ಸೋಮವಾರ, ಜುಲೈ 4, 2022
21 °C

‘ಮಾಡೆಲಿಂಗ್‌ನಲ್ಲಿ ಬೆಳಗುವಾಸೆ’

ಅಸ್ಮಿತಾ Updated:

ಅಕ್ಷರ ಗಾತ್ರ : | |

‘ಮಾಡೆಲಿಂಗ್‌ನಲ್ಲಿ ಬೆಳಗುವಾಸೆ’

ರೂಪದರ್ಶಿ ಆಗಬೇಕೆನ್ನುವ ಮೋಹದಿಂದಾಗಿ ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟವರು ಬೆಂಗಳೂರಿನ ದೀಪಾ ಎಸ್‌. ಬಟ್ಟಲು ಕಂಗಳು, ಆರೋಗ್ಯಕರ ಕೂದಲು, ಸಪೂರ ದೇಹವನ್ನು ವರವಾಗಿ ಪಡೆದಿರುವ ದೀಪಾ, ವಿದ್ಯಾರ್ಥಿ ದೆಸೆಯಲ್ಲೇ ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟವರು. ಬಾಲ್ಯದಲ್ಲಿಯೇ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಮುಂಚೂಣಿಯಲ್ಲಿದ್ದ ಅವರಿಗೆ ತಾಯಿಯೇ ಸ್ಫೂರ್ತಿ.

ನಿರೂಪಣೆಯಲ್ಲೂ ತಮ್ಮದೇ ಛಾಪು ಮೂಡಿಸಿರುವ ದೀಪಾ, ಓದಿನ ಕಾರಣಕ್ಕಾಗಿ ಕಿರುತೆರೆಯಲ್ಲಿ ಬರುತ್ತಿರುವ ಅವಕಾಶಗಳನ್ನು ಸದ್ಯಕ್ಕೆ ಬದಿಗಿರಿಸಿದ್ದಾರಂತೆ. ಮಾಡೆಲಿಂಗ್, ನಟನೆಯಷ್ಟೇ ಓದು ಕೂಡಾ ಮುಖ್ಯ ಎನ್ನುವ ಅವರು ಬೆಂಗಳೂರಿನ ಆರ್‌.ಸಿ. ಕಾಲೇಜಿನಲ್ಲಿ ಅಂತಿಮ ಬಿ.ಕಾಂ ಓದುತ್ತಿದ್ದಾರೆ. ಸಮಯ ಸಿಗಲಿ, ಬಿಡಲಿ ಎಂ.ಬಿ.ಎ. ಮಾಡಿಯೇ ತೀರುತ್ತೇನೆ ಎನ್ನುವ ವಿಶ್ವಾಸ ಅವರದ್ದು.

ದಾವಣಗೆರೆಯಲ್ಲಿ ಹುಟ್ಟಿ ಬೆಳೆದ ದೀಪಾ ನೆಲೆಸಿರುವುದು ಬೆಂಗಳೂರಿನಲ್ಲಿ. ಮನೆಯಲ್ಲಿ ಅಮ್ಮ ಮತ್ತು ಸಹೋದರಿಯ ನಿರಂತರ ಪ್ರೋತ್ಸಾಹವೇ ನನಗೆ ಶ್ರೀರಕ್ಷೆ ಎನ್ನುವ ಅವರು, ತಾಯಿಯ ಆಸೆಯಂತೆ ನಟನಾ ಕ್ಷೇತ್ರದಲ್ಲೂ ಪದಾರ್ಪಣೆ ಮಾಡಿದ್ದಾರೆ. ಇನ್ನೂ ಬಿಡುಗಡೆಯಾಗದ ‘ಮುನ್ನಡೆ’ ಸಿನಿಮಾದಲ್ಲಿ ಅವರು ಹೊಸ ನಟ ಧನಂಜಯ್‌ಗೆ ನಾಯಕಿಯಾಗಿದ್ದಾರೆ.

‘ರಿಯಲ್ ಟಿವಿ’ಯಲ್ಲಿ ನಿರೂಪಕಿಯಾಗಿ ಕಾಣಿಸಿಕೊಂಡಿರುವ ದೀಪಾ, 50ಕ್ಕೂ ಹೆಚ್ಚು ವೇದಿಕೆಗಳಲ್ಲಿ ಬೆಕ್ಕಿನ ನಡಿಗೆ ಪ್ರದರ್ಶಿಸಿದ್ದಾರೆ. 2017ರಲ್ಲಿ ನಡೆದ ‘ಮಿಸ್ ಸೌತ್ ಇಂಡಿಯಾ ಕ್ವೀನ್‌’ನಲ್ಲಿ ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದ ಅವರು ‘ಮಿಸ್ ಬ್ಯೂಟಿಫುಲ್ ಐಸ್‌‘, ರಿಲಯನ್ಸ್‌ ಜ್ಯುವೆಲ್ಸ್‌ ಮಿಸ್ ಇಂಡಿಯಾ ಫೈನಲಿಸ್ಟ್‌ ಸುತ್ತಿಗೂ ಆಯ್ಕೆಯಾಗಿದ್ದಾರೆ.

ಹಲವು ಕ್ಯಾಲೆಂಡರ್ ಶೂಟ್‌ಗಳಿಗೆ ರೂಪದರ್ಶಿಯಾಗಿ ಕೆಲಸ ಮಾಡಿರುವ ಅವರು ಬೆಂಗಳೂರು ಯೂತ್ ಅವಾರ್ಡ್‌ ಪ್ರಶಸ್ತಿಗೂ ಭಾಜನರಾಗಿದ್ದಾರೆ. ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆದ ‘ರುಚಿ ಸಂತೆ’ ಮತ್ತು ಮೈಸೂರು ಯುವ ದಸರಾದಲ್ಲೂ ರ‍್ಯಾಂಪ್ ಮೇಲೆ ಹೆಜ್ಜೆ ಹಾಕಿದ್ದಾರೆ. ಪ್ರೇಮ್ ಸುಂದರ್, ದರ್ಶನ್ ರಾವ್ ಅವರ ಫ್ಯಾಷನ್ ಫೋಟೊಗ್ರಫಿಗೆ ರೂಪದರ್ಶಿ, ಫಾಲ್ಗುಣಿ ಗೌಡ, ಮೋಹನ ಗೌಡ ಮತ್ತು ಸೌಂದರ್ಯ ಗೌಡ ಅವರ ಡಿಸೈನರ್ ವಸ್ತ್ರಗಳಿಗೆ ರೂಪದರ್ಶಿಯಾಗಿಯೂ ಕಾಣಿಸಿಕೊಂಡಿದ್ದಾರೆ.

ನೃತ್ಯದ ಕಡುಮೋಹಿಯಾಗಿರುವ ದೀಪಾ ರೂಪದರ್ಶಿಗೆ ಅಗತ್ಯವಾಗಿರುವ ಡಯೆಟ್ ಮತ್ತು ಫಿಟ್‌ನೆಸ್ ಬಗ್ಗೆಯೂ ಅಪಾರ ಕಾಳಜಿ ವಹಿಸುತ್ತಾರೆ. ನಿತ್ಯವೂ ಒಂದು ತಾಸು ಜಿಮ್‌ನಲ್ಲಿ ಬೆವರು ಹರಿಸುವ ಅವರು ತ್ವಚೆಯ ಆರೋಗ್ಯ ಕಾಪಾಡಿಕೊಳ್ಳಲು ನೀರು ಮತ್ತು ಹಣ್ಣಿನ ರಸ ಸೇವಿಸುತ್ತಾರೆ. ಅಮ್ಮ ಮಾಡಿದ ಅಡುಗೆಯನ್ನು ಇಷ್ಟಪಡುವ ದೀಪಾ ಹೊರಗಿನ ಜಂಕ್ ಆಹಾರಗಳಿಗೆ ಆದ್ಯತೆ ನೀಡುವುದಿಲ್ಲ. ಆದರೆ, ಇಷ್ಟದ ಐಸ್‌ಕ್ರೀಂ ಮತ್ತು ಹಾಟ್ ಚಾಕಲೇಟ್ ಅನ್ನು ವಾರಕ್ಕೊಮ್ಮೆ ತಪ್ಪದೇ ತಿನ್ನುತ್ತಾರಂತೆ. ಅಂದು ಯಾವ ಪಥ್ಯವನ್ನೂ ಮಾಡುವುದಿಲ್ಲ ಎನ್ನುತ್ತಾರೆ ಅವರು.

ಸಿನಿಮಾಗಳಲ್ಲಿ ಕಾಲೇಜು ಹುಡುಗಿ, ಗಲಾಟೆ ಹುಡುಗಿ ಪಾತ್ರ ಸಿಕ್ಕರೆ ಮಾಡುವಾಸೆ ಎನ್ನುವ ಅವರಿಗೆ ಕೆಂಪು ಮತ್ತು ಕಪ್ಪು ಬಣ್ಣಗಳೆಂದರೆ ಇಷ್ಟವಂತೆ. ಸಮಯ ಸಿಕ್ಕಾಗ ಸಾಹಿತ್ಯ ಕೃತಿಗಳನ್ನು ಓದುವ ದೀಪಾ ಜೀವನದಲ್ಲಿ ಎಷ್ಟೇ ಕಷ್ಟ ಬಂದರೂ ಅದನ್ನು ಸವಾಲಾಗಿ ಸ್ವೀಕರಿಸಿ ಎದುರಿಸುತ್ತೇನೆ ಎಂದು ಮುಗುಳುನಗೆ ಚೆಲ್ಲುತ್ತಾರೆ.

**

ವಯಸ್ಸು: 21

ಎತ್ತರ: 5.5

ಸುತ್ತಳತೆ: 32–25–32

ಓದು: ಅಂತಿಮ ವರ್ಷದ ಬಿ.ಕಾಂ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.