ವಾಡಿಕೆಗಿಂತ ಹೆಚ್ಚು ಮಳೆ: ಬಿತ್ತನೆಗೆ ಸಕಾಲ

7
ತಾಲ್ಲೂಕು ಪಂಚಾಯ್ತಿ ಸಾಮಾನ್ಯ ಸಭೆ: ಕೃಷಿ ಅಧಿಕಾರಿ ಸೋಮಲಿಂಗಪ್ಪ ಹೇಳಿಕೆ

ವಾಡಿಕೆಗಿಂತ ಹೆಚ್ಚು ಮಳೆ: ಬಿತ್ತನೆಗೆ ಸಕಾಲ

Published:
Updated:

ಧಾರವಾಡ: ತಾಲ್ಲೂಕಿನಾದ್ಯಂತ ನಿರೀಕ್ಷೆಗೂ ಮೀರಿ ಉತ್ತಮ ಮಳೆಯಾಗಿದೆ. ವಾಡಿಕೆಗಿಂತ ಹೆಚ್ಚಿನ ಮಳೆ ಆಗಿರುವುದರಿಂದ ರೈತರು ಬಿತ್ತನೆ ಮಾಡಲು ಸಕಾಲ ಎಂದು ಕೃಷಿ ಅಧಿಕಾರಿ ಸೋಮಲಿಂಗಪ್ಪ ತಿಳಿಸಿದರು.

ಮಂಗಳವಾರ ನಡೆದ ತಾ.ಪಂ. ಸಾಮಾನ್ಯ ಸಭೆಯಲ್ಲಿ ಮಾಹಿತಿ ನೀಡಿದ ಅವರು, ತಾಲ್ಲೂಕಿನಲ್ಲಿ 235 ಮಿ.ಮೀ.

ಮಳೆಯಾಗಿದ್ದು, ಮುಂಗಾರು ಹಂಗಾಮಿನಲ್ಲಿ 57,390 ಹೆಕ್ಟೆರ್‌ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದ್ದು, ಈಗಾಗಲೇ ಶೇ 8 ರಷ್ಟು ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ ಎಂದರು.

ಉಪ್ಪಿನ ಬೆಟಗೇರಿ, ಹನುಮನಾಳ, ಪುಡಲಕಟ್ಟಿ ಗ್ರಾಮಗಳಲ್ಲಿ ಒಂದೇ ದಿನದಲ್ಲಿ 67 ಮಿ.ಮೀ. ಮಳೆಯಾಗಿದೆ. ಮಳೆಯಿಂದ ಹೊಲಗಳ ಒಡ್ಡು ಒಡೆದು ಹೋಗಿ ಹಾನಿಯಾಗಿರುವ ಕುರಿತು ವರದಿ ಸಿದ್ಧಪಡಿಸಲು ಸೂಚಿಸಲಾಗಿದೆ. ಬಿತ್ತನೆ ಬೀಜ, ರಸಗೊಬ್ಬರ ವಿತರಿಸಲಾಯಿತ್ತಿದೆ. ಡಿಎಪಿ ಗೊಬ್ಬರದ ಕೊರತೆ ಇದ್ದು, ಅದು ಕೂಡ ಆವಕ ಆಗಲಿದೆ ಎಂದು ಮಾಹಿತಿ ನೀಡಿದರು.

ಹೆಸ್ಕಾಂ ಅಧಿಕಾರಿ ಮಾತನಾಡಿ, ತಾಲ್ಲೂಕಿನಲ್ಲಿ 179 ವಿದ್ಯುತ್‌ ಕಂಬಗಳು ಉರುಳಿವೆ. ಅವುಗಳಲ್ಲಿ ಅರ್ಧಕ್ಕೆ ಹೆಚ್ಚು ಹೊಸ ಕಂಬ ಹಾಕಲಾಗಿದೆ. 22 ವಿದ್ಯುತ್‌ ಪರಿವರ್ತಕಗಳು ಹಾಳಾಗಿದ್ದು, ಅವುಗಳನ್ನೂ ಬದಲಾಯಿಸಲಾಗಿದೆ ಎಂದರು.

ಗರಗ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಸಿಬ್ಬಂದಿಗೆ ಕಿರಿಕಿರಿ ಮಾಡುತ್ತಿದ್ದಾರೆ. ಹೇಳಿದರೂ ಬದಲಾಗಿಲ್ಲ. ಕೂಡಲೇ ಅವರ ಮೇಲೆ ಕ್ರಮಕೈಗೊಳ್ಳಬೇಕು ಎಂದ ಸದಸ್ಯ ಮಹಾವೀರ ಜೈನ್ ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಅಧಿಕಾರಿ, ಕೇಂದ್ರಕ್ಕೆ ಭೇಟಿ ನೀಡಿ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದರು.‌

ಅಧ್ಯಕ್ಷ ಮಲ್ಲಪ್ಪ ಮಾತನಾಡಿ, ಮನಗುಂಡಿ ಹಾಗೂ ನರೇಂದ್ರ ಗ್ರಾಮದಲ್ಲಿ ಹೊಸ ಪ್ರಾಥಮಿಕ ಆರೋಗ್ಯ ಕೇಂದ್ರ ಪ್ರಾರಂಭಿಸಲು ಸರ್ಕಾರಕ್ಕೆ ಪತ್ರ ಬರೆಯುವಂತೆ  ಸೂಚಿಸಿದರು.

ಎರಡು ವರ್ಷಗಳ ಬೆಳೆ ಪರಿಹಾರ ಇನ್ನೂ ಬಂದಿಲ್ಲ. ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಕೃಷಿ, ಕಂದಾಯ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳ ಸಭೆ ನಡೆಸಬೇಕು ಎಂದು ಸದಸ್ಯರು ಆಗ್ರಹಿಸಿದರು. ಇದಕ್ಕೆ ಸಮ್ಮತಿಸಿದ ಅಧ್ಯಕ್ಷರು, ಜೂನ್ 15 ರಂದು ಸಭೆ ನಡೆಸಲಾಗುವುದು ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry