ಜಾಹೀರಾತು ತೆರಿಗೆ ವಸೂಲಿ; ಪಾಲಿಕೆ ನಿರ್ಲಕ್ಷ್ಯ

7
ಮಹಾನಗರ ಪಾಲಿಕೆ ನಿಷ್ಕ್ರಿಯ ನಡೆಗೆ ಜಿಲ್ಲಾಧಿಕಾರಿ ವಿಶಾಲ್ ತರಾಟೆ; ತುರ್ತು ಕ್ರಮಕ್ಕೆ ಆದೇಶ

ಜಾಹೀರಾತು ತೆರಿಗೆ ವಸೂಲಿ; ಪಾಲಿಕೆ ನಿರ್ಲಕ್ಷ್ಯ

Published:
Updated:

ತುಮಕೂರು: ಮಹಾನಗರ ಅಭಿವೃದ್ಧಿಗೆ ಪ್ರಮುಖ ಆದಾಯ ಮೂಲಗಳಲ್ಲಿ ‘ಜಾಹೀರಾತು’ ತೆರಿಗೆಯೂ ಒಂದು. ಈ ತೆರಿಗೆ ವಸೂಲಿಯಲ್ಲಿ ಮಹಾನಗರ ಪಾಲಿಕೆ ನಿರ್ಲಕ್ಷ್ಯವಹಿಸುತ್ತಿರುವುದು ಎದ್ದು ಕಾಣುತ್ತಿದೆ. ಈ ಹಿಂದೆ ಮಹಾನಗರ ಪಾಲಿಕೆ ಸಭೆಗಳಲ್ಲಿ ಸದಸ್ಯರು ಹಲವು ಬಾರಿ ಚರ್ಚೆ ನಡೆಸಿದ್ದರು. ಕಟ್ಟುನಿಟ್ಟಾಗಿ ವಸೂಲಿ ಮಾಡುವ ಬಗ್ಗೆ ಒತ್ತಾಯಿಸಿದ್ದರು.

ಅಲ್ಲದೇ, ಪಾಲಿಕೆ ಹೊರಗಡೆ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಆಕ್ರೋಶ ವ್ಯಕ್ತಪಡಿಸಿದ್ದರು. ಆದರೆ, ಜಾಹೀರಾತು ವಸೂಲಿ ತೆರಿಗೆ ಪ್ರಕ್ರಿಯೆಯಲ್ಲಿ ಸುಧಾರಣೆ ಕಂಡಿರಲಿಲ್ಲ.

ಮೇ ನಲ್ಲಿ ಪಾಲಿಕೆಯ‌ ಜಾಹೀರಾತು ತೆರಿಗೆ ವಸೂಲಾತಿ ಕುರಿತು ಖುದ್ದು ಜಿಲ್ಲಾಧಿಕಾರಿಯವರೇ ಪ್ರಗತಿ ಪರಿಶೀಲಿಸಿದ್ದರು. ಜಾಹೀರಾತು ತೆರಿಗೆಯ ಪ್ರಮುಖ ವಿಭಾಗಗಳಾದ ಬೇಡಿಕೆ, ವಸೂಲಾತಿ ಮತ್ತು ಬಾಕಿ ಅಂಶಗಳ ಬಗ್ಗೆ ಕೂಲಂಕಷ ಮಾಹಿತಿ ಪಡೆದ ಜಿಲ್ಲಾಧಿಕಾರಿ ಜಾಹೀರಾತು ಶುಲ್ಕವನ್ನು ವಸೂಲಿ ಮಾಡದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು.

ಕಟ್ಟುನಿಟ್ಟಿನ ಆದೇಶ: ನಗರದ ಎಲ್ಲೆಲ್ಲಿ ಜಾಹೀರಾತುಗಳಿವೆ ಎಂಬುದರ ಕುರಿತು ಸರ್ವೆ ಮಾಡಬೇಕು. ಜಾಹೀರಾತು ಪ್ರದರ್ಶನಕ್ಕೆ ಬೇಡಿಕೆ, ಶುಲ್ಕ ವಸೂಲಿ ಮತ್ತು ಬಾಕಿ (ಡಿಸಿಬಿ) ಕುರಿತು ವಿವರ ಪಟ್ಟಿ ರೂಪಿಸಬೇಕು. ಪಾಲಿಕೆಯ ಎಲ್ಲ ಕಂದಾಯ ವಿಭಾಗದ ಸಿಬ್ಬಂದಿಗೆ ನಿಗದಿತ ಗುರಿ ನೀಡಿ ಕೂಡಲೇ ಜಾಹೀರಾತು ಶುಲ್ಕ ವಸೂಲಿಗೆ ಆದೇಶಿಸಬೇಕು ಎಂದು ಮಹಾನಗರ ಪಾಲಿಕೆಯ ಉಪ ಆಯುಕ್ತರಿಗೆ (ಕಂದಾಯ) ಜಿಲ್ಲಾಧಿಕಾರಿ ಸೂಚಿಸಿದ್ದಾರೆ.

ಕಾಲ ಮಿತಿಯಲ್ಲಿ ಗುರಿ ತಲುಪದ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಶಿಫಾರಸು ಮಾಡಬೇಕು. ಬಾಕಿ ಕಟ್ಟಲು ವಿಫಲರಾಗುವ ಜಾಹೀರಾತು ಪ್ರದರ್ಶಕರ ಫಲಕಗಳನ್ನು ಮುಲಾಜಿಲ್ಲದೆ ತೆರವುಗೊಳಿಸಿ ಎಂದು ಆದೇಶಿಸಿದ್ದಾರೆ.

ಜಾಹೀರಾತು ಅಳತೆಗೆ ಅನುಗುಣವಾಗಿ ಮತ್ತು ನಿಗದಿಪಡಿಸಲಾದ ದರದಲ್ಲಿ ಸರ್ವೆ ನಡೆಸಬೇಕು ಎಂದು ಸೂಚಿಸಿದ್ದಾರೆ. ಜೂನ್ ಅಂತ್ಯಕ್ಕೆ ಸರ್ವೆ ಪೂರ್ಣವಾಗಬೇಕು, ಜೂನ್ ಅಂತ್ಯದೊಳಗೆ ಸಂಪೂರ್ಣ ಸರ್ವೆ ಕಾರ್ಯ ಮಾಡದ ಕಂದಾಯ ಇಲಾಖೆಯ ಸಿಬ್ಬಂದಿ ಕುರಿತು ಕರ್ತವ್ಯ ನಿರ್ಲಕ್ಷ್ಯ ಮಹಾನಗರ ಪಾಲಿಕೆಗೆ ಆರ್ಥಿಕ ನಷ್ಟ ಉಂಟು ಮಾಡಿರುವರು ಎಂಬ ಕಾರಣದ ಅಡಿಯಲ್ಲಿ ಜಿಲ್ಲಾಧಿಕಾರಿ ಅವರಿಗೆ ಶಿಸ್ತು ಕ್ರಮ ಕೈಗೊಳ್ಳುವಂತೆ ಶಿಫಾರಸು ಮಾಡಲಾಗುವುದು ಎಂದು ಮಹಾನಗರ ಪಾಲಿಕೆ ಕಂದಾಯ ವಿಭಾಗದ ಉಪ ಆಯುಕ್ತರು ಕರ ವಸೂಲಿಗಾರರಿಗೆ ಎಚ್ಚರಿಕೆ ನೀಡಿದ್ದಾರೆ.

‘ಅಲ್ಲದೇ ಹಿಂದೆ ಎಷ್ಟು ಜಾಹೀರಾತು ಆಯಾ ವಾರ್ಡಿನಲ್ಲಿ ಗುರುತಿಸಲಾಗಿತ್ತು. ಈಗ ಪ್ರತಿದಿನ ಎಷ್ಟು ಜಾಹೀರಾತು ಗುರುತಿಸಬೇಕು, ಗುರುತಿಸಿದ ಜಾಹೀರಾತುಗಳ ಒಟ್ಟು ಸಂಖ್ಯೆ, ವಿವರಗಳನ್ನು ಒದಗಿಸಬೇಕು ಎಂದೂ ಆಯುಕ್ತರು ಆದೇಶಿಸಿದ್ದಾರೆ.

ತೆರಿಗೆ ವಸೂಲಿಗೆ ಸಿಬ್ಬಂದಿ ಅಸಡ್ಡೆ

‘ಪಾಲಿಕೆ ಕೇವಲ ಜಾಹೀರಾತು ತೆರಿಗೆ ವಸೂಲಿಯಲ್ಲಿ ಅಷ್ಟೇ ಅಲ್ಲ, ನೀರಿನ ತೆರಿಗೆ, ಕಟ್ಟಡ ತೆರಿಗೆ, ಬಾಡಿಗೆ ವಸೂಲಾತಿಯಲ್ಲೂ ಉಪೇಕ್ಷೆ ಮಾಡಿದೆ. ಅಧಿಕಾರಿ, ಸಿಬ್ಬಂದಿಗಳ ಅಸಡ್ಡೆಯೇ ಇದಕ್ಕೆ ಕಾರಣವಾಗಿದೆ’ ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಇಮ್ರಾನ್ ಪಾಷಾ ಆರೋಪಿಸಿದರು.

‘ಫುಟ್ ಪಾತ್ ವ್ಯಾಪಾರಿಗಳನ್ನ ಪೀಡಿಸಿ ಅನಧಿಕೃತವಾಗಿ ಹಣ ವಸೂಲು ಮಾಡುವ ಸಿಬ್ಬಂದಿ ಕಾನೂನು ಪ್ರಕಾರವಾಗಿಯೇ ವಸೂಲು ಮಾಡಬಹುದಾದ ಜಾಹೀರಾತು ತೆರಿಗೆ ವಸೂಲಿ ಮಾಡಲು ಗಮನಹರಿಸುತ್ತಿಲ್ಲ. ಜಾಹೀರಾತು ಪ್ರದರ್ಶಕರಿಂದ ಅಕ್ರಮವಾಗಿ ಹಣ ಪಡೆದು ಸುಮ್ಮನಾಗುತ್ತಾರೆ. ಇದರಿಂದ ಪಾಲಿಕೆಗೆ ತೆರಿಗೆ ವಂಚನೆಯಾಗುತ್ತಿದೆ’ ಎಂದು ಹೇಳಿದರು.

ಆದೇಶದಲ್ಲಿ ಏನಿದೆ

ಎಲ್ಲ ಕರವಸೂಲಿಗಾರರು ತಮ್ಮ ವಾರ್ಡ್ ವ್ಯಾಪ್ತಿಯಲ್ಲಿ ಪ್ರದರ್ಶಿತವಾದ ಜಾಹೀರಾತುಗಳ ಕುರಿತು ಕೂಡಲೇ ಸರ್ವೆ ನಡೆಸಬೇಕು. ವ್ಯವಹಾರ ಮತ್ತು ಅಂಗಡಿಯ ಸೂಚನಾ ಫಲಕ ಹೊರತುಪಡಿಸಿ ಯಾವುದೇ ವಸ್ತುವಿನ ಗುಣವಿಶೇಷ ತಿಳಿಸುವ ಚಿತ್ರ, ಛಾಯಾಚಿತ್ರಗಳನ್ನು ಹೊಂದಿರುವ ಎಲ್ಲ ಫಲಕಗಳೂ ಜಾಹೀರಾತು ವ್ಯಾಪ್ತಿಯಲ್ಲಿ ಬರುತ್ತವೆ. ಅವುಗಳಿಗೆ ತೆರಿಗೆ ವಿಧಿಸಬಹುದು. ಹೀಗಾಗಿ, ತೆರಿಗೆ ವಸೂಲಿ ಮಾಡಬೇಕು’ ಎಂದು ಪಾಲಿಕೆ ಉಪ ಆಯುಕ್ತರು ಆದೇಶಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry