ಆಧಾರ ನೀರುಪಾಲು: ಕಿವಿ, ಬಾಯಿ ಬಾರದ ಮಗಳ ಅಮ್ಮ ಇನ್ನಿಲ್ಲ...

7
ಸಾಲ ಮಾಡಿ ಇಬ್ಬರು ಮಕ್ಕಳ ಮದುವೆ -

ಆಧಾರ ನೀರುಪಾಲು: ಕಿವಿ, ಬಾಯಿ ಬಾರದ ಮಗಳ ಅಮ್ಮ ಇನ್ನಿಲ್ಲ...

Published:
Updated:

ಬೆಳ್ತಂಗಡಿ: ಬೆಳ್ತಂಗಡಿ ತಾಲ್ಲೂಕಿನ ಶಿರ್ಲಾಲು ಗ್ರಾಮದ ಅರ್ಕಿಜಡ್ಡದ ಆ ಮನೆಯಲ್ಲಿ ಗಂಡನನ್ನು ಕೆಲವು ವರ್ಷಗಳ ಹಿಂದೆ ಕಳೆದುಕೊಂಡು ಮನೆಯ ಮಕ್ಕಳಿಗೆ ಆಧಾರವಾಗಿದ್ದ ತಾಯಿಗೆ ಶನಿವಾರ ಜೀವನದಿಯ ನೀರು ಯಮಸ್ವರೂಪಿಯಾಯಿತು, ಮಕ್ಕಳ ಬದುಕು ದಿಕ್ಕೆಟ್ಟು ಹೋಯಿತು.

ಭಾರಿ ಮಳೆ.. ಆದರೆ, ಮನೆಯಲ್ಲಿ ಕೂತರೆ ಬದುಕು ಸಾಗಿಸಲು ಕಷ್ಟ ಎಂಬಂಥ ಕುಟುಂಬಗಳಲ್ಲಿ ಅರ್ಕಿಜಡ್ಡ ರೇವತಿಯವರ ಮನೆಯೂ ಒಂದು.  ಕೆಲಸಕ್ಕೆ ಹೋಗುವುದಕ್ಕೆ ಮುಂಚೆ ಬಟ್ಟೆ ತೊಳೆಯಲೆಂದು ಶನಿವಾರ ಬೆಳಿಗ್ಗೆ  ಫಲ್ಗುಣಿ ನದಿಯ ಬಳಿಗೆ ಹೋದ ರೇವತಿಯವರು ಕಾಲು ಜಾರಿ ನದಿಗೆ ಬಿದ್ದಿದ್ದು, ನೀರಿನ ರಭಸಕ್ಕೆ ಕೊಚ್ಚಿ ಹೋಗಿ ಸಾವನ್ನಪ್ಪಿದ್ದಾರೆ.

ಪತಿಯ ಮರಣದ ನಂತರ ನಾಲ್ವರು ಸಣ್ಣ ಮಕ್ಕಳ ಜೊತೆ ಮನೆಯನ್ನು ನಡೆಸುವ ಹೊಣೆಯಲ್ಲೂ ದೃತಿಗೆಡಲಿಲ್ಲ. ದುಡಿಮೆಯ ಜೊತೆಗೆ ಸ್ವ ಸಹಾಯ ಸಂಘದಲ್ಲಿ ಸೇರಿಕೊಂಡು ಮೂವರು ಹೆಣ್ಣು ಮಕ್ಕಳು ಮತ್ತು ಒಬ್ಬ ಗಂಡು ಮಗನನ್ನು ಸಾಕಿದ್ದರು. ಮೂವರು ಹೆಣ್ಣು ಮಕ್ಕಳಲ್ಲಿ ಒಬ್ಬಳಿಗೆ ಕಿವಿ ಕೇಳದು ಮತ್ತು ಬಾಯಿ ಬಾರದ ಪರಿಸ್ಥಿತಿ. ಇಬ್ಬರು ಹೆಣ್ಣು ಮಕ್ಕಳನ್ನು  ಮದುವೆ ಮಾಡಿ ಕೊಟ್ಟಿದ್ದಾರೆ. ಮಗನಿಗೂ ಆರಂಭದಲ್ಲಿ ಮಾತು ಬಾರದ ಸ್ಥಿತಿ ಇದ್ದರೂ ಕ್ರಮೇಣ ಸುಧಾರಿಸಿಕೊಂಡು ಪೈಂಟಿಂಗ್ ಕೆಲಸ ಮಾಡುತ್ತಿದ್ದಾನೆ.  ಕುಟುಂಬ ಈಗ ದಿಕ್ಕೆಟ್ಟು ಹೋಗಿದೆ. ಅಮ್ಮ ಇಲ್ಲದೆ ಆ ಕುಟುಂಬ ದುಃಖದ ಮಡುವಿನಲ್ಲಿದೆ.

ನೀರಿಗೆ ವೃದ್ಧ ಬಲಿ

ಬದಿಯಡ್ಕ: ದೇಲಂಪಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಡೂರಿನ ಪಯಸ್ವಿನಿ ಹೊಳೆಯಲ್ಲಿ ನೀರಿನ ಸೆಳೆತಕ್ಕೆ ಸಿಲುಕಿ ದಿವಂಗತ ಕುಂಞ ನಾಯ್ಕರ ಪುತ್ರ ಚರ್ಲಕೈ ಚನಿಯ ನಾಯ್ಕ (63) ಎಂಬವರು ಮೃತರಾಗಿದ್ದಾರೆ.

ಮೃತ ಚನಿಯ ನಾಯ್ಕರು ಗುರುವಾರ ಸಂಜೆ ಗಾಳಿಮುಖಕ್ಕೆ ಸಾಮಗ್ರಿ ಖರೀದಿಸಲೆಂದು ಪಯಸ್ವಿನಿ ಹೊಳೆ ದಾಟಿ ಬಂದಿದ್ದರು. ಆದರೆ ತಿರುಗಿ ಮನೆಗೆ ಹೋಗುವಾಗ ನೀರಿನ ಪ್ರವಾಹ ಹೆಚ್ಚಿರುವುದನ್ನು ಗಮನಿಸದೆ ನದಿ ದಾಟುತ್ತಿದ್ದಾಗ ನೀರಿನ ಸೆಳೆತಕ್ಕೆ ಸಿಲುಕಿ ನೀರು ಪಾಲಾಗಿರಬಹುದೆಂದು ಶಂಕಿಸಲಾಗಿದೆ. ಆದೂರು ಠಾಣಾ ಪೊಲೀಸರ ಸಹಕಾರದಲ್ಲಿ ಅಗ್ನಿಶಾಮಕ ದಳವು ಶುಕ್ರವಾರ ಹಾಗೂ ಶನಿವಾರ ಶೋಧ ಕಾರ್ಯ ನಡೆಸಿತ್ತು. ಶನಿವಾರ ಮಧ್ಯಾಹ್ನ ಮೃತದೇಹವು ಕುಂಟಾರು ದೇವಸ್ಥಾನದ ಪರಿಸರದ ಪಯಸ್ವಿನಿ ಹೊಳೆಯಲ್ಲಿ ದೊರೆತಿದೆ. ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ, ಕುಟುಂಬಿಕರಿಗೆ ಬಿಟ್ಟುಕೊಡಲಾಯಿತು. ಮೃತರಿಗೆ ಪತ್ನಿ, ಇಬ್ಬರು ಪುತ್ರರು ಹಾಗೂ ಪುತ್ರಿ ಇದ್ದಾರೆ.

ಗಣೇಶ್ ಬಿ ಶಿರ್ಲಾಲ್

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry