ಅಭಿವೃದ್ಧಿಗಾಗಿ ನಿರಂತರ ಹೋರಾಟಕ್ಕೆ ಆದ್ಯತೆ

7
ಔರಾದ್ ಶಾಸಕರ ಸಂದರ್ಶನ

ಅಭಿವೃದ್ಧಿಗಾಗಿ ನಿರಂತರ ಹೋರಾಟಕ್ಕೆ ಆದ್ಯತೆ

Published:
Updated:
ಅಭಿವೃದ್ಧಿಗಾಗಿ ನಿರಂತರ ಹೋರಾಟಕ್ಕೆ ಆದ್ಯತೆ

ಔರಾದ್: ಪ್ರಭು ಚವಾಣ್, ಔರಾದ್ ಮೀಸಲು ಕ್ಷೇತ್ರದಿಂದ ಸತತ ಮೂರನೇ ಬಾರಿಗೆ ಬಿಜೆಪಿಯಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಚುನಾವಣೆ ಪೂರ್ವದಲ್ಲಿ ಮತದಾರರಿಗೆ ನೀಡಿದ ಭರವಸೆ ಈಡೇರಿಸುವ ಹಾಗೂ ಕ್ಷೇತ್ರದ ಜನರು ಅವರ ಮೇಲೆ ಇಟ್ಟ ನಿರೀಕ್ಷೆಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ‘ಪ್ರಜಾವಾಣಿ’ ಜತೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಜನ ನಿಮ್ಮ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟು ಮೂರನೇ ಬಾರಿಗೆ ಆಯ್ಕೆ ಮಾಡಿದ್ದಾರೆ. ಅವರ ನಿರೀಕ್ಷೆಗೆ ಹೇಗೆ ಸ್ಪಂದಿಸುವಿರಿ?

ಹಿಂದಿನ ಎರಡು ಅವಧಿಯಲ್ಲಿ ತಾಲ್ಲೂಕಿನಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ಆಗಿವೆ. ಮೊದಲಿನ ಅವಧಿಯಲ್ಲಿ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ನೆನಪಿಡುವಂತಹ ಹಲವು ಕೆಲಸಗಳು ಆಗಿವೆ. ಕಾಂಗ್ರೆಸ್ ಸರ್ಕಾರ ಇದ್ದ ಕಾರಣ ಎರಡನೇ ಅವಧಿಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಅಭಿವೃದ್ಧಿ ಕೆಲಸಗಳು ಆಗಿಲ್ಲ. ಆದರೂ ಮತದಾರ ನನ್ನ ಕೈಬಿಟ್ಟಿಲ್ಲ. ಈಗ ನನ್ನ ಜಬಾಬ್ದಾರಿ ಮತ್ತಷ್ಟು ಹೆಚ್ಚಿದ್ದು, ಮತದಾರರ ನಿರೀಕ್ಷೆ ಹುಸಿಯಾಗದಂತೆ ಕೆಲಸ ಮಾಡುತ್ತೇನೆ.

ಈ ಬಾರಿಯೂ ರಾಜ್ಯದಲ್ಲಿ ಜೆಡಿಎಸ್‌–ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರ ಇದೆ. ಚುನಾವಣೆ ಪೂರ್ವದಲ್ಲಿ ಮತದಾರರಿಗೆ ನೀಡಿದ ಭರವಸೆ ಹೇಗೆ ಈಡೇರಿಸುತ್ತೀರಿ?

ಈ ಬಾರಿ ರಾಜ್ಯದಲ್ಲಿ ನಮ್ಮ ಪಕ್ಷದ ಸರ್ಕಾರ ಇರದೆ ಇದ್ದರೂ ವಿಧಾನಸಭೆಯಲ್ಲಿ ನಮ್ಮ ಶಾಸಕರ ಬಲ ಹೆಚ್ಚಿದೆ. ನಮ್ಮ ನಾಯಕ ಯಡಿಯೂರಪ್ಪ ವಿರೋಧ ಪಕ್ಷದ ನಾಯಕರಿದ್ದಾರೆ. ಹೀಗಾಗಿ ಹೋರಾಟ ಮಾಡಿಯಾದರೂ ಅನುದಾನ ತಂದು ಕ್ಷೇತ್ರದ ಅಭಿವೃದ್ಧಿ ಮಾಡುತ್ತೇನೆ.

ಬಾಕಿ ಉಳಿದ ಕಾಮಗಾರಿಗಳನ್ನು ಪೂರ್ಣಗೊಳಿಸಲು ಏನು ಯೋಜನೆ ಹಾಕಿಕೊಂಡಿದ್ದೀರಿ?

ತಾಲ್ಲೂಕಿನಲ್ಲಿ ಹಾದು ಹೋಗುವ ಬೀದರ್‌–ನಾಂದೇಡ್‌ ಹೆದ್ದಾರಿ ಕಾಮಗಾರಿ ಆರಂಭವಾಗಬೇಕಿದೆ. ಕೇಂದ್ರ ಹೆದ್ದಾರಿಗಳ ಖಾತೆ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ ಆದಷ್ಟು ಬೇಗ ಕೆಲಸ ಆರಂಭಿಸುವಂತೆ ಒತ್ತಡ ಹಾಕುತ್ತೇನೆ.

ಬೀದರ್–ನಾಂದೇಡ್ ಹೊಸ ರೈಲು ಮಾರ್ಗದ ಬಗ್ಗೆ ಕೇಂದ್ರ ಸರ್ಕಾರದ ಗಮನ ಸೆಳೆಯಲಾಗಿದೆ. ಆ ಕೆಲಸ ಕೂಡ ಆಗಲಿದೆ. ತಾಲ್ಲೂಕಿನಲ್ಲಿ ಕುಡಿಯುವ ನೀರು, ರಸ್ತೆ ಮತ್ತಿತರ ಮೂಲಸೌಲಭ್ಯಗಳನ್ನು ಆದ್ಯತೆ ಮೇಲೆ ಕಲ್ಪಿಸಲಾಗುವುದು.

ಹೊಸದಾಗಿ ರಚನೆಯಾದ ಕಮಲನಗರ ತಾಲ್ಲೂಕು ಅಭಿವೃದ್ಧಿಗೆ ನಿಮ್ಮ ಆದ್ಯತೆ ಏನು?

ಬಿಜೆಪಿ ಸರ್ಕಾರ ಇದ್ದಾಗ ಕಮಲನಗರ ತಾಲ್ಲೂಕು ಘೋಷಣೆಯಾಗಿದೆ. ಕಾಂಗ್ರೆಸ್ ಸರ್ಕಾರ ಹೊಸ ತಾಲ್ಲೂಕು ಅಧಿಕೃತವಾಗಿ ಅಸ್ತಿತ್ವಕ್ಕೆ ತಂದರೂ ಅಲ್ಲಿ ಯಾವುದೇ ಸೌಲಭ್ಯ ಕಲ್ಪಿಸಿಲ್ಲ. ಈಗಾಗಲೇ ಅಲ್ಲಿಯ ಹಿರಿಯ ನಾಗರಿಕರು ಮತ್ತು ಹಿತೈಶಿಗಳ ಜತೆ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಲಾಗಿದೆ.

ಖಾಸಗಿಯವರಿಂದ 2 ಎಕರೆ ಜಮೀನು ಪಡೆದು ಅಲ್ಲಿ ತಹಶೀಲ್ದಾರ್ ಸೇರಿ ತಾಲ್ಲೂಕು ಮಟ್ಟದ ಕಚೇರಿ ನಿರ್ಮಿಸುವ ವಿಚಾರವಿದೆ. ಸರ್ಕಾರಿ ಪಿಯು ಮತ್ತು ಪದವಿ ಕಾಲೇಜು, ಪಾಲಿಟೆಕ್ನಿಕ್ ಕಾಲೇಜು ಅನುಮತಿಗಾಗಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಈಗಿರುವ ಬಸ್ ನಿಲ್ದಾಣ ಮೇಲ್ದರ್ಜೆಗೇರಿಸಲು ರೂಪುರೇಷೆ ಸಿದ್ಧಪಡಿಸಲಾಗಿದೆ. ಜನರ ಸಹಕಾರದಿಂದ ಎರಡು ವರ್ಷದಲ್ಲಿ ಕಮಲನಗರ ಮಾದರಿ ತಾಲ್ಲೂಕು ಮಾಡಲಾಗುವುದು.

ಔರಾದ್ ಕ್ಷೇತ್ರದ ಜನ ಕೆಲಸ ಅರಸಿ ಗುಳೆ ಹೋಗುವುದನ್ನು ತಪ್ಪಿಸಲು ಏನಾದರೂ ಉಪಾಯ ಮಾಡಿದ್ದೀರಾ?

ತಾಲ್ಲೂಕಿನ ನಂದಿ ಬಿಜಲ್‌ಗಾಂವ್ ಬಳಿ 500 ಎಕರೆ ಸರ್ಕಾರಿ ಜಮೀನಿನಲ್ಲಿ ಹೆಲಿಕಾಪ್ಟರ್‌ ಬಿಡಿ ಭಾಗ ತಯಾರಿಕಾ ಕೇಂದ್ರ ಸ್ಥಾಪನೆಗೆ ನಾನು ಸಾಕಷ್ಟು ಪ್ರಯತ್ನ ಮಾಡಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಈಗ ಅದು ಬೇರೆ ಕಡೆ ಸ್ಥಳಾಂತರ ಆಗಿದೆ. ಇದೇ ಸ್ಥಳದಲ್ಲಿ ಕೈಗಾರಿಕೆಯೊಂದು ಸ್ಥಾಪಿಸುವ ಪ್ರಸ್ತಾವ ಇದೆ.

ಇಲ್ಲಿ ಯಾವ ಕಾರ್ಖಾನೆ ಸ್ಥಾಪಿಸಬೇಕು ಎಂಬುದರ ಕುರಿತು ಕೇಂದ್ರದ ತಜ್ಞರ ತಂಡ ತಾಲ್ಲೂಕಿಗೆ ಭೇಟಿ ನೀಡಿ ಪರಿಶೀಲಿಸಲಿದೆ. ಮಾಂಜ್ರಾ ನದಿಗೆ ಬ್ಯಾರೇಜ್ ಕಟ್ಟಿ ಆ ಮೂಲಕ ತಾಲ್ಲೂಕಿನ ರೈತರಿಗೆ ಅನುಕೂಲ ಮಾಡಿಕೊಡುವ ಯೋಜನೆ ತಯಾರಿಸಲಾಗಿದೆ.

ಔರಾದ್ ಪಟ್ಟಣದ ಅಭಿವೃದ್ಧಿಗೆ ಯೋಜನೆ ಏನಾದರೂ ರೂಪಿಸಿದ್ದೀರಾ?

ನಾನು ಶಾಸಕನಾದ ಮೇಲೆ ಪಟ್ಟಣದಲ್ಲಿ ಅನೇಕ ಅಭಿವೃದ್ಧಿ ಕೆಲಸಗಳಾಗಿವೆ. ಎರಡು ಕಡೆ ರಿಂಗ್ ರಸ್ತೆ ನಿರ್ಮಿಸಲಾಗಿದೆ. ಇದರಿಂದಾಗಿ ಪಟ್ಟಣ ದೊಡ್ಡದಾಗಿ ಬೆಳೆದಿದೆ. ಈಗ ಬೀದರ್‌–ನಾಂದೇಡ್‌ ಮುಖ್ಯರಸ್ತೆಯಿಂದ ಮಿನಿ ವಿಧಾನಸೌಧ ಮೂಲಕ 6 ಕಿ.ಮೀ. ವರ್ತುಲ ರಸ್ತೆ ನಿರ್ಮಾಣ ಆಗಬೇಕಿದೆ. ಪಟ್ಟಣದ ದೇಶಮುಖ ಕೆರೆ ಅಭಿವೃದ್ಧಿಪಡಿಸಿ ಅಲ್ಲಿ ಉದ್ಯಾನ ನಿರ್ಮಿಸಲಾಗುವುದು. ಪಟ್ಟಣ ಪಂಚಾಯಿತಿಯನ್ನು ಪುರಸಭೆಯಾಗಿ ಮೇಲ್ದರ್ಜೆಗೇರಿಸಲು ಸರ್ಕಾರದ ಮಟ್ಟದಲ್ಲಿ ಪ್ರಯತ್ನ ನಡೆಸುತ್ತೇನೆ.

ಮನ್ಮಥಪ್ಪ ಸ್ವಾಮಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry