ಆಧ್ಯಾತ್ಮಿಕ ಕಾರ್ಯಕ್ರಮಗಳಿಗೆ ವರ್ಚುವಲ್ ರಿಯಾಲಿಟಿ

7

ಆಧ್ಯಾತ್ಮಿಕ ಕಾರ್ಯಕ್ರಮಗಳಿಗೆ ವರ್ಚುವಲ್ ರಿಯಾಲಿಟಿ

Published:
Updated:
ಆಧ್ಯಾತ್ಮಿಕ ಕಾರ್ಯಕ್ರಮಗಳಿಗೆ ವರ್ಚುವಲ್ ರಿಯಾಲಿಟಿ

ದೇವಸ್ಥಾನಗಳಲ್ಲಿ ನಡೆಯುವ ಆಧ್ಯಾತ್ಮಿಕ ಕಾರ್ಯಕ್ರಮಗಳಲ್ಲಿ ಎಲ್ಲರಿಗೂ ಭಾಗವಹಿಸಲು ಸಾಧ್ಯವಾಗುವುದಿಲ್ಲ. ಅದರಲ್ಲೂ ವಯಸ್ಸಾದವರಿಗೆ ಮತ್ತು ಮಂಚ ಹಿಡಿದವರಿಗೆ ಇನ್ನೂ ಕಷ್ಟ. ಹೀಗಾಗಿ  ‘ಕಾಲ್ಪನಿಕ್‌ ಟೆಕ್ನಾಲಜೀಸ್' (Kalpnik Technologies) ಸಂಸ್ಥೆಯು ವರ್ಚುವಲ್ ರಿಯಾಲಿಟಿ ತಂತ್ರಜ್ಞಾನದ ಮೂಲಕ ಈ ಸಮಸ್ಯೆಗೆ ಪರಿಹಾರ ಸೂಚಿಸಿದೆ.

ಆಧ್ಯಾತ್ಮಿಕ ಮತ್ತು ಪೂಜಾ ಕಾರ್ಯಕ್ರಮಗಳನ್ನು ವರ್ಚುವಲ್ ತಂತ್ರಜ್ಞಾನ ಬಳಸಿ ನೇರ ಪ್ರಸಾರ ಮಾಡುವ ತಂತ್ರಾಂಶವನ್ನು ಸಂಸ್ಥೆ  ಅಭಿವೃದ್ಧಿಪಡಿಸಿದೆ. ಈ ತಂತ್ರಜ್ಞಾನದ ಸಹಾಯದಿಂದ ದೇವಸ್ಥಾನಗಳಲ್ಲಿ ನಡೆಯುವ ಆರತಿ, ಅಭಿಷೇಕ ಮತ್ತು ವಿಶೇಷ ಪೂಜೆಗಳನ್ನು ಮನೆಯಲ್ಲಿದ್ದುಕೊಂಡೇ ವೀಕ್ಷಿಸಬಹುದಾಗಿದೆ. ಇದಕ್ಕಾಗಿ ಸಂಸ್ಥೆಯು, 360‌ಡಿಗ್ರಿ ಕೋನದಲ್ಲಿ ವರ್ಚುವಲ್ ರಿಯಾಲಿಟಿ ರೂಪದಲ್ಲಿ ಪೂಜಾ ಕಾರ್ಯಕ್ರಮಗಳನ್ನು ವೀಕ್ಷಿಸಲು ನೆರವಾಗುವಂತೆ ‘ವಿ.ಆರ್. ಡೆಪ್ಯುಟಿ’ ಎಂಬ ತಂತ್ರಾಂಶವನ್ನು ಬಳಕೆಗೆ ತಂದಿದೆ.

ಈಗಾಗಲೇ ಸಂಸ್ಥೆಯು, ಬೆಂಗಳೂರಿನ ತ್ಯಾಗರಾಜ ನಗರದಲ್ಲಿರುವ ಸಾಯಿಬಾಬಾ ಆಧ್ಯಾತ್ಮಿಕ ಕೇಂದ್ರದ ಪೂಜಾ ಕಾರ್ಯಕ್ರಮಗಳ ನೇರ ಪ್ರಸಾರವನ್ನು ವಿಶ್ವದಾದ್ಯಂತ ಇರುವ ಸಾಯಿಬಾಬಾ ಭಕ್ತರು ಕಣ್ತುಂಬಿಕೊಳ್ಳಲು ನೆರವಾಗಿದೆ. ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಈ (VR DEVOTEE) ತಂತ್ರಾಂಶವನ್ನು ಉಚಿತವಾಗಿ ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಈ ವರ್ಷಾಂತ್ಯದ ವೇಳೆಗೆ 150 ದೇವಾಲಯಗಳಲ್ಲಿ ಇದನ್ನು ಬಳಕೆಗೆ ತರುವ ಗುರಿ ಇಟ್ಟುಕೊಂಡಿದೆ.

ಈವರೆಗೆ ಈ ತಂತ್ರಾಂಶವನ್ನು ಸುಮಾರು 1,27,000 ಬಾರಿ ಡೌನ್‌ಲೋಡ್‌ ಮಾಡಿಕೊಳ್ಳಲಾಗಿದೆ. ಸ್ಮಾರ್ಟ್‌ಫೋನ್‌ ಬಳಕೆ ಹೆಚ್ಚಾಗಿ ಇರುವುದರಿಂದ, ಗುಣಮಟ್ಟದ ವಿ.ಆರ್. ಹೆಡ್‌ಸೆಟ್ (virtual reality headset) ಇದ್ದಲ್ಲಿ, ಪೂಜಾ ಕಾರ್ಯಕ್ರಮಗಳನ್ನು ವೀಕ್ಷಿಸಬಹುದಾಗಿದೆ. ಹೆಡ್‌ಸೆಟ್‌ ಮೂಲಕ ವೀಕ್ಷಿಸುವಾಗ ವೀಕ್ಷಕರು ದೇವಸ್ಥಾನದಲ್ಲಿಯೇ ಇರುವಂತಹ ಅನುಭವ ನೀಡಲಿದೆ. ಇದಕ್ಕಾಗಿ ಸಂಸ್ಥೆಯು ಅತ್ಯಾಧುನಿಕ ಕ್ಯಾಮೆರಾ ಮತ್ತು ಎಡಿಟಿಂಗ್ ಸಾಧನಗಳನ್ನು ತಯಾರಿಸಿದೆ. ತಂತ್ರಾಂಶವನ್ನು ಒಮ್ಮೆ ಡೌನ್‌ಲೋಡ್ ಮಾಡಿಕೊಂಡರೆ 18 ತಿಂಗಳವರೆಗೆ ಬಳಸಬಹುದಾಗಿದೆ. ವಿ.ಆರ್ ಹೆಡ್‌ಸೆಟ್‌ಗಳು ದುಬಾರಿಯಾಗಿರುವುದರಿಂದ ಕೇವಲ ಪೂಜಾ ಕಾರ್ಯಕ್ರಮಗಳ ವೀಕ್ಷಣೆಗಾಗಿ ಬಳಸುವವರಿಗೆ ಹೊರೆಯಾಗಲಿದೆ. ಹೀಗಾಗಿ  ₹200 ದರದಲ್ಲಿ ಹೆಡ್‌ಸೆಟ್‌ ಒದಗಿಸಲು ಸಂಸ್ಥೆ ಚಿಂತಿಸುತ್ತಿದೆ.  ಕಾಲ್ಪನಿಕ್ ಸಂಸ್ಥೆಯನ್ನು ತಂತ್ರಜ್ಞಾನ ಕ್ಷೇತ್ರದ ತಜ್ಞರಾದ ಅಶ್ವಿನಿ ಗರ್ಗ್‌, ಜಾನ್‌ ಕುರುವಿಲ್ಲ ಮತ್ತು ಅಪುಲ್ ನಹತಾ ಅವರು ಸ್ಥಾಪಿಸಿದ್ದಾರೆ. ಮಾಹಿತಿಗೆ www.vrdevotee.com ಅಂತರ್ಜಾಲ ತಾಣಕ್ಕೆ ಭೇಟಿ ನೀಡಬಹುದು.

ಮಹಿಳೆಯರಿಗೆ ಡಿಜಿಟಲ್ ಸಾಕ್ಷರತಾ ಕಾರ್ಯಕ್ರಮ

ಜನಪ್ರಿಯ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ ಮಹಿಳೆಯರಿಗಾಗಿ ಡಿಜಿಟಲ್ ಸಾಕ್ಷರತಾ ಯೋಜನೆ ಪ್ರಾರಂಭಿಸಿದೆ. ಅಂತರ್ಜಾಲ ಬಳಕೆ ಕುರಿತು ಮಹಿಳೆಯರಲ್ಲಿ ಜಾಗೃತಿ ಮೂಡಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.

ದೇಶದಲ್ಲಿ ಮೊದಲ ಬಾರಿಗೆ ರೂಪಿಸಿರುವ ಈ ಕಾರ್ಯಕ್ರಮವನ್ನು ರಾಷ್ಟ್ರೀಯ ಮಹಿಳಾ ಆಯೋಗ ಮತ್ತು  ಸೈಬರ್ ಪೀಸ್ ಪೌಂಡೇಷನ್ ಸಹಭಾಗಿತ್ವದಲ್ಲಿ ನಡೆಸಲಾಗುತ್ತಿದೆ. ಒಂದು ವರ್ಷದಲ್ಲಿ ಸುಮಾರು 60 ಸಾವಿರ ಮಹಿಳೆಯರಿಗೆ ಡಿಜಿಟಲ್ ಬಳಕೆ ಕುರಿತಂತೆ ತರಬೇತಿ ನೀಡುವುದು ಇದರ ಉದ್ದೇಶವಾಗಿದೆ.

ಕೆಲವು ರಾಜ್ಯಗಳಲ್ಲಿ ಡಿಜಿಟಲ್ ಸಾಕ್ಷರತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸೈಬರ್ ವೇದಿಕೆಯ ಮೂಲಕ ಮಹಿಳೆಯರನ್ನು ವಂಚಿಸುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಈ ಕಾರಣಕ್ಕೆ ಮಹಿಳೆಯರಿಗೆ ಡಿಜಿಟಲ್ ಸಾಕ್ಷರತೆ ಬಗ್ಗೆ ಅರಿವು ಮೂಡಿಸುವುದು ಇದರ ಉದ್ದೇಶ ಎಂದು ರಾಷ್ಟ್ರೀಯ ಮಹಿಳಾ ಆಯೋಗದ ರೇಖಾ ಶರ್ಮಾ ತಿಳಿಸಿದ್ದಾರೆ. ಇದರ ಮೂಲಕ ಮಹಿಳೆಯರಿಗೆ  ಇಂಟರ್ನೆಟ್ ಬಳಕೆ, ಇ-ಮೇಲ್ ಬಳಕೆ ಹಾಗೂ ಸಾಮಾಜಿಕ ಮಾಧ್ಯಮಗಳ ಬಳಕೆ ಬಗ್ಗೆ ತರಬೇತಿ ನೀಡಲು ಉದ್ದೇಶಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry