ಸಿಡಿಲು: ಎರಡು ತಿಂಗಳಲ್ಲಿ 94 ಜನ ಸಾವು

7
ಮಳೆ ಹಾನಿ: ವಿಪತ್ತು ನಿಧಿಯಿಂದ ₹ 8.63 ಕೋಟಿ ಪರಿಹಾರ

ಸಿಡಿಲು: ಎರಡು ತಿಂಗಳಲ್ಲಿ 94 ಜನ ಸಾವು

Published:
Updated:
ಸಿಡಿಲು: ಎರಡು ತಿಂಗಳಲ್ಲಿ 94 ಜನ ಸಾವು

ಬೆಂಗಳೂರು: ಏ.1ರಿಂದ ಜೂನ್‌ 10ರವರೆಗೆ ರಾಜ್ಯದಾದ್ಯಂತ ಸುರಿದ ಭಾರಿ ಮಳೆಯ ಸಂದರ್ಭದಲ್ಲಿ ಸಿಡಿಲು ಬಡಿದು 94 ಮಂದಿ ಮೃತಪಟ್ಟಿದ್ದಾರೆ. ಈ ಅವಧಿಯಲ್ಲಿ ವಿಪತ್ತು ಪರಿಹಾರ ನಿಧಿಯಿಂದ ಒಟ್ಟು ₹ 8.63 ಕೋಟಿ ಪರಿಹಾರ ವಿತರಿಸಲಾಗಿದೆ.

ಸೋಮವಾರ ಇಲಾಖೆ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಕಂದಾಯ ಸಚಿವ ಆರ್‌.ವಿ. ದೇಶಪಾಂಡೆ, ‘ಈ ಅವಧಿಯಲ್ಲಿ ಬೆಂಗಳೂರು ಜಿಲ್ಲೆ ಬಿಟ್ಟು ಉಳಿದ 29 ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ’ ಎಂದರು.

‘ಮಳೆ ಅನಾಹುತಗಳಿಂದ ಉಂಟಾದ ಜೀವ ಹಾಗೂ ಆಸ್ತಿಪಾಸ್ತಿ ಹಾನಿಗೆ ತಕ್ಷಣ ಪರಿಹಾರ ವಿತರಿಸುವಂತೆ ಸೂಚಿಸಲಾಗಿದೆ. ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಒಟ್ಟು ₹ 186.54 ಕೋಟಿ ಅನುದಾನ ಲಭ್ಯವಿದೆ’ ಎಂದರು.

‘ರಾಜ್ಯ ವಿಪತ್ತು ನಿರ್ವಹಣಾ ಸಂಸ್ಥೆಯಲ್ಲಿ ₹ 320 ಕೋಟಿ ಹಣವಿದೆ. ಇದನ್ನು ಬಳಸಿಕೊಂಡು ಪರಿಹಾರ ಕಾರ್ಯಗಳನ್ನು ಕೈಗೊಳ್ಳಲಾಗುವುದು. ಬೆಳೆ ನಷ್ಟದ ಸಮೀಕ್ಷೆ ನಡೆಯುತ್ತಿದೆ. ಅದರ ವರದಿ ಬಂದ ಬಳಿಕ ಅನುದಾನ ಕೋರಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು’ ಎಂದೂ ವಿವರಿಸಿದರು.

‘ಮೂರು ದಿನ ಮುಂಚಿತವಾಗಿಯೇ ರಾಜ್ಯಕ್ಕೆ ಮುಂಗಾರು ಪ್ರವೇಶಿಸಿದ್ದು, ಮಾರ್ಚ್ 1ರಿಂದ ಮೇ 31ರವರೆಗೆ ಪೂರ್ವ ಮುಂಗಾರು ಹಂಗಾಮಿನಲ್ಲಿ  ವಾಡಿಕೆಯಂತೆ 125 ಮಿ.ಮೀ ಮಳೆಯಾಗಬೇಕಿತ್ತು. ಆದರೆ, 193 ಮಿ.ಮೀ. ಮಳೆಯಾಗಿದೆ. ಜೂನ್‌1ರಿಂದ 10ರವರೆಗೆ 89 ಮಿ.ಮೀ. ಮಳೆಯಾಗಿದೆ. ಇದು ಕೂಡಾ ವಾಡಿಕೆಗಿಂತ (51 ಮಿ.ಮೀ ಹೆಚ್ಚು’ ಎಂದು ಮಾಹಿತಿ ನೀಡಿದರು.

‘ಅತಿವೃಷ್ಟಿಯಿಂದ ಮೃತಪಟ್ಟವರ ಕುಟುಂಬಗಳಿಗೆ ತಲಾ ₹ 4 ಲಕ್ಷದಂತೆ ಪರಿಹಾರ ವಿತರಿಸಲಾಗುತ್ತಿದೆ. 24 ಗಂಟೆಗಳ ಒಳಗಾಗಿ ವಾರಸುದಾರರಿಗೆ ಪರಿಹಾರ ತಲುಪಿಸುವಂತೆ ಸೂಚಿಸಲಾಗಿದೆ. ಪ್ರತಿ ಜಾನುವಾರಿಗೆ ₹ 20 ಸಾವಿರದಂತೆ ಪರಿಹಾರ ನೀಡಲಾಗುತ್ತದೆ. ಪೂರ್ಣ ಹಾನಿಗೊಳಗಾದ ಮನೆಗಳಿಗೆ ₹ 95,100, ಭಾಗಶಃ ಹಾನಿಗೊಳಗಾದ ಮನೆಗಳಿಗೆ ₹ 5,200 ಪರಿಹಾರ ವಿತರಿಸಲಾಗುತ್ತಿದೆ. ರಾಜ್ಯ ತುರ್ತು ನಿರ್ವಹಣಾ ಕೇಂದ್ರ ಮತ್ತು ಜಿಲ್ಲಾ ತುರ್ತು ನಿರ್ವಹಣಾ ಕೇಂದ್ರ ದಿನದ 24 ಗಂಟೆ ಕೆಲಸ ಮಾಡುತ್ತಿದೆ’ ಎಂದು ಸಚಿವರು ತಿಳಿಸಿದರು.

248 ಹಳ್ಳಿಗಳಲ್ಲಿ ನೀರಿನ ಅಭಾವ: ‘ಮಳೆಯ ಕೊರತೆಯಿಂದ ಕಳೆದ ವರ್ಷ 1,200 ಹಳ್ಳಿಗಳಲ್ಲಿ ಕುಡಿಯುವ ನೀರಿನ ಅಭಾವ ಉಂಟಾಗಿತ್ತು. ಆದರೆ, ಈ ಬಾರಿ 248 ಹಳ್ಳಿಗಳಲ್ಲಿ ಮಾತ್ರ ನೀರಿನ ಅಭಾವ ಇದೆ. 401 ಟ್ಯಾಂಕರ್‍ಗಳನ್ನು ಬಳಸಿಕೊಂಡು ನೀರು ಪೂರೈಸಲಾಗುತ್ತಿದೆ. 197 ಖಾಸಗಿ ಕೊಳವೆ ಬಾವಿಗಳನ್ನೂ ಬಳಸಲಾಗುತ್ತಿದೆ. ಜಿಲ್ಲಾ ಪಂಚಾಯಿತಿಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಖಾತೆಯಲ್ಲಿ ತಲಾ ₹ 1 ಕೋಟಿ ಅನುದಾನ ಲಭ್ಯವಿದ್ದು, ಆ ಹಣವನ್ನು ಕುಡಿಯುವ ನೀರು ಸರಬರಾಜಿಗೆ ಬಳಸಲಾಗುತ್ತಿದೆ’ ಎಂದು ತಿಳಿಸಿದರು.

‘ಸರ್ವೆಯರ್‍ಗಳ ಕೊರತೆ ನೀಗಿಸಲು 1,067 ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗಿದ್ದು, ಅವರಿಗೆ ತರಬೇತಿ ನಡೆಯುತ್ತಿದೆ. ಆ ಮೂಲಕ ಮಂಜೂರಾದ ಒಟ್ಟು ಹುದ್ದೆಗಳ ಪೈಕಿ, ಸುಮಾರು 165 ಹುದ್ದೆಗಳನ್ನು ಹೊರತುಪಡಿಸಿ ಉಳಿದ ಎಲ್ಲ ಭರ್ತಿ ಮಾಡಿದಂತಾಗುತ್ತದೆ’ ಎಂದೂ ದೇಶಪಾಂಡೆ ಹೇಳಿದರು.

ಅತಿವೃಷ್ಠಿಯಿಂದ ಉಂಟಾದ ಹಾನಿ–ವಿವರ (ಏ.1–ಜೂನ್‌ 10)

ಸಿಡಿಲಿಗೆ ಬಲಿಯಾದವರು; 94

ನೀರಿನಲ್ಲಿ ಕೊಚ್ಚಿ ಹೋದವರು;10

ಜಾನುವಾರುಗಳ ಜೀವ ಹಾನಿ; 332

ಮನೆ ಪೂರ್ಣ ಹಾನಿ;189

ಮನೆಗಳು ಭಾಗಶಃ ಹಾನಿ; 2101

ವಿತರಿಸಿದ ಒಟ್ಟು ಪರಿಹಾರ ಮೊತ್ತ; ₹ 8.63 ಕೋಟಿ

ರಾಜ್ಯದಲ್ಲಿ ವಾಡಿಕೆಗಿಂತ ಹೆಚ್ಚು ಮಳೆ

24 ಗಂಟೆಯೊಳಗೆ ಪರಿಹಾರ ವಿತರಣೆ

1,067 ಸರ್ವೆಯರ್‌ಗಳ ನೇಮಕ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry