7
ರಸ್ತೆಯಲ್ಲೇ ಕೆಟ್ಟುನಿಂತ ಲಾರಿ: ಚಾರ್ಮಾಡಿ ಘಾಟಿಯಲ್ಲಿ ಸಂಚಾರ ವ್ಯತ್ಯಯ

ನಾಲ್ಕು ಗಂಟೆ ಅರಣ್ಯದಲ್ಲಿ ಕಳೆದ ಪ್ರಯಾಣಿಕರು

Published:
Updated:

ಮೂಡಿಗೆರೆ: ರಾಷ್ಟ್ರೀಯ ಹೆದ್ದಾರಿ 234ರ ಚಾರ್ಮಾಡಿ ಘಾಟಿಯಲ್ಲಿ ಭಾನು ವಾರ ನಸುಕಿನಲ್ಲಿ ಉಂಟಾದ ಸಂಚಾರ ವ್ಯತ್ಯಯದಿಂದ ನೂರಾರು ಪ್ರಯಾಣಿಕರು ನಾಲ್ಕು ಗಂಟೆಗಳ ಕಾಲ ಮಳೆಯ ನಡುವೆ ದಟ್ಟಾರಣ್ಯದಲ್ಲಿ ಕಳೆಯುವಂತಾಯಿತು.

ಶನಿವಾರ ಮಧ್ಯರಾತ್ರಿ 2 ಗಂಟೆಯ ಸುಮಾರಿಗೆ ಅಣ್ಣಪ್ಪಸ್ವಾಮಿ ದೇವಾಲಯದಿಂದ ಸ್ವಲ್ಪ ಮುಂದೆ ಘನ ಲಾರಿಯೊಂದು ಕೆಟ್ಟು ನಿಂತ ಪರಿಣಾಮ ಎರಡೂ ಕಡೆಯ ವಾಹನಗಳು ಮುಂದಕ್ಕೆ ಸಂಚರಿಸಲಾಗದೇ ಬೆಳಿಗ್ಗೆ 6.30ರವರೆಗೂ ಘಾಟಿಯಲ್ಲಿಯೇ ಕಳೆಯುವಂತಾಯಿತು. ಬಳಿಕ ಖಾಸಗಿ ವಾಹನಗಳ ಚಾಲಕರು, ಬಸ್‌ ಪ್ರಯಾ ಣಿಕರು ಲಾರಿಯನ್ನು 50 ಅಡಿಗಳಷ್ಟು ದೂರ ಹಿಂದಕ್ಕೆ ತಳ್ಳಿ ರಸ್ತೆಯ ಒಂದು ಬದಿಯಲ್ಲಿ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಿಕೊಂಡು ತೆರಳಿದರು ಎಂದು ಘಾಟಿಯಲ್ಲಿ ಸಿಲುಕಿದ್ದ ಪ್ರವಾಸಿಗ ಮಹೇಶ್‌ ‘ಪ್ರಜಾವಾಣಿ’ಗೆ ವಿವರಿಸಿದರು.

ಘಟನೆಯಿಂದಾಗಿ ಹೆದ್ದಾರಿಯ ಎರಡೂ ಬದಿಯಲ್ಲಿ ಸುಮಾರು ಎರಡು ಕಿ.ಮೀ.ಗೂ ಅಧಿಕ ದೂರ ವಾಹನಗಳು ಸಾಲುಗಟ್ಟಿ ನಿಂತಿದ್ದು, ಬೆಳಿಗ್ಗೆ 8 ಗಂಟೆವರೆಗೂ ವಾಹನಗಳು ಸರದಿಯಲ್ಲಿಯೇ ಸಾಗುತ್ತಿದ್ದವು. ಇಡೀ ರಾತ್ರಿ ಘಾಟಿಯಲ್ಲಿಯೇ ಕಳೆದ ವಾಹನ ಪ್ರಯಾಣಿಕರಲ್ಲಿ ಪುರುಷರು ರಸ್ತೆಬದಿಯಲ್ಲಿಯೇ ಮಲಮೂತ್ರ ವಿಸರ್ಜನೆ ಮಾಡಿದರೆ, ಹೆಣ್ಣುಮಕ್ಕಳು, ಮಹಿಳೆಯರು ಪರಿಸರ ಕರೆಗೆ ತೆರಳಲು ಪೇಚಾಡುತ್ತಿದ್ದರು.

ಕಗ್ಗತ್ತಲಲ್ಲಿ ಮಳೆಯ ನಡುವೆ ಘಾಟಿಯಲ್ಲಿ ಸಿಲುಕಿದ್ದ ಪ್ರಯಾಣಿಕರು ಘಾಟಿ ಬಂದ್‌ ಆಗಿ 4 ಗಂಟೆಯಾದರೂ ಕ್ರಮ ಕೈಗೊಳ್ಳದ ಆಡಳಿತದ ವಿರುದ್ಧ ಹಿಡಿಶಾಪ ಹಾಕಿದರು. ಘಾಟಿ ಬಂದ್‌ ಆಗಿದ್ದರಿಂದ ಕೆಎಸ್‌ಆರ್‌ಟಿಸಿ ಬಸ್‌ ಸಂಚಾರವನ್ನು ಕೊಟ್ಟಿಗೆಹಾರದಲ್ಲಿಯೇ ತಡೆಹಿಡಿಯಲಾಗಿತ್ತು. ಆದರೆ, ಘಾಟಿ ಯಲ್ಲಿ ಸಂಚಾರ ಸ್ಥಗಿತವಾಗಿರುವ ಮಾಹಿತಿಯಿಲ್ಲದ ಖಾಸಗಿ ವಾಹನಗಳು ಘಾಟಿಯಲ್ಲಿ ಸಿಕ್ಕಿಹಾಕಿಕೊಂಡವು. ವಾರಾಂತ್ಯವಾದ್ದರಿಂದ ವಾಹನ ದಟ್ಟಣೆಯೂ ಹೆಚ್ಚಾಗಿತ್ತು.

ಚಾರ್ಮಾಡಿ ಘಾಟಿಯಲ್ಲಿ ಘನವಾಹನಗಳ ಸಂಚಾರವನ್ನು ತಡೆಹಿಡಿದಿದ್ದರೂ ಅಧಿಕಾರಿಗಳ ಧನದಾಹದಿಂದಾಗಿ ನಿತ್ಯವೂ 10, 12, 14 ಚಕ್ರಗಳ ವಾಹನಗಳು ಎಗ್ಗಿಲ್ಲದೇ ಘಾಟಿಯಲ್ಲಿ ಸಂಚರಿಸುತ್ತಿವೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

‘ಘಾಟಿಯ ಹಿಮ್ಮೂರಿ ತಿರುವುಗಳಲ್ಲಿ ಘನವಾಹನಗಳು ತಿರುಗಲಾಗದೇ ಸಿಕ್ಕಿಹಾಕಿಕೊಳ್ಳುತ್ತಿದ್ದು, ಪದೇ ಪದೇ ಸಂಚಾರ ಸ್ಥಗಿತವಾಗುತ್ತಿದೆ. ಘನ ವಾಹನಗಳು, ಹುಲ್ಲಿನ ಲಾರಿಗಳ ಸಂಚಾರದ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿ ಪ್ರಕಟವಾಗುತ್ತಿದ್ದಂತೆ ಒಂದೆ ರಡು ದಿನ ಮಾತ್ರ ಸಂಚಾರ ಸುಗಮವಾಗಿರುತ್ತದೆ. ಸ್ವಲ್ಪ ದಿನ ಕಳೆದರೆ ಪುನಃ ಅವು ರಾಜಾರೋಷವಾಗಿ ಸಂಚರಿಸಿ ಸಂಚಾರಕ್ಕೆ ವ್ಯತಯ ತಂದೊಡ್ಡುತ್ತಿವೆ. ಕೂಡಲೇ ಘಾಟಿಯಲ್ಲಿ ಘನವಾಹನ ಸಂಚಾರವನ್ನು ತಡೆಹಿಡಿಯಬೇಕು. ಇಲ್ಲದಿದ್ದರೆ ಘನವಾಹನಗಳನ್ನು ತಡೆದು ಅಧಿಕಾರಿಗಳು ಸ್ಥಳಕ್ಕೆ ಬರುವವರೆಗೂ ಪ್ರತಿಭಟಿ ಸಲಾಗುವುದು’ ಎಂದು ಸ್ಥಳೀ ಯರು ಎಚ್ಚರಿಕೆ ನೀಡಿದ್ದಾರೆ.

‘ಈ ನರಕಯಾತನೆ ಯಾರಿಗೂ ಬೇಡ’

‘ನಸುಕಿನ 2 ಗಂಟೆಯ ಸುಮಾರಿಗೆ ಘಾಟಿಗೆ ಬಂದ ನಾವು, ಇಡೀ ರಾತ್ರಿಯನ್ನು ಅರಣ್ಯದಲ್ಲಿಯೇ ಕಳೆಯುವಂತಾಯಿತು. ನೆಟ್‌ವರ್ಕ್‌ ಇಲ್ಲದೇ ಮೊಬೈಲ್‌ಗಳು ಸಂಪರ್ಕ ಕಳೆದುಕೊಂಡವು. ಮಳೆಯ ನಡುವೆ ಘಾಟಿಯಲ್ಲಿ ಸಿಲುಕಿದ್ದ ಪ್ರಯಾಣಿಕರು, ಹೆಂಗಸರು, ಹೆಣ್ಣು ಮಕ್ಕಳು ಬೆಳಿಗ್ಗೆ ಮಲ–ಮೂತ್ರ ವಿಸರ್ಜನೆಗಾಗಿ ಪರದಾಡಿದ ಸಂಕಟ ಶತ್ರುಗಳಿಗೂ ಬರಬಾರದು’ ಎಂದು ಚಿತ್ರದುರ್ಗದ ಮಹೇಶ್‌ ಆಕ್ರೋಶ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry