ತಾಯಂದಿರ ಮರಣ ತಡೆ: ರಾಜ್ಯ ಹಿಂದೆ

7
12 ವರ್ಷ ಮೊದಲೇ ವಿಶ್ವಸಂಸ್ಥೆ ಗುರಿ ಮೀರಿ ಮುನ್ನಡೆದ ಕೇರಳ, ತಮಿಳುನಾಡು

ತಾಯಂದಿರ ಮರಣ ತಡೆ: ರಾಜ್ಯ ಹಿಂದೆ

Published:
Updated:
ತಾಯಂದಿರ ಮರಣ ತಡೆ: ರಾಜ್ಯ ಹಿಂದೆ

ನವದೆಹಲಿ: ಹೆರಿಗೆ ಸಂದರ್ಭದಲ್ಲಿ ತಾಯಂದಿರ ಮರಣ ಪ್ರಮಾಣವನ್ನು (ಎಂಎಂಆರ್‌) ಕಡಿಮೆ ಮಾಡುವಲ್ಲಿ ದಕ್ಷಿಣ ರಾಜ್ಯಗಳ ಪೈಕಿ ಕರ್ನಾಟಕ ಕೊನೆಯ ಸ್ಥಾನದಲ್ಲಿದೆ. ಆದರೆ ತಮಿಳುನಾಡು ಮತ್ತು ಕೇರಳ ರಾಜ್ಯಗಳು ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಯನ್ನು ಗಡುವಿಗಿಂತ 12 ವರ್ಷ ಮೊದಲೇ ಸಾಧಿಸಿವೆ. ಆಂಧ್ರಪ್ರದೇಶ ಮತ್ತು ತೆಲಂಗಾಣ ಆ ಹಾದಿಯಲ್ಲಿವೆ.

2011–13 ಮತ್ತು 2014–16ರ ಅವಧಿಯಲ್ಲಿ ತಾಯಂದಿರ ಮರಣ ಪ್ರಮಾಣವನ್ನು ತಗ್ಗಿಸುವಲ್ಲಿ ಹೆಚ್ಚಿನ ರಾಜ್ಯಗಳು ಯಶಸ್ಸು ಪಡೆದುಕೊಂಡಿವೆ. 2014–16ರಲ್ಲಿ ಕೇರಳದಲ್ಲಿ ಒಂದು ಲಕ್ಷ ಹೆರಿಗೆಯಲ್ಲಿ ತಾಯಂದಿರ ಮರಣದ ಪ್ರಮಾಣ 46ಕ್ಕೆ ಇಳಿದಿದೆ. 2 ವರ್ಷಗಳ ಹಿಂದೆ ಅದು 61 ಆಗಿತ್ತು. ತಮಿಳುನಾಡಿನ ಎಂಎಂಆರ್ 66. ಎರಡು ವರ್ಷ ಹಿಂದೆ ಅದು 79 ಆಗಿತ್ತು.

ಕರ್ನಾಟಕದ ಸ್ಥಿತಿ ಸುಧಾರಣೆಯೇ ಆಗಿಲ್ಲ ಎಂದಲ್ಲ. ಸದ್ಯ, ರಾಜ್ಯದಲ್ಲಿ ತಾಯಂದಿರ ಮರಣ ಪ್ರಮಾಣ 108. ಎರಡು ವರ್ಷ ಹಿಂದೆ ಅದು 133 ಆಗಿತ್ತು.

‘ವಿಶ್ವಸಂಸ್ಥೆಯು ನಿಗದಿ ಮಾಡಿದ ಸುಸ್ಥಿರ ಅಭಿವೃದ್ಧಿ ಗುರಿಯನ್ನು ಕೇರಳ, ಮಹಾರಾಷ್ಟ್ರ ಮತ್ತು ತಮಿಳುನಾಡು ಈಗಾಗಲೇ ಸಾಧಿಸಿವೆ. ಇತರ ರಾಜ್ಯಗಳೂ ಉತ್ತಮ ಸಾಧನೆ ಮಾಡುತ್ತಿವೆ. ಪ್ರತಿ ವರ್ಷ 44 ಸಾವಿರ ತಾಯಂದಿರನ್ನು ಸಾವಿನಿಂದ ರಕ್ಷಿಸಲಾಗುತ್ತಿದೆ. ಹದಿಹರೆಯದಲ್ಲಿಯೇ ತಾಯಿಯಾಗುವವರ ಪ್ರಮಾಣ ಅರ್ಧದಷ್ಟು ಕಡಿಮೆಯಾಗಿದೆ’ ಎಂದು ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಹೇಳಿದ್ದಾರೆ. ಕೇಂದ್ರ ಸರ್ಕಾರದ ನಾಲ್ಕು ವರ್ಷಗಳ ಸಾಧನೆಯನ್ನು ಹೇಳಿಕೊಳ್ಳುವುದಕ್ಕಾಗಿ ನಡೆಸಿದ ಮಾಧ್ಯಮಗೋಷ್ಠಿಯಲ್ಲಿ ಈ ವಿಚಾರವನ್ನು ಅವರು ತಿಳಿಸಿದರು.

ತಾಯಂದಿರ ಮರಣ ಪ್ರಮಾಣವನ್ನು ಕಡಿತಗೊಳಿಸುವಲ್ಲಿ ಭಾರತ ಉತ್ತಮ ಯಶಸ್ಸು ಸಾಧಿಸಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯು ಭಾರತವನ್ನು ಭಾನುವಾರ ಶ್ಲಾಘಿಸಿತ್ತು. 1990ರಲ್ಲಿ ಎಂಎಂಆರ್‌ ಪ್ರಮಾಣ 556 ಇದ್ದರೆ 2016ರಲ್ಲಿ ಅದು 130ಕ್ಕೆ ಇಳಿದಿದೆ. ಎಂಎಂಆರ್‌ ಶೇ 77ರಷ್ಟು ಇಳಿಕೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಭಾರತವು ಸುಸ್ಥಿರ ಅಭಿವೃದ್ಧಿ ಗುರಿಯನ್ನು ಇನ್ನೂ ಸಾಧಿಸಿಲ್ಲ. 2030ರ ಹೊತ್ತಿಗೆ ಎಂಎಂಆರ್‌ 70ಕ್ಕೆ ಇಳಿಯಬೇಕು ಎಂಬುದು ಗುರಿ.

**

ಜಿಲ್ಲೆಗಳ ನಡುವೆ ವ್ಯತ್ಯಾಸ

ಬೆಂಗಳೂರಿನ ರಾಜೀವ್‌ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಮತ್ತು ಸ್ವೀಡನ್‌ನ ಉಪ್ಸಲಾ ವಿಶ್ವವಿದ್ಯಾಲಯ ಜತೆಯಾಗಿ ಕರ್ನಾಟಕದಲ್ಲಿ ತಾಯಂದಿರ ಮರಣದ ‍ಪ್ರವೃತ್ತಿಗಳ ಅಧ್ಯಯನ ಮಾಡಿದ್ದವು. ರಾಜ್ಯದ ಜಿಲ್ಲೆಗಳ ನಡುವೆ ಎಂಎಂಆರ್‌ನಲ್ಲಿ ಭಾರಿ ವ್ಯತ್ಯಾಸ ಇದೆ ಎಂಬುದು ಈ ಅಧ್ಯಯನದಲ್ಲಿ ತಿಳಿದು ಬಂದಿತ್ತು.

**

2005ರಿಂದ ಆರಂಭ

ಕಳೆದ ದಶಕದಲ್ಲಿಯೇ ಬದಲಾವಣೆಯ ಬೀಜ ಬಿತ್ತಲಾಗಿದೆ. 2005ರಿಂದಲೇ ತಾಯ್ತನ ಆರೋಗ್ಯಕ್ಕೆ ಸಂಬಂಧಿಸಿದ ಅಗತ್ಯ ಸೇವೆಗಳ ಲಭ್ಯತೆ ದ್ವಿಗುಣಗೊಂಡಿದೆ. ಆಸ್ಪತ್ರೆಗಳಲ್ಲಿ ಆಗುವ ಹೆರಿಗೆಗಳ ಪ್ರಮಾಣ ಮೂರು ಪಟ್ಟು ಹೆಚ್ಚಾಗಿದೆ.

2005ರಲ್ಲಿ ಹೆರಿಗೆಗೆ ಆಸ್ಪತ್ರೆಗೆ ಬರುತ್ತಿದ್ದವರ ಪ್ರಮಾಣ ಶೇ 18 ಮಾತ್ರ ಇತ್ತು. 2016ರಲ್ಲಿ ಅದು ಶೇ 52ಕ್ಕೆ ಏರಿದೆ. ಖಾಸಗಿ ಆಸ್ಪತ್ರೆಗಳನ್ನೂ ಗಣನೆಗೆ ತೆಗೆದುಕೊಂಡರೆ ಈ ಪ್ರಮಾಣ ಶೇ 79ಕ್ಕೆ ಏರುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

**

9: ಎಂಎಂಆರ್‌ನಲ್ಲಿ ಕರ್ನಾಟಕದ ಸ್ಥಾನ

108: ಒಂದು ಲಕ್ಷ ಹೆರಿಗೆಯಲ್ಲಿ ತಾಯಂದಿರ ಸಾವಿನ ಸಂಖ್ಯೆ (2016ರಲ್ಲಿ)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry