ಧಾರಾಕಾರ ಮಳೆ: ತುಂಬಿದ ನದಿ

7
ತೀರ್ಥಹಳ್ಳಿ: ತಾಲ್ಲೂಕಿನ ವಿವಿಧೆಡೆ ಹಾನಿ l ವಿದ್ಯುತ್, ದೂರವಾಣಿ ಸಂಪರ್ಕ ಕಡಿತ

ಧಾರಾಕಾರ ಮಳೆ: ತುಂಬಿದ ನದಿ

Published:
Updated:
ಧಾರಾಕಾರ ಮಳೆ: ತುಂಬಿದ ನದಿ

ತೀರ್ಥಹಳ್ಳಿ: ಮಲೆನಾಡಿನಲ್ಲಿ ಮುಂಗಾರು ಮಳೆಯ ಅಬ್ಬರ ಜೋರಾಗಿದೆ. ಆಗಸದಲ್ಲಿ ಹೆಪ್ಪುಗಟ್ಟಿದ ಕರಿಮೋಡಗಳು ಘಟ್ಟಸಾಲಿನಲ್ಲಿ ಮಳೆ ಸುರಿಸುತ್ತಿವೆ. ಮೂರು ದಿನಗಳಿಂದ ಎಡೆಬಿಡದೇ ಸುರಿಯುತ್ತಿರುವ ಮಳೆಗೆ ತಾಲ್ಲೂಕಿನ ಜೀವನದಿಗಳಾದ ತುಂಗಾ, ಮಾಲತಿ, ಕುಂಟೆಹಳ್ಳ, ಗೋಪಿನಾಥಹಳ್ಳ, ಕುಶಾವತಿ ಹೊಳೆ ಸೇರಿ ಅನೇಕ ಹಳ್ಳಕೊಳ್ಳಗಳು, ತೊರೆಗಳು ಮೈದುಂಬಿ ಹರಿಯುತ್ತಿವೆ.

ಜೂನ್ 11ರಂದು ತೀರ್ಥಹಳ್ಳಿಯಲ್ಲಿ 102.8 ಮಿ.ಮೀ. ಮಳೆಯಾಗಿದೆ. 2017ರ ಜೂನ್ ಆರಂಭದ ವೇಳೆಗೆ ತಾಲ್ಲೂಕಿನಲ್ಲಿ ಒಟ್ಟು 124 ಸೆಂ.ಮೀ. ಮಳೆಯಾಗಿತ್ತು. ಈಗ ಜೂನ್ ಮೊದಲ ವಾರ 274 ಸೆಂ.ಮೀ.ಮಳೆಯಾಗಿದೆ.

ಶೃಂಗೇರಿ ಭಾಗದಲ್ಲಿ ಹೆಚ್ಚು ಮಳೆ ಬೀಳುತ್ತಿರುವುದರಿಂದ ತುಂಗಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚುತ್ತಿದೆ. ಆಗುಂಬೆ ಭಾಗದ ಘಟ್ಟ ಪ್ರದೇಶದಲ್ಲಿ ಮಳೆ ಸುರಿಯುತ್ತಿರುವುದರಿಂದ ಮಾಲತಿ ನದಿ ತುಂಬಿ ಹರಿಯುತ್ತಿದೆ. ಕುಶಾವತಿ ಹೊಳೆ, ಕುಂಟೇಹಳ್ಳ, ಗೋಪಿನಾಥಹಳ್ಳಗಳಲ್ಲಿ ನೀರಿನ ಮಟ್ಟ ಹೆಚ್ಚಿದೆ.

ಮೂರು ದಿನಗಳಿಂದ ಆಗುಂಬೆ, ನಾಲೂರು, ಗಾರ್ಡರಗದ್ದೆ, ಶುಂಠಿಹಕ್ಕಲು, ಕನ್ನಂಗಿ, ಹಣಗೆರೆ, ಬೆಜ್ಜವಳ್ಳಿ ಭಾಗದಲ್ಲಿ ವಿದ್ಯುತ್ ಪೂರೈಕೆ ಇಲ್ಲದೇ ಜನರು ಕತ್ತಲಿನಲ್ಲಿ ಕಾಲ ಕಳೆಯುವಂತಾಗಿದೆ. ಆಗುಂಬೆ ಭಾಗದಲ್ಲಿನ ವಿದ್ಯುತ್ ಮಾರ್ಗದ ಮೇಲೆ ಮರಗಳು ಬೀಳುತ್ತಿರುವುದರಿಂದಾಗಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.

ಅರಣ್ಯ ಇಲಾಖೆ ಹಾಗೂ ಮೆಸ್ಕಾಂ ನಡುವೆ ಸಮನ್ವಯದ ಕೊರತೆಯಿಂದಾಗಿ ವಿದ್ಯುತ್ ಮಾರ್ಗದ ಬಳಿ ಇರುವ ಮರಗಳ ತೆರವಿಗೆ ಅರಣ್ಯ ಇಲಾಖೆ ಅಡ್ಡಿಪಡಿಸುತ್ತಿದೆ ಎಂದು ಮೆಸ್ಕಾಂ ದೂರಿದೆ. ವಿದ್ಯುತ್ ಸಂಪರ್ಕವಿಲ್ಲದೇ ಕುಡಿಯುವ ನೀರಿನ ಪೂರೈಕೆಗೆ ತೊಂದರೆ ಉಂಟಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ.

ಮಳೆಯ ಪ್ರಮಾಣ ಇದೇ ರೀತಿ ಮುಂದುವರಿದರೆ ಪ್ರವಾಹ ಎದುರಾಗುವ ಸಾಧ್ಯತೆ ಇದೆ. ಮುಂದಿನ ನಾಲ್ಕೈದು ದಿನಗಳ ಕಾಲ ಮಳೆ ಪ್ರಮಾಣ ಹೆಚ್ಚಾಗಬಹುದು ಎಂದು ಕೃಷಿ ಇಲಾಖೆ ತಿಳಿಸಿದ್ದು, ಮುಂಗಾರು ಹಂಗಾಮಿನ ಬೇಸಾಯಕ್ಕೆ ಭತ್ತದ ಸಸಿಮಡಿಗಳನ್ನು ಸಿದ್ಧಪಡಿಸಿಕೊಳ್ಳುವಂತೆ ರೈತರಿಗೆ ಸೂಚಿಸಿದೆ.

‘ಆಗುಂಬೆ ಭಾಗದಲ್ಲಿ ಎಷ್ಟು ಮಳೆ ಸುರಿಯುತ್ತಿದೆ ಎಂಬ ಮಾಹಿತಿ ಲಭ್ಯವಾಗುತ್ತಿಲ್ಲ. ಆಗುಂಬೆಯಲ್ಲಿ ಮಳೆ ಮಾಪನ ಕೇಂದ್ರ, ಪೊಲೀಸ್ ಠಾಣೆ, ಗ್ರಾಮ ಪಂಚಾಯಿತಿ ಕಚೇರಿ ಇದ್ದರೂ ದೂರವಾಣಿ ಸಂಪರ್ಕ ಸಾಧ್ಯವಾಗುತ್ತಿಲ್ಲ. ಮಳೆ ಹೆಚ್ಚಿದ ಕಾರಣ ಈ ಪ್ರದೇಶದ ಸುತ್ತಮುತ್ತ ಕತ್ತಲು ಕವಿದಿದೆ’ ಎಂದು ನಾಲೂರು ಗ್ರಾಮ ಪಂಚಾಯಿತಿ ಸದಸ್ಯ ಬಿಳಿಚಿಕಟ್ಟೆ ಶ್ರೀಕಾಂತ ತಿಳಿಸಿದ್ದಾರೆ. ವಿದ್ಯುತ್ ಪೂರೈಕೆಗೆ ಕ್ರಮ ಕೈಗೊಳ್ಳಬೇಕು ಎಂದು ಜನರು ಒತ್ತಾಯಿಸಿದ್ದಾರೆ.

ಹಲವೆಡೆ ಹಾನಿ

ಸೋಮವಾರ ಆಗುಂಬೆಯಲ್ಲಿ 128 ಮಿ.ಮೀ. ಹಾಗೂ ತೀರ್ಥಹಳ್ಳಿಯಲ್ಲಿ 102.8 ಮಿ.ಮೀ. ಮಳೆಯಾದ ಬಗ್ಗೆ ವರದಿಯಾಗಿದೆ. ತೀವ್ರ ಮಳೆ ಹಾಗೂ ಗಾಳಿಯಿಂದಾಗಿ ತಾಲ್ಲೂಕಿನ ಆರೇಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಸಲೂರು ಗ್ರಾಮದ ಲಕ್ಷ್ಮಮ್ಮ ಅವರ ಮನೆಯ ಚಾವಣಿ ಹಾರಿಹೋಗಿದೆ.

ದೇವಂಗಿ ಗ್ರಾಮದ ಶಂಕರಪ್ಪ ಅವರ ಅಡಿಕೆ ತೋಟ ಹಾಗೂ ಮೇಳಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಂಬಳ ಗ್ರಾಮದ ಚಿನ್ನಪ್ಪ ಅವರ ಅಡಿಕೆ ತೋಟದಲ್ಲಿ ಮರ ಬಿದ್ದಿದೆ. ಪಟ್ಟಣದ ಕುರುವಳ್ಳಿ ಶಿಲ್ಪ ಕಲಾ ಕೇಂದ್ರದಲ್ಲಿ ಮಣ್ಣು ಕುಸಿದು ಹಾನಿಯಾಗಿದೆ. ಕುಶಾವತಿ ಹೊಳೆಯಲ್ಲಿ ನೀರಿನ ಪ್ರಮಾಣ ಹೆಚ್ಚುತ್ತಿದ್ದು, ಕಂದಾಯ ಇಲಾಖೆಯ ಸಿಬ್ಬಂದಿ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿದ್ದಾರೆ ಎಂದು ತಹಶೀಲ್ದಾರ್ ಆನಂದಪ್ಪನಾಯ್ಕ್ ತಿಳಿಸಿದ್ದಾರೆ.

–ಶಿವಾನಂದ ಕರ್ಕಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry