ಮತ ಹಾಕದವರಿಗೂ ಕೆಲಸ ಮಾಡಿಕೊಡುವೆ

7
ಆಡಗಲ್‌ನಲ್ಲಿ ಗ್ರಾಮಸ್ಥರಿಗೆ ಕೃತಜ್ಞತೆ ಕಾರ್ಯಕ್ರಮದಲ್ಲಿ ಶಾಸಕ ಸಿದ್ದರಾಮಯ್ಯ ಅಭಯ

ಮತ ಹಾಕದವರಿಗೂ ಕೆಲಸ ಮಾಡಿಕೊಡುವೆ

Published:
Updated:

ಬಾಗಲಕೋಟೆ: ‘ನನಗೆ ಓಟು ಹಾಕಿ ಗೆಲ್ಲಿಸಿದವರಿಗಷ್ಟೇ ನಾನು ಪ್ರತಿನಿಧಿ ಅಲ್ಲ. ಬದಲಿಗೆ ಬಾದಾಮಿ ಕ್ಷೇತ್ರದ ಎಲ್ಲ ಜನರನ್ನೂ ಪ್ರತಿನಿಧಿಸುತ್ತೇನೆ. ಹಾಗಾಗಿ ಯಾವುದೇ ಹಿಂಜರಿಕೆ ಇಲ್ಲದೇ ನಿಮ್ಮ ಸಮಸ್ಯೆ ಪರಿಹರಿಸಿಕೊಳ್ಳಿ’ ಎಂದು ಶಾಸಕ ಸಿದ್ದರಾಮಯ್ಯ ಮನವಿ ಮಾಡಿದರು.

ಬಾದಾಮಿ ತಾಲ್ಲೂಕಿನ ಆಡಗಲ್‌ನಲ್ಲಿ ಶುಕ್ರವಾರ ಗ್ರಾಮಸ್ಥರಿಗೆ ಕೃತಜ್ಞತೆ ಅರ್ಪಿಸಿ ಮಾತನಾಡಿದ ಅವರು, ‘ಚುನಾವಣೆ ಮುಗಿದ ಮೇಲೆ ನನಗೆ ಯಾರು ಓಟ್ ಹಾಕಿಲ್ಲ ಎಂದು ಕೇಳಲು ಆಗೊಲ್ಲ. ಎಲ್ಲರೂ ಬನ್ನಿ, ಭೇಟಿಯಾಗಿ ಗ್ರಾಮದ ಕೆಲಸ ಮಾಡಿಸಿಕೊಳ್ಳಿ. ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡುವುದಿಲ್ಲ’ ಎಂದು ಹೇಳಿದರು.

‘ಉತ್ತರ ಕರ್ನಾಟಕ ಭಾಗದ ಜನ ಒಳ್ಳೆಯವರು. ಬಹಳ ನಂಬಿಕಸ್ಥರು. ಅದೇ ಕಾರಣಕ್ಕೆ ಪ್ರಚಾರ ಕಾರ್ಯಕ್ಕೆ ನಾನು ಬರಲು ಸಾಧ್ಯವಾಗದಿದ್ದರೂ ಇಲ್ಲಿ ಚುನಾವಣೆಗೆ ಸ್ಪರ್ಧಿಸಲು ಮುಂದಾದೆ. ಹಾಗಿದ್ದರೂ ನನ್ನ ಗೆಲ್ಲಿಸಿದ್ದೀರಿ. ಪ್ರಾಮಾಣಿಕವಾಗಿ ಕೆಲಸ ಮಾಡಿ ನಿಮ್ಮ ನಂಬಿಕೆ ಉಳಿಸಿಕೊಳ್ಳುವೆ’ ಎಂದರು.

ಆಡಗಲ್‌ನಿಂದ ಚಿಕ್ಕಮುಚ್ಚಳಗುಡ್ಡ ನಂತರ ಹಿರೇಮುಚ್ಚಳಗುಡ್ಡಕ್ಕೆ ತೆರಳಿ ಸಿದ್ದರಾಮಯ್ಯ ಮತದಾರರ ಭೇಟಿ ಮಾಡಿದರು. ಹಿರೇಮುಚ್ಚಳಗುಡ್ಡದಲ್ಲಿ ನೂತನ ಶಾಸಕರನ್ನು ಭರ್ಜರಿಯಾಗಿ ಸ್ವಾಗತಿಸಿದ ಗ್ರಾಮಸ್ಥರು, ಟಗರಿನ ಜೊತೆ ಮೆರವಣಿಗೆ ಮಾಡಿ ಸಂಭ್ರಮಿಸಿದರು. ಅಲ್ಲಿಂದ ಕುಟುಕನಕೇರಿಗೆ ಬಂದು ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡರು.

ಪಂಚಾಯ್ತಿ ಕೇಂದ್ರದ ಭರವಸೆ:

‘ಕುಟುಕನಕೇರಿಯನ್ನು ಪಂಚಾಯ್ತಿ ಕೇಂದ್ರ ಮಾಡಬೇಕು ಎಂಬುದು ಸ್ಥಳೀಯರ ಬಹುದಿನದ ಬೇಡಿಕೆ ನನ್ನ ಗಮನಕ್ಕೆ ಬಂದಿದೆ. ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಇಲಾಖೆ ಕಾಯದರ್ಶಿಯೊಂದಿಗೆ ಈ ಬಗ್ಗೆ ಚರ್ಚಿಸಿ, ಪಂಚಾಯ್ತಿ ಕೇಂದ್ರವಾಗಿಸುವೆ ಎಂಬ ಭರವಸೆ ನೀಡಿದರು.

ಮುಂದಿನ ದಿನಗಳಲ್ಲಿ ಅಧಿಕಾರಿಗಳೊಂದಿಗೆ ಮತ್ತೆ ಗ್ರಾಮಗಳಿಗೆ ಬರುವೆ. ಈ ವೇಳೆ ಸ್ಥಳೀಯ ಸಮಸ್ಯೆಗಳ ಬಗ್ಗೆ ಅಹವಾಲು ಪಡೆದು ಅವುಗಳ ನಿವಾರಣೆಗೆ ಶ್ರಮಿಸುವುದಾಗಿ’ ತಿಳಿಸಿದರು.

ಅಲ್ಲಿಂದ ಕೆಂದೂರು ಗ್ರಾಮಕ್ಕೆ ತೆರಳಿದ ಸಿದ್ದರಾಮಯ್ಯ, ಅಲ್ಲಿ ಬಿರು ಮಳೆಯ ನಡುವೆ ಗ್ರಾಮಸ್ಥರಿಗೆ ಕೃತಜ್ಞತೆ ಸಲ್ಲಿಸಿದರು. ಅಲ್ಲಿಂದ ನಂದಿಕೇಶ್ವರಕ್ಕೆ ಹೊರಟ ಸಿದ್ದರಾಮಯ್ಯ ಅವರಿಗೆ ದಾರಿ ಮಧ್ಯೆ ಕೆಂದೂರು ಕೆರೆ ತೋರಿಸಿ ಅದರ ಅಭಿವೃದ್ಧಿಗೆ ಮನವಿ ಮಾಡುವ ಪ್ರಯತ್ನವನ್ನು ಮುಖಂಡ ಎಂ.ಬಿ.ಹಂಗರಗಿ ಹಾಗೂ ಬೆಂಬಲಿಗರು ಮಾಡಿದರು. ಮುಂದೆ ನಂದಿಕೇಶ್ವರದ ಸಮುದಾಯ

ಭವನದಲ್ಲಿ ಗ್ರಾಮಸ್ಥರನ್ನು ಉದ್ದೇಶಿಸಿ ಮಾತನಾಡಿದರು.

ವನಭೋಜನ: ಸಿದ್ದರಾಮಯ್ಯ ಹಾಗೂ ಬೆಂಬಲಿಗರಿಗೆ ಹುಲಿಗೆಮ್ಮನ ಕೊಳ್ಳದಲ್ಲಿ ಎಂ.ಬಿ.ಹಂಗರಗಿ ಊಟದ ವ್ಯವಸ್ಥೆ ಮಾಡಿದ್ದರು. ಆಗ ತಾನೆ ಮಳೆ ನಿಂತು ಅಲ್ಲಿನ ದಿಡಗು ಜೀವ ಪಡೆದಿದ್ದು, ಫಾಲ್ಸ್‌ನ ವೈಭವ ಕಣ್ತುಂಬಿಕೊಳ್ಳುತ್ತಲೇ ರೊಟ್ಟಿ–ಚಪಾತಿ, ಹೆಣಗಾಯಿ, ಕಾಳುಪಲ್ಲೆ, ಪಾಯಸ ಸವಿದ ಸಿದ್ದರಾಮಯ್ಯ ಅಲ್ಲಿಂದ ಪಟ್ಟದಕಲ್ಲು, ಕಾಟಾಪುರ, ಮಂಗಳಗುಡ್ಡ, ಚಿಮ್ಮಲಗಿ,

ನಾಗರಾಳಕ್ಕೆ ತೆರಳಿದರು. ರಾತ್ರಿ ಗುಳೇದಗುಡ್ಡದಲ್ಲಿ ಮುಸ್ಲಿಮ್ ಸಮುದಾಯ ಆಯೋಜಿಸಿದ್ದ ಇಫ್ತಿಯಾರ್ ಕೂಟದಲ್ಲಿ ಪಾಲ್ಗೊಂಡಿದ್ದರು.

ಸಿದ್ದರಾಮಯ್ಯ ಅವರ ಎರಡನೇ ದಿನದ ಪ್ರವಾಸದ ವೇಳೆ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ, ವಿಧಾನಪರಿಷತ್ ಸದಸ್ಯರಾದ ಎಸ್.ಆರ್.ಪಾಟೀಲ, ಆರ್.ಬಿ.ತಿಮ್ಮಾಪುರ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ವೀಣಾ ಕಾಶಪ್ಪನವರ, ಮಾಜಿ ಶಾಸಕರಾದ ಎಚ್.ವೈ.ಮೇಟಿ, ಬಿ.ಬಿ.ಚಿಮ್ಮನಕಟ್ಟಿ, ಮುಖಂಡರಾದ ಡಾ.ದೇವರಾಜ ಪಾಟೀಲ, ಮಹೇಶ ಹೊಸಗೌಡ್ರ, ಶಿವರಾಯಪ್ಪ ಜೋಗಿನ, ಭೀಮಸೇನ ಚಿಮ್ಮನಕಟ್ಟಿ, ಜಿಲ್ಲಾ ಕಾಂಗ್ರೆಸ್‌ ಮಾಧ್ಯಮ ವಕ್ತಾರ ಅನಿಲ್ ದಡ್ಡಿ, ಕೆಪಿಸಿಸಿ ಕಾರ್ಯದರ್ಶಿ ಕಿಶೋರಿ ಇದ್ದರು.

ಸ್ವಾಗತ ಕೋರಿದ ತೆರೆದ ಚರಂಡಿ

ಆಡಗಲ್‌ನ ಪ್ರತೀ ರಸ್ತೆಯಲ್ಲಿ ತೆರೆದ ಚರಂಡಿ ಮೂಲಕ ಹರಿದಿದ್ದ ಕೊಳಚೆ ನೀರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸ್ವಾಗತಿಸಿತು. ನಂದಿಕೇಶ್ವರದಲ್ಲಿ ಮಳೆಯ ನೀರಿನ ರಭಸಕ್ಕೆ ಕೊಳಚೆ ರಸ್ತೆಗೆ ಹರಿದುಬಂದಿತು. ಕುಟುಕನಕೇರಿಯಲ್ಲಿ ಸಭೆ ನಡೆದ ಸ್ಥಳದಲ್ಲಿ ಶಾಲೆಯ ಪಕ್ಕದಲ್ಲಿಯೇ ಇದ್ದ ಹೇಸಿಗೆ ದುರ್ವಾಸನೆ ಬೀರಿತು. ಆಡಗಲ್‌ನಲ್ಲಿ ಬೆಂಬಲಿಗರೊಬ್ಬರು ಸಿದ್ದರಾಮಯ್ಯ ಅವರಿಗ ಬೆಳ್ಳಿಯ ಕಡಗ ತೊಡಿಸಿ ಅಭಿಮಾನ ಮೆರೆದರು. ಗ್ರಾಮದ ಅಗಸಿಯಿಂದ ಗುಡಿಯವರೆಗೆ ಆಯೋಜಿಸಿದ್ದ ಮೆರವಣಿಗೆ ನಿರಾಕರಿಸಿದ ಸಿದ್ದರಾಮಯ್ಯ, ಕಾರಿನಲ್ಲಿಯೇ ತೆರಳಿದರು. ಆಡಗಲ್ ಸಮಾರಂಭದ ವೇಳೆ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು.

ಸಂಪುಟ ವಿಸ್ತರಣೆ ನಂತರ ಉಂಟಾಗಿರುವ ಬಿಕ್ಕಟ್ಟು ಪರಿಹರಿಸಲು ಕೂಡಲೇ ಹೊರಟು ಬರುವಂತೆ ಬೆಂಗಳೂರಿನಿಂದ ಪದೇ ಪದೇ ಕರೆ ಬರುತ್ತಿದೆ

- ಸಿದ್ದರಾಮಯ್ಯ, ಸಮನ್ವಯ ಸಮಿತಿ ಅಧ್ಯಕ್ಷ 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry