ಹಸಿರೇ ಉಸಿರಾದ ತಾಳೂರು ಶಾಲೆ

7
ರಾಜ್ಯಮಟ್ಟದ ಪರಿಸರ ಮಿತ್ರ ಪ್ರಶಸ್ತಿಗೆ ಪಾತ್ರವಾದ ಹಿರಿಮೆ; ಪರಿಶ್ರಮಕ್ಕೆ ಸಂದ ಫಲ

ಹಸಿರೇ ಉಸಿರಾದ ತಾಳೂರು ಶಾಲೆ

Published:
Updated:

ಸಿರುಗುಪ್ಪ: ‘ಇಪ್ಪತ್ತೈದು ಬಾದಾಮಿ ಮರ, ಮೂವತ್ತು ಬೇವಿನ ಮರ, ಇಪ್ಪತ್ತೈದು ತೆಂಗಿನ ಮರ, ಹದಿನೈದು ಬಾಳೆ ಗಿಡ, ಅಶೋಕ, ನಿಂಬೆ, ತುಳಸಿ, ನೇರಳೆ, ಮಾವು, ನಮ್ಮ ಶಾಲೆಯ ಆವರಣದಲ್ಲಿರುವ ಗಿಡ–ಮರಗಳು. ಅವಲ್ಲದೆ ಶಾಲೆಯಲ್ಲೇ ಬೆಂಡೆ, ಬೀಟ್‌ರೂಟ್‌, ಕ್ಯಾರೆಟ್‌, ಟೊಮೆಟೋ, ಹೀರೇಕಾಯಿ, ಪಡುವಲ ಕಾಯಿ, ಚಪ್ಪರದ ಅವರೆ, ಕರಿಬೇವು ಚೌಳಿಕಾಯಿ ಗಿಡಗಳನ್ನು ಬೆಳೆಯುತ್ತೇವೆ. ನೂರಾರು ಅಲಂಕಾರಿಕ ಗಿಡಗಳಿವೆ.

ತಾಲ್ಲೂಕಿನ ತಾಳೂರು ಗ್ರಾಮದಲ್ಲಿ ಇರುವ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ನಿಂತು ಮುಖ್ಯಶಿಕ್ಷಕಿ ಆರ್‌.ರಾಘಮ್ಮ ಹೇಳುತ್ತಿದ್ದರೆ, ಆಗಷ್ಟೇ ಇಡ್ಲಿ ಸಾಂಬಾರು ಸವಿದ ವಿದ್ಯಾರ್ಥಿಗಳು ತಟ್ಟೆ ತೊಳೆಯಲು ಕೊಳವೆಬಾವಿಯ ಕಡೆಗೆ ಓಡುತ್ತಿದ್ದರು.

ಹೌದು, ಎರಡೂವರೆ ವರ್ಷದ ಹಿಂದಿನಿಂದ ಈ ಶಾಲೆಯಲ್ಲಿ ಪ್ರತಿ ಶನಿವಾರ ಮಕ್ಕಳಿಗೆ ಇಡ್ಲಿಸಾಂಬಾರ್‌ ವಿತರಣೆ ಮಾಡಲಾಗುತ್ತಿದೆ. ಶಾಲೆಗೆ ಹಾಜರಾಗದ ಮಕ್ಕಳ ಬಿಸಿಯೂಟದ ಖರ್ಚನ್ನೆಲ್ಲ ಸೇರಿಸಿ ಉದ್ದಿನಬೇಳೆ ಖರೀದಿಸುವ ಶಿಕ್ಷಕರು, ಬಿಸಿಯೂಟದ ಅಕ್ಕಿಯಿಂದ ರೆವೆ ಮಾಡಿಸಿ, ಇಡ್ಲಿ ತಯಾರಿಸುತ್ತಾರೆ!

ಮುಖ್ಯರಸ್ತೆಯಲ್ಲೇ ಇರುವ ಶಾಲೆಯ ಮುಂದೆ ನಿಲ್ಲುತ್ತಲೇ ಹಸಿರು ಸ್ವರ್ಗ ತೆರೆದುಕೊಳ್ಳುತ್ತದೆ. ಸಾಲು ಮರದ ತಿಮ್ಮಕ್ಕ, ಸಲೀಂ ಅಲಿ ಮತ್ತು ಅಬ್ದುಲ್‌ ಕಲಾಂ ಹೆಸರಿನ ಕೈತೋಟಗಳು ಕರೆಯುತ್ತವೆ. ತರಗತಿ ಕೊಠಡಿಗಳ ಪಡಸಾಲೆ ಯುದ್ದಕ್ಕೂ ಗಿಡ–ನೆಟ್ಟ ಮರಗಳು ಗಾಳಿಗೆ ಬಾಗುತ್ತವೆ. ಅಲ್ಲಲ್ಲಿ ಸಿಮೆಂಟ್‌ ಕುರ್ಚಿಗಳನ್ನೂ ಹಾಕಲಾಗಿದೆ.

ಈ ಕುರ್ಚಿಗಳ ಕತೆಯಲ್ಲೂ ವಿಶೇಷ ಇದೆ. ‘ಶಾಲೆಗೆ ಮಕ್ಕಳ ವರ್ಗಾವಣೆ ಪ್ರಮಾಣಪತ್ರ, ವಿದ್ಯಾರ್ಥಿ ವೇತನದ ಸಲುವಾಗಿ ಬರುವ ಪೋಷಕರಿಂದ ದೇಣಿಗೆ ಪಡೆಯಲು ಪುಟ್ಟ ಕಾಣಿಕೆ ಡಬ್ಬಿಇಡಲಾಗಿದೆ. ಆಸಕ್ತರು ಅದರೊಳಕ್ಕೆ ಇಪ್ಪತ್ತರಿಂದ ಐವತ್ತು ರೂಪಾಯಿವರೆಗೆ

ದೇಣಿಗೆ ಹಾಕಬಹುದು. ಅದರಿಂದ ಬಂದ ಆರು ಸಾವಿರ ರೂಪಾಯಿ ಮತ್ತು ಶಾಲೆ ಎದುರಿನ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ರಾಜೇಶ್‌ ಅವರು ನೀಡಿದ ಆರು ಸಾವಿರ ರೂಪಾಯಿ ಸೇರಿಸಿ ನಾಲ್ಕು ಕುರ್ಚಿಗಳನ್ನು ಖರೀದಿಸಿದೆವು’ ಎಂದು ರಾಘಮ್ಮ ಹೆಮ್ಮೆಯಿಂದ ಹೇಳಿದರು.

ಟ್ಯಾಂಕರ್‌ ನೀರು: ನಲ್ಲಿಯಲ್ಲಿ ಪಂಚಾಯಿತಿ ನೀರು ಹರಿಸಿದರಷ್ಟೇ ಹಸಿರು ಎಂಬ ನಿರ್ಲಿಪ್ತ ಧೋರಣೆಗೆ ಇಲ್ಲಿ ಅವಕಾಶವಿಲ್ಲ. ಹೀಗಾಗಿ ಪ್ರತಿ ಬೇಸಿಗೆಯಲ್ಲೂ ಕನಿಷ್ಠ ಎರಡು ತಿಂಗಳ ಕಾಲ ಟ್ಯಾಂಕರ್‌ ನೀರನ್ನು ಖರೀದಿಸಿ ಗಿಡಗಳಿಗೆ ಉಣಿಸುವ ಪದ್ಧತಿಯೂ ಇಲ್ಲಿದೆ.

‘ತರಕಾರಿ, ಸೊಪ್ಪು ಬೆಳೆಯುವ ರೀತಿಯಲ್ಲಿ ನಾವೇ ಹೇಳಿಕೊಡುತ್ತೇವೆ. ಚಿಂತಾಮಣಿಯಿಂದ ನಾವು ಎಲೆಕೋಸು ಮತ್ತು ಹೂಕೋಸು ಬೀಜ

ತಂದು ನಾಟಿ ಮಾಡಿದ್ದೆವು’ ಎಂದು ಸಹ ಶಿಕ್ಷಕ ಮಲ್ಲಿಕಾರ್ಜುನ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry