ರಸ್ತೆಗಳಲ್ಲಿವೆ ಅಪಾಯಕಾರಿ ಗುಂಡಿ

7
ನಗರದ ಪ್ರಮುಖ ಮಾರ್ಗಗಳಲ್ಲಿ ಸವಾರರಿಗೆ ಸವಾಲು; ದುರಸ್ತಿಯಿಲ್ಲದೆ ಹೆಚ್ಚಿದ ಅಪಾಯ

ರಸ್ತೆಗಳಲ್ಲಿವೆ ಅಪಾಯಕಾರಿ ಗುಂಡಿ

Published:
Updated:
ರಸ್ತೆಗಳಲ್ಲಿವೆ ಅಪಾಯಕಾರಿ ಗುಂಡಿ

ಮೈಸೂರು: ಮುಂಗಾರು ಚುರುಕಾಗಿದ್ದು, ಮಳೆಯ ರಭಸ ಹೆಚ್ಚಾಗಿದೆ. ರಸ್ತೆಗಳ ಮೇಲೆ ನೀರು ತುಂಬಿ ಹರಿಯುತ್ತಿವೆ. ಜತೆಗೆ, ರಸ್ತೆಗಳ ಗುಂಡಿಗಳೂ ದೊಡ್ಡದಾಗುತ್ತಿವೆ. ಈ ಗುಂಡಿಗಳಲ್ಲಿ ಬಿದ್ದು ವಾಹನ ಸವಾರರು ಪ್ರಾಣ ಬಿಡಬೇಕಾದೀತು ಎಂಬ ಆತಂಕ ನಾಗರಿಕರಲ್ಲಿ ಹೆಚ್ಚಾಗಿದೆ.

ನಗರದ ಪ್ರಮುಖ ರಸ್ತೆಗಳಲ್ಲಿ ಈ ವರ್ಷ ಗುಂಡಿಗಳು ಹೆಚ್ಚಾಗಿವೆ. ಚರಂಡಿಗಳ ಮೇಲಿನ ಚಪ್ಪಡಿಗಳು ಕಳಚಿಕೊಂಡಿದ್ದು, ಅಪಾಯವನ್ನು ಆಹ್ವಾನಿಸುವಂತಿವೆ.

ನಗರಪಾಲಿಕೆ ಅಧಿಕಾರಿಗಳು ವಿಮುಖ: ವ್ಯಾಪ್ತಿಯ 20ಕ್ಕೂ ಹೆಚ್ಚು ಭಾಗಗಳಲ್ಲಿ ಗುಂಡಿಗಳ ದುರಸ್ತಿಯಾಗದೆ ಅಪಾಯ ಕಾದಿದೆ ಎಂದು ಸಿದ್ದಾರ್ಥನಗರ ಸಂಚಾರ ಪೊಲೀಸ್‌ ಠಾಣೆಯ ಇನ್‌ಸ್ಪೆಕ್ಟರ್‌ ಮುನಿಯಪ್ಪ ಅವರು ಪೊಲೀಸ್ ಕಮಿಷನರ್‌ ಅವರಿಗೆ ಪತ್ರ ಬರೆದಿದ್ದಾರೆ. ನಗರಪಾಲಿಕೆಯ ಸಂಬಂಧಪಟ್ಟ ಅಧಿಕಾರಿಗಳಿಗೆ ದುರಸ್ತಿ ಮಾಡಿಸುವಂತೆ ವ್ಯವಸ್ಥೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ.

‘ರಸ್ತೆಗಳಲ್ಲಿರುವ ಗುಂಡಿಗಳು ಮಳೆಯಿಂದಾಗಿ ಸಾಕಷ್ಟು ದೊಡ್ಡದಾಗಿವೆ, ಆಳವೂ ಹೆಚ್ಚಿವೆ. ಇವುಗಳಿಗೆ ರಕ್ಷಣೆ ಇಲ್ಲದೆ ಇದ್ದಲ್ಲಿ ವಾಹನ ಸವಾರರು ಬಿದ್ದು ತೊಂದರೆಗೆ ಈಡಾಗುವ ಸಾಧ್ಯತೆ ಇರುತ್ತದೆ. ಅಲ್ಲದೆ, ರಸ್ತೆಗಳ ಮಧ್ಯೆ ಇರುವ ನೀರಿನ ವಾಲ್ವ್‌ಗಳು ತೆರೆದುಕೊಂಡಿವೆ. ಇವುಗಳಿಗೆ ಮುಚ್ಚಳವೇ ಇಲ್ಲ. ಕತ್ತಲಿನಲ್ಲಿ ಬರುವ ದ್ವಿಚಕ್ರ ವಾಹನ ಸವಾರರಿಗೆ ಪ್ರಾಣ ಕಳೆದುಕೊಳ್ಳುವ ಅಪಾಯವಿರುತ್ತದೆ’ ಎಂದು ಮುನಿಯಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

20 ಅಡಿ ಆಳದ ಗುಂಡಿ:

‘ಲಲಿತಮಹಲ್‌ ರಸ್ತೆಯಿಂದ ಹೆಲಿಪ್ಯಾಡ್‌ಗೆ ಹೋಗುವ ರಸ್ತೆಯಲ್ಲಿ ದುರಸ್ತಿ ಕಾರ್ಯಕ್ಕಾಗಿ ತೆಗೆದಿರುವ 20 ಅಡಿಗೂ ಹೆಚ್ಚು ಆಳದ ಗುಂಡಿಯನ್ನು ಮುಚ್ಚದೆ ಬಿಟ್ಟಿರುವುದು ಅಪಾಯವನ್ನು ಆಹ್ವಾನಿಸುವಂತಿದೆ. ಪೊಲೀಸ್ ಬ್ಯಾರಿಕೇಡ್‌ಗಳನ್ನು ಸದ್ಯಕ್ಕೆ ಇರಿಸಿದ್ದರೂ ರಾತ್ರಿ ವೇಳೆಯಲ್ಲಿ ವೇಗವಾಗಿ ಬರುವ ವಾಹನಗಳನ್ನು ತಡೆಯಲು ಸಾಧ್ಯವಾಗದು. ಗುಂಡಿಯಲ್ಲಿ ಕಲ್ಲು ಹಾಗೂ ಮರಳಿನ ರಾಶಿ ಇದ್ದು ಗುಂಡಿಯೊಳಗೆ ಬಿದ್ದರೆ ಪ್ರಾಣಕ್ಕೆ ಅಪಾಯವಾಗುವ ಸಾಧ್ಯತೆ ಇರುತ್ತದೆ’ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಎಲ್ಲೆಲ್ಲಿ ಗುಂಡಿಗಳು?

* ಮಹದೇವಪುರ ರಸ್ತೆಯ ಸಮೋಸ ಕಾರ್ನರ್‌ನಿಂದ ಉದಯಗಿರಿಗೆ ಹೋಗುವ ರಸ್ತೆಯಲ್ಲಿ ಕ್ರೈಸ್ತ ಸಮುದಾಯ ಭವನದ ಎದುರು

* ಡಾ.ರಾಜಕುಮಾರ್ ರಸ್ತೆಯ ಆರ್‌ಟಿಒ ಕಚೇರಿ ಎದುರು

* ಉದಯಗಿರಿ ವೃತ್ತದಿಂದ ಮುಂದಕ್ಕೆ ಎಡಭಾಗದಲ್ಲಿ

* ಪೊಲೀಸ್ ಪಬ್ಲಿಕ್‌ ಶಾಲೆ ಮುಂಭಾಗ

* ತಿ.ನರಸೀಪುರ ರಸ್ತೆಯ ಯರಗನಗಳ್ಳಿ ಮಾರ್ಗದಲ್ಲಿರುವ ಐಷರ್ ಪೆಟ್ರೋಲ್ ಬಂಕ್‌ ಎದುರು

* ಲಲಿತಮಹಲ್ ರಸ್ತೆಯ ಆರ್ಚ್ ಗೇಟ್‌ನಿಂದ ಹೆಲಿಪ್ಯಾಡ್‌ಗೆ ಹೋಗುವ ರಸ್ತೆಯಲ್ಲಿ

* ಚಾಮುಂಡಿ ವಿಹಾರ ರಸ್ತೆಯ ಸಾಯಿಬಾಬಾ ದೇವಸ್ಥಾನದ ಬಳಿ

* ಚನ್ನಯ್ಯ ವೃತ್ತದಲ್ಲಿ ಚರಂಡಿಗಳಿಗೆ ಮುಚ್ಚಿರುವ ಬಂಡೆಗಳು ಕುಸಿದಿವೆ

* ಗಾಯತ್ರಿಪುರಂ ಮುಖ್ಯರಸ್ತೆಯಲ್ಲಿ

* ಡಿಪಿಒ ವೃತ್ತದಿಂದ ಗಾಯತ್ರಿಪುರಂಗೆ ಹೋಗುವ ರಸ್ತೆಯಲ್ಲಿ ನೀರಿನ ವಾಲ್ವ್‌ಗೆ ಹಾಕಿರುವ ಸ್ಲ್ಯಾಬ್‌ಗಳು ಕುಸಿದಿವೆ

* ಗರಡಿ ಕ್ರಾಸ್ ಬಳಿ ನೀರಿನ ವಾಲ್ವ್‌ ತೆರೆದುಕೊಂಡಿರುವುದು

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry