ಈಜು ಆಟಕ್ಕೂ ಆರೋಗ್ಯಕ್ಕೂ

7

ಈಜು ಆಟಕ್ಕೂ ಆರೋಗ್ಯಕ್ಕೂ

Published:
Updated:
ಈಜು ಆಟಕ್ಕೂ ಆರೋಗ್ಯಕ್ಕೂ

ಎ ತ್ತರ ಹಾಗೂ ವಯಸ್ಸಿಗೆ ಸರಿಯಾದ ದೇಹತೂಕವನ್ನು ಕಾಪಾಡಿಕೊಳ್ಳುವುದು ಇಂದು ಸವಾಲಿನ ವಿಚಾರವೇ ಆಗಿದೆ. ಬಿಡುವಿಲ್ಲದ ನಗರ ಜೀವನದಲ್ಲಂತೂ ವ್ಯಾಯಾಮ, ವಾಕಿಂಗ್‌ಗಳಿಗೆ ಸಮಯ ಹೊಂದಿಸುವುದು ಅನೇಕ ಬಾರಿ ಕಷ್ಟವೇ ಸರಿ.

ಆದರೂ ಮಧ್ಯವಯಸ್ಸು ಎನ್ನುವಾಗ ಜೊತೆಯಾಗುವ ಮಧುಮೇಹ, ರಕ್ತದೊತ್ತಡ, ಥೈರಾಯ್ಡ್‌ ಸಮಸ್ಯೆ, ಕೀಲುನೋವು – ಮೊದಲಾದ ಆರೋಗ್ಯಸಮಸ್ಯೆಗಳನ್ನು ನಿಯಂತ್ರಣದಲ್ಲಿಡಲು ಕೇವಲ ವೈದ್ಯರು ಸೂಚಿಸುವ ಔಷಧಗಳಿಂದ ಸಾಧ್ಯವಿಲ್ಲ. ಔಷಧಗಳ ಜೊತೆ ಜೊತೆಯಲ್ಲಿಯೇ ದೇಹದತೂಕವನ್ನು ಕಾಪಾಡಿಕೊಳ್ಳುವುದೂ ಬಹಳ ಮುಖ್ಯ.

ಕೆಲವರೇನೋ ಆಹಾರಕ್ರಮದಲ್ಲಿ ಕಟ್ಟುನಿಟ್ಟಿನ ಶಿಸ್ತನ್ನು ಅನುಸರಿಸುತ್ತಾರೆ. ಸದಾ ತಾವು ಉಪಯೋಗಿಸುವ ಆಹಾರ ಪದಾರ್ಥಗಳ ಬಗ್ಗೆ ಎಚ್ಚರದಿಂದಿರುತ್ತಾರೆ. ಎಣ್ಣೆಯಲ್ಲಿ ಕರಿದ ಪದಾರ್ಥಗಳು, ಬೇಕರಿ ತಿನಿಸುಗಳು, ಸಿಹಿ ತಿನಿಸುಗಳು – ಮೊದಲಾದುವುದನ್ನು ಮಿತಿಯಲ್ಲಿ ಉಪಯೋಗಿಸುತ್ತಾರೆ.

ಅಂತವರ ದೇಹದತೂಕವು ಯಾವಾಗಲೂ ಒಂದೇ ಮಟ್ಟದಲ್ಲಿರುತ್ತದೆ. ಆದರೆ, ಇನ್ನು ಕೆಲವರದು ಬೇರೆಯೇ ಸಮಸ್ಯೆ, ಬಾಯಿಚಪಲವನ್ನು ನಿಯಂತ್ರಿಸಲಾಗದೆ ಕಂಡದ್ದನ್ನೆಲ್ಲ ತಿಂದುಬಿಡುತ್ತಾರೆ. ಅಂತಹವರು ದೇಹತೂಕವನ್ನು ನಿಯಂತ್ರಿಸಲು ಸಾಕಷ್ಟು ಕಸರತ್ತು ಮಾಡಲೇಬೇಕಷ್ಟೆ.

ದೇಹತೂಕವನ್ನು ಕಾಪಿಟ್ಟುಕೊಳ್ಳಲು ಒಬ್ಬೊಬ್ಬರದು ಒಂದೊಂದು ಮಾರ್ಗ. ಕೆಲವರು ಯೋಗ, ಪ್ರಾಣಾಯಾಮಕ್ಕೆ ಮೊರೆ ಹೋದರೆ, ಇನ್ನು ಕೆಲವರು ಸರಳ ವ್ಯಾಯಾಮ-ಬಿರುಸಿನ ವ್ಯಾಯಾಮ (ಜಿಮ್) ಮತ್ತೂ ಕೆಲವರು ವಾಕಿಂಗ್ – ಹೀಗೆ ಎಲ್ಲರೂ ಅವರಿಗೆ ಸರಿಹೊಂದುವ ಯಾವುದಾದರೊಂದು ಬಗೆಯಲ್ಲಿ ಶರೀರಕ್ಕೆ ಶ್ರಮಕೊಟ್ಟು ದೇಹದತೂಕವನ್ನು ಇಳಿಸಿಕೊಳ್ಳಲು ಹರಸಾಹಸ ಪಡುತ್ತಾರೆ.

ಮಾರ್ಗ ಯಾವುದೇ ಇರಲಿ, ಅಭ್ಯಾಸ ಮಾತ್ರ ನಿಯಮಿತವಾಗಿರಬೇಕು. ಆಗ ಮಾತ್ರ ಅದು ಉತ್ತಮ ಫಲಿತಾಂಶವನ್ನು ಕೊಡಬಲ್ಲದು. ಒಂದು ದಿನ ವ್ಯಾಯಾಮ ಮಾಡಿ, ನಾಲ್ಕು ದಿನ ವಿಶ್ರಾಂತಿ ಎಂದರೆ ಅದು ಹೆಚ್ಚು ಉಪಯೋಗಕ್ಕೆ ಬಾರದು.

ಇತ್ತೀಚಿನ ದಿನಗಳಲ್ಲಿ ವಿವಿಧ ಬಗೆಯ ನೃತ್ಯಾಭ್ಯಾಸವೂ ಒಂದು ಉತ್ತಮ ರೀತಿಯ ವ್ಯಾಯಾಮ ಎನಿಸಿಕೊಂಡಿದೆ. ಶರೀರ-ಮನಸ್ಸುಗಳಿಗೆ ಶಕ್ತಿಯನ್ನು ತುಂಬುವ ನೃತ್ಯ ಕೂಡ ಅನೇಕರ ಮನಸ್ಸನ್ನು ಒಂದು ವ್ಯಾಯಾಮವಾಗಿಯೂ ಗೆದ್ದಿದೆ.

ಈ ಸಾಲಿಗೆ ಸೇರುವ ಮತ್ತೊಂದು ದೇಹದತೂಕ ಇಳಿಸುವ ಮಾರ್ಗ ಎಂದರೆ ಈಜು. ಈಜುವುದು ಕೂಡ ಒಂದು ಅತ್ಯುತ್ತಮ ವ್ಯಾಯಾಮವೇ. ದೇಹದತೂಕವನ್ನು ಇಳಿಸಲು ಸಹಕರಿಸುವುದರ ಜೊತೆಗೆ ವ್ಯಕ್ತಿಯ ಆರೋಗ್ಯವನ್ನು ಸರ್ವರೀತಿಯಲ್ಲಿಯೂ ಸುಸ್ಥಿತಿಯಲ್ಲಿಡಲು ಈಜು ನೆರವಾಗುವುದು. ವಾರದಲ್ಲಿ ಕನಿಷ್ಠ ಮೂರು ಗಂಟೆಗಳ ಕಾಲ ಈಜಿದರೂ ಅದರ ಗರಿಷ್ಠ ಪ್ರಯೋಜನಗಳನ್ನು ನಾವು ಪಡೆಯಬಹುದಾಗಿದೆ.

ಪ್ರಯೋಜನಗಳೇನು?

* ಈಜುವಾಗ ನಿಮ್ಮ ಉಸಿರಾಟವನ್ನೂ ನಿಗ್ರಹಿಸಬೇಕಾದ್ದರಿಂದ ಇದು ನಿಮ್ಮ ಶಾಸಕೋಶಗಳಿಗೆ ಒಳ್ಳೆಯ ವ್ಯಾಯಾಮ. ಶ್ವಾಸಕೋಶಗಳು ಸುಸ್ಥಿತಿಯಲ್ಲಿದ್ದರೆ ದೇಹದ ಎಲ್ಲ ಅಂಗಾಂಗಗಳಿಗೂ ಉತ್ತಮ ಆಮ್ಲಜನಕದ ಪೂರೈಕೆ ಹಾಗೂ ಆ ಮೂಲಕ ಸದಾ ಲವಲವಿಕೆಯೂ ಸಾಧ್ಯ.

* ಈಜುವಾಗ ಉಸಿರಾಟಕ್ಕೆ ತಕ್ಕಂತೆ ಹೃದಯದ ಬಡಿತವೂ ಹೆಚ್ಚುವುದರಿಂದ ಹೃದಯದ ಕಾರ್ಯಕ್ಷಮತೆಯನ್ನೂ ಇದು ಹೆಚ್ಚಿಸುತ್ತದೆ.

* ಈಜುವಾಗ ಶರೀರದ ಎಲ್ಲ ಭಾಗಗಳ ಸ್ನಾಯುಗಳು ಕೆಲಸ ಮಾಡಬೇಕಾಗಿ ಬರುವುದರಿಂದ, ದೇಹದ ಎಲ್ಲ ಸ್ನಾಯುಗಳು ಶಕ್ತಿಯುತವಾಗುತ್ತವೆ.

* ಈಜುವಿಕೆಯಿಂದ ದೇಹದ ಸಮನ್ವಯತೆ, ಸಮತೋಲನ ಹಾಗೂ ನಿಲುವು ಅಥವಾ ಭಂಗಿಯನ್ನು ಸಹ ಸುಧಾರಿಸುತ್ತದೆ.

ಇದು ದೇಹದ ಎಲ್ಲ ಸ್ನಾಯುಗಳ ಸಹಿಷ್ಣುತೆ ಹಾಗೂ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.

* ನಿಯಮಿತವಾಗಿ ಈಜುವುದರಿಂದ ವ್ಯಕ್ತಿಯ ರಕ್ತದ ಸಕ್ಕರೆಯ ಅಂಶ ಹಾಗೂ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಲು ಸಾಧ್ಯ ಎಂದು ಅಧ್ಯಯನಗಳಿಂದ ತಜ್ಞರು ಧೃಡಪಡಿಸಿದ್ದಾರೆ.

* ಕೀಲುನೋವು ಅಥವಾ ಯಾವುದೇ ಅಶಕ್ತತೆಯಿಂದಾಗಿ ಸಾಮಾನ್ಯ ವ್ಯಾಯಾಮಗಳನ್ನು ಮಾಡುವುದು ಕಷ್ಟಕರವೆನಿಸಿದರೆ, ಅಂತಹವರು ಈಜುವುದನ್ನು ವ್ಯಾಯಾಮವಾಗಿ ಅಭ್ಯಾಸ ಮಾಡಬಹುದು.

* ನಿದ್ರಾಹೀನತೆಯಿಂದ ಬಳಲುವವರಿಗೂ ಈಜು ಒಂದು ವರದಾನ.

* ದೇಹದ ತೂಕವನ್ನು ಇಳಿಸಿಕೊಳ್ಳಲು ಇದು ಅತ್ಯಂತ ಒಳ್ಳೆಯ ಮಾರ್ಗ. ಒಂದು ಗಂಟೆಯ ಈಜು ಸುಮಾರು ಐನೂರು ಕ್ಯಾಲರಿಗಳನ್ನು ಹೊರಹಾಕಲು ಸಹಕರಿಸುತ್ತದೆ.

* ಈಜು ಸಾಮಾನ್ಯವಾಗಿ ಎಲ್ಲ ವಯೋಮಾನದವರೂ ಇಷ್ಟಪಡುವಂತಹದ್ದು. ಹೀಗಾಗಿ ಈಜುವಾಗ ಅದೊಂದು ಒತ್ತಡ ತರುವ ವ್ಯಾಯಾಮ ಎಂದೆನಿಸದೆ, ವ್ಯಕ್ತಿಯು ಉಲ್ಲಸಿತನಾಗಿ ಅದರಲ್ಲಿ ತಲ್ಲೀನನಾಗಬಹುದು.

* ಕಾಲು ಅಥವಾ ಕೈಗಳ ಕೀಲುಗಳಲ್ಲಿ ಬಿಗಿತ, ನೋವು, ದೀರ್ಘಕಾಲದ ಬೆನ್ನುನೋವಿನ ಸಮಸ್ಯೆಗೂ ಈಜು ಬಹಳ ಪ್ರಯೋಜನಕಾರಿ.

* ಈಜು ನಿಮ್ಮನ್ನು ಉಲ್ಲಸಿತರನ್ನಾಗಿಯೂ ಸದಾ ಕ್ರಿಯಾಶೀಲರನ್ನಾಗಿಯೂ ಇರಿಸಬಲ್ಲದು.

* ನಿಯಮಿತವಾಗಿ ಈಜುವುದರಿಂದ ವ್ಯಕ್ತಿಯ ದೇಹದಲ್ಲಿನ ಯಾವುದೇ ಬಗೆಯ ಜಡತ್ವವು ಮಾಯವಾಗಿ ಶರೀರವನ್ನು ಸುಲಭವಾಗಿ ಬಾಗಿಸಲು ಸಾಧ್ಯವಾಗುತ್ತದೆ.

* ಬೇಸಿಗೆಯ ಬಿಸಿಲಿನಲ್ಲಿ ನಮ್ಮನ್ನು ತಣಿಸಿಕೊಳ್ಳಲು ಹಾಗೂ ವಿರಮಿಸಲು ಈಜುವುದು ಒಂದು ಅತ್ಯುತ್ತಮ ಮಾರ್ಗವೇ ಸರಿ.

ಉಸಿರಾಟದ ಸಮಸ್ಯೆ ಅಥವಾ ಅಸ್ತಮಾದಿಂದ ಬಳಲುವವರು ಕೂಡ ನಿಧಾನವಾಗಿ ಈಜುವುದನ್ನು ಅಭ್ಯಾಸ ಮಾಡಬಹುದು. ಈಜುವುದರಿಂದ ಶ್ವಾಸಕೋಶದ ನಾಳಗಳ ಕಾರ್ಯಕ್ಷಮತೆಯು ಸುಧಾರಿಸುವುದರಿಂದ ಉಸಿರಾಟದ ಸಮಸ್ಯೆಯೂ ಕಡಿಮೆಯಾಗುತ್ತದೆ. ಆದರೆ ಅಭ್ಯಾಸವನ್ನು ಶುರುಮಾಡುವ ಮೊದಲು ತಜ್ಞವೈದ್ಯರ ಸಲಹೆಯನ್ನು ಪಡೆಯುವುದು ಸೂಕ್ತ

(ಡಾ. ವಿನಯ ಶ್ರೀನಿವಾಸ್.)

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry