ಸೋಮವಾರ, ಡಿಸೆಂಬರ್ 9, 2019
22 °C
ವಿವಿಧ ಸಮಸ್ಯೆ ಬಗೆಹರಿಸಲು ಒತ್ತಾಯ: ನಾಳೆಯಿಂದ ವಾಹನ ಮಾಲೀಕರ ಧರಣಿ

ಬಿಲ್‌ ಬಾಕಿ: ಕಸ ವಿಲೇವಾರಿ ಸ್ಥಗಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಿಲ್‌ ಬಾಕಿ: ಕಸ ವಿಲೇವಾರಿ ಸ್ಥಗಿತ

ಬೆಂಗಳೂರು: ಬಾಕಿ ಬಿಲ್‌ ಪಾವತಿಯೂ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕಸ ಸಾಗಿಸುವ ವಾಹನ ಮಾಲೀಕರು ಸೋಮವಾರದಿಂದ (ಜೂ.11) ಅನಿರ್ದಿಷ್ಟಾವಧಿ ಧರಣಿ ನಡೆಸಲು ನಿರ್ಧರಿಸಿರುವುದರಿಂದ ನಗರದಲ್ಲಿ ಕಸ ವಿಲೇವಾರಿ ಸಮಸ್ಯೆ ಎದುರಾಗಲಿದೆ.

ಜಯನಗರ ವಿಧಾನಸಭಾ ಕ್ಷೇತ್ರದ ಚುನಾವಣೆ ನಡೆಯುತ್ತಿರುವುದರಿಂದ ಆ ಕ್ಷೇತ್ರ ವ್ಯಾಪ್ತಿ ಹೊರತುಪಡಿಸಿ, ಬೇರೆಲ್ಲೂ  ಕಸ ಸಾಗಾಟ ಮಾಡುವುದಿಲ್ಲ. ಪೌರ ಕಾರ್ಮಿಕರು ಗುಡಿಸಿ ರಾಶಿ ಮಾಡಿಟ್ಟ ಕಸವನ್ನು ಆಟೋ ಟಿಪ್ಪರ್‌ಗಳು, ಡಂಪರ್‌ ವಾಹನಗಳು ಒಯ್ಯುವುದಿಲ್ಲ. ವಾಹನಗಳ ಮಾಲೀಕರು ಪಾಲಿಕೆ ಕಚೇರಿ ಮುಂದೆ ಪ್ರತಿಭಟನೆಯಲ್ಲಿ ತೊಡಗಲಿದ್ದಾರೆ ಎಂದು ಸಂಘದ ಕಾರ್ಯದರ್ಶಿ ಎಸ್‌.ಎನ್‌.ಬಾಲಸುಬ್ರಹ್ಮಣ್ಯನ್‌ ಹೇಳಿದರು.

ಜನವರಿಯಿಂದ ಮೇ ತಿಂಗಳವರೆಗಿನ ಸುಮಾರು 200 ಕೋಟಿ ಮೊತ್ತದ ಬಿಲ್‌ಗಳು ಬಾಕಿ ಇವೆ. ಶೇಕಡ 10ರಷ್ಟಾದರೂ ಬಿಲ್‌ ಮೊತ್ತ ಪಾವತಿಸುವಂತೆ ಕೇಳಿದರೂ ಸಣ್ಣಪುಟ್ಟ ಕಾರಣವೊಡ್ಡಿ ವಿಶೇಷ ಆಯುಕ್ತರು ಕಡತ ಹಿಂದಿರುಗಿಸುತ್ತಿದ್ದಾರೆ. ವಾಹನ ಬಾಡಿಗೆಯ ಪರಿಷ್ಕೃತ ದರ ಪಟ್ಟಿಯನ್ನು ಇನ್ನೂ ಜಾರಿಗೊಳಿಸಿಲ್ಲ. ಇದುವರೆಗೂ ಸೇವಾ ತೆರಿಗೆ ಸಮಸ್ಯೆಯನ್ನು ಬಗೆಹರಿಸಿಲ್ಲ. ದೂರ ಸಂಚರಿಸುವ ವಾಹನಗಳಿಗೆ ಕೊಡಬೇಕಾದ ಲೀಡ್‌ ಬಿಲ್‌ ಮತ್ತು ಟೋಲ್‌ ಬಿಲ್ಲನ್ನು ಸಹ ಪಾವತಿಸಿಲ್ಲ ಎಂದು ಮುಖಂಡರು

ಆರೋಪಿಸಿದರು.

ಕಾರ್ಮಿಕ ವಿಮಾ ಯೋಜನೆ ಹಾಗೂ ಭವಿಷ್ಯನಿಧಿಯ ಬಿಲ್‌ಗಳನ್ನೂ ಪಾಲಿಕೆ ಬಾಕಿ ಇರಿಸಿಕೊಂಡಿದೆ. ಇದು ಹೀಗೇ ಮುಂದುವರಿದರೆ ಇಎಸ್‌ಐ ಹಾಗೂ ಭವಿಷ್ಯನಿಧಿ ಎರಡೂ ಇಲಾಖೆಗಳು ನಮ್ಮ ಬ್ಯಾಂಕ್‌ ಖಾತೆಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಅಪಾಯವಿದೆ. ವಾಹನ ಚಾಲಕರು ಮತ್ತು ಸಹಾಯಕರ ಭತ್ಯೆ, ವಾಹನ ನಿರ್ವಹಣೆ ಭತ್ಯೆಯನ್ನೂ ಹೆಚ್ಚಿಸುವಂತೆ ಒತ್ತಾಯಿಸಲಾಗಿತ್ತು. ಯಾವುದಕ್ಕೂ ಪಾಲಿಕೆ ಸ್ಪಂದಿಸದಿದ್ದರಿಂದ ಈ ನಿರ್ಧಾರ ಕೈಗೊಳ್ಳಲಾಯಿತು ಎಂದು ಬಾಲಸುಬ್ರಹ್ಮಣ್ಯನ್‌ ಹೇಳಿದರು.

ಈ ಬಗ್ಗೆ ಪ್ರತಿಕ್ರಿಯೆಗೆ ಮೇಯರ್‌ ಆರ್‌.ಸಂಪತ್‌ರಾಜ್‌ ಮತ್ತು ಹಿರಿಯ ಅಧಿಕಾರಿಗಳು ಸಿಗಲಿಲ್ಲ.

ಬಿಬಿಎಂಪಿ ಅಧಿಕಾರಿಗಳ ಜತೆ ಉಪಮುಖ್ಯಮಂತ್ರಿ ಸಭೆ

ಬೆಂಗಳೂರು: ಕಸ ಸಾಗಣೆ ವಾಹನ ಮಾಲೀಕರು ಮುಷ್ಕರ ನಡೆಸುವ ಸೂಚನೆ ಹೊರಡಿಸಿದ ಹಿನ್ನೆಲೆಯಲ್ಲಿ ಬೆಂಗಳೂರು ಅಭಿವೃದ್ಧಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರು ಶನಿವಾರ ಸಂಜೆ ಬಿಬಿಎಂಪಿ ಅಧಿಕಾರಿಗಳ ಸಭೆ ಕರೆದು ಚರ್ಚಿಸಿದರು.

‘ಗುತ್ತಿಗೆದಾರರಿಗೆ ಬಾಕಿ ಹಣ ಪಾವತಿಸಬೇಕು. ನಗರದ ಸ್ವಚ್ಛತೆಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು. ಬೀದಿ ದೀಪ ನಿರ್ವಾಹಕರ ಬಾಕಿ ಹಣವನ್ನೂ ಪಾವತಿಸಬೇಕು’ ಎಂದು ಅವರು ಸೂಚಿಸಿದರು.

ಇದೇ ವೇಳೆ ಸ್ವಚ್ಛತೆ ಮತ್ತು ಲಾರಿ ಮಾಲೀಕರ ಹಾಗೂ ಗುತ್ತಿಗೆದಾರರ ಸಂಘದ ಕಾರ್ಯದರ್ಶಿ ಎಸ್‌.ಎನ್‌.ಬಾಲಸುಬ್ರಹ್ಮಣ್ಯನ್‌ ಜತೆ ದೂರವಾಣಿಯಲ್ಲಿ ಮಾತನಾಡಿದ ಪರಮೇಶ್ವರ್‌, ‘ಜೂನ್‌ 11ರ ಮಧ್ಯಾಹ್ನ 3 ಗಂಟೆಯ ಒಳಗೆ ನಿಮ್ಮ ಎಲ್ಲ ಬಾಕಿ ಹಣ ಪಾವತಿಸಲು ವ್ಯವಸ್ಥೆ ಮಾಡಲಾಗುವುದು. ಆದ್ದರಿಂದ ಧರಣಿ ಕೈಬಿಡಬೇಕು' ಎಂದು ಕೋರಿದರು.

ಪ್ರತಿಕ್ರಿಯಿಸಿದ ಬಾಲಸುಬ್ರಹ್ಮಣ್ಯನ್‌, ‘ಇಲ್ಲಿ ಕೇವಲ ಹಣ ಪಾವತಿಯದ್ದೊಂದೇ ಸಮಸ್ಯೆ ಅಲ್ಲ. ಬಿಬಿಎಂಪಿ ವ್ಯವಸ್ಥೆಯೂ ಸರಿಯಾಗಬೇಕಿದೆ. ಅದಕ್ಕಾಗಿ ಎಲ್ಲ ಸಮಸ್ಯೆಗಳ ಬಗ್ಗೆ ಚರ್ಚಿಸಲು ಸಮಯಾವಕಾಶ ಕೊಡಬೇಕು’ ಎಂದು ಕೋರಿದರು.

‘ಸೋಮವಾರ ಬೆಳಿಗ್ಗೆ 11ಕ್ಕೆ ಸಚಿವರು ಮತ್ತು ಸಂಘದ ಪದಾಧಿಕಾರಿಗಳ ಜತೆ ಮಾತುಕತೆ ನಿಗದಿಯಾಗಿದೆ. ಧರಣಿ ಹಿಂತೆಗೆದುಕೊಳ್ಳುವ ಅಥವಾ ಮುಂದುವರಿಸುವ ಬಗ್ಗೆ ಇನ್ನಷ್ಟೇ ನಿರ್ಧರಿಸಬೇಕಿದೆ’ ಎಂದು ಬಾಲಸುಬ್ರಹ್ಮಣ್ಯನ್‌ ಹೇಳಿದರು.

ಮಳೆಗಾಲದ ಸಂದರ್ಭ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ, ಸ್ವಚ್ಛತೆ ಸಮಸ್ಯೆ ಬಗೆಗೂ ಸಭೆಯಲ್ಲಿ ಚರ್ಚೆ ನಡೆದವು. ಸೋಮವಾರ ಉಪಮುಖ್ಯಮಂತ್ರಿ ಜತೆ ಕಗನಾಳಕೆರೆ ಮತ್ತು ಬೆಳ್ಳಂದೂರು ಕೆರೆಗೆ ಭೇಟಿ ನೀಡುವುದಾಗಿ ಸಭೆಯಲ್ಲಿ ಭಾಗವಹಿಸಿದ್ದ ಬಿಬಿಎಂಪಿ ಮೇಯರ್‌ ಆರ್‌.ಸಂಪತ್‌ರಾಜ್‌ ತಿಳಿಸಿದರು.

**

ಗುತ್ತಿಗೆದಾರರ ಬಿಲ್‌ ಬಾಕಿ ಪಾವತಿಸಲು ಕ್ರಮ ಕೈಗೊಳ್ಳುತ್ತೇವೆ. ಕಾನೂನು ಪ್ರಕಾರ ಕೊಡಬೇಕಾದ ಸೌಲಭ್ಯಗಳನ್ನು ಶೀಘ್ರವೇ ಒದಗಿಸುತ್ತೇವೆ.

– ಮಹೇಶ್ವರರಾವ್‌, ಆಯುಕ್ತ ಬಿಬಿಎಂಪಿ

ಪ್ರತಿಕ್ರಿಯಿಸಿ (+)