ಸಚಿವ ಪುಟ್ಟರಾಜು ಮುನಿಸು ಶಮನ

7
ರೆಸಾರ್ಟ್‌ನಲ್ಲಿ ಜಿ.ಟಿ.ದೇವೇಗೌಡ

ಸಚಿವ ಪುಟ್ಟರಾಜು ಮುನಿಸು ಶಮನ

Published:
Updated:

ಮೈಸೂರು/ಸುಂಟಿಕೊಪ್ಪ/ಮಂಡ್ಯ: ಕೇಳಿದ ಖಾತೆ ನೀಡಿಲ್ಲವೆಂದು ಮುನಿಸಿಕೊಂಡಿರುವ ಸಚಿವ ಜಿ.ಟಿ.ದೇವೇಗೌಡ ಅವರು ಕೊಡಗು ಜಿಲ್ಲೆ ಸುಂಟಿಕೊಪ್ಪ ಸಮೀಪದ ಪ್ಯಾಡಿಂಗ್ಟನ್ ರೆಸಾರ್ಟ್‌ನಲ್ಲಿ ತಂಗಿದ್ದಾರೆ ಎನ್ನಲಾಗಿದೆ.

ಇನ್ನು ಸಣ್ಣ ನೀರಾವರಿ ಖಾತೆ ಬಗ್ಗೆ ತಕರಾರು ತೆಗೆದಿದ್ದ ಸಿ.ಎಸ್‌.ಪುಟ್ಟರಾಜು ಅವರು ತಮ್ಮ ಪಾಲಿಗೆ ಲಭಿಸಿರುವ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿಭಾಯಿಸುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಆದರೆ, ಉನ್ನತ ಶಿಕ್ಷಣ ಖಾತೆ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಜಿ.ಟಿ.ದೇವೇಗೌಡರು, ಎರಡು ದಿನಗಳಿಂದ ಪಕ್ಷದ ವರಿಷ್ಠರ ಸಂಪರ್ಕಕ್ಕೆ ಸಿಗುತ್ತಿಲ್ಲ. ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿರುವ ಅವರ ಜೊತೆ ಪಿರಿಯಾಪಟ್ಟಣ ಶಾಸಕ ಕೆ.ಮಹದೇವ ಹಾಗೂ ಬೆಂಬಲಿಗರು ಇದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಚಿತ್ರೀಕರಣದಲ್ಲಿ ಪಾಲ್ಗೊಂಡಿರುವ ಪುತ್ರ ನಿಖಿಲ್‌ ಜೊತೆ ಸಮಯ ಕಳೆಯುವ ಉದ್ದೇಶದಿಂದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಶನಿವಾರ ರಾತ್ರಿ ಮೈಸೂರಿಗೆ ಭೇಟಿ ನೀಡಿದ್ದರು. ಪತ್ನಿ ಅನಿತಾ ಕುಮಾರಸ್ವಾಮಿ ಜೊತೆ ಕಾರಿನಲ್ಲಿ ಬಂದ ಅವರು ಇನ್ಫೊಸಿಸ್‌ ಬಳಿಯ ಹೋಟೆಲಿನಲ್ಲಿ ಉಳಿದುಕೊಂಡಿದ್ದರು.

ಈ ಸಂದರ್ಭದಲ್ಲಿ ಅವರನ್ನು ಸಚಿವ ಸಿ.ಎಸ್‌.ಪುಟ್ಟರಾಜು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಅವರಿಗೆ ಮಂಡ್ಯ ಜಿಲ್ಲಾ ಉಸ್ತುವಾರಿ ವಹಿಸುವ ಭರವಸೆ ನೀಡಿದ್ದಾರೆ ಎನ್ನಲಾಗಿದೆ.

‘ಖಾತೆ ಬಗ್ಗೆ ನನಗೆ ಯಾವುದೇ ಅಸಮಾಧಾನ ಇಲ್ಲ. ಸಣ್ಣ ನೀರಾವರಿ ಸಚಿವನಾಗಿರುವುದು ಸಂತಸ ತಂದಿದೆ. ಕೊಟ್ಟಿರುವ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತೇನೆ. ಮಾಧ್ಯಮಗಳ ವರದಿಗಳಿಂದ ಜನರು ಗೊಂದಲಕ್ಕೆ ಒಳಗಾಗಿದ್ದಾರೆ ಅಷ್ಟೆ’ ಎಂದು ಮೇಲುಕೋಟೆ ಶಾಸಕರೂ ಆಗಿರುವ ಪುಟ್ಟರಾಜು ಅವರು ‘ಫೇಸ್‌ಬುಕ್‌’ನಲ್ಲಿ ಬರೆದುಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry