ಕೇರಳ: ಮರ್ಯಾದೆಗೇಡು ಹತ್ಯೆ ಪೊಲೀಸ್ ನಿರ್ಲಕ್ಷ್ಯ ಅಕ್ಷಮ್ಯ

7

ಕೇರಳ: ಮರ್ಯಾದೆಗೇಡು ಹತ್ಯೆ ಪೊಲೀಸ್ ನಿರ್ಲಕ್ಷ್ಯ ಅಕ್ಷಮ್ಯ

Published:
Updated:

ವಿವಾಹವಾದ ಕೆಲವೇ ದಿನಗಳಲ್ಲಿ ಪತ್ನಿಯ ಸೋದರನಿಂದ ಅಪಹರಣಕ್ಕೊಳಗಾದ ಕೆವಿನ್ ಜೋಸೆಫ್ ಸಾವಿನ ಪ್ರಕರಣ ಕೇರಳದಲ್ಲಿ ತಳಮಳ ಸೃಷ್ಟಿಸಿದೆ. ಪತ್ನಿಯ ಸೋದರ ಹಾಗೂ ಆತನ ಸಹಚರರಿಂದ ಕೆವಿನ್ ಹತ್ಯೆಯಾಯಿತೇ ಅಥವಾ ಅವರಿಂದ ತಪ್ಪಿಸಿಕೊಂಡು ಬರುವಾಗ ನೀರಿನಲ್ಲಿ ಮುಳುಗಿ ಸಾವು ಸಂಭವಿಸಿತೇ ಅಥವಾ ನೀರಿನಲ್ಲಿ ಬಲವಂತವಾಗಿ ಮುಳುಗಿಸಲಾಯಿತೇ ಎಂಬಂಥ ವಿವರಗಳು ಸ್ಪಷ್ಟವಿಲ್ಲ.

ಏನೇ ಇದ್ದರೂ ಕುಟುಂಬದ ಮರ್ಯಾದೆ ಎಂಬಂಥ ಸುಳ್ಳು ಪ್ರತಿಷ್ಠೆಯ ಹಣಾಹಣಿಯಲ್ಲಿ ನಡೆದ ಕೊಲೆ ಇದು ಎಂಬುದರಲ್ಲಿ ಎರಡು ಮಾತಿಲ್ಲ. ದಲಿತ ಕ್ರೈಸ್ತ ಸಮುದಾಯಕ್ಕೆ ಸೇರಿದ ಕೆವಿನ್ ಪ್ರೀತಿಸಿದ ಹುಡುಗಿ ನೀನು ಚಾಕೊ ಸಾಮಾಜಿಕ ಹಾಗೂ ಆರ್ಥಿಕವಾಗಿ ಮೇಲ್ವರ್ಗದ ಕುಟುಂಬಕ್ಕೆ ಸೇರಿದವಳು. ವಿಪರ್ಯಾಸ ಎಂದರೆ ನೀನುವಿನ ತಂದೆ ರೋಮನ್ ಕ್ಯಾಥೊಲಿಕ್ ಕ್ರೈಸ್ತರಾಗಿದ್ದರೆ ಅಮ್ಮ ಇಸ್ಲಾಂ ಧರ್ಮಕ್ಕೆ ಸೇರಿದವರು.

ಹೀಗಿದ್ದೂ ಮಗಳ ಸ್ವ ಇಚ್ಛೆಯ ವಿವಾಹಕ್ಕೆ ಅಡ್ಡಿಪಡಿಸಲು ಹಿಂಸಾತ್ಮಕ ರೀತಿಯಲ್ಲಿ ಪ್ರಯತ್ನಗಳನ್ನು ಮಾಡಿದ್ದು ವಿಷಾದನೀಯ. ಕೇರಳದಲ್ಲಿ ಈ ಹಿಂದೆ ಈ ಬಗೆಯ ಅಪರಾಧಗಳು ವರದಿಯಾಗಿಲ್ಲ. ಇದು ಹೊಸ ಬೆಳವಣಿಗೆ. ಕಳೆದ ನಾಲ್ಕು ವರ್ಷಗಳಲ್ಲಿ ಕೇರಳದಲ್ಲಿ ನಾಲ್ಕು ಮರ್ಯಾದೆಗೇಡು ಹತ್ಯೆಗಳು ವರದಿಯಾಗಿವೆ ಎಂಬುದು ಕಳವಳಕಾರಿ.

ಹೆಚ್ಚು ಮಂದಿ ಸುಶಿಕ್ಷಿತರಿದ್ದು ಪ್ರಗತಿಪರ ರಾಜ್ಯವೆಂದು ಹೇಳಿಕೊಳ್ಳುವಂತಹ ಕೇರಳದಲ್ಲಿ ಈ ಬೆಳವಣಿಗೆ ಅಸಂಗತ. ಅಷ್ಟೇ ಅಲ್ಲ, ಕೆವಿನ್ ಪ್ರಕರಣದಲ್ಲಿ ಕೇರಳ ಪೊಲೀಸರ ನಿರ್ಲಕ್ಷ್ಯ ತೀವ್ರ ಮಾತುಗಳಲ್ಲಿ ಖಂಡನೀಯ.

ಕೆವಿನ್‌ ಅವರನ್ನು ಮನೆಯಿಂದ ಬಲವಂತವಾಗಿ ಕರೆದೊಯ್ದ ನಂತರ ಆತನ ಸುಳಿವಿಲ್ಲ ಎಂದು ಪೊಲೀಸ್ ಠಾಣೆಗೆ ಭೇಟಿ ನೀಡಿ ನೀನು ಚಾಕೊ ದೂರು ನೀಡಿದರೂ ಅದನ್ನು ಗಂಭೀರವಾಗಿ ಪೊಲೀಸರು ಪರಿಗಣಿಸದೇ ಇದ್ದುದು ಖಂಡನೀಯ. ಕೊಟ್ಟಾಯಂಗೆ ಮುಖ್ಯಮಂತ್ರಿಯವರ ಭೇಟಿಯ ನೆಪ ಹೇಳಿ ಕೆವಿನ್‌ ಪತ್ತೆಗೆ ಕಾರ್ಯಪ್ರವೃತ್ತರಾಗದೆ ಕಾಯುವಂತೆ ಹೇಳಿದ ಪೊಲೀಸರ ವರ್ತನೆ ವ್ಯಾಪಕ ಟೀಕೆಗಳಿಗೆ ಈಗ ಕಾರಣವಾಗಿದೆ.

ಮಹಿಳೆಗೆ ಸಂಬಂಧಿಸಿದ ಅಪರಾಧ ಪ್ರಕರಣಗಳಲ್ಲಿನ ಪೊಲೀಸರ ಈ ಬಗೆಯ ದಿವ್ಯ ನಿರ್ಲಕ್ಷ್ಯ ಮಾಮೂಲು. ಆದರೆ ಈ ಉದಾಸೀನ ಭಾವದಿಂದ ಜೀವವೊಂದು ಬಲಿಯಾಗಬೇಕಾಗಿ ಬಂದದ್ದು ಅಕ್ಷಮ್ಯ.

ಜಾತಿ ಪದ್ಧತಿ ವಿರುದ್ಧ ಸಿಡಿದೆದ್ದ ನಾರಾಯಣ ಗುರು ಅವರಂತಹ ಆಧ್ಯಾತ್ಮಿಕ ಗುರುಗಳು ಮುನ್ನಡೆಸಿದ ಸಮಾಜ ಸುಧಾರಣೆ ಹೋರಾಟಗಳನ್ನು ಕಂಡ ನಾಡು ಕೇರಳ. ರಾಜ್ಯದಲ್ಲಿ ಹಲವು ದಶಕಗಳ ಕಮ್ಯುನಿಸ್ಟ್ ಆಡಳಿತವೂ ಜಾತಿ, ಧರ್ಮ ಆಧಾರಿತ ಮೇಲು, ಕೀಳು ಭಾವನೆಗಳನ್ನು ತೊಡೆಯಲಾಗಿಲ್ಲ ಎಂಬುದಕ್ಕೆ ಇತ್ತೀಚಿನ ಮರ್ಯಾದೆಗೇಡು ಹತ್ಯೆ ಪ್ರಕರಣಗಳು ದ್ಯೋತಕ.

ಇಂತಹ ಹತ್ಯೆಗಳಿಗೆ ಕಾರಣವಾಗುವ ಮನಸ್ಸುಗಳು ಈ ನೆಲದ ಕಾನೂನುಗಳಿಗೆ ಸವಾಲೊಡ್ಡುವಂತಹವು. ವಿವಾಹಕ್ಕೆ ಸಂಬಂಧಿಸಿದಂತೆ ವ್ಯಕ್ತಿಯ ಅದರಲ್ಲೂ ಹೆಣ್ಣುಮಕ್ಕಳ ಆಯ್ಕೆಯ ಸ್ವಾತಂತ್ರ್ಯಕ್ಕೆ ಇಲ್ಲಿ ಯಾವುದೇ ಬೆಲೆ ಇಲ್ಲ. ಇಂತಹ ವಿಚಾರಗಳನ್ನು ರಾಜಕೀಯಗೊಳಿಸಿ ಸಮರ್ಥಿಸಿಕೊಳ್ಳುವ ಕೆಟ್ಟ ವಿದ್ಯಮಾನಗಳೂ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿವೆ.

ಆದರೆ ಇಂತಹ ಪ್ರಕರಣಗಳಲ್ಲಿ ನ್ಯಾಯಾಲಯಗಳು ವ್ಯಕ್ತಿ ಸ್ವಾತಂತ್ರ್ಯ ಎತ್ತಿಹಿಡಿದಿವೆ ಎಂಬುದು ಸಮಾಧಾನಕರ. ಹೀಗಾಗಿ ಮರ್ಯಾದೆಗೇಡು ಹತ್ಯೆ ಪ್ರಕರಣಗಳು ದೊಡ್ಡ ಪಿಡುಗಾಗಿ ಬೆಳೆಯದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸರ್ಕಾರದ ಆಡಳಿತ ವ್ಯವಸ್ಥೆ ಮುಂದಾಗಬೇಕು. ಈ ನಿಟ್ಟಿನಲ್ಲಿ ಸಮಾಜವೂ ಸಂವೇದನಾಶೀಲತೆ ಪ್ರದರ್ಶಿಸಬೇಕು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry