ಸಾಯ್ ಕೇಂದ್ರದಲ್ಲಿ ಲೈಂಗಿಕ ದೌರ್ಜನ್ಯ

7
ಅಸಭ್ಯ ಮೆಜೇಜ್ ಕಳುಹಿಸುತ್ತಿದ್ದ ಬೆಂಗಳೂರು ಕೇಂದ್ರದ ಲೆಕ್ಕಾಧಿಕಾರಿಗೆ ಕಡ್ಡಾಯ ನಿವೃತ್ತಿ ಶಿಕ್ಷೆ

ಸಾಯ್ ಕೇಂದ್ರದಲ್ಲಿ ಲೈಂಗಿಕ ದೌರ್ಜನ್ಯ

Published:
Updated:

ನವದೆಹಲಿ: ಲೈಂಗಿಕ ದೌರ್ಜನ್ಯ ಆರೋಪದಡಿ ಭಾರತ ಕ್ರೀಡಾ ಪ್ರಾಧಿಕಾರದ ತಮಿಳುನಾಡು ತರಬೇತಿ ಕೇಂದ್ರದ ಕೋಚ್ ಒಬ್ಬರನ್ನು ವಜಾ ಮಾಡಲಾಗಿದೆ. ಬೆಂಗಳೂರು ಕೇಂದ್ರದ ಲೆಕ್ಕಾಧಿಕಾರಿಯೊಬ್ಬರಿಗೆ ಕಡ್ಡಾಯ ನಿವೃತ್ತಿ ಪಡೆದುಕೊಳ್ಳಲು ಸೂಚಿಸಲಾಗಿದೆ.

ತಮಿಳುನಾಡು ಕೇಂದ್ರದ ಕೋಚ್‌ ಮೇಲೆ ಕ್ರೀಡಾಪಟುಗಳ ಭದ್ರತೆಗೆ ಸೂಕ್ತ ವ್ಯವಸ್ಥೆ ಮಾಡದೇ ಇರುವ ಆರೋಪವೂ ಅವರ ಮೇಲೆ ಇದೆ. ಕೇಂದ್ರ ಮತ್ತು ಕೋಚ್‌ ಹೆಸರನ್ನು ಪ್ರಾಧಿಕಾರ ಬಹಿರಂಗ ಮಾಡಲಿಲ್ಲ. ಮಧ್ಯಂತರ ತನಿಖೆಯಲ್ಲಿ ಆರೋಪ ಸಾಬೀತಾಗಿದೆ ಎಂದು ಹೇಳಲಾಗಿದೆ.

‘ಮಹಿಳೆ ಮತ್ತು ಮಕ್ಕಳ ಭದ್ರತೆಗೆ ಪ್ರಾಧಿಕಾರ ಹೆಚ್ಚು ಆದ್ಯತೆ ನೀಡುತ್ತದೆ. ಈ ವಿಷಯದಲ್ಲಿ ಬದ್ಧತೆ ತೋರಿಸಲು ವಿಫಲವಾಗಿರುವ ಕಾರಣ ಕೋಚ್ ಅವರನ್ನು ವಜಾ ಮಾಡಲಾಗಿದೆ’ ಎಂದು ಪ್ರಾಧಿಕಾರದ ಮಹಾನಿರ್ದೇಶಕ ನೀಲಂ ಕಪೂರ್ ತಿಳಿಸಿದ್ದಾರೆ.

ತಮಿಳುನಾಡು ಕೇಂದ್ರದ ಕೋಚ್‌ ಲೈಂಗಿಕವಾಗಿ ಸಹಕರಿಸುವಂತೆ ಕ್ರೀಡಾಪಟುಗಳನ್ನು ಒತ್ತಾಯಿಸುತ್ತಿದ್ದು ಬೆಂಗಳೂರು ಕೇಂದ್ರದ ಲೆಕ್ಕಾಧಿಕಾರಿ, ಮಹಿಳಾ ಕೋಚ್‌ಗೆ ಅಸಭ್ಯ ಸಂದೇಶಗಳನ್ನು ಕಳುಹಿಸುತ್ತಿದ್ದರು ಎನ್ನಲಾಗಿದೆ.

‘ಅರಿವು ಮೂಡಿಸುವ ಕಾರ್ಯಕ್ರಮ ಮತ್ತು ಸಿಬ್ಬಂದಿಯಲ್ಲಿ ಜಾಗೃತಿ ಮೂಡಿಸುವ ಕಾರ್ಯಗಳಿಗೆ ಸಾಯ್‌ ಆದ್ಯತೆ ನೀಡುತ್ತದೆ. ಇದರಲ್ಲಿ ಲೋಪ ಎಸಗುವವರನ್ನು ನಿರ್ದಾಕ್ಷಿಣ್ಯವಾಗಿ ಶಿಕ್ಷೆಗೆ ಗುರಿಪಡಿಸಲಾಗುತ್ತದೆ. ಗುಜರಾತ್ ಕೇಂದ್ರದ ಜೂನಿಯರ್‌ ಅಥ್ಲೀಟ್ ನೀಡಿದ ದೂರಿನ ಆಧಾರದಲ್ಲಿ ತನಿಖೆ ನಡೆಯುತ್ತಿದೆ’ ಎಂದು ನೀಲಂ ತಿಳಿಸಿದರು.

ಸೂಕ್ತ ಕ್ರಮಕ್ಕೆ ಆಗ್ರಹ: ಲೈಂಗಿಕ ದೌರ್ಜನ್ಯ ಎಸಗುವವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲು ಹಿಂಜರಿಯಬಾರದು ಎಂದು ಭಾರತ ಅಥ್ಲೆಟಿಕ್ ಫೆಡರೇಷನ್ ಅಧ್ಯಕ್ಷ ಆದಿಲ್‌ ಸುಮರಿವಾಲ ಆಗ್ರಹಿಸಿದ್ದಾರೆ.

‘ಇಂಥ ಪ್ರಕರಣಗಳು ವಿಶ್ವ ದಾದ್ಯಂತ ನಡೆಯುತ್ತಿವೆ. ಲೈಂಗಿಕ ದೌರ್ಜನ್ಯ ನಡೆಸಿದವರಿಗೆ ಅಮೆರಿಕದಲ್ಲಿ ಜೈಲುವಾಸ ಆಗಿದೆ. ತಮಿ ಳು ನಾಡು ಮತ್ತು ಬೆಂಗಳೂರು ಕೇಂದ್ರದಲ್ಲಿ ನಡೆದಿರುವ ಹಗರಣಗಳಿಗೆ ಸಂಬಂಧಿಸಿ ತಕ್ಷಣ ಕ್ರಮ ಕೈಗೊಂಡಿರುವ ಮಹಾನಿರ್ದೇಶಕರು ಅಭಿನಂದನಾರ್ಹರು ಎಂದು ಸುಮರಿವಾಲ ಹೇಳಿದ್ದಾರೆ.

ಪ್ರತಿಕ್ರಿಯೆಗೆ ನಿರಾಕರಣೆ: ಆರೋಪಗಳ ಕುರಿತು ಸಾಯ್‌ ಪ್ರಾದೇಶಿಕ ಕೇಂದ್ರದ (ಬೆಂಗಳೂರು) ನಿರ್ದೇಶಕ ಶ್ಯಾಮಸುಂದರ್‌ ಅವರಿಗೆ ‘ಪ್ರಜಾವಾಣಿ’ ಕರೆ ಮಾಡಿದಾಗ ಪ್ರತಿಕ್ರಿಯೆ ನೀಡಲು ನಿರಾಕ ರಿಸಿದರು. ಈ ವಿಷಯದ ಬಗ್ಗೆ ಮಾತನಾಡುವ ಸಮಯ ಇದಲ್ಲ. ಸದ್ಯ ಏನೂ ಹೇಳುವುದಿಲ್ಲ ಎಂದು ಅವರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry