‘ಜೀತಗಾರನ ಮಗನಾಗಿ ಹುಟ್ಟಿ ಸಚಿವನಾದೆ’

7
ಅಭಿನಂದನಾ ಸಮಾರಂಭದಲ್ಲಿ ಸಚಿವ ಎನ್.ಮಹೇಶ್ ಮನದಾಳದ ಮಾತು

‘ಜೀತಗಾರನ ಮಗನಾಗಿ ಹುಟ್ಟಿ ಸಚಿವನಾದೆ’

Published:
Updated:

ಕೊಳ್ಳೇಗಾಲ: ಶಂಕನಪುರದ ಜೀತಗಾರನ ಮಗನಾಗಿ ಹುಟ್ಟಿದ ನಾನು, ಇಂದು ಸಚಿವನಾಗಿದ್ದೇನೆ. ಇದಕ್ಕೆ ಕಾರಣರಾದ ಮತದಾರರಿಗೆ ಚಿರಋಣಿ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಎನ್.ಮಹೇಶ್ ಹೇಳಿದರು.

‌ನಗರದ ಭ್ರಮಾರಂಭ ಕಲ್ಯಾಣ ಮಂಟಪದಲ್ಲಿ ಭಾನುವಾರ ಆಯೋಜಿಸಿದ್ದ ‘ಅಭಿನಂದನಾ ಸಮಾರಂಭ’ದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

‘ಜೀತಗಾರನ ಮಗ ಸಚಿವ ಸ್ಥಾನ ಪಡೆಯಬೇಕಾದರೆ ಡಾ.ಬಿ.ಆರ್. ಅಂಬೇಡ್ಕರ್‌ ಅವರು ನೀಡಿದ ಮೀಸಲಾತಿಯಿಂದ ಸಾಧ್ಯವಾಗಿದೆ. ಪಕ್ಷಭೇದ ಮಾಡದೆ, ಜಾತಿ, ಲಿಂಗಭೇದ ಮಾಡದೆ ಕ್ಷೇತ್ರದ ಜನರ ಜತೆಗಿದ್ದು ಕೆಲಸ ಮಾಡುತ್ತೇನೆ. ಕ್ಷೇತ್ರದ ಜನರು ನನ್ನ ಮೇಲೆ ಇಟ್ಟಿರುವ ಪ್ರೀತಿ, ವಿಶ್ವಾಸಕ್ಕೆ ಧಕ್ಕೆ ಬಾರದ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತೇನೆ’ ಎಂದರು.

ಶಿಕ್ಷಣ ಇಲಾಖೆಯಲ್ಲಿ 5 ಲಕ್ಷ ಶಿಕ್ಷಕರು ಹಾಗೂ 2.5 ಕೋಟಿ ವಿದ್ಯಾರ್ಥಿಗಳಿದ್ದಾರೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಲು ಈಗಿರುವ ವ್ಯವಸ್ಥೆಯನ್ನು ಸುಧಾರಿಸಬೇಕಿದೆ. ಇದಕ್ಕಾಗಿ ಉನ್ನತ ಅಧಿಕಾರಿಗಳ ಸಭೆ ಕರೆಯಲಾಗಿದೆ ಎಂದರು.

‘20 ವರ್ಷಗಳ ಕಾಲ ಸತಾಯಿಸಿ, ಈ ಬಾರಿ 71 ಸಾವಿರಕ್ಕೂ ಹೆಚ್ಚು ಮತ ನೀಡಿದ್ದಾರೆ. ಇದರಿಂದ ಶಾಸಕನಾಗಿ ಮಂತ್ರಿಯಾಗಿದ್ದೇನೆ. ಇದಕ್ಕೆ ಕೊಳ್ಳೇಗಾಲ ಕ್ಷೇತ್ರದ ಎಲ್ಲ ಸಮುದಾಯದವರು ಕಾರಣ. ಅವರ ಋಣ ತೀರಿಸಲು ನುಡಿದಂತೆ ನಡೆಯುತ್ತೇನೆ’ ಎಂದು ಹೇಳಿದರು.

ಅಭಿನಂದನೆ ಕಾರ್ಯಕ್ರಮದಲ್ಲಿ ಬಿಎಸ್‌ಪಿ ಜಿಲ್ಲಾ ಘಟಕದ ಅಧ್ಯಕ್ಷ ಬಾಗಳಿ ರೇವಣ್ಣ, ಯಳಂದೂರು ತಾಲ್ಲೂಕು ಪಂಚಾಯಿತಿ

ಸದಸ್ಯ ನಾಗರಾಜು, ಉದ್ಯಮಿ ವೀರಮಾದು, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯರಾದ ತಿಮ್ಮರಾಜೀಪುರ ಪುಟ್ಟಣ್ಣ, ಹಂಪಾಪುರ ಬಸವಣ್ಣ, ಮುಖಂಡರಾದ ಉದಯ್‍ಕುಮಾರ್, ಸೋಮಣ್ಣ ಉಪ್ಪಾರ್, ರಂಗಸ್ವಾಮಿ, ಶಿವಕುಮಾರ್, ವರದರಾಜು, ಆಗಸ್ಟೀನ್, ಆನಂದ್, ಶ್ರೀಧರ್, ಕುಮಾರ್, ಸಿದ್ದರಾಜು, ಗುಂಡಪ್ಪ, ಜೆಡಿಎಸ್ ಮುಖಂಡರಾದ ಕಾಮರಾಜು, ಚಾಮರಾಜು, ಇಂದ್ರೇಶ್, ಕೃಷ್ಣಯ್ಯ, ಫಾಯಿಕ್, ಸಮೀಷರೀಫ್, ಇನಾಯತ್, ಜಯಂತ್ ಹಾಗೂ ಸಾವಿರಾರು ಮಂದಿ ನೇರೆದಿದ್ದರು.

ಮಂಡಿಯೂರಿ ಕೃತಜ್ಞತೆ ಸಲ್ಲಿಸಿದ ಮಹೇಶ್‌

ಅಭಿನಂದನಾ ಸಮಾರಂಭದ ವೇದಿಕೆ ಮೇಲೆ ಸಚಿವ ಎನ್.ಮಹೇಶ್ ಅವರು ಮಂಡಿಯೂರಿ ಉದ್ದಂಡ ನಮಸ್ಕಾರ ಮಾಡುವ ಮೂಲಕ ಮತದಾರರಿಗೆ ಕೃತಜ್ಞತೆ ಸಲ್ಲಿಸಿದರು. ಈ ವೇಳೆ ಇಡೀ ಸಭೆ ಕ್ಷಣಹೊತ್ತು ಮೌನಕ್ಕೆ ಜಾರಿತು. ಮಹೇಶ್‌ ಅವರು ಮಾತನಾಡುವಾಗ ಗದ್ಗದಿತರಾದರು. ಈ ವೇಳೆ ಸಭಿಕರ ಕಣ್ಣುಗಳಲ್ಲೂ ಹನಿಗಳು ಮೂಡಿದವು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry