50 ಕೋಟಿ ನೌಕರರಿಗೆ ಕಲ್ಯಾಣ ಕಾರ್ಯಕ್ರಮ

7

50 ಕೋಟಿ ನೌಕರರಿಗೆ ಕಲ್ಯಾಣ ಕಾರ್ಯಕ್ರಮ

Published:
Updated:
50 ಕೋಟಿ ನೌಕರರಿಗೆ ಕಲ್ಯಾಣ ಕಾರ್ಯಕ್ರಮ

ಬೆಂಗಳೂರು: ಲೋಕಸಭಾ ಚುನಾವಣೆ ಎದುರಿಸಲು ಸಜ್ಜಾಗುತ್ತಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 50 ಕೋಟಿ ನೌಕರರಿಗೆ ಅಭಿವೃದ್ಧಿ ಯೋಜನೆಯೊಂದನ್ನು ಜಾರಿಗೊಳಿಸಲು ಚಿಂತನೆ ನಡೆಸಿದೆ ಎಂದು ಬ್ಲೂಮ್‌ಬರ್ಗ್‌ ಮಾಧ್ಯಮ ಸಂಸ್ಥೆ ವರದಿ ಮಾಡಿದೆ.

ಆದರೆ, ಈ ಮಹತ್ವಾಕಾಂಕ್ಷಿ ಯೋಜನೆಯನ್ನು ಜಾರಿಗೊಳಿಸಲು ಬೇಕಾದ ಸಮಯ ಮತ್ತು ಸಂಪನ್ಮೂಲ ಸರ್ಕಾರದ ಬಳಿ ಇಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ.

ನೌಕರರಿಗೆ ವೃದ್ಧಾಪ್ಯ ವೇತನ, ಜೀವ ವಿಮೆ ಮತ್ತು ತಾಯ್ತನ ಪ್ರಯೋಜನಗಳನ್ನು ನೀಡಲು ಸರ್ಕಾರ ನಿರ್ಧರಿಸಿದೆ. ನಿರುದ್ಯೋಗ, ಮಕ್ಕಳ ಆರೈಕೆಗೆ ಬೆಂಬಲ ಮತ್ತು ಇತರ ಸೌಲಭ್ಯಗಳನ್ನು ನೀಡುವ ಯೋಜನೆಯನ್ನು ಸದ್ಯಕ್ಕೆ ಕೈಗೆತ್ತಿಕೊಳ್ಳುವ ಯೋಚನೆ ಇಲ್ಲ ಎಂದು ಅಧಿಕಾರಿಗಳು ಹೇಳಿದ್ದಾಗಿ ಬ್ಲೂಮ್‌ಬರ್ಗ್‌ ವರದಿ ವಿವರಿಸಿದೆ.

ಮುಂದಿನ ಚುನಾವಣೆಯಲ್ಲಿ ಬಿಜೆಪಿ ಮುಂದೆ ಹಲವು ಸವಾಲುಗಳಿವೆ. ಈ ಸವಾಲಿನ ಮಧ್ಯೆಯೂ ಸಾಮಾಜಿಕ ಭದ್ರತೆ ಯೋಜನೆಯು ರಾಜಕೀಯವಾಗಿ ಗಣನೀಯ ಲಾಭ ತಂದುಕೊಡಬಹುದು. ಆದರೆ ಆರ್ಥಿಕ ಕೊರತೆಯನ್ನು ಇನ್ನಷ್ಟು ಹೆಚ್ಚಿಸಬಹುದು. ಭಾರತದ ಆರ್ಥಿಕ ಕೊರತೆಯು ಏಷ್ಯಾದಲ್ಲಿಯೇ ಅತಿ ಹೆಚ್ಚು ಎಂದು ವರದಿಯಲ್ಲಿ ಹೇಳಲಾಗಿದೆ.

10 ಕೋಟಿ ಕುಟುಂಬಗಳಿಗೆ ಸೌಲಭ್ಯ ಒದಗಿಸುವ ‘ಮೋದಿ ಕೇರ್‌’ ಎಂದು ಹೆಸರಾಗಿರುವ ಆರೋಗ್ಯ ವಿಮೆ ಯೋಜನೆಯನ್ನು ಫೆಬ್ರುವರಿಯಲ್ಲಿ ಸರ್ಕಾರ ಘೋಷಿಸಿತ್ತು. ಅದರ ಬಳಿಕ, ಅತಿ ಹೆಚ್ಚು ಜನರನ್ನು ತಲುಪುವ ಇನ್ನೊಂದು ಯೋಜನೆಯನ್ನು ಸರ್ಕಾರ ಸಿದ್ಧಪಡಿಸಿದೆ.

ಈ ಯೋಜನೆಯನ್ನು ಜಾರಿಗೆ ತರುವುದು ಬೊಕ್ಕಸಕ್ಕೆ ದೊಡ್ಡ ಹೊರೆಯಾಗಲಿದೆ. ಅರ್ಥ ವ್ಯವಸ್ಥೆಯ ಮೇಲೆ ಇದು ಎರಡೆರಡು ರೀತಿಯ ಪರಿಣಾಮ ಬೀರಬಹುದು. ಸಾಮಾಜಿಕ ಅಭಿವೃದ್ಧಿಗಾಗಿ ಹೆಚ್ಚು ಹಣ ಖರ್ಚು ಮಾಡುವುದರಿಂದಾಗಿ ಮೂಲಸೌಕರ್ಯಕ್ಕೆ ಮಾಡುವ ವೆಚ್ಚವನ್ನು ತಗ್ಗಿಸಬೇಕಾಗುತ್ತದೆ. ಆದರೆ, ಯೋಜನೆಯಿಂದ ಅಸಂಘಟಿತ ವಲಯದ ಕಾರ್ಮಿಕರಿಗೆ ಹೆಚ್ಚಿನ ಪ್ರಯೋಜನ ದೊರೆಯುತ್ತದೆ. ಅವರ ಜೀವನ ಮಟ್ಟ ಸುಧಾರಣೆಯಾಗಿ, ಉತ್ಪಾದಕತೆ ಹೆಚ್ಚುತ್ತದೆ ಎಂದು ವರದಿ ವಿಶ್ಲೇಷಿಸಿದೆ.

ಯೋಜನೆಯ ಕರಡು ಸಿದ್ಧ

* ಅಸಂಘಟಿತ ವಲಯ ಸೇರಿ ಎಲ್ಲ ನೌಕರರಿಗೆ ಸೌಲಭ್ಯ ಒದಗಿಸಲು ಚಿಂತನೆ

* 15 ಕಾರ್ಮಿಕ ಕಾನೂನುಗಳನ್ನು ಒಟ್ಟು ಸೇರಿಸಿ ಸರಳೀಕರಿಸುವ ಪ್ರಸ್ತಾವ

* ಮುಂಗಾರು ಅಧಿವೇಶನದಲ್ಲಿ ಹೊಸ ಮಸೂದೆ ಮಂಡನೆ ಸಾಧ್ಯತೆ

* ಆರು ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸಲು ಯೋಜನೆ

* ರಾಷ್ಟ್ರವ್ಯಾಪಿ ಯೋಜನೆ ಜಾರಿ ಯಾವಾಗ ಎಂಬುದು ನಿರ್ಧಾರವಾಗಿಲ್ಲ

ಎಲ್ಲರಿಗೂ ಉಚಿತವಲ್ಲ?

ಎಲ್ಲ ನೌಕರರನ್ನು ಒಳಗೊಳ್ಳಬೇಕು ಎಂಬುದು ಯೋಜನೆ ಉದ್ದೇಶ. ಆದರೆ, ತಳಮಟ್ಟದಲ್ಲಿರುವ ಶೇ 50ರಷ್ಟು ನೌಕರರಿಗೆ ಹೆಚ್ಚಿನ ಒತ್ತು ನೀಡುವುದು ಸರ್ಕಾರದ ಉದ್ದೇಶ. ಅವರಿಗೆ ಸೌಲಭ್ಯ ಉಚಿತವಾಗಿ ದೊರೆಯಬಹುದು. ಆದರೆ, ಹೆಚ್ಚು ವೇತನ ಪಡೆಯುವ ನೌಕರ ವರ್ಗವೂ ಯೋಜನೆಯ ವ್ಯಾಪ್ತಿಗೆ ಬರುತ್ತದೆ. ಅವರು ಈ ಸೌಲಭ್ಯಗಳಿಗಾಗಿ ಪೂರ್ಣ ಅಥವಾ ಭಾಗಶಃ ಮೊತ್ತವನ್ನು ಪಾವತಿಸಬೇಕಾಗಬಹುದು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry