರಮಾಣದಲ್ಲಿ ಕಾರ್ಯರೂಪಕ್ಕೆ ಬಂದಿಲ್ಲ. ಸದ್ಯ ಈ ಬಗ್ಗೆ ಪ್ರವಾಸಿಗರಲ್ಲಿ ಅರಿವು ಮೂಡಿಸುವ ಪ್ರಯತ್ನಕ್ಕೆ ಅರಣ್ಯ ಇಲಾಖೆಯು ಮುಂದಾಗಿದೆ.

ಮರಗಳ ಬಳಿ ಅಲ್ಲಲ್ಲಿ ಬಿದಿರಿನ ಬುಟ್ಟಿಗಳನ್ನು ಇಟ್ಟಿದ್ದು, ಅಲ್ಲಿಯೇ ಕಸ ಹಾಕುವಂತೆ ಫಲಕಗಳನ್ನು ಇಡಲಾಗಿದೆ. ಈ ಬುಟ್ಟಿಗಳಲ್ಲಿ ಸಾಕಷ್ಟು ಕಸ ಸಂಗ್ರಹವಾಗುತ್ತಿದ್ದು, ಪ್ಲಾಸ್ಟಿಕ್ ಕಾಡು ಸೇರುವುದು ಕೊಂಚ ಮಟ್ಟಿಗೆ ತಪ್ಪಿದೆ.

ಬಾಗಿಲಲ್ಲೇ ತಪಾಸಣೆ ಮಾಡಿ: ‘ಅರಣ್ಯ ಇಲಾಖೆಯು ವರ್ಷದ ಹಿಂದೆ ಬೆಟ್ಟಕ್ಕೆ ಪ್ರವೇಶ ಶುಲ್ಕ ನಿಗದಿ ಪಡಿಸಿದೆ. ಗೇಟಿನ ಬಳಿ ಟಿಕೆಟ್ ನೀಡುವ ಸಂದರ್ಭದಲ್ಲೇ ಪ್ರವಾಸಿಗರು ಒಳಗೆ ಪ್ಲಾಸ್ಟಿಕ್ ಉತ್ಪನ್ನಗಳನ್ನು ಕೊಂಡೊಯ್ಯದಂತೆ ನಿಷೇಧ ಹೇರಬೇಕು. ನೀರಿನ ಬಾಟಲಿಗಳನ್ನು ಹೊರತುಪಡಿಸಿ ಉಳಿದ ಯಾವುದೇ ತರಹದ ಪ್ಲಾಸ್ಟಿಕ್ ಬಳಕೆಗೆ ಅವಕಾಶ ನೀಡಬಾರದು. ಆಗ ಪರಿಸ್ಥಿತಿ ಖಂಡಿತ ಸುಧಾರಿಸುತ್ತದೆ’ ಎನ್ನುತ್ತಾರೆ ಪ್ರವಾಸಿಗರಾದ ಶಂಕರ್‌.

ಉತ್ಸವದ ಸಂದರ್ಭ ಹೆಚ್ಚು: ಬೆಟ್ಟದ ಒಳಗೆ ಇರುವ ಪಟ್ಟಾಭಿರಾಮ ದೇಗುಲದಲ್ಲಿ ಪ್ರತಿ ಶ್ರಾವಣ ಮಾಸದಲ್ಲಿ ವಿಶೇಷ ಉತ್ಸವ ನಡೆಯುತ್ತದೆ. ಈ ಸಂದರ್ಭ ಪ್ರತಿ ಶನಿವಾರ ಬೆಟ್ಟಕ್ಕೆ ಭಕ್ತರ ದಂಡೇ ಬರುತ್ತದೆ. ಬಂದ ಭಕ್ತರು ಪ್ಲಾಸ್ಟಿಕ್ ಅನ್ನೂ ಹೆಚ್ಚಾಗಿ ಹೊತ್ತು ತರುತ್ತಾರೆ. ಪೂಜೆಗೆ ಬಳಸುವ ಗಂಧದ ಕಡ್ಡಿಗೆ ಸುಟ್ಟಿದ ಪ್ಲಾಸ್ಟಿಕ್ ಹಾಳೆ, ಕುಡಿಯುವ ನೀರಿಗೆ ಬಳಸಿದ ಲೋಟ, ಬಾಟಲ್, ಎಲೆ.... ಹೀಗೆ ಸಾಕಷ್ಟು ಪ್ರಮಾಣದಲ್ಲಿ ಪ್ಲಾಸ್ಟಿಕ್‌ ಚೆಲ್ಲಲಾಗುತ್ತಿದೆ.

‘ಹಬ್ಬ–ಹರಿದಿನದ ಸಂದರ್ಭ ಬೆಟ್ಟಕ್ಕೆ ಸೇರುತ್ತಿರುವ ಪ್ಲಾಸ್ಟಿಕ್ ಬಗ್ಗೆ ಗಮನಕ್ಕೆ ಬಂದಿದೆ. ಮುಂಬರುವ ದಿನಗಳಲ್ಲಿ ಪ್ಲಾಸ್ಟಿಕ್‌ಗೆ ಬದಲಾಗಿ ಕಾಗದದ ತಟ್ಟೆ–ಲೋಟಗಳನ್ನು ಬಳಸುವಂತೆ ದೇವಸ್ಥಾನದ ಟ್ರಸ್ಟ್ ಹಾಗೂ ಭಕ್ತರಲ್ಲಿ ಮನವಿ ಮಾಡಲಾಗುವುದು’ ಎನ್ನುತ್ತಾರೆ ವಲಯ ಅರಣ್ಯಾಧಿಕಾರಿ ದಾಳೇಶ್.

‘ಪ್ಲಾಸ್ಟಿಕ್ ಬಳಕೆ ಕುರಿತು ಪ್ರವಾಸಿಗರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ನಡೆದಿದೆ. ಅಲ್ಲಲ್ಲಿ ಸೂಚನಾ ಫಲಕಗಳನ್ನು ನೆಡಲಾಗುತ್ತಿದೆ. ಕಸ ಸಂಗ್ರಹಕ್ಕೆ ಬುಟ್ಟಿಗಳನ್ನು ಇಡಲಾಗಿದೆ. ಜನರಲ್ಲಿ ಜಾಗೃತಿ ಮೂಡದ ಹೊರತು ನಮ್ಮ ಪ್ರಯತ್ನಗಳು ಫಲ ಕೊಡದು’ ಎನ್ನುತ್ತಾರೆ ಅವರು.

ಪ್ರವಾಸಿಗರ ಮಾಹಿತಿಗೆ ಕೇಂದ್ರ

ಬೆಟ್ಟಕ್ಕೆ ಬರುವ ಪ್ರವಾಸಿಗರಿಗೆ ಇಲ್ಲಿನ ವಿಶೇಷತೆಗಳು ಹಾಗೂ ಸುತ್ತಮುತ್ತಲ ಪ್ರವಾಸಿ ತಾಣಗಳ ಮಾಹಿತಿ ನೀಡುವ ಕೇಂದ್ರವನ್ನು ಇಲ್ಲಿ ತೆರೆಯಲಾಗಿದೆ.ಬೆಟ್ಟದ ಕೇಂದ್ರಬಿಂದುವಾಗಿರುವ ರಣಹದ್ದುಗಳ ಚಿತ್ರಣವನ್ನು ಕಣ್ಣಿಗೆ ಕಟ್ಟಿಕೊಡುವ ಪ್ರಯತ್ನ ಇಲ್ಲಿದೆ. ಜಿಲ್ಲೆಯ ಪಕ್ಷಿ, ಪ್ರಾಣಿಗಳ ಚಿತ್ರ ಸಹಿತ ವಿವರಗಳೂ ಇಲ್ಲಿ ಲಭ್ಯವಿದೆ. ಕರ್ನಾಟಕ ರಣಹದ್ದು ಸಂರಕ್ಷಣಾ ಟ್ರಸ್ಟ್ ಈ ಕಾರ್ಯಕ್ಕೆ ಸಹಕಾರ ನೀಡಿದೆ.

**

ಕಾಡಿನೊಳಗೆ ಪ್ಲಾಸ್ಟಿಕ್ ಬಳಕೆಯಿಂದ ವನ್ಯಜೀವಿಗಳಿಗೆ ತೊಂದರೆ ಹೆಚ್ಚು. ಇಲ್ಲಿಗೆ ಬರುವ ಪ್ರವಾಸಿಗರು ಈ ಬಗ್ಗೆ ಅರಿತು ತಾವೇ ಪ್ಲಾಸ್ಟಿಕ್ ತ್ಯಜಿಸಬೇಕು

ಬಿ. ಶಶಿಕುಮಾರ್‌, ಕಾರ್ಯದರ್ಶಿ, ಕರ್ನಾಟಕ ರಣಹದ್ದು ಸಂರಕ್ಷಣಾ ಟ್ರಸ್ಟ್‌

**

ರಾಮದೇವರ ಬೆಟ್ಟವನ್ನು ಪ್ಲಾಸ್ಟಿಕ್ ನಿಷೇಧಿತ ವಲಯ ಎಂದು ಈಗಾಗಲೇ ಘೋಷಣೆ ಆಗಿದೆ. ಪ್ರವಾಸಿಗರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು

ದಾಳೇಶ್‌, ವಲಯ ಅರಣ್ಯಾಧಿಕಾರಿ, ರಾಮನಗರ        

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry