ಮಾವು ಮೇಳದಲ್ಲಿ ಖರೀದಿ ಭರಾಟೆ

7
ಮೇಳದಲ್ಲಿ ವಿವಿಧ ಬಗೆಯ ಹಣ್ಣುಗಳ ಪ್ರದರ್ಶನ; ಇಂದು ಮೇಳದ ಕಡೆಯ ದಿನ

ಮಾವು ಮೇಳದಲ್ಲಿ ಖರೀದಿ ಭರಾಟೆ

Published:
Updated:
ಮಾವು ಮೇಳದಲ್ಲಿ ಖರೀದಿ ಭರಾಟೆ

ಹಾಸನ: ಆಕರ್ಷಕ ಬಣ್ಣ, ಘಮ ಘಮ ಪರಿಮಳ, ಬಾಯಲ್ಲಿ ನೀರೂರಿಸುವ ಮಾವು.. ಇದು ನಗರ ಸಾರಿಗೆ ಬಸ್‌ ನಿಲ್ದಾಣದ ಆವರಣದಲ್ಲಿ ತೋಟಗಾರಿಕೆ ಇಲಾಖೆ, ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ಆಯೋಜಿಸಿರುವ ಮಾವು ಹಾಗೂ ಹಲಸಿನ ಮೇಳದ ಚಿತ್ರಣ.

ಮೇಳಕ್ಕೆ ಉತ್ತಮ ಪ್ರತಿಕ್ರಿಯೆ ದೊರಕಿದ್ದು, ಗ್ರಾಹಕರು ರುಚಿಕರ ಹಣ್ಣುಗಳನ್ನು ಖರೀದಿಸಲು ಮುಗಿಬಿದ್ದಿದ್ದಾರೆ. ದಿನಕ್ಕೆ ಅಂದಾಜು 3 ರಿಂದ 4 ಸಾವಿರ ಕೆ.ಜಿ. ಮಾವಿನ ಹಣ್ಣುಗಳು ಮಾರಾಟವಾಗುತ್ತಿವೆ.

ಮಂಡ್ಯ, ಕೋಲಾರ, ಚನ್ನಪಟ್ಟಣ, ಚಿಕ್ಕಬಳ್ಳಾಪುರ, ರಾಮನಗರ ಜಿಲ್ಲೆಗಳ ಬೆಳೆಗಳನ್ನು ಪ್ರದರ್ಶನ ಮತ್ತು ಮಾರಾಟಕ್ಕೆ ಇಡಲಾಗಿದೆ. ಬಾದಾಮಿ, ಬಂಗನಪಲ್ಲಿ, ರಸಪುರಿ, ಮಲ್ಲಿಕಾ, ಸೇಂದೂರ, ಮಲಗೋಬಾ, ತೋತಾಪುರಿ, ನೀಲಂ, ಅಮ್ರಪಾಲಿ, ಕೇರ್ಸ, ದಶೇರಿ ತಳಿಗಳ ಹಣ್ಣುಗಳು ಗಮನಸೆಳೆಯುತ್ತಿವೆ. ₹ 20ಕ್ಕೆ ಮಾವಿನ ಹಣ್ಣಿನ ರಸದ ರುಚಿ ಸವಿಯುವ ಅವಕಾಶವೂ ಊಂಟು.

20 ಬಗೆಯ ಮಾವು ಗ್ರಾಹಕರನ್ನು ಮೋಡಿ ಮಾಡಿವೆ. ಒಟ್ಟು 15 ಮಳಿಗೆಗಳನ್ನು ತೆರೆಯಲಾಗಿದ್ದು, ಜೂನ್‌ 11 ಕಡೆ ಮೇಳಕ್ಕೆ ತೆರೆ ಬೀಳಲಿದೆ.

‘ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಉತ್ತಮ ಪ್ರತಿಕ್ರಿಯೆ ಬಂದಿದೆ. ಕಾರ್ಬೈಡ್‌ ಮುಕ್ತ ಹಣ್ಣುಗಳ ಮಾರಾಟದ ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಖರೀದಿಸುತ್ತಿದ್ದಾರೆ. ಬೆಳೆಗಾರರಿಂದ ಯಾವುದೇ ಶುಲ್ಕ ತೆಗೆದುಕೊಂಡಿಲ್ಲ. ಮಾವು ಬೆಳೆ ಉತ್ಪಾದನೆ ಹಾಗೂ ಮಾರಾಟ ಪ್ರೋತ್ಸಾಹಿಸಲು ಮೇಳ ಆಯೋಜಿಸಲಾಗಿದೆ. ಇದರಿಂದ ರೈತರು ಹಾಗೂ ಗ್ರಾಹಕರಿಗೆ ಅನುಕೂಲವಾಗುವುದರ ಜತೆಗೆ ವಿವಿಧ ಜಿಲ್ಲೆಗಳ ಹಣ್ಣುಗಳ ಪರಿಚಯವಾಗಲಿದೆ’ ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಸಂಜಯ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ವಿವಿಧ ತಳಿಯ ಮಾವಿನ ಬೆಲೆ ಚಿಲ್ಲರೆ ಮಾರಾಟಕ್ಕೆ ಹೋಲಿಸಿದರೆ ಕಡಿಮೆ ಇದ್ದ ಕಾರಣ, ಗ್ರಾಹಕರು ಮುಗಿಬಿದ್ದು ಕೊಂಡು ಹೋಗುತ್ತಿದ್ದಾರೆ. ಬಾದಾಮಿ (ಕೆ.ಜಿ. ₹ 60), ರಸಪುರಿ (₹ 40), ಮಲಗೋಬಾ (₹ 80), ನೀಲಂ (₹ 40), ಅಮ್ರಪಾಲಿ ( ₹ 60), ಕೇರ್ಸ (₹ 50), ದಶೇರಿ (₹ 80) ರಂತೆ ಮಾರಾಟ ಮಾಡಲಾಗುತ್ತಿದೆ.

ಅಲ್ಲದೇ ಚಂದ್ರ ಬಂಗಾರ, ಕೆಂಪು ಮತ್ತು ಹಳದಿ ರುದ್ರಾಕ್ಷಿ ಹಲಸು ಸೇರಿದಂತೆ ಮಾವು, ನಿಂಬೆ, ಅಡಿಕೆ, ತೆಂಗು, ತುಳಸಿ, ಕಾಳು ಮೆಣಸು, ನುಗ್ಗೆ, ಪಪ್ಪಾಯ ಸಸಿಗಳನ್ನು ಕಡಿಮೆ ದರದಲ್ಲಿ ಮಾರಾಟ ಮಾಡಲಾಗುತ್ತಿದೆ.

‘ಮೊದಲ ಬಾರಿಗೆ ಮೇಳದಲ್ಲಿ ಭಾಗವಹಿಸಿದ್ದೇನೆ. ದಿನಕ್ಕೆ 200 ಕೆ.ಜಿ. ಮಾವು ವ್ಯಾಪಾರವಾಗುತ್ತಿದೆ. ಮಳೆ ಬಿಡುವು ನೀಡಿದರೆ ವ್ಯಾಪಾರ ಮತ್ತಷ್ಟು ಹೆಚ್ಚಾಗಲಿದೆ’ ಎಂದು ಕೋಲಾರದ ವ್ಯಾಪಾರಿ ನಜೀರ್‌ ಅಹಮದ್‌ ಹೇಳಿದರು.

‘ಗ್ರಾಹಕರು ಹೆಚ್ಚು ರಸಪುರಿ ಕೊಂಡು ಹೋಗುತ್ತಿದ್ದಾರೆ. ಬಾದಾಮಿ ಹಣ್ಣು ಅಷ್ಟು ಕೇಳುವುದಿಲ್ಲ. ದಿನಕ್ಕೆ ₹ 150 ಕೆ.ಜಿ. ವ್ಯಾಪಾರ ವಾಗುತ್ತಿದೆ’ ಎಂದು ಶ್ರೀರಂಗಪಟ್ಟಣ ತಾಲ್ಲೂಕಿನ ಚಿಕ್ಕಪಾಳ್ಯದ ಬಸವರಾಜು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry