ಸೋಮವಾರ, ಡಿಸೆಂಬರ್ 9, 2019
22 °C

ಆರ್ಥಿಕ ನೆರವಿಗೆ ಮೊರೆ: ಡ್ಯಾನ್ಸ್‌ ವಿಶ್ವಕಪ್‌ಗೆ ಬೆಳಗಾವಿ ಬಾಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆರ್ಥಿಕ ನೆರವಿಗೆ ಮೊರೆ: ಡ್ಯಾನ್ಸ್‌ ವಿಶ್ವಕಪ್‌ಗೆ ಬೆಳಗಾವಿ ಬಾಲೆ

ಬೆಳಗಾವಿ: ‘ಸ್ಪೇನ್‌ನ ಬಾರ್ಸಿಲೋನದಲ್ಲಿ ಜೂನ್‌ 22ರಿಂದ ನಡೆಯಲಿರುವ ಡ್ಯಾನ್ಸ್‌ ವಿಶ್ವಕಪ್‌ ಸ್ಪರ್ಧೆಯಲ್ಲಿ ಭಾಗವಹಿಸಲು ನಗರದ ವನಿತಾ ವಿದ್ಯಾಲಯದ 9ನೇ ತರಗತಿ ವಿದ್ಯಾರ್ಥಿನಿ ಪ್ರೇರಣಾ ಗೋನಬರೆ ಆಯ್ಕೆಯಾಗಿದ್ದಾರೆ’ ಎಂದು ಇಲ್ಲಿನ ಗಣೇಶಪುರದ ಎಂ–ಸ್ಟೈಲ್‌ ಡ್ಯಾನ್ಸ್‌ ಮತ್ತು ಫಿಟ್‌ನೆಸ್‌ ಅಕಾಡೆಮಿಯ ಮಹೇಶ ಜಾಧವ ತಿಳಿಸಿದರು.

‘ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಸ್ಪೇನ್‌ಗೆ ತೆರಳುವುದಕ್ಕೆ ₹ 6 ಲಕ್ಷ ಬೇಕಾಗುತ್ತದೆ. ಈ ಪ್ರತಿಭೆಗೆ ಆರ್ಥಿಕ ತೊಂದರೆ ಉಂಟಾಗಿದ್ದು, ದಾನಿಗಳು ನೆರವಾಗಬೇಕು’ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಕೋರಿದರು.

‘ಅರ್ಹತಾ ಸುತ್ತಿನ ಸ್ಪರ್ಧೆಗಳು ಬೆಂಗಳೂರಿನಲ್ಲಿ ನಡೆದಿದ್ದವು. ಅಕಾಡೆಮಿಯ ಆರು ವಿದ್ಯಾರ್ಥಿಗಳು ಅಂತರರಾಷ್ಟ್ರೀಯ ಮಟ್ಟದ ಆಯ್ಕೆಯಾಗಿದ್ದರು. ಆದರೆ, ಹಣಕಾಸು ತೊಂದರೆಯಿಂದಾಗಿ ಅವರು ವೀಸಾ, ಪಾಸ್‌ಪೋರ್ಟ್‌ ಪಡೆಯುವ ಹಂತದಲ್ಲೇ ಹಿಂದೆ ಸರಿದರು. ಪ್ರೇರಣಾಗೆ ಅಲ್ಲಿಗೆ ಸ್ಪರ್ಧಿಸಿ, ಪ್ರತಿಭೆ ಪ್ರದರ್ಶಿಸುವ ಬಯಕೆ ಇದೆ. ಇದಕ್ಕಾಗಿ ಆಕೆಗೆ ನಾವು ನೆರವಾಗುತ್ತಿದ್ದೇವೆ. ಕುಟುಂಬದವರು ಎಲ್ಲ ಹಣವನ್ನೂ ಹೊಂದಿಸುವುದಕ್ಕೆ ಸಾಧ್ಯವಾಗುತ್ತಿಲ್ಲ’ ಎಂದು ಹೇಳಿದರು.

‘ಅಲ್ಲಿ ನಡೆಯುವ ಸ್ಪರ್ಧೆಯ ಶೋ ಡ್ಯಾನ್ಸ್‌ ವಿಭಾಗದಲ್ಲಿ ಆಕೆ ಭಾಗವಹಿಸಲಿದ್ದಾರೆ. ಗೆದ್ದರೆ ನಗದು ಬಹುಮಾನವೇನೂ ಇಲ್ಲ. ಚಿನ್ನ, ಬೆಳ್ಳಿ ಹಾಗೂ ಕಂಚಿನ ಪದಕ ನೀಡಲಾಗುತ್ತದೆ. ವಿದೇಶದ ಸ್ಪರ್ಧೆಯಲ್ಲಿ ಬೆಳಗಾವಿಯ ಸ್ಪರ್ಧಿಯೊಬ್ಬರು ಭಾರತ ದೇಶವನ್ನು ಪ್ರತಿನಿಧಿಸುವುದು ಹೆಮ್ಮೆಯ ಸಂಗತಿಯಾಗುತ್ತದೆ’ ಎಂದು ಪ್ರತಿಕ್ರಿಯಿಸಿದರು.

‘ಕೆಲವು ಉದ್ಯಮಿಗಳು ಹಾಗೂ ರಾಜಕಾರಣಿಗಳನ್ನು ಸಂಪರ್ಕಿಸಿದೆವು. ಅವರಿಂದ ಸ್ಪಂದನೆ ದೊರೆಯಲಿಲ್ಲ. ದಾನಿಗಳು ಪ್ರಾಯೋಜಕತ್ವ ನೀಡಿ ಪ್ರೋತ್ಸಾಹಿಸಬೇಕು’ ಎಂದರು.

‘ಎರಡು ವರ್ಷದಿಂದ ನೃತ್ಯ ಕಲಿಯುತ್ತಿದ್ದೇನೆ. ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಆಸೆ ಇದೆ. ಆರ್ಥಿಕ ನೆರವು ದೊರೆತರೆ ಹೋಗುತ್ತೇನೆ’ ಎಂದು ಪ್ರೇರಣಾ ಹೇಳಿದರು.

ಆಸಕ್ತರು ಹೆಚ್ಚಿನ ಮಾಹಿತಿಗೆ ಮೊ: 81056 35428 / 97412 60968 ಸಂಪರ್ಕಿಸಬಹುದು.

ಪ್ರತಿಕ್ರಿಯಿಸಿ (+)