ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾಗ್ವಾರ್‌ ವಿಮಾನ ಪತನ: ಹಿರಿಯ ಅಧಿಕಾರಿ ಸಾವು

Last Updated 5 ಜೂನ್ 2018, 19:30 IST
ಅಕ್ಷರ ಗಾತ್ರ

ಕಛ್‌, ಗುಜರಾತ್‌: ‘ಭಾರತೀಯ ವಾಯುಪಡೆಗೆ ಸೇರಿದ ಜಾಗ್ವಾರ್‌ ಯುದ್ಧ ವಿಮಾನವು ಮಂಗಳವಾರ ಬೆಳಿಗ್ಗೆ 10.30ಕ್ಕೆ ಪತನಗೊಂಡು, ವಿಮಾನ ಚಲಾಯಿಸುತ್ತಿದ್ದ ಹಿರಿಯ ಅಧಿಕಾರಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ’ ಎಂದು ರಕ್ಷಣಾ ಇಲಾಖೆಯ ವಕ್ತಾರರು ತಿಳಿಸಿದ್ದಾರೆ.

‘ಜಾಮ್‌ನಗರ ವಾಯುಸೇನಾ ಕೇಂದ್ರದಿಂದ ದೈನಂದಿನ ತರಬೇತಿ ಹಾರಾಟಕ್ಕೆ ವಿಮಾನ ತೆರಳಿದ್ದ ವೇಳೆ ಮುಂದ್ರಾದ ಬರೆಜಾ ಗ್ರಾಮದ ಹೊಲದಲ್ಲಿ ಪತನಗೊಂಡಿದೆ. ಕಮಾಂಡರ್‌ ಏರ್‌ ಆಫೀಸರ್‌ ಸಂಜಯ್‌ ಚೌಹಾಣ್‌ ಸಾವನ್ನಪ್ಪಿದ್ದಾರೆ’ ಎಂದು ಇಲಾಖೆ ವಕ್ತಾರ ಲೆಫ್ಟಿನೆಂಟ್‌ ಕರ್ನಲ್‌ ಮನೀಶ್‌ ಓಜಾ ಅವರು ತಿಳಿಸಿದ್ದಾರೆ.

‘50 ವರ್ಷದ ಚೌಹಾಣ್‌ ಅತ್ಯಂತ ಅನುಭವಿ ಪೈಲಟ್‌ ಆಗಿದ್ದು, 3,800 ಗಂಟೆ ವಿಮಾನ ಹಾರಾಟ ನಡೆಸಿದ ಅನುಭವ ಹೊಂದಿದ್ದರು. 1989ರಲ್ಲಿ ಫ್ಲೈಯಿಂಗ್‌ ಇನ್‌ಸ್ಟ್ರಕ್ಟರ್‌ ಆಗಿ ಸೇರಿ, ವಾಯುಪಡೆ ಪದಕ ಕೂಡ ಪಡೆದಿದ್ದರು. ತಮ್ಮ ಸೇವಾವಧಿಯಲ್ಲಿ ಹಲವು ಪ್ರಮುಖ ಜವಾಬ್ದಾರಿಗಳನ್ನು ನಿರ್ವಹಿಸಿದ್ದು, ತರಬೇತಿ ಪೈಲಟ್‌ಗಳಿಗೆ ಕಮಾಂಡರ್‌, ವಾಯುಪಡೆಯ ಫೈಟರ್‌ ಸ್ಕ್ಯಾಡ್ರನ್‌ ಕಮಾಂಡರ್‌ ಆಗಿಯೂ ಕೆಲಸ ಮಾಡಿದ್ದರು’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

‘17 ನಮೂನೆಯ ಯುದ್ಧ ವಿಮಾನ ಹಾರಾಟ ನಡೆಸಿದ್ದ ಅವರು, ಜಾಗ್ವಾರ್‌, ಮಿಗ್‌–21, ಹಂಟರ್‌, ಎಚ್‌ಪಿಟಿ–32, ಇಸ್ಕಾರಾ, ಕಿರಣ್‌, ಅವ್ರೊ–748, ಎಎನ್‌–32 ಹಾಗೂ ಆಧುನಿಕ ಯುದ್ಧ ವಿಮಾನಗಳಾದ ರಫೇಲ್‌, ಗ್ರಿಫೇನ್‌ನಲ್ಲಿ ಪೈಲಟ್‌ ಆಗಿ ಕೆಲಸ ಮಾಡಿದ ವಿಶೇಷ ಅನುಭವಿ’ ಎಂದರು.

ಅಪಘಾತದ ಕುರಿತಂತೆ ವಾಯುಪಡೆ ಕೇಂದ್ರ ಕಚೇರಿ ಉನ್ನತ ಮಟ್ಟದ ತನಿಖೆಗೆ ಆದೇಶಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT