ಒಂದು ಪಕ್ಷದ ಪರ ಕೆಲಸ ಮಾಡಿಲ್ಲ: ಬಾಲಕೃಷ್ಣ

7
ಗುತ್ತಿಗೆದಾರರ ಮನೆಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿಗೆ ಸ್ಪಷ್ಟನೆ

ಒಂದು ಪಕ್ಷದ ಪರ ಕೆಲಸ ಮಾಡಿಲ್ಲ: ಬಾಲಕೃಷ್ಣ

Published:
Updated:

ಬೆಂಗಳೂರು: ‘ರಾಜ್ಯ ವಿಧಾನಸಭೆ ಚುನಾವಣೆ ಸಮಯದಲ್ಲಿ ಕೆಲವು ಗುತ್ತಿಗೆದಾರರ ಮನೆ ಮತ್ತು ಕಚೇರಿಗಳ ಮೇಲೆ ನಡೆಸಿದ ದಾಳಿ ರಾಜಕೀಯ ಪ್ರೇರಿತವಲ್ಲ. ನಾವು ಯಾವುದೇ ಒಂದು ಪಕ್ಷದ ಪರವಾಗಿ ಕೆಲಸ ಮಾಡಿಲ್ಲ’ ಎಂದು ಕರ್ನಾಟಕ– ಗೋವಾ ಆದಾಯ ತೆರಿಗೆ ವೃತ್ತದ ಪ್ರಧಾನ ಮುಖ್ಯ ಕಮಿಷನರ್‌ ಬಿ.ಆರ್. ಬಾಲಕೃಷ್ಣ

ಸ್ಪಷ್ಟಪಡಿಸಿದರು.

ಇಲ್ಲಿನ ವಾಣಿಜ್ಯ ಹಾಗೂ ಕೈಗಾರಿಕಾ ಒಕ್ಕೂಟವು (ಎಫ್‌ಕೆಸಿಸಿಐ) ಮಂಗಳವಾರ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘ನಾವು ಒಂದು ಪಕ್ಷದ ಪರ ಕೆಲಸ ಮಾಡಿದ್ದೇವೆ ಎಂಬ ಆರೋಪ ಮಾಡಲಾಗುತ್ತಿದ್ದು, ಅದರಲ್ಲಿ ಹುರುಳಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ಕೆಲವು ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡಿ ಅನೇಕ ವಿಧಾನಸಭಾ ಕ್ಷೇತ್ರಗಳಿಗೆ ಕಳುಹಿಸಲಾಗಿತ್ತು. ನಮಗೆ ಸಿಕ್ಕಿದ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ್ದೇವೆ. ನಾವು ಪಕ್ಷಾತೀತವಾಗಿ ನಡೆದಿದ್ದೇವೆ. ಚುನಾವಣೆ ಸಮಯದಲ್ಲಿ ಪ್ರತಿ ಜಿಲ್ಲೆಯಲ್ಲೂ ತಂಡ ರಚಿಸಲಾಗಿತ್ತು. ನಮ್ಮ ಅಧಿಕಾರಿಗಳು ಹಾಗೂ ಸಿಬ್ಬಂದಿ ಅದ್ಭುತವಾಗಿ ಕೆಲಸ ಮಾಡಿದರು’ ಎಂದು ಬಾಲಕೃಷ್ಣ ಮೆಚ್ಚುಗೆ ವ್ಯಕ್ತಪಡಿಸಿದರು.

ಲಕ್ಷ ಕೋಟಿ ತೆರಿಗೆ ಸಂಗ್ರಹ: ಕರ್ನಾಟಕದಲ್ಲಿ 2017– 18ನೇ ಸಾಲಿನಲ್ಲಿ ₹ 1,00,000 ಕೋಟಿ ತೆರಿಗೆ ಸಂಗ್ರಹವಾಗಿದೆ. 25 ಲಕ್ಷ ತೆರಿಗೆದಾರರು ಹೊಸದಾಗಿ ರಿಟರ್ನ್ಸ್‌ ಫೈಲ್‌ ಮಾಡಿದ್ದಾರೆ. 2018–19ನೇ ಸಾಲಿಗೆ ₹ 1,23,000 ಕೋಟಿ ತೆರಿಗೆ ಗುರಿ ಕೊಡಲಾಗಿದ್ದು, ಕಳೆದ ಎರಡು ತಿಂಗಳಲ್ಲಿ ₹ 12,000 ಕೋಟಿ ಸಂಗ್ರಹವಾಗಿದೆ ಎಂದು ಅವರು ವಿವರಿಸಿದರು.

ಕರ್ನಾಟಕ ಅದರಲ್ಲೂ ಬೆಂಗಳೂರು ಮಾಹಿತಿ– ತಂತ್ರಜ್ಞಾನ ಉದ್ಯಮಗಳಿಗೆ ಹೆಸರಾಗಿರುವುದರಿಂದ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ತೆರಿಗೆ ಸಂಗ್ರಹ ಸಾಧ್ಯವಾಗಿದೆ. ಇಷ್ಟಾದರೂ ಜನರಲ್ಲಿ ತೆರಿಗೆ ತಪ್ಪಿಸುವ ಚಾಳಿ ಇನ್ನೂ ನಿಂತಿಲ್ಲ ಎಂದು ಅವರು ಹೇಳಿದರು.

‘ಕಳೆದ ಆರ್ಥಿಕ ವರ್ಷದಲ್ಲಿ ₹ 12,000 ಕೋಟಿ ತೆರಿಗೆ ಕಳ್ಳತನ ಮಾಡಿದ ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ. ಇದರಲ್ಲಿ ₹ 5,300 ಕೋಟಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ತೆರಿಗೆದಾರರು ತಪ್ಪನ್ನು ಒಪ್ಪಿಕೊಂಡಿದ್ದಾರೆ. ಇದು ದೇಶದಲ್ಲೇ ಅಧಿಕ’ ಎಂದು ಅವರು ವಿವರಿಸಿದರು.

‘ತೆರಿಗೆ ತಪ್ಪಿಸುವವರ ವಿರುದ್ಧ ಕೆಲವೊಂದು ಸಂದರ್ಭದಲ್ಲಿ ಕಠಿಣ ಕ್ರಮ ಅನಿವಾರ್ಯ. ಆದರೆ, ಐ.ಟಿ ಅನಗತ್ಯವಾಗಿ ಕಿರುಕುಳ ಕೊಡುವುದಿಲ್ಲ. ಎರಡು ದಿನಗಳ ಹಿಂದೆಯಷ್ಟೇ ತೆರಿಗೆ ತಪ್ಪಿಸಿದ ಉದ್ಯಮಿಯೊಬ್ಬರಿಗೆ ನಾಲ್ಕು ವರ್ಷ ಜೈಲು ಶಿಕ್ಷೆಯಾಗಿದೆ’ ಎಂದು ನುಡಿದರು.

ಆದಾಯ ತೆರಿಗೆ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇದೆ. ಸಿಬ್ಬಂದಿ ನೇಮಕಾತಿ ಆಯೋಗ ನಡೆಸುವ ಪರೀಕ್ಷೆಗೆ ಹಾಜರಾಗುವ ಸ್ಥಳೀಯರ ಸಂಖ್ಯೆ ಕಡಿಮೆಯಿದೆ. ಈ ಬಗ್ಗೆ ಜಾಗೃತಿ ಅಗತ್ಯ ಎಂದೂ ಅವರು ಅಭಿಪ್ರಾಯಪಟ್ಟರು.

ಸ್ವಾಗತ ಭಾಷಣ ಮಾಡಿದ ಎಫ್‌ಕೆಸಿಸಿಐ ಅಧ್ಯಕ್ಷ ಕೆ.ರವಿ, ನಗದು ಪಾವತಿ ಮೇಲಿನ ಮಿತಿ ಸಡಿಲಿಸಬೇಕು. ಈ ಮಿತಿಯನ್ನು ಮೀರುವವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದ್ದು, ಅದನ್ನು  ನಿಲ್ಲಿಸಬೇಕು ಎಂದು ಮನವಿ ಮಾಡಿದರು.

ವ್ಯಾಪಾರ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಐ.ಎಸ್‌. ಪ್ರಸಾದ್‌ ಮಾತನಾಡಿದರು. ದಕ್ಷಿಣ ಭಾರತ ಪ್ರಾದೇಶಿಕ ಮಂಡಳಿ ಲೆಕ್ಕ ಪರಿಶೋಧಕರ ಸಂಘದ ಬೆಂಗಳೂರು ಶಾಖೆ ಅಧ್ಯಕ್ಷ ಶ್ರವಣ್‌ ಗುಡತೂರ, ಎಫ್‌ಕೆಸಿಸಿಐನ ನಿಯೋಜಿತ ಅಧ್ಯಕ್ಷ ಸುಧಾಕರ ಶೆಟ್ಟಿ, ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧಕರ ಸಂಘದ ಅಧ್ಯಕ್ಷ ಟಿ.ಎನ್‌ ರಾಘವೇಂದ್ರ ವೇದಿಕೆಯಲ್ಲಿ ಇದ್ದರು.

‘ಮೋದಿಗೆ ದೇಶದ ಹಿತದೃಷ್ಟಿ ಮುಖ್ಯ’

ಪ್ರಧಾನಿ ನರೇಂದ್ರ ಮೋದಿ ಕೆಲವು ಕಠಿಣ ಕ್ರಮಗಳನ್ನು ಕೈಗೊಳ್ಳುವ ಮೂಲಕ ವಿದೇಶಗಳಲ್ಲಿರುವ ಹಣವನ್ನು ಮರಳಿ ತರಲು ಪ್ರಯತ್ನಿಸಿದ್ದಾರೆ ಎಂದು ಬಾಲಕೃಷ್ಣ ಹೇಳಿದರು.

ಮೋದಿ, ದೇಶದ ಹಿತದೃಷ್ಟಿಯಿಂದ ಅತ್ಯಂತ ಕಠಿಣ ನಿಲುವುಗಳನ್ನು ತಳೆದಿದ್ದಾರೆ ಎಂದೂ ಅವರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry