ಕಲಬುರಗಿ: ರಾರಾಜಿಸಿದ ಅಂಬಿಗರ ಚೌಡಯ್ಯ ಚಿತ್ರವುಳ್ಳ ಕೇಸರಿ ಬಾವುಟಗಳು. ಮಾರ್ದನಿಸಿದ ಡಿಜೆ ಸದ್ದು. ಮೊಳಗಿದ ‘ಅಂಬಿಗರ ಚೌಡಯ್ಯ’ ಪರ ಘೋಷಣೆಗಳು. ಚೌಡಯ್ಯ ಪ್ರತಿಮೆ, ವಚನಗಳಿಗೆ ಪುಷ್ಪವೃಷ್ಟಿಗೈದ ಹೆಲಿಕಾಪ್ಟರ್. ಒಂದೆಡೆ ಹುಲಿ ಕುಣಿತ, ಮತ್ತೊಂದೆಡೆ ಒಂಟೆ–ಕುದುರೆಗಳ ಸವಾರಿ. ಜೊತೆಗೆ ಡೋಲು–ತಾಷಾ ವಾದನ, ಡೊಳ್ಳಿನ ನಿನಾದ...

ನಗರದಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಅವರ 906ನೇ ಜಯಂತ್ಯುತ್ಸವದಲ್ಲಿ ಬುಧವಾರ ಕಂಡ ವೈಭವದ ನೋಟಗಳಿವು.

ಕೋಲಿ– ಕಬ್ಬಲಿಗ ಸಮುದಾಯದವರು ದಿನವಿಡೀ ಜಯಂತ್ಯುತ್ಸವದ ಸಂಭ್ರಮದಲ್ಲಿ ಮಿಂದೆದ್ದರು. ಯುವಕರು ಬೆಳಿಗ್ಗೆಯಿಂದಲೇ ಬೈಕ್ಗಳ ಕಿವಿ ಹಿಂಡುತ್ತ ಚೌಡಯ್ಯರ ಬಾವುಟಗಳೊಂದಿಗೆ ನಗರದ ಬೀದಿಗಳು, ವೃತ್ತಗಳಲ್ಲಿ ಸುತ್ತಾಡಿದರು. ಮಧ್ಯಾಹ್ನದ ಹೊತ್ತಿಗೆ ನಗರದ ನಗರೇಶ್ವರ ಶಾಲೆಯಿಂದ ಚೌಡಯ್ಯರ ಪ್ರತಿಮೆ, ಅವರ ವಚನಗಳ ಕಟ್ಟುಗಳ ಮೆರವಣಿಗೆ ಶುರುವಾಯಿತು.

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ, ಜಿಲ್ಲಾ ಪಂಚಾಯಿತಿಯಿಂದ ಹಮ್ಮಿಕೊಂಡಿದ್ದ ಮೆರವಣಿಗೆಗೆ ಗಣ್ಯರು ಚಾಲನೆ ನೀಡಿದರು. ಅಲ್ಲಿಂದ ಹೊರಟ ಮೆರವಣಿಗೆಗೆ ಕರಾವಳಿಯ ಹುಲಿ ಹೆಜ್ಜೆ ಕುಣಿತ, ಪುರುಷರ ಹಾಗೂ ಮಹಿಳಾ ಕಲಾವಿದರಿಂದ ಡೊಳ್ಳು ವಾದನ, ಡೋಲು–ತಾಷಾ ನಿನಾದ ಜೋಶ್ ತುಂಬಿದವು.

ಮಹಿಳೆಯರು ಪೂರ್ಣಕುಂಭ ಹೊತ್ತು, ಸಾಂಪ್ರದಾಯಿಕ ಕುಸುರಿಯ ಛತ್ರಿಗಳನ್ನು ಹಿಡಿದು ಸಾಗಿದರು. ನಾಲ್ಕು ಒಂಟೆಗಳು, ಆರು ಕುದುರೆಗಳು, ನಾಲ್ಕು ಗಾರುಡಿ ಗೊಂಬೆಗಳು ಮೆರವಣಿಗೆ ಕಳೆ ಹೆಚ್ಚಿಸಿದ್ದವು.

ದೋಣಿಯಲ್ಲಿ ಹುಟ್ಟು ಹಿಡಿದು ನಿಂತ ಚೌಡಯ್ಯ ಮೂರ್ತಿ, ನಾವೆಯಲ್ಲಿ ಚೌಡಯ್ಯರ ವಚನಗಳ ಕಟ್ಟುಗಳ ಹೊತ್ತ ರಥಗಳ ಮೆರವಣಿಗೆಯು ಎಪಿಎಂಸಿ ದಾಟಿ ಚೌಕ ವೃತ್ತಕ್ಕೆ ಬಂದಾಗ ಸಮುದಾಯದವರು ಅವುಗಳಿಗೆ ಹೆಲಿಕಾಪ್ಟರ್ನಿಂದ ಪುಷ್ಪವೃಷ್ಟಿ ಮಾಡಿಸಿದರು. ಹೆಲಿಕಾಪ್ಟರ್ ಮೂರ್ನಾಲ್ಕೂ ಸಲ ಗುಲಾಬಿ ಪಕಳೆಗಳನ್ನು ನಭದಿಂದ ನೆಲದತ್ತ ಸುರಿಯಿತು. ಈ ವೇಳೆ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಜನರ ಖುಷಿಗೆ ಪಾರವೇ ಇರಲಿಲ್ಲ.

ಡಾ.ಎಸ್.ಎಂ. ಪಂಡಿತ ರಂಗಮಂದಿರದ ತನಕ ಸಾಗಿ ಬಂದ ಮೆರವಣಿಗೆಯಲ್ಲಿ ಯುವಕರು ತಲೆ ಮೇಲೆ ಕೇಸರಿ ಟೊಪ್ಪಿಗೆ, ಕೈಯಲ್ಲಿ ಚೌಡಯ್ಯ ಚಿತ್ರವುಳ್ಳ ಕೇಸರಿ ಬಾವುಟ ಬೀಸಿ, ಕಿವಿಗಡಚ್ಚಿಕ್ಕುವಂತೆ ಮೊಳಗುತ್ತಿದ್ದ ಡಿಜೆ ಸದ್ದಿಗೆ ಹೆಜ್ಜೆಹಾಕಿ ಸಂಭ್ರಮಿಸಿದರು.

ಬಳಿಕ ಡಾ.ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಜಿಲ್ಲಾಡಳಿತದಿಂದ ವೇದಿಕೆ ಕಾರ್ಯಕ್ರಮ ನಡೆಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕಿ ಜಗಗದೀಶ್ವರಿ ನಾಸಿ ಸ್ವಾಗತಿಸಿದರು. ಶಾಸಕ ಅಲ್ಲಮಪ್ರಭು ಪಾಟೀಲ ಅಧ್ಯಕ್ಷತೆ ವಹಿಸಿದ್ದರು.

ಬಸವರಾಜ ಬೂದಿಹಾಳ ಮಾತನಾಡಿದರು. ಜಿಲ್ಲಾ ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ಜಯಪ್ರಕಾಶ ಟಿ.ಕಮಕನೂರ, ವಿಧಾನ ಪರಿಷತ್ ಸದಸ್ಯರಾದ ಶಶೀಲ್ ನಮೋಶಿ, ಬಿ.ಜಿ.ಪಾಟೀಲ, ಮೇಯರ್ ವರ್ಷಾ ಜಾನೆ, ಕುಡಾ ಅಧ್ಯಕ್ಷ ಮಜಹರ್ ಆಲಂಖಾನ್, ಹೆಚ್ಚುವರಿ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಕಾಂಗ್ರೆಸ್ ಮುಖಂಡ ನೀಲಕಂಠರಾವ ಮೂಲಗೆ, ಲಚ್ಚಪ್ಪ ಜಮಾದಾರ, ಸುಲಫಲ ಮಠದ ಸಾರಂಗಧರ ಸ್ವಾಮೀಜಿ, ತೊನಸನಳ್ಳಿಯ ಮಲ್ಲಣ್ಣಪ್ಪ ಸ್ವಾಮೀಜಿ, ಅಶೋಕ ವೀರನಾಯಕ, ಜೆಸ್ಕಾಂ ಅಧ್ಯಕ್ಷ ಪ್ರವೀಣ ಪಾಟೀಲ ಹರವಾಳ, ಶಿವಶರಣಪ್ಪ ಕೋಬಾಳ, ವಾಣಿಶ್ರೀ ಸಗರಕರ, ಬಸವರಾಜ ಬಳ್ಳಾರಿ, ಬಸವರಾಜ ಹರವಾಳ, ಶಿವಾನಂದ ಹೊನಗುಂಟಿ, ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷೆ ಅನುಪಮಾ ಕಮಕನೂರ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡವರಿಗೆ ಗೋದಿ ಹುಗ್ಗಿ, ಪುಲಾವ–ಸಾರು ಉಣಬಡಿಸಲಾಯಿತು.

ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಪಾಲಿಕೆ ಜಾಗದಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಮೂರ್ತಿ ಪ್ರತಿಷ್ಠಾಪನೆಗೆ ಗಣ್ಯರು ಭೂಮಿಪೂಜೆ ನೆರವೇರಿಸಿದರು.

ಹಿಂದುಳಿದ ವರ್ಗಗಳನ್ನು ಒಡೆಯುವ ಕೆಲಸ ನಡೆಯುತ್ತಿದೆ. ಕೋಲಿ–ಕಬ್ಬಲಿಗರು ಜಾಗೃತರಾಗಿಬೇಕು. ಒಗ್ಗಟ್ಟು ಪ್ರದರ್ಶಿಸಿ ಸೌಲಭ್ಯ ಪಡೆಯಬೇಕು
ಮಾಲೀಕಯ್ಯ ಗುತ್ತೇದಾರ, ಮಾಜಿ ಸಚಿವ

ಕೋಲಿ–ಕಬ್ಬಲಿಗರನ್ನು ಎಸ್ಟಿಗೆ ಸೇರ್ಪಡೆ ಮಾಡಿದರೆ ಸಮುದಾಯದ ಜನ ತಿಪ್ಪಣ್ಣಪ್ಪ ಅವರಿಗೆ ತೊಡೆಯ ಚರ್ಮ ತೆಗೆದು ಪಾದುಕೆ ನೀಡಿದಷ್ಟು ಋಣಿ
ರವಿರಾಜ ಕೊರವಿ, ಮುಖಂಡ

ವಿಧಾನಸೌಧ ಎದುರು ಚೌಡಯ್ಯ ಪ್ರತಿಮೆ ಸ್ಥಾಪನೆಗೆ ನಮ್ಮ ಸಮುದಾಯದ ಮತ ಪಡೆದ ಎಲ್ಲ ಜನಪ್ರತಿನಿಧಿಗಳು ಪಕ್ಷಾತೀತವಾಗಿ ಧ್ವನಿ ಎತ್ತಬೇಕು
ಮೋಹನಕುಮಾರ, ಮುಖಂಡ

ಕೋಲಿ–ಕಬ್ಬಲಿಗ ಸಮುದಾಯ ನಂಬಿಕಸ್ತ ಸಮಾಜ. ಮತ ಕೊಟ್ಟು ಆಯ್ಕೆ ಮಾಡಿದ್ದೀರಿ. ಎಸ್ಟಿ ಸೇರ್ಪಡೆ ಪರವಾಗಿ ನಾವೆಲ್ಲ ಧ್ವನಿ ಎತ್ತುತ್ತೇವೆ
ಅಲ್ಲಮಪ್ರಭು ಪಾಟೀಲ, ಶಾಸಕ

ಮಾನಸಿಕ ಗುಲಾಮಗಿರಿಯಿಂದ ಹಿಂದುಳಿದಿದ್ದು ಪ್ರಗತಿಗೆ ಎಸ್ಟಿ ಮೀಸಲಾತಿಯೇ ಅಸ್ತ್ರ. ಅದನ್ನು ಪಡೆಯಲು ರಾಜಕೀಯ ಇಚ್ಛಾಶಕ್ತಿ ಅಗತ್ಯ

ಅವ್ವಣ್ಣ ಮ್ಯಾಕೇರಿ, ಮುಖಂಡ

‘ಆನೆ ಬಲಕ್ಕೆ ಬೇಕಿದೆ ಶಿಕ್ಷಣದ ಅಂಕುಶ’

‘ಕೋಲಿ–ಕಬ್ಬಲಿಗ ತ್ಯಾಗ, ಶೌರ್ಯದ ಸಮುದಾಯ. ಈ ಸಮುದಾಯಕ್ಕೆ ಆನೆ ಶಕ್ತಿಯಿದೆ. ಅದಕ್ಕೆ ಶಿಕ್ಷಣದ ಅಂಕುಶ ಬೇಕಿದೆ’ ಎಂದು ಗುಲಬರ್ಗಾ ವಿವಿ ನಿಜಶರಣ ಅಂಬಿಗರ ಚೌಡಯ್ಯ ಅಧ್ಯಯನ ಪೀಠದ ನಿರ್ದೇಶಕ ಪ್ರೊ.ಎಚ್.ಟಿ.ಪೋತೆ ಅಭಿಪ್ರಾಯಪಟ್ಟರು.

ಕಿಕ್ಕಿರಿದು ತುಂಬಿದ್ದ ಡಾ.ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಉಪನ್ಯಾಸ ನೀಡಿದ ಅವರು, ‘ಎಲ್ಲಿಯ ತನಕ ಈ ಸಮುದಾಯ ಶಿಕ್ಷಣ ಪಡೆಯಲ್ಲವೋ ಅಲ್ಲಿಯ ತನಕ ನಿಮ್ಮ ಶಕ್ತಿಗೆ ಬೆಲೆಯಿಲ್ಲ’ ಎಂದರು.

‘ವಚನಕಾರರಲ್ಲೇ ಕ್ರಾಂತಿಕಾರಿ ಅಂಬಿಗರ ಚೌಡಯ್ಯ. ಜಾತಿವಾದಿಗಳ ವಿರೋಧಿಯಾಗಿದ್ದರು. ಶೋಷಿತರು, ನಿಮ್ನ ವರ್ಗಗಳ ಪರವಾಗಿ ಕೆಲಸ ಮಾಡಿದ್ದರು. ಅವರ ಸ್ವಾಭಿಮಾನವು ಇಂದು ಸಂವಿಧಾನದಲ್ಲಿ ಅಡಗಿದೆ’ ಎಂದರು.

‘ದೇಶದ ಸಂವಿಧಾನಕ್ಕೆ ಸದ್ಯ ಆತಂಕ ಎದುರಾಗಿದೆ. ಅದಕ್ಕೆ ಆತಂಕ ಎದುರಾದರೆ ದಲಿತರು, ಶೋಷಿತರು, ಮಹಿಳೆಯರೂ ಆತಂಕದಲ್ಲಿ ಇದ್ದಂತೆಯೇ ಸರಿ. ಇಂದು ಸಂವಿಧಾನ ನಿರ್ಜೀವವಾಗಿದೆ. ಸಂವಿಧಾನ ಪೂಜೆ ಮಾಡಿ ಮೇಲಿಟ್ಟು ಕೈ ಮುಗಿದು, ಬರೀ ಸಂವಿಧಾನದ ಹೆಸರಿನಲ್ಲಿ ದೇಶ ನಡೆಸಲಾಗುತ್ತಿದೆ. ಆದರೆ, ಸಂವಿಧಾನದ ತತ್ವಗಳನ್ನು ಪಾಲಿಸುತ್ತಿಲ್ಲ’ ಎಂದು ಕಳವಳ ವ್ಯಕ್ತಪಡಿಸಿದರು.

‘ಕೋಲಿ–ಕಬ್ಬಲಿಗರು ಒಗ್ಗೂಡಬೇಕು. ಚೌಡಯ್ಯರನ್ನು ಎದುರಿಗಿಟ್ಟುಕೊಂಡು ಸಂವಿಧಾನವನ್ನು ಎದೆಯಲ್ಲಿ ಇಟ್ಟುಕೊಂಡು ಚೌಡಯ್ಯರ ಸ್ವಾಭಿಮಾನ, ಅಂಬೇಡ್ಕರ್ ಅವರ ಶಿಕ್ಷಣದ ಅರಿವು ಒಂದಾಗಿಸಿಕೊಂಡು ಬೆಳೆದರೆ ಆಳುವ ವರ್ಗವಾಗುತ್ತೀರಿ, ಇಲ್ಲದಿದ್ದರೆ ಆಳಿಸಿಕೊಳ್ಳುತ್ತೀರಿ’ ಎಂದು ಎಚ್ಚರಿಸಿದರು.

‘ಚೌಡಯ್ಯ ಐಕ್ಯಸ್ಥಳ ಅಭಿವೃದ್ಧಿ ಮಾಡಿ’

‘ಗುಲಬರ್ಗಾ ವಿವಿಯ ಅಂಬಿಗರ ಚೌಡಯ್ಯ ಪೀಠದಲ್ಲಿ ಚೌಡಯ್ಯರ ಕಂಚಿನ ಪ್ರತಿಮೆ ಸ್ಥಾಪನೆಗೆ ನೆರವು ನೀಡಲಾಗುವುದು’ ಎಂದು ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಭರವಸೆ ನೀಡಿದರು.

‘ಅಂಬಿಗರ ಚೌಡಯ್ಯನ ಐಕ್ಯ ಸ್ಥಳವನ್ನು ಸರ್ಕಾರ ₹300 ಕೋಟಿ ವೆಚ್ಚದಲ್ಲಿ ಕೂಡಲಸಂಗಮ ಮಾದರಿಯಲ್ಲಿ ಅಭಿವೃದ್ಧಿಪಡಿಸಬೇಕು’ ಎಂದು ಒತ್ತಾಯಿಸಿದರು.

‘ಕೋಲಿ ಸಮುದಾಯ 14 ರಾಜ್ಯಗಳಲ್ಲಿ ಎಸ್ಟಿ ಪಟ್ಟಿ, 9 ರಾಜ್ಯಗಳಲ್ಲಿ ಎಸ್ಸಿ ಪಟ್ಟಿಯಲ್ಲಿದ್ದಾರೆ. ಆದರೆ, ಕರ್ನಾಟಕದಲ್ಲಿ ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದ ಎಸ್ಟಿಗೆ ಸೇರಲು ಪರದಾಡುವಂತಾಗಿದೆ. ನಮ್ಮ ಎಸ್ಟಿ ಸೇರ್ಪಡೆ ಹೋರಾಟಕ್ಕೆ ಜಿಲ್ಲೆಯ ಜನಪ್ರತಿನಿಧಿಗಳು ಪಕ್ಷಾತೀತವಾಗಿ ಬೆಂಬಲಿಸಬೇಕು’ ಎಂದು ಮನವಿ ಮಾಡಿದರು.

ಬಳಿಕ ಈ ಸಂಬಂಧ ಎಸ್ಟಿ ಸೇರ್ಪಡೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಸಂಜೆಯೂ ಅದ್ದೂರಿ ಮೆರವಣಿಗೆ

ಅಂಬಿಗರ ಚೌಡಯ್ಯ ಜಯಂತಿ ಅಂಗವಾಗಿ ಅಂಬಿಗರ ಯುವಸೈನ್ಯದ ವತಿಯಿಂದ ಅದ್ದೂರಿ ಮೆರವಣಿಗೆ ನಡೆಸಲಾಯಿತು.

ಕಲಬುರಗಿ ಸರ್ದಾರ್ ಪಟೇಲ್ ವೃತ್ತದಿಂದ ವಿವಿಧ ಕಲಾತಂಡಗಳು, ಕಿವಿಗಡಚಿಕ್ಕುವ ಡಿ.ಜೆ ಅಬ್ಬರದೊಂದಿಗೆ ಚೌಡಯ್ಯರ ಮೂರ್ತಿಯ ಮೆರವಣಿಗೆ ನಡೆಸಲಾಯಿತು.

ವಾಹನಗಳ ಸವಾರರ ಪರದಾಟ: ಚೌಡಯ್ಯ ಜಯಂತಿ ಅಂಗವಾಗಿ ನಗರೇಶ್ವರ ಶಾಲೆಯಿಂದ ರಂಗಮಂದಿರ ತನಕ ಹಾಗೂ ಸರ್ದಾರ್ ಪಟೇಲ್ ವೃತ್ತದಿಂದ ಜಗತ್ ವೃತ್ತದ ತನಕ ಅದ್ದೂರಿ ಮೆರವಣಿಗೆ ನಡೆದವು. ಈ ವೇಳೆ ಪೊಲೀಸರು ವಾಹನಗಳ ಮಾರ್ಗ ಬದಲಿಸಿದರು. ಇದರಿಂದ ವಾಹನಗಳ ಸವಾರರು ಪರದಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.