ಕಾಂಗ್ರೆಸ್‌ ‘ಆಯ್ಕೆ’ಯಲ್ಲಿ ಹಲವು ಲೆಕ್ಕಾಚಾರ!

7
ಹಿರಿಯರ ‘ಕೈ’ ತಪ್ಪಿದ ಸಚಿವ ಸ್ಥಾನ; ರಾಜಕೀಯ ಪಡಸಾಲೆಯಲ್ಲಿ ಗಂಭಿರ ಚರ್ಚೆ

ಕಾಂಗ್ರೆಸ್‌ ‘ಆಯ್ಕೆ’ಯಲ್ಲಿ ಹಲವು ಲೆಕ್ಕಾಚಾರ!

Published:
Updated:
ಕಾಂಗ್ರೆಸ್‌ ‘ಆಯ್ಕೆ’ಯಲ್ಲಿ ಹಲವು ಲೆಕ್ಕಾಚಾರ!

ಬೆಂಗಳೂರು: ಹಿರಿಯ ಶಾಸಕರಾದ ಎಂ.ಬಿ. ಪಾಟೀಲ, ಎಚ್‌.ಕೆ. ಪಾಟೀಲ, ರಾಮಲಿಂಗಾರೆಡ್ಡಿ, ರೋಷನ್‌ ಬೇಗ್‌, ಈಶ್ವರ ಖಂಡ್ರೆ, ಶಾಮನೂರು ಶಿವಶಂಕರಪ್ಪ ಅವರಿಗೆ ಸಚಿವ ಸ್ಥಾನ ಕೈ ತಪ್ಪಲು ಕಾರಣವೇನು ಎಂಬ ಜಿಜ್ಞಾಸೆ ಕಾಂಗ್ರೆಸ್‌ ವಲಯದಲ್ಲಷ್ಟೇ ಅಲ್ಲ, ಇಡೀ ರಾಜಕೀಯ ಪಡಸಾಲೆಯಲ್ಲೂ ಗಂಭೀರ ಚರ್ಚೆಗೆ ಕಾರಣವಾಗಿದೆ.

ಆರ್‌.ವಿ. ದೇಶಪಾಂಡೆ, ಡಿ.ಕೆ. ಶಿವಕುಮಾರ್, ಕೆ.ಜೆ. ಜಾರ್ಜ್‌ ಅವರನ್ನು ಬಿಟ್ಟು ಉಳಿದಂತೆ ಹೊಸಬರಿಗೆ ಕಾಂಗ್ರೆಸ್‌ ಅವಕಾಶ ನೀಡಿದೆ. ಈ ‘ಆಯ್ಕೆ’ಗಳ ಹಿಂದೆ, ಕೆಲವು ಜಿಲ್ಲೆಗಳಲ್ಲಿ ಪಕ್ಷದ ಹೀನಾಯ ಸೋಲು, ಭವಿಷ್ಯದಲ್ಲಿ ಪಕ್ಷ ಸಂಘಟನೆ ಮತ್ತು 2019ರ ಲೋಕಸಭೆ ಚುನಾವಣೆ ಸೇರಿ ಹಲವು ‘ಲೆಕ್ಕಾಚಾರ’ ಗಳು ಅಡಗಿವೆ. ಎಲ್ಲ ಅಂಶಗಳನ್ನು ಅಳೆದು ತೂಗಿ, ಪಕ್ಷದ ವರಿಷ್ಠರು ಸಚಿವ ಸ್ಥಾನಗಳನ್ನು ಹಂಚಿದ್ದಾರೆ ಎನ್ನುವುದು ಕಾಂಗ್ರೆಸ್‌ ಮೂಲಗಳ ವಿವರಣೆ.

ಲಿಂಗಾಯತ ಮತ್ತು ವೀರಶೈವ ಬಣಗಳಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿರುವ ಎಂ.ಬಿ. ಪಾಟೀಲ, ಶಾಮನೂರ ಶಿವಶಂಕರಪ್ಪ, ಈಶ್ವರ ಖಂಡ್ರೆ ಸಚಿವ ಸ್ಥಾನ ಸಿಕ್ಕೇ ಸಿಗುತ್ತದೆ ಎಂಬ ಭರವಸೆ ಹೊಂದಿದ್ದರು. ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಮಾನ್ಯತೆ ಹೋರಾಟದ ನೇತೃತ್ವ ವಹಿಸಿದ್ದ ಪಾಟೀಲರು, ಉತ್ತರ ಕರ್ನಾಟಕದಲ್ಲಿ ಪ್ರಭಾವಿ ಸಚಿವರ ಸೋಲಿನ ನಡುವೆಯೂ ಭಾರಿ ಅಂತರದಿಂದ ಗೆಲುವು ಸಾಧಿಸಿರುವ ಕಾಂಗ್ರೆಸ್‌ ನಾಯಕ. ‘ಧರ್ಮ’ ಹೋರಾಟಕ್ಕೆ ಸಾಥ್‌ ನೀಡಿದ್ದ ಬಸವರಾಜ ರಾಯರಡ್ಡಿ, ಶರಣಪ್ರಕಾಶ ಪಾಟೀಲ, ವಿನಯ ಕುಲಕರ್ಣಿ ಸೋಲು ಅನುಭವಿಸಿದರು.

ಪಕ್ಷದ ಹೈಕಮಾಂಡ್‌ ಜೊತೆ ನೇರ ಸಂಪರ್ಕ ಹೊಂದಿರುವ ಪಾಟೀಲರಿಗೆ ಸಮ್ಮಿಶ್ರ ಸರ್ಕಾರದಲ್ಲಿ ಜಲ ಸಂಪನ್ಮೂಲ ಖಾತೆ ಮತ್ತೆ  ಸಿಗುತ್ತದೆ ಎಂಬ ಬಲವಾದ ನಂಬಿಕೆ ಇತ್ತು. ಈ ಮಧ್ಯೆ, ಅವರನ್ನು ಕೆ‍ಪಿಸಿಸಿ ಅಧ್ಯಕ್ಷ ಸ್ಥಾನ ಒಪ್ಪಿಕೊಳ್ಳುವಂತೆಯೂ ಕೇಳಲಾಗಿತ್ತು. ಆದರೆ, ಅದನ್ನು ಅವರು ನಿರಾಕರಿಸಿದ್ದರು. ಸಚಿವ ಸ್ಥಾನದ ಆಕಾಂಕ್ಷಿಗಳ ಸಂಖ್ಯೆ ಮತ್ತು ಪೈಪೋಟಿ ಹೆಚ್ಚುತ್ತಿದ್ದಂತೆ, ಪಾಟೀಲರ ಬಗಲಿನ ವೈರಿ ಎಂದೇ ಪರಿಗಣಿತವಾಗಿರುವ ಬಸವನ ಬಾಗೇವಾಡಿ ಶಾಸಕ ಶಿವಾನಂದ ಪಾಟೀಲರು ತಮಗೆ ಸಚಿವ ಸ್ಥಾನ ನೀಡದಿದ್ದರೆ ರಾಜೀನಾಮೆ ನೀಡುವುದಾಗಿ ಬೆದರಿಕೆ ಒಡ್ಡಿದ್ದರು ಎನ್ನಲಾಗಿದೆ.

ಶಿವಾನಂದ ಪಾಟೀಲರ ಬೆದರಿಕೆಗೆ ಬಗ್ಗಿ ಅವರಿಗೆ ಸಚಿವ ಸ್ಥಾನ ನೀಡಿರುವ ಹೈಕಮಾಂಡ್‌, ಪಾಟೀಲರನ್ನು ಕೈ ಬಿಟ್ಟಿರುವುದು ಅಚ್ಚರಿ ಮೂಡಿಸಿದೆ. ‘ಧರ್ಮ’ ಹೋರಾಟ ಮತ್ತು ಅದರ ಫಲವಾಗಿ ಹಲವು ಕ್ಷೇತ್ರಗಳನ್ನು ಪಕ್ಷ ಕಳೆದುಕೊಂಡದ್ದು ಪಾಟೀಲರ ಪಾಲಿಗೆ ಮುಳುವಾಯಿತು ಎಂದೇ ವಿಶ್ಲೇಷಿಸಲಾಗುತ್ತಿದೆ.

ಲಿಂಗಾಯತರಾದ ಪಾಟೀಲರಿಗೆ ‘ಸ್ಥಾನ’ ಕಲ್ಪಿಸಿದರೆ ವೀರಶೈವರಾದ ಶಾಮನೂರ, ಖಂಡ್ರೆ ನೇತೃತ್ವದ ಬಣ ಮುನಿಸಿಕೊಳ್ಳಬಹುದು ಎಂಬ ಆತಂಕವೂ ಕಾಂಗ್ರೆಸ್‌ನಲ್ಲಿ ವ್ಯಕ್ತವಾಗಿತ್ತು. ಸಂಪುಟ ಸೇರುವವರ ಪಟ್ಟಿಯಲ್ಲಿ ಹೆಸರು ಇಲ್ಲ ಎಂಬ ಮುನ್ಸೂಚನೆ ಸಿಗುತ್ತಲೇ ಎಸ್‌.ಆರ್‌. ಪಾಟೀಲ ಪಕ್ಷದ ಕಾರ್ಯಾಧ್ಯಕ್ಷ ಸ್ಥಾನ ತ್ಯಜಿಸಿರುವುದು ಈ ಎಲ್ಲ ಬೆಳವಣಿಗಳಿಗೆ ಮೂಲವಾಗಿತ್ತು.

ಕಾಂಗ್ರೆಸ್‌ ಸೇರಿದ ಬಳಿಕ ಜೆಡಿಎಸ್‌ ವರಿಷ್ಠ ದೇವೇಗೌಡ ಮತ್ತು ಕುಮಾರಸ್ವಾಮಿ ವಿರುದ್ಧ ಧ್ವನಿ ಎತ್ತುತ್ತಲೇ ಬಂದಿರುವ ಜಮೀರ್‌ ಅಹ್ಮದ್‌ ಖಾನ್‌ಗೆ ಸಂಪುಟದಲ್ಲಿ ಸ್ಥಾನ ಸಿಕ್ಕಿರುವುದು ಹಲವರ ಹುಬ್ಬೇರುವಂತೆ ಮಾಡಿದೆ. ಈ ಬಾರಿಯ ಚುನಾವಣೆಯಲ್ಲಿ ಮುಸ್ಲಿಂ ಮತಗಳು ಕಾಂಗ್ರೆಸ್‌ ಕಡೆ ವಾಲುವಲ್ಲಿ ಜಮೀರ್‌ ನಿರ್ಣಾಯಕ ಪಾತ್ರ ವಹಿಸಿದ್ದರು. ಕೆಲವು ಕ್ಷೇತ್ರಗಳಲ್ಲಿ ಅವರ ‘ಪ್ರಭಾವ’ದಿಂದ ಪಕ್ಷ ಗೆದ್ದಿದೆ. ಅಲ್ಲದೆ. ಪಕ್ಷಕ್ಕೆ ಆರ್ಥಿಕವಾಗಿಯೂ ಅವರು ‘ಬಲ’ ತುಂಬಿದ್ದರು. ಸಿದ್ದರಾಮಯ್ಯ ಕೂಡಾ ಜಮೀರ್‌ ಪರವಾಗಿ ವರಿಷ್ಠರ ಬಳಿ ಬ್ಯಾಟ್‌ ಬೀಸಿದ್ದರು. ಈ ಎಲ್ಲ ಕಾರಣಗಳು ಸಚಿವಾಕಾಂಕ್ಷಿಗಳಾಗಿದ್ದ ರೋಷನ್‌ ಬೇಗ್, ತನ್ವೀರ್ ಸೇಠ್, ರಹೀಂಖಾನ್ ಅವರ ಆಸೆಗೆ ತಣ್ಣೀರೆರಚಿತು ಎಂದು ವ್ಯಾಖ್ಯಾನಿಸಲಾಗುತ್ತಿದೆ.

ಹಿರಿಯ ಶಾಸಕರಾದ ಎಚ್‌.ಕೆ. ಪಾಟೀಲರಿಗೆ ಸಂಪುಟದಲ್ಲಿ ಸ್ಥಾನ ಖಚಿತ ಎಂದೇ ಹೇಳಲಾಗಿತ್ತು. ಅವರನ್ನೂ ಸೇರಿ ಹಿರಿಯ ಶಾಸಕರನ್ನು ಹೊರಗಿಟ್ಟಿರುವ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌, ಆ ಮೂಲಕ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವಂತೆ ಪರೋಕ್ಷವಾಗಿ ಸೂಚಿಸಿದ್ದಾರೆ.

‘ಹಿರಿಯರಾದವರು ಸಿದ್ದರಾಮಯ್ಯ ಸರ್ಕಾರದಲ್ಲಿ ಪೂರ್ಣಾವಧಿ ಸಚಿವರಾಗಿದ್ದರೂ ಪಕ್ಷದಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿಲ್ಲ ಎಂಬೆಲ್ಲಾ ಅಂಶಗಳನ್ನು ನಾಯಕರು ಪರಿಗಣಿಸಿದ್ದರು’ ಎಂದೂ ಪಕ್ಷದ ಮೂಲಗಳು ವಿಶ್ಲೇಷಿಸಿವೆ.

*

‘ಸ್ಥಾನ’ ತಪ್ಪಲು ಸ್ಥಳೀಯರ ಸ್ವಾರ್ಥ ಕಾರಣ! 

‘ಸಿದ್ದರಾಮಯ್ಯ ಅವರ ‘ದೂರ್ತ ರಾಜಕಾರಣ’, ಜಿ. ಪರಮೇಶ್ವರ ಅವರ ‘ಅಸಮರ್ಥತೆ’, ಡಿ.ಕೆ. ಶಿವಕುಮಾರ್‌ ರಾಜ‘ತಾಂತ್ರಿಕ’ ಮಾತು ತಮಗೆ ಸಚಿವ ಸ್ಥಾನ ಕೈ ತಪ್ಪಲು ಕಾರಣ. ಈ ನಾಯಕರು ಸ್ವಾರ್ಥಕ್ಕಾಗಿ ಪಕ್ಷವನ್ನೇ ಬಲಿಕೊಡಲು ಹೊರಟಿದ್ದಾರೆ’ ಎಂದು ಹಿರಿಯ ಸಚಿವರೊಬ್ಬರು, ತಮ್ಮ ಆಪ್ತರ ಬಳಿ ಕಿಡಿಕಾರಿದ್ದಾರೆ.

‘ಮೂಲ ಕಾಂಗ್ರೆಸ್ಸಿಗರಲ್ಲದ ಆರು ಶಾಸಕರಿಗೆ (ಆರ್‌.ವಿ. ದೇಶಪಾಂಡೆ, ಜಮೀರ್‌ ಅಹ್ಮದ್‌, ಶಿವಾನಂದ ಪಾಟೀಲ, ವೆಂಕಟರಮಣಪ್ಪ, ಪುಟ್ಟರಂಗಶೆಟ್ಟಿ, ಆರ್‌. ಶಂಕರ್‌) ಮಣೆ ಹಾಕಿರುವ ಈ ನಾಯಕರು, ನಿಷ್ಠರನ್ನು ಕಡೆಗಣಿಸಿದ್ದಾರೆ. ಹೈಕಮಾಂಡ್‌ ತಮ್ಮ ಹೆಸರಿಗೆ ಹಸಿರು ನಿಶಾನೆ ತೋರಿದ್ದರೂ ಸ್ಥಳೀಯ ನಾಯಕರು ಅಡ್ಡಗಾಲು ಹಾಕಿದ್ದಾರೆ. ಇದನ್ನು ಯಾವುದೇ ಕಾರಣಕ್ಕೆ ಸಹಿಸಲು ಸಾಧ್ಯವಿಲ್ಲ’ ಎಂದು ಸಡ್ಡು ಹೊಡೆಯಲು ತೀರ್ಮಾನಿಸಿದ್ದಾರೆ ಎಂದೂ ಗೊತ್ತಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry