ನಿರಾಶಾದಾಯಕ ಆರ್ಥಿಕತೆ

7
ಬೆಂಗಳೂರು ಸೇರಿದಂತೆ 6 ನಗರಗಳಲ್ಲಿ ಆರ್‌ಬಿಐ ಸಮೀಕ್ಷೆ

ನಿರಾಶಾದಾಯಕ ಆರ್ಥಿಕತೆ

Published:
Updated:

ನವದೆಹಲಿ: ದೇಶಿ ಆರ್ಥಿಕತೆಯ ಪರಿಸ್ಥಿತಿಯು ಎರಡು ವರ್ಷಗಳ ಹಿಂದಿನ ಮಟ್ಟಕ್ಕೆ ಹೋಲಿಸಿದರೆ ಸದ್ಯಕ್ಕೆ ತುಂಬ ನಿರಾಶಾದಾಯಕವಾಗಿದೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ ನಡೆಸಿರುವ ಸಮೀಕ್ಷೆಯಲ್ಲಿ ಭಾಗವಹಿಸಿದ್ದವರು ಹೇಳಿದ್ದಾರೆ.

ಬೆಂಗಳೂರು ಸೇರಿದಂತೆ ದೇಶದ 6 ಮಹಾನಗರಗಳಲ್ಲಿ ನಡೆಸಲಾಗಿರುವ ಈ ಸಮೀಕ್ಷೆಯಲ್ಲಿ ಭಾಗವಹಿಸಿದ್ದ ಶೇ 48ರಷ್ಟು ಜನರು, ದೇಶಿ ಆರ್ಥಿಕತೆಯ ಪರಿಸ್ಥಿತಿಯು ಹದಗೆಟ್ಟಿದೆ. ಎರಡು ವರ್ಷಗಳ ಹಿಂದಿನ ಮಟ್ಟಕ್ಕೆ ಹೋಲಿಸಿದರೆ ಇನ್ನಷ್ಟು ಕೆಳಗೆ ಇಳಿದಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ದೇಶಿ ಆರ್ಥಿಕತೆಯ ಚಿತ್ರಣವು ನಿರೀಕ್ಷಿತ ಮಟ್ಟದಲ್ಲಿ ಇಲ್ಲ ಎಂದು 2016ರ ಡಿಸೆಂಬರ್‌ನಲ್ಲಿ ನಂಬಿದ್ದವರ ಸಂಖ್ಯೆ ಶೇ 30ರಷ್ಟಿತ್ತು. ಈ ವರ್ಷದ ಮೇ ತಿಂಗಳಲ್ಲಿ ಈ ನಿಲುವಿಗೆ ಬಂದವರ ಪ್ರಮಾಣದಲ್ಲಿ ಏರಿಕೆ ಕಂಡು ಬಂದಿದೆ.

ಬೆಲೆ ಏರಿಕೆಗೆ ಆತಂಕ: ನರೇಂದ್ರ ಮೋದಿ ನೇತೃತ್ವದಲ್ಲಿನ ಕೇಂದ್ರ ಸರ್ಕಾರವು ತನ್ನ ಅಧಿಕಾರಾವಧಿಯ ನಾಲ್ಕು ವರ್ಷ ಪೂರ್ಣಗೊಳಿಸುವ ಮೊದಲು ಈ ಸಮೀಕ್ಷೆ ನಡೆಸಲಾಗಿತ್ತು. ಅವಶ್ಯಕ ಸರಕುಗಳ ಬೆಲೆಗಳು  ಮುಂಬರುವ ದಿನಗಳಲ್ಲಿ ಗಮನಾರ್ಹ ಏರಿಕೆ ಕಾಣಲಿವೆ. ಅದರಿಂದ ಜನಸಾಮಾನ್ಯರ ಬದುಕಿನ ಸಂಕಷ್ಟ ಹೆಚ್ಚಲಿದೆ ಎಂದು ಸಮೀಕ್ಷೆಯಲ್ಲಿ ಭಾಗವಹಿಸಿದ್ದ ಬಹುತೇಕರು ಆತಂಕ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು, ಚೆನ್ನೈ, ಹೈದರಾಬಾದ್‌, ಕೋಲ್ಕತ್ತ, ಮುಂಬೈ ಮತ್ತು ದೆಹಲಿಯ 5,077 ಜನರು ಈ ಸಮೀಕ್ಷೆಯಲ್ಲಿ ಭಾಗವಹಿಸಿದ್ದರು.

ಅರ್ಥ ವ್ಯವಸ್ಥೆಯ ಸಾಮಾನ್ಯ ಸ್ಥಿತಿಗತಿ, ಉದ್ಯೋಗ ಅವಕಾಶಗಳು, ಒಟ್ಟಾರೆ ಬೆಲೆ ಮಟ್ಟ, ಕುಟುಂಬದ ಆದಾಯ ಮತ್ತು ವೆಚ್ಚ ಪರಿಗಣಿಸಿ ಜನರು ಈ ಅಭಿಪ್ರಾಯಕ್ಕೆ ಬಂದಿದ್ದಾರೆ.

ಆರ್ಥಿಕತೆ ಬಗ್ಗೆ ಜನಸಾಮಾನ್ಯರ ನಿಲುವು, ಮುಂಬರುವ ದಿನಗಳ ಬಗ್ಗೆ ಅವರ ನಿರೀಕ್ಷೆಗಳ ಕುರಿತು ಆರ್‌ಬಿಐ ಮೂರು ತಿಂಗಳಿಗೊಮ್ಮೆ ಸಮೀಕ್ಷೆ ನಡೆಸುತ್ತದೆ.

ಹೊಸ ಉದ್ಯೋಗ ಅವಕಾಶಗಳ ಲಭ್ಯತೆ ತುಂಬ ಕಡಿಮೆಯಾಗಿದೆ ಎಂದು ಶೇ 44ರಷ್ಟು ಜನರು ಹೇಳಿದ್ದಾರೆ.

ಈ ಅಭಿಪ್ರಾಯಕ್ಕೆ ಬರುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ದಿನಬಳಕೆ ಸರಕುಗಳ ಬೆಲೆಗಳು ದುಬಾರಿಯಾಗಿವೆ ಎಂದು ಶೇ 88ರಷ್ಟು ಜನರು ಆತಂಕ ವ್ಯಕ್ತಪಡಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry