ಇಲ್ಲಿ ಜನವಸತಿಗಿಂತ ವನ್ಯಸಂಕುಲವೇ ಹೆಚ್ಚು!

7
ಎರಡು ವನ್ಯಧಾಮಗಳು, ಪ್ರಕೃತಿ ಸೌಂದರ್ಯದಿಂದ ಕೂಡಿದ ಹನೂರು ತಾಲ್ಲೂಕು

ಇಲ್ಲಿ ಜನವಸತಿಗಿಂತ ವನ್ಯಸಂಕುಲವೇ ಹೆಚ್ಚು!

Published:
Updated:
ಇಲ್ಲಿ ಜನವಸತಿಗಿಂತ ವನ್ಯಸಂಕುಲವೇ ಹೆಚ್ಚು!

ಹನೂರು: ಕಣ್ಣು ಹಾಯಿಸಿದಷ್ಟು ದೂರಕ್ಕೂ ಹರಡಿಕೊಂಡಿರುವ ಹಚ್ಚ ಹಸಿರ ವನರಾಶಿ, ಯಾವ ದಿಕ್ಕಿನತ್ತ ದಿಟ್ಟಿಸಿದರೂ ಜೊತೆಗೆ ಮಂಜಿನಿಂದ ಆವೃತಗೊಂಡಿರುವ ಹಸಿರು ಹೊದ್ದುಕೊಂಡ ಬೆಟ್ಟದ ಸಾಲುಗಳು... ಪಾಕೃತಿಕ ಸೌಂದರ್ಯವನ್ನೇ ಒಡಲಲ್ಲಿ ತುಂಬಿರುವ ಹನೂರು ತಾಲ್ಲೂಕಿನ ಸಂಕ್ಷಿಪ್ತ ವರ್ಣನೆ ಇದು. ತಾಲ್ಲೂಕಿನ ಒಟ್ಟಾರೆ ವ್ಯಾಪ್ತಿಯಲ್ಲಿ ಶೇ 80ರಷ್ಟು ಭಾಗ ಅರಣ್ಯವೇ ಇರುವುದು ಇದರ ಹೆಗ್ಗಳಿಕೆ.

ಕಂದಾಯ ಇಲಾಖೆ ಮಾಹಿತಿ ಯಂತೆ ಹನೂರು ತಾಲ್ಲೂಕು 1,42,223 ಹೆಕ್ಟೇರ್‌ ವಿಸ್ತೀರ್ಣ ಹೊಂದಿದೆ. ಇದರಲ್ಲಿ 1,30,000 ರಷ್ಟು ಭೂಪ್ರದೇಶ ಅರಣ್ಯವಾಗಿದೆ. ಎರಡು ಪ್ರಖ್ಯಾತ ವನ್ಯಧಾಮಗಳು ಇದರ ವ್ಯಾಪ್ತಿಗೆ ಒಳಪಡುವ ಮೂಲಕ ರಾಜ್ಯದಲ್ಲೇ ಎರಡು ವನ್ಯಧಾಮಗಳನ್ನು ಹೊಂದಿರುವ ಏಕೈಕ ತಾಲ್ಲೂಕು ಎಂಬ ಕೀರ್ತಿಯನ್ನೂ ಸಂಪಾದಿಸಿದೆ.

ಕಾವೇರಿ ವನ್ಯಧಾಮ: ರಾಜ್ಯದಲ್ಲೇ ಹೆಚ್ಚು ವಿಸ್ತೀರ್ಣ ಹೊಂದಿರುವ ಕಾವೇರಿ ವನ್ಯಧಾಮ ವಿವಿಧ ಸಸ್ಯ ಪ್ರಭೇದ ಹಾಗೂ ವಿಶಿಷ್ಟ ಪ್ರಭೇದದ ಪ್ರಾಣಿಗಳಿಗೆ ಆಶ್ರಯತಾಣ.

ವನ್ಯಜೀವಿ ಮತ್ತು ಪರಿಸರ ರಕ್ಷಣೆ ಹಾಗೂ ಅರಣ್ಯ ಅಭಿವೃದ್ಧಿ ಮಾಡುವ ಉದ್ದೇಶದಿಂದ 1987ರಲ್ಲಿ ಇದನ್ನು ವನ್ಯಧಾಮವನ್ನಾಗಿ ಘೋಷಿಸಲಾಯಿತು. ಇಲ್ಲಿ 73 ಕಿ.ಮೀ ದೂರ ಕಾವೇರಿ ನದಿ ಹರಿಯುವುದರಿಂದ ಇದಕ್ಕೆ ಕಾವೇರಿ ವನ್ಯಧಾಮ ಎಂದು ಹೆಸರಿಡಲಾಗಿದೆ. 1,027,53 ಚದರ ಕಿ.ಮೀ ವಿಸ್ತೀರ್ಣ ಹೊಂದಿರುವ ಈ ವನ್ಯಧಾಮದಲ್ಲಿ ತರಕರಡಿ, ಬೆಟ್ಟಳಿಲು, ಮಾಶೀರ್‌ಫಿಶ್‌ ಮುಂತಾದ ವೈವಿದ್ಯಮಯ ಪ್ರಾಣಿಗಳು ಆಶ್ರಯ ಪಡೆದಿರುವುದು ಅರಣ್ಯದ ಸೌಂದರ್ಯವನ್ನು ಇಮ್ಮಡಿಗೊಳಿಸಿದೆ.

ಅಭಯಾರಣ್ಯದ ಗಡಿರೇಖೆಯು ಕೃಷಿ ಭೂಮಿಯನ್ನು ಮತ್ತು ಅರಣ್ಯ ಗಳನ್ನು ಒಳಗೊಂಡಿರುವ ಸುತ್ತಲಿನ ಗಡಿ ಪ್ರದೇಶಗಳೊಂದಿಗೆ ಹೊಂದಿಕೊಂಡಿದೆ. ಇಲ್ಲಿನ ಸರಾಸರಿ ಉಷ್ಣತೆ ಕನಿಷ್ಠ 5 ಡಿಗ್ರಿ ಸೆಲ್ಸಿಯಸ್‌ ಮತ್ತು ಗರಿಷ್ಠ 38 ಡಿಗ್ರಿ ಸೆಲ್ಸಿಯಸ್‌ ಇರುತ್ತದೆ ಮತ್ತು ಬೇಸಿಗೆಯಲ್ಲಿ ಗರಿಷ್ಠ 40 ಡಿಗ್ರಿಯವರೆಗೂ ತಾಪಮಾನ ಇರುವುದುಂಟು. ಮುಂಗಾರಿಗಿಂತ ಹಿಂಗಾರು ಇಲ್ಲಿ ಹೆಚ್ಚು.

ಹುಲಿಗಳ ಧಾಮ ಮಲೆಮಹದೇಶ್ವರ ವನ್ಯಧಾಮ: 2013ರಲ್ಲಿ ಅಸ್ತಿತ್ವಕ್ಕೆ ಬಂದಿರುವ ಮಲೆ ಮಹದೇಶ್ವರ ವನ್ಯಧಾಮ ಈ ತಾಲ್ಲೂಕಿನ ಮತ್ತೊಂದು ಹೆಗ್ಗುರುತು. 906.187 ಕಿ.ಮೀ ವಿಸ್ತೀರ್ಣ ಹೊಂದಿರುವ ಈ ವನ್ಯಧಾಮ ಹುಲಿಗಳ ಆವಾಸಸ್ಥಾನಕ್ಕೆ ಹೆಚ್ಚು ಯೋಗ್ಯವಾದುದು ಎಂಬುದು ಅರಣ್ಯಾಧಿಕಾರಿಗಳ ಅಭಿಪ್ರಾಯ.

ಈ ವನ್ಯಧಾಮದ 6 ವನ್ಯಜೀವಿ ವಲಯಗಳ ಪೈಕಿ ಪಿ.ಜಿ. ಪಾಳ್ಯ ವನ್ಯಜೀವಿ ವಲಯ ಹೆಚ್ಚು ಹುಲಿಗಳನ್ನು ಹೊಂದಿರುವ ವಲಯ. ಉತ್ತರಕ್ಕಿರುವ ಕಾವೇರಿ ವನ್ಯಧಾಮ, ದಕ್ಷಿಣಕ್ಕಿರುವ ಸತ್ಯಮಂಗಲ ಹುಲಿ ರಕ್ಷಿತಾರಣ್ಯ ಹಾಗೂ ಪಶ್ಚಿಮಕ್ಕೆ ಬಿಆರ್‌ಟಿ ಹುಲಿ ರಕ್ಷಿತಾರಣ್ಯದಿಂದ ವಲಸೆ ಬರುವ ಹುಲಿ ಮತ್ತಿತರ ವನ್ಯಪ್ರಾಣಿಗಳಿಗೆ ಇದು ಅತ್ಯಂತ ಸೂಕ್ತವಾದ ಸ್ಥಳ ಎಂದು ಹೇಳುತ್ತಾರೆ ಇಲ್ಲಿನ ಅರಣ್ಯಾಧಿಕಾರಿಗಳು.

ಅರಣ್ಯ ಸಂಪತ್ತಿನಿಂದ ಶ್ರೀಮಂತವಾಗಿರುವ ಹನೂರು ತಾಲ್ಲೂಕು ಪರಿಸರ ಸಂರಕ್ಷಣೆ ಮತ್ತು ಅಭಿವೃದ್ಧಿಗೆ ಮಾದರಿ. ಕಾಡಿನ ಪ್ರಮಾಣ ಹೆಚ್ಚಿರುವ ಕಾರಣಕ್ಕೆ ತಮ್ಮ ತಾಲ್ಲೂಕು ಇಡೀ ರಾಜ್ಯದಲ್ಲೇ ಭಿನ್ನವಾಗಿ ಗುರುತಿಸಿಕೊಳ್ಳುತ್ತಿರುವುದು ಇಲ್ಲಿನ ಜನರ ಹೆಮ್ಮೆಗೂ ಕಾರಣವಾಗಿದೆ.

**

ಮಲೆಮಹದೇಶ್ವರ ವನ್ಯಧಾಮ ಹುಲಿಗಳ ಆವಾಸ ಸ್ಥಾನಕ್ಕೆ ಅತ್ಯಂತ ಯೋಗ್ಯವಾಗಿದೆ. ಈ ಬಾರಿ ನಡೆಸಿದ ಹುಲಿ ಗಣತಿಯಲ್ಲಿ ಕ್ಯಾಮೆರಾ ಟ್ರ್ಯಾಪ್‌ನಲ್ಲಿ 20 ಹುಲಿಗಳು ಕಾಣಿಸಿಕೊಂಡಿವೆ

ವಿ.ಏಡುಕೊಂಡಲು, ಉಪ ಅರಣ್ಯ ಸಂರಕ್ಷಣಾಧಿಕಾರಿ, ಮಲೆಮಹದೇಶ್ವರ ವನ್ಯಧಾಮ

ಬಿ. ಬಸವರಾಜು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry