ಮೇಕೆದಾಟು ಯೋಜನೆ: ಗರಿಗೆದರಿದ ನಿರೀಕ್ಷೆ

7
ಜಿಲ್ಲೆಯವರೇ ಈಗ ಮುಖ್ಯಮಂತ್ರಿ, ಜಲಸಂಪನ್ಮೂಲ ಸಚಿವ: ಅಣೆಕಟ್ಟೆ ನಿರ್ಮಾಣಕ್ಕೆ ಸಿಗುತ್ತಾ ಚಾಲನೆ?

ಮೇಕೆದಾಟು ಯೋಜನೆ: ಗರಿಗೆದರಿದ ನಿರೀಕ್ಷೆ

Published:
Updated:
ಮೇಕೆದಾಟು ಯೋಜನೆ: ಗರಿಗೆದರಿದ ನಿರೀಕ್ಷೆ

ರಾಮನಗರ: ಈ ಬಾರಿಯ ಸಮ್ಮಿಶ್ರ ಸರ್ಕಾರದಲ್ಲಿ ಜಿಲ್ಲೆಯ ಶಾಸಕರಾದ ಎಚ್.ಡಿ.ಕುಮಾರಸ್ವಾಮಿ ರಾಜ್ಯದ ಮುಖ್ಯಮಂತ್ರಿ ಆಗಿದ್ದಾರೆ. ಕನಕಪುರದವರಾದ ಡಿ.ಕೆ. ಶಿವಕುಮಾರ್ ಜಲ ಸಂಪನ್ಮೂಲ ಸಚಿವರಾಗಿದ್ದಾರೆ. ಹೀಗಾಗಿ ಈ ಸರ್ಕಾರದ ಅವಧಿಯಲ್ಲಿ ಆದರೂ, ಮೇಕೆದಾಟು ಅಣೆಕಟ್ಟೆ ನಿರ್ಮಾಣಕ್ಕೆ ಚಾಲನೆ ಸಿಗಲಿದೆಯೇ ಎನ್ನುವ ನಿರೀಕ್ಷೆಗಳು ಗರಿಗೆದರಿವೆ.

ಕನಕಪುರ ತಾಲ್ಲೂಕಿನ ಮೇಕೆದಾಟುವಿನಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಅಣೆಕಟ್ಟು ನಿರ್ಮಾಣ ಮಾಡಬೇಕು. ಆ ಮೂಲಕ ಈ ಭಾಗದ ಜನರ ಕುಡಿಯುವ ನೀರಿನ ಸಮಸ್ಯೆಗೆ ಮುಕ್ತಿ ಹಾಡಿ ನೀರಾವರಿ ಸೌಲಭ್ಯ ಕಲ್ಪಿಸಬೇಕು ಎನ್ನುವುದು ಇಲ್ಲಿನ ಜನರ ಬಹುಕಾಲದ ಬೇಡಿಕೆಯಾಗಿದೆ. ಇದಕ್ಕಾಗಿ ದಶಕದಿಂದಲೂ ಇಲ್ಲಿ ಹೋರಾಟಗಳು ನಡೆಯುತ್ತಾ ಬಂದಿವೆ. ಆದಾಗ್ಯೂ ಯೋಜನೆ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ.

ಕಳೆದ ಅವಧಿಯಲ್ಲಿ ಆಡಳಿತ ನಡೆಸಿದ್ದ ಕಾಂಗ್ರೆಸ್‌ ಸರ್ಕಾರ ಯೋಜನೆ ಅನುಷ್ಠಾನ ಬಜೆಟ್‌ನಲ್ಲಿ ಅಧಿಕೃತವಾಗಿ ಪ್ರಸ್ತಾಪಿಸಿತ್ತು. ಕೇಂದ್ರ ಸರ್ಕಾರದ ಅನುಮತಿ ಪಡೆದು ಶೀಘ್ರ ಕಾಮಗಾರಿಗೆ ಚಾಲನೆ ನೀಡುವುದಾಗಿ ಘೋಷಣೆ ಮಾಡಿತ್ತು. ಆದರೆ, ಅದರಿಂದ ಮುಂದಕ್ಕೆ ಹೆಚ್ಚೇನೂ ಪ್ರಗತಿ ಆಗಿಲ್ಲ.

ಸದ್ಯ ಇದರ ವಿಸ್ತೃತ ಯೋಜನಾ ವರದಿಯು (ಡಿಪಿಆರ್‌) ಕೇಂದ್ರ ಸರ್ಕಾರದ ಮುಂದೆ ಇದೆ ಎನ್ನಲಾಗಿದೆ. ಕಾವೇರಿ ನೀರು ಹಂಚಿಕೆ ತೀರ್ಪು ಹೊರಬಿದ್ದ ಬಳಿಕ ಇದಕ್ಕೆ ಒತ್ತಡ ಹೆಚ್ಚಿದೆ. ರಾಜ್ಯವು ತನ್ನ ಪಾಲಿನ ನೀರನ್ನು ಬಳಕೆ ಮಾಡಿಕೊಳ್ಳಲು ಯಾವುದೇ ಕಾನೂನಿನ ಅಡ್ಡಿ ಇರದು ಎಂಬ ಕಾನೂನು ತಜ್ಞರ ಹಿನ್ನೆಲೆಯಲ್ಲಿ ಯೋಜನೆ ಮುಂದುವರಿಸಲು ಕಾಂಗ್ರೆಸ್ ಸರ್ಕಾರ ನಿರ್ಧಾರ ಕೈಗೊಂಡಿತ್ತು. ಆದರೆ ನಂತರದಲ್ಲಿ ಚುನಾವಣೆ ಸುದ್ದಿಯೊಳಗೆ ಅಣೆಕಟ್ಟೆ ನಿರ್ಮಾಣದ ಸಂಗತಿ ತಣ್ಣಗಾಗಿತ್ತು.

ಪರ್ಯಾಯ ಅಣೆಕಟ್ಟೆ ಕನಸು: ಮಂಡ್ಯ ಜಿಲ್ಲೆಯಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಕೃಷ್ಣರಾಜಸಾಗರ (ಕೆಆರ್‌ಸ್‌) ಅಣೆಕಟ್ಟೆಗೆ ಪರ್ಯಾಯವಾಗಿ ರಾಜ್ಯದಲ್ಲಿ ಮತ್ತೊಂದು ಅಣೆಕಟ್ಟೆ ನಿರ್ಮಾಣ ಮಾಡುವ ಪ್ರಸ್ತಾಪಕ್ಕೆ ದಶಕಗಳೇ ಕಳೆಯುತ್ತಿವೆ.

ಕೇಂದ್ರ ಜಲ ಆಯೋಗಕ್ಕೆ ಹಿಂದಿನ ಕಾಂಗ್ರೆಸ್ ಸರ್ಕಾರವು ಸಲ್ಲಿಸಿದ್ದ ವರದಿಯಂತೆ ಮೇಕೆದಾಟು ಅಣೆಕಟ್ಟು ನಿರ್ಮಾಣಕ್ಕೆ ಸುಮಾರು ₹5,600 ಕೋಟಿ ನಿರ್ಮಾಣ ವೆಚ್ಚ ಅಂದಾಜಿಸಲಾಗಿದೆ. ಇದರಿಂದ ಸುಮಾರು 66 ಟಿಎಂಸಿ ಅಡಿಯಷ್ಟು ನೀರನ್ನು ಸಂಗ್ರಹಿಸುವ ಗುರಿ ಹೊಂದಲಾಗಿದೆ. ಅಣೆಕಟ್ಟೆ ನಿರ್ಮಾಣವಾದರೆ ಸುಮಾರು ಒಟ್ಟು 5 ಸಾವಿರ ಹೆಕ್ಟೇರ್‌ನಷ್ಟು ಜಮೀನು ಮುಳುಗಡೆ ಆಗುವ ನಿರೀಕ್ಷೆ ಇದೆ.

ಇದರಲ್ಲಿ ಬಹುಪಾಲು ಅರಣ್ಯ ಪ್ರದೇಶವಾಗಿದೆ. ಇದೇ ಕಾರಣಕ್ಕೆ ಕೇಂದ್ರ ಪರಿಸರ ಸಚಿವಾಲಯ ಹಾಗೂ ಸಂಬಂಧಿಸಿದ ಟ್ರಿಬ್ಯುನಲ್‌ನ ಅನುಮತಿ ಸಿಗುವುದು ವಿಳಂಬವಾಗುತ್ತಿದೆ ಎನ್ನಲಾಗುತ್ತಿದೆ.ಯೋಜನೆ ಅನುಷ್ಠಾನಗೊಂಡಿದ್ದೇ ಆದಲ್ಲಿ ಬೆಂಗಳೂರಿಗರಿಗೆ ಕುಡಿಯುವ ನೀರಿನ ಬವಣೆ ತಪ್ಪಲಿದೆ. ರಾಮನಗರವೂ ಸೇರಿದಂತೆ ಬಯಲು ಸೀಮೆಯ ಜಿಲ್ಲೆಗಳಿಗೆ ನೀರಾವರಿ ವ್ಯವಸ್ಥೆಯಾಗಲಿದೆ. ಜೊತೆಗೆ 400 ಮೆಗಾವಾಟ್‌ನಷ್ಟು ವಿದ್ಯುತ್ ಉತ್ಪಾದನೆ ಕೂಡ ಸಾಧ್ಯವಾಗಲಿದೆ ಎಂದು ಅಂದಾಜಿಸಲಾಗಿದೆ.

ಮಂಡಳಿ ನಿರ್ಧಾರ ಏನು?: ‘ಸದ್ಯ ಕಾವೇರಿ ನೀರಿನ ನಿರ್ವಹಣೆ ಸಂಬಂಧ ಮಂಡಳಿ ರಚನೆಯಾಗಿದೆ. ಅದರ ನಿರ್ಧಾರ ಏನು? ಕೇಂದ್ರ ಸರ್ಕಾರ ಈ ವಿಚಾರದಲ್ಲಿ ಯಾವ ನಿಲುವು ತಳೆಯುತ್ತದೆ ಎನ್ನುವ ಅಂಶಗಳ ಮೇಲೆ ಅಣೆಕಟ್ಟೆ ನಿರ್ಮಾಣ ಅವಲಂಬಿತವಾಗಿದೆ’ ಎನ್ನುತ್ತಾರೆ ಶಾಶ್ವತ ನೀರಾವರಿ ಹೋರಾಟದ ಸಮಿತಿಯ ಮುಖಂಡ ಸಿ. ಪುಟ್ಟಸ್ವಾಮಿ.

‘ಮೇಕೆದಾಟು ಅಣೆಕಟ್ಟೆಗಾಗಿ ರೈತ ಸಂಘಟನೆಗಳು ದಶಕದಿಂದ ಹೋರಾಟ ಮಾಡುತ್ತಲೇ ಬಂದಿವೆ. ಆದರೆ, ಅದಕ್ಕೆ ಪೂರಕವಾಗಿ ಸರ್ಕಾರಗಳು ನಿಲುವು ತಾಳಿಲ್ಲ, ಈಚಿನ ದಿನಗಳಲ್ಲಿ ಕಾವೇರಿ ಕಣಿವೆಯಲ್ಲಿಯೇ ನೀರಿನ ಕೊರತೆ ಕಾಡುತ್ತಿದೆ. ಮತ್ತೊಂದೆಡೆ, ಇಂತಿಷ್ಟೇ ನೀರು ಬಳಸಿ ಎಂದು ನ್ಯಾಯಾಲಯನಿರ್ಬಂಧ ಹೇರುತ್ತಿವೆ. ಹೀಗಾಗಿ ಸರ್ಕಾರ ಧೃಡ ಸಂಕಲ್ಪ ತಾಳುವ ಅಗತ್ಯ ಇದೆ’ ಎನ್ನುತ್ತಾರೆ ಅವರು.

ನೀರಾವರಿಗಾಗಿ ಹೋರಾಟದ ಹಾದಿ

‘ಶಾಶ್ವತ ನೀರಾವರಿಗಾಗಿ ಜಿಲ್ಲೆಯಲ್ಲಿ ಹೋರಾಟಗಳು ನಡೆಯುತ್ತಾ ಬಂದಿವೆ. ಮೇಕೆದಾಟು ಹೋರಾಟ ಸಮಿತಿ 6 ಜಿಲ್ಲೆಗಳಲ್ಲಿ ಬೃಹತ್‌ ಹೋರಾಟ ನಡೆಸಿ ಜನಾಂದೋಲನ ಮಾಡಿತ್ತು. ಹಿಂದಿನ ಸರ್ಕಾರ ಅದಕ್ಕೆ ಸ್ಪಂದಿಸಿ ಮೇಕೆದಾಟು ಜಲಾಶಯ ನಿರ್ಮಾಣಕ್ಕೆ ಡಿ.ಪಿ.ಆರ್‌. ಸಿದ್ಧಪಡಿಸಿತ್ತು’ ಎನ್ನುತ್ತಾರೆ ಮೇಕೆದಾಟು ಹೋರಾಟ ಸಮಿತಿ ಅಧ್ಯಕ್ಷ ಬಿ. ನಾಗರಾಜು ಹಾಗೂ ಕಾರ್ಯಾಧ್ಯಕ್ಷ ಸಂಪತ್‌ಕುಮಾರ್.

‘ಈಗಿನ ಸರ್ಕಾರ ಅದನ್ನು ಮುಂದುವರಿಸಿ ಯೋಜನೆಗೆ ಚಾಲನೆ ನೀಡಬೇಕು. ಜೊತೆಗೆ ಜಿಲ್ಲೆಯ ಎಲ್ಲ ಕೆರೆಗಳಲ್ಲಿನ ಹೂಳು ತೆಗೆಸಿ ನೀರಾವರಿಗೆ ಒತ್ತು ಕೊಡಬೇಕು’ ಎಂದು ಒತ್ತಾಯಿಸಿದ್ದಾರೆ.

ಕಾವೇರಿ ನಿರ್ವಹಣಾ ಮಂಡಳಿಯು ಅಣೆಕಟ್ಟೆ ವಿಚಾರದಲ್ಲಿ ಯಾವ ರೀತಿ ಸ್ಪಂದಿಸಬಹುದು ಎನ್ನುವ ಕುತೂಹಲ ಇದೆ. ಸರ್ಕಾರ ಈ ವಿಚಾರದಲ್ಲಿ ಧೃಢ ನಿಲುವು ತಾಳಬೇಕು

- ಸಿ. ಪುಟ್ಟಸ್ವಾಮಿ, ಶಾಶ್ವತ ನೀರಾವರಿ ಹೋರಾಟ ಸಮಿತಿ 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry