ಪರಿಸರ ಜಾಗೃತಿಯ ಬೆಂಡೆಕಟ್ಟೆ ಶಾಲೆ

7
ಶಾಲೆಯ ಅಂಗಳದಲ್ಲಿ ತೆಂಗಿನ ತೋಟ, ಆದಾಯದ ಮೂಲ

ಪರಿಸರ ಜಾಗೃತಿಯ ಬೆಂಡೆಕಟ್ಟೆ ಶಾಲೆ

Published:
Updated:
ಪರಿಸರ ಜಾಗೃತಿಯ ಬೆಂಡೆಕಟ್ಟೆ ಶಾಲೆ

ಆನವಟ್ಟಿ: ಸಮೀಪದ ಸಮನವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಂಡೆಕಟ್ಟೆ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಪರಿಸರ ಜಾಗೃತಿಯಿಂದ ಗಮನ ಸೆಳೆದಿದೆ. ಶಾಲಾ ಆವರಣದಲ್ಲಿ ಎಲ್ಲೆಲ್ಲೂ ಹಸಿರು ನಳನಳಿಸುತ್ತಿದೆ.

1997–98ರಲ್ಲಿ ಆರಂಭವಾದ ಶಾಲೆಗೆ ಹೊಸ ರೂಪ ದೊರೆತದ್ದು 2016–17ರಲ್ಲಿ. ಈ ಅವಧಿಯಲ್ಲಿ ಶಾಲೆಗೆ ಬಂದ ಮುಖ್ಯ ಶಿಕ್ಷಕ ಶಿವಮೂರ್ತ್ಯೆಪ್ಪ ಹಾಗೂ ಶಿಕ್ಷಕ ಪ್ರಕಾಶ ಮಡ್ಲೂರು ಶಾಲೆಯ ದಿಕ್ಕನ್ನೇ ಬದಲಾಯಿಸಿದರು.

ಮಕ್ಕಳಲ್ಲಿ ಪರಿಸರ ಜಾಗೃತಿ ಮೂಡಿಸಿ, ಗ್ರಾಮಸ್ಥರು, ಎಸ್‌ಡಿಎಂಸಿ ಸದಸ್ಯರ ಸಹಕಾರ ಪಡೆದ ಈ ಶಿಕ್ಷಕರು ಶಾಲೆಯ ಜಾಗದಲ್ಲಿ ವಿದ್ಯಾರ್ಥಿಗಳಿಂದಲೇ 340 ತೆಂಗಿನ ಗಿಡ ನೆಟ್ಟು ಪುಟ್ಟ ತೆಂಗಿನತೋಟ ನಿರ್ಮಾಣ ಮಾಡಿದರು. ತೋಟದ ಮಧ್ಯದಲ್ಲಿ ಬಾದಾಮಿ ಗಿಡ, ಸಪೋಟಾ, ನೆಲ್ಲಿ, ಕರಿಬೇವು, ನಿಂಬೆ, ನೆರಳೆ, ಮಾವು, ಬೇವು, ಪಪ್ಪಾಯ, ಸಾಗುವಾನಿ, ಗರಗಿ ಗಿಡಗಳನ್ನು ಬೆಳೆಸಿದ್ದಾರೆ.

ಶಾಲೆಯ ಮುಂಭಾಗದಲ್ಲಿ ಅಶೋಕ ಗಿಡ, ದಾಸವಾಳ, ಗುಲಾಬಿ, ಮಲ್ಲಿಗೆ, ಸೇವಂತಿಗೆ, ತುಳಸಿ ಹಾಗೂ ವಿವಿಧ ಪ್ರಬೇಧದ ಗಿಡಗಳನ್ನು ಬೆಳೆಸಿದ್ದಾರೆ. ಮಕ್ಕಳು ಗಿಡಗಳಿಗೆ ನೀರು ಹಾಕಿ ಪೋಷಿಸುತ್ತಾರೆ. ಗಿಡಗಳು ಶಾಲೆಯ ಅಂದ ಹೆಚ್ಚಿಸಿವೆ.

‘ಈ ಪುಟ್ಟ ತೆಂಗಿನ ತೋಟ ಶಾಲೆಗೆ ಅರ್ಥಿಕ ಮೂಲವಾಗಲಿದೆ. ಸರ್ಕಾರಿ ಕೆಲಸವನ್ನು ಕೇವಲ ವೇತನಕ್ಕಾಗಿ ಮಾಡದೇ ನಮ್ಮಿಂದಾಗುವ ಕೆಲಸ ಮಾಡಬೇಕು. ನಾವು ಬೇರೆಡೆ ಹೋದರೂ ವಿದ್ಯಾರ್ಥಿಗಳು ಹಾಗೂ ಪೋಷಕರು ನೆನಪು ಮಾಡಿಕೊಳ್ಳುವಂತ ಕೆಲಸ ಮಾಡಬೇಕು. ಈ ನಿಟ್ಟಿನಲ್ಲಿ ಇಂತಹ ಕಾರ್ಯಕ್ಕೆ ಮುಂದಾದೆವು’ ಎಂದು ಮುಖ್ಯಶಿಕ್ಷಕ ಶಿವಮೂರ್ತ್ಯಪ್ಪ ಹೇಳುತ್ತಾರೆ.

‘ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡಲು ಶಿಕ್ಷಕರಾದ ಶಿವಮೂರ್ತ್ಯಪ್ಪ ಹಾಗೂ ಪ್ರಕಾಶ ಮಡ್ಲೂರು ಸಾಕಷ್ಟು ಶ್ರಮಿಸಿದ್ದಾರೆ’ ಎಂದು ಎಸ್‌ಡಿಎಂಸಿ ಅಧ್ಯಕ್ಷ ಕರಿಯಪ್ಪ ಮೆಚ್ಚುಗೆ ವ್ಯಕ್ತಪಡಿಸಿದರು.

‘ಶಾಲೆಯ ಕಟ್ಟಡ ಶಿಥಿಲಗೊಂಡಿದ್ದು. ಹೊಸ ಕಟ್ಟಡ ಹಾಗೂ ಶೌಚಾಲಯದ ನಿರ್ಮಾಣ ಮಾಡಿಕೊಂಡಲು ಜನಪ್ರತಿನಿಧಿಗಳು ಹಾಗೂ ಸಂಬಂಧಿಸಿದ ಅಧಿಕಾರಿಗಳು ಮುಂದಾಗಬೇಕು’ ಎಂದು ಗ್ರಾಮಸ್ಥರು ಒತ್ತಾಯಿಸುತ್ತಾರೆ.

ಪ್ರತಿಯೊಬ್ಬ ಶಿಕ್ಷಕರು ಜವಾಬ್ದಾರಿ ಅರಿತು ಮಕ್ಕಳಿಗೆ ಶಿಕ್ಷಣ ನೀಡಿದರೆ. ಯಾವ ಮಕ್ಕಳು ಖಾಸಗಿ ಶಾಲೆಗೆ ಹೋಗಬೇಕಾಗಿಲ್ಲ ಎಂಬುದಕ್ಕೆ ಬೆಂಡೆಕಟ್ಟೆ ಶಾಲೆ ಉದಾಹರಣೆ.

ಎರಡು ವರ್ಷದಲ್ಲಿ ಅನುಷ್ಠಾನಗೊಂಡ ನಲಿ–ಕಲಿ ಕಾರ್ಯಕ್ರಮ ಹಾಗೂ ವಿವಿಧ ಚಟುವಟಿಕೆಯಿಂದಾಗಿ ಮಕ್ಕಳಲ್ಲಿ ಕಲಿಯುವ ಆಸಕ್ತಿ ಹೆಚ್ಚಾಗಿದೆ 

- ಕರಿಯಪ್ಪ, ಎಸ್‌ಡಿಎಂಸಿ ಅಧ್ಯಕ್ಷ 

–ರವಿ ಆರ್‌. ತಿಮ್ಮಾಪುರ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry