ಪೂರ್ಣವಾಗದ ರಸ್ತೆ: ಜನರ ಪರದಾಟ

7
ಅತಂತ್ರವಾದ ಕ್ಯಾಸನಕೆರೆ –ಚೌಡಾಪುರ ಸಂಪರ್ಕ ರಸ್ತೆ

ಪೂರ್ಣವಾಗದ ರಸ್ತೆ: ಜನರ ಪರದಾಟ

Published:
Updated:

ಕೂಡ್ಲಿಗಿ: ತಾಲ್ಲೂಕಿನ ಆಯ್ಯಗಳ ಮಲ್ಲಾಪುರ ಬಳಿ ಮೇಲ್ದರ್ಜೆಗೆ ಏರಿಸಲು ರಸ್ತೆಯನ್ನು ಅಗೆದು, ಕಲ್ಲು ಹಾಕಿ ಕೈಬಿಟ್ಟಿರುವುದರಿಂದ ಸ್ಥಳೀಯರು ಬೇರೆ ಗ್ರಾಮಗಳಿಗೆ ಹೋಗಲು ಪರದಾಡುವಂತಾಗಿದೆ.

ರಾಷ್ಟ್ರೀಯ ಹೆದ್ದಾರಿ 50ರಲ್ಲಿನ ಕ್ಯಾಸನಕೆರೆ ಗ್ರಾಮದಿಂದ ಚೌಡಾಪುರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಈ ರಸ್ತೆಯನ್ನು ಅಭಿವೃದ್ಧಿಪಡಿಸಲು ಅಯ್ಯಗಳ ಮಲ್ಲಾಪುರ ಗ್ರಾಮದ ಅಕ್ಕ ಪಕ್ಕದಲ್ಲಿ 2016–17ನೇ ಸಾಲಿನಲ್ಲಿ ಗುತ್ತಿಗೆ ನೀಡಲಾಗಿದೆ. ಅಭಿವೃದ್ಧಿ ಕಾರ್ಯ ಆರಂಭಿಸಿ ಆರು ತಿಂಗಳು ಕಳೆದರು ಇನ್ನೂ ಪೂರ್ಣಗೊಂಡಿಲ್ಲ.

ಅಮಲಾಪುರ, ಕ್ಯಾಸನಕೆರೆ, ಅಯ್ಯಗಳ ಮಲ್ಲಾಪುರ ಗ್ರಾಮಗಳು ಚೌಡಾಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿವೆ. ಈ ಗ್ರಾಮಗಳ ಜನರು ಪಂಚಾಯ್ತಿಗೆ ಬರಬೇಕು ಎಂದರೆ ಇದೊಂದೇ ದಾರಿ. ಅಲ್ಲದೆ, ವಾಣಿಜ್ಯ ಕೇಂದ್ರ ಕೊಟ್ಟೂರು, ಪಂಚಪೀಠಗಳಲ್ಲಿ ಒಂದಾದ ಪ್ರಸಿದ್ದ ಧಾರ್ಮಿಕ ಕೇಂದ್ರ ಉಜ್ಜನಿಗೆ ಹೋಗಲು ಹಾಗೂ ಮಲ್ಲಾಪುರ ಗ್ರಾಮಸ್ಥರು ತಾಲ್ಲೂಕು ಕೇಂದ್ರ ಕೂಡ್ಲಿಗಿಗೆ ಹೋಗಲು ಇದೇ ರಸ್ತೆಯನ್ನು ಅವಲಂಬಿಸಿದ್ದಾರೆ.

ಅಭಿವೃದ್ಧಿ ಸಲುವಾಗಿ ರಸ್ತೆಯನ್ನು ಅಗೆದು ಮೂರು ತಿಂಗಳ ಕಾಲ ಕೈಬಿಡಲಾಗಿತ್ತು. ಅದರಿಂದ ರಸ್ತೆಯಲ್ಲಿ ಕಲ್ಲುಗಳು ಮೇಲೆದ್ದು ಸಂಚಾರ ದುಸ್ತರವಾಗಿತ್ತು. ಗ್ರಾಮದ ಜನರ ಒತ್ತಾಯದ ಬಳಿಕ ರಸ್ತೆಯ ಮೇಲೆ ಜಲ್ಲಿ ಕಲ್ಲುಗಳನ್ನು ಹಾಕಿ ಮೂರು ತಿಂಗಳು ಕಳೆದಿವೆ.

‘ಈ ಪರಿಸ್ಥಿತಿಯಲ್ಲಿ ಜನರು ನಡೆದುಕೊಂಡು ಹೋಗಲು ಸಾಧ್ಯವಾಗುತ್ತಿಲ್ಲ. ಅನೇಕ ಬೈಕ್ ಸವಾರರು ಬಿದ್ದು ಕೈಕಾಲು ಮುರಿದುಕೊಂಡಿದ್ದಾರೆ. ರಸ್ತೆ ದುಸ್ಥಿತಿಯಿಂದ ಸಾರಿಗೆ ಇಲಾಖೆಯ ಬಸ್ ಸಹ ಬರುತ್ತಿಲ್ಲ. ಈ ಬಗ್ಗೆ ಅಧಿಕಾರಿಗಳಿಗೆ ಹೇಳಿದರು ಗಮನ ಹರಿಸುತ್ತಿಲ್ಲ’ ಎಂದು ಅಯ್ಯಗಳ ಮಲ್ಲಾಪುರದ ಸಂತೋಷ ಹಾಗೂ ಆರೋಪಿಸಿದರು. ‘ಶೀಘ್ರವಾಗಿ ರಸ್ತೆ ಅಭಿವೃದ್ಧಿ ಪೂರ್ಣಗೊಳಿಸದಿದ್ದರೆ ಹೋರಾಟದ ದಾರಿ ಹಿಡಿಯುತ್ತೇವೆ’ ಎಂದು ಎಚ್ಚರಿಸಿದ್ದಾರೆ.

ವಿಧಾನಸಭೆ ಚುನಾವಣಾ ಕರ್ತವ್ಯದಲ್ಲಿ ಇದ್ದುದರಿಂದ ರಸ್ತೆ ಅಭಿವೃದ್ಧಿಗೆ ಗಮನ ಕೊಡಲು ಆಗಿರಲಿಲ್ಲ. ಶೀಘ್ರ ಅಭಿವೃದ್ಧಿಪಡಿಸಲಾಗುವುದು

- ಎಚ್.ವಿಶ್ವನಾಥ, ಲೋಕೋಪಯೋಗಿ ಇಲಾಖೆ, ಎಇಇ

ಎ.ಎಂ. ಸೋಮಶೇಖರಯ್ಯ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry