ಅಧ್ಯಕ್ಷ ನಾಗರಾಜ್, ಉಪಾಧ್ಯಕ್ಷ ಚನ್ನವೀರಪ್ಪ

7
ಹಾಸನ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ ಚುನಾವಣೆ; ಅವಿರೋಧ ಆಯ್ಕೆ

ಅಧ್ಯಕ್ಷ ನಾಗರಾಜ್, ಉಪಾಧ್ಯಕ್ಷ ಚನ್ನವೀರಪ್ಪ

Published:
Updated:

ಹಾಸನ: ಹಾಸನ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಸೋಮನಹಳ್ಳಿ ನಾಗರಾಜ್‌ ಮತ್ತು ಉಪಾಧ್ಯಕ್ಷರಾಗಿ ಗಿರೀಶ್‌ ಚನ್ನವೀರಪ್ಪ ಅವಿರೋಧವಾಗಿ ಆಯ್ಕೆಯಾದರು.

ಅಧ್ಯಕ್ಷರಾಗಿದ್ದ ಹೊನ್ನವಳ್ಳಿ ಸತೀಶ್‌ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಚುನಾವಣೆ ನಡೆಯಿತು. ಹಿರಿಯ ಸದಸ್ಯರಾದ ಪಟೇಲ್‌ ಶಿವರಾಂ, ಚನ್ನರಾಯಪಟ್ಟಣ ಕ್ಷೇತ್ರದ ಹೊನ್ನಶೆಟ್ಟಿ ಹಳ್ಳಿ ಪುಟ್ಟಸ್ವಾಮಿಗೌಡ, ಹೊಳೆನರಸೀಪುರ ಕ್ಷೇತ್ರದಿಂದ ಆಯ್ಕೆಯಾಗಿರುವ ಎಚ್‌.ಎನ್‌.ದ್ಯಾವೇಗೌಡ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಯಾಗಿದ್ದರು.

ಅಂತಿಮವಾಗಿ ಸಚಿವ ಎಚ್‌.ಡಿ.ರೇವಣ್ಣ ಅವರಿಂದ ಈ ಇಬ್ಬರ ಆಯ್ಕೆಗೆ ಹಸಿರು ನಿಶಾನೆ ದೊರಕಿತು. ಇವರ ಅಧಿಕಾರವಧಿ ಎರಡು ವರ್ಷ. ಸೋಮನಹಳ್ಳಿ ನಾಗರಾಜ್ ಅವರು ಹಾಲಿ ತಾಲ್ಲೂಕು ಪಂಚಾಯಿತಿ ಸದಸ್ಯರಾಗಿದ್ದು, ಎಪಿಎಂಸಿ ಹಾಗೂ ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದಾರೆ.

ಬ್ಯಾಂಕ್‌ಗೆ 13 ಮಂದಿ ನಿರ್ದೇಶಕರು ಇದ್ದಾರೆ. ಪಟೇಲ್‌ ಶಿವರಾಂ, ಸಿ.ಎನ್‌.ಬಾಲಕೃಷ್ಣ, ಹೊನ್ನವಳ್ಳಿ ಸತೀಶ್‌, ಗಿರೀಶ್‌ ಚನ್ನವೀರಪ್ಪ, ಎಚ್‌.ಎನ್‌.ದ್ಯಾವೇಗೌಡ, ಬಿಟ್ಟಗೋಡನಹಳ್ಳಿ ಮಂಜೇಗೌಡ, ಬಿದರಕೆರೆ ಜಯರಾಂ, ಬೇಲೂರಿನ ಎಂ.ಎ.ನಾಗರಾಜ್‌, ಅರಸೀಕೆರೆ ಯೋಗೇಶಪ್ಪ, ಆಲೂರಿನ ಕಬ್ಬಿನಹಳ್ಳಿ ಜಗದೀಶ್‌, ಸೋಮನಹಳ್ಳಿ ನಾಗರಾಜ್‌, ಬಾಗೂರು ಶಿವಣ್ಣ, ಹೊನ್ನಶೆಟ್ಟಿಹಳ್ಳಿ ಪುಟ್ಟಸ್ವಾಮಿ ನಿರ್ದೇಶಕರಾಗಿದ್ದಾರೆ.

ಬಳಿಕ ಮಾತನಾಡಿದ ನಾಗರಾಜ್‌, ‘ರೈತರ ಸಾಲ ಮನ್ನಾ ವಿಚಾರ ಕುರಿತು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಾಕಷ್ಟು ಕಾಳಜಿ ವಹಿಸಿದ್ದು , ಕೆಲವೇ ದಿನಗಳಲ್ಲಿ ತಮ್ಮ ನಿರ್ಧಾರ ಪ್ರಕಟಿಸಲಿದ್ದಾರೆ. ರಾಜ್ಯದಲ್ಲಿ ಮೈತ್ರಿ ಸರ್ಕಾರ ಆಡಳಿತದಲ್ಲಿರುವುದರಿಂದ ಎರಡೂ ಪಕ್ಷಗಳ ಸಹಮತದೊಂದಿಗೆ ಸಾಲ ಮನ್ನಾ ನಿರ್ಣಯ ಮಾಡಬೇಕಾಗುತ್ತದೆ’ ಎಂದು ಹೇಳಿದರು.

‘ 2017 ಡಿ. 17ರ ನಂತರ ಸಾಲ ಪಡೆದಿರುವ ರೈತರನ್ನು ಸಾಲ ಮನ್ನಾ ವ್ಯಾಪ್ತಿಗೆ ಸೇರಿಸುವಂತೆ ಒತ್ತಡ ಹೇರಲಾಗಿದೆ. ಆದರೆ, ಸರ್ಕಾರ ಮೇ ತಿಂಗಳಿಂದ ಈಚೆಗೆ ಪಡೆದಿರುವ ರೈತರ ಸಾಲ ಮನ್ನಾ ಮಾಡುವ ಕುರಿತು ಯೋಚನೆ ಮಾಡುತ್ತಿದೆ. ₹ 50 ಸಾವಿರಕ್ಕಿಂತ ಅಧಿಕ ಸಾಲ ಮಾಡಿದ ರೈತರಿಗೂ ಅನುಕೂಲ ಕಲ್ಪಿಸಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ’ ಎಂದು ತಿಳಿಸಿದರು.

ನಗರಸಭೆ ಮಾಜಿ ಅಧ್ಯಕ್ಷ ಚನ್ನವೀರಪ್ಪ, ಸತೀಶ್ ಹೊನ್ನವಳ್ಳಿ, ಚಂದ್ರಶೇಖರ್, ಸೋಮನಾಯಕ್, ಎಪಿಎಂಸಿ ಜೈರಾಂ, ಲಕ್ಷ್ಮಣ್, ನಗರಸಭೆ ಸದಸ್ಯ ಯಶ್ವಂತ್ ಇದ್ದರು.

ಕಡಿಮೆ ಬಡ್ಡಿ ದರದಲ್ಲಿ ಸಾಲ

‘ಹಿಂದಿನ ಅಧ್ಯಕ್ಷರ ಸಲಹೆ ಸಹಕಾರ ಪಡೆದು ಕೆಲಸ ಮಾಡುತ್ತೇನೆ. ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಲಾಗುವುದು. ಕಡಿಮೆ ಬಡ್ಡಿ ದರದಲ್ಲಿ ರೈತರಿಗೆ ಹಣಕಾಸಿನ ನೆರವು ನೀಡಲಾಗುವುದು. ಪ್ರೋತ್ಸಾಹ ಧನದ ಲಾಭವನ್ನು ಅರ್ಹರಿಗೆ ತಲುಪಿಸಲಾಗುವುದು’ ಎಂದು ಎಚ್ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಸೋಮನಹಳ್ಳಿ ನಾಗರಾಜ್ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry